ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday, 31 October 2011

ಹೀಗೊಂದು ಹಬ್ಬ


ದೇವಾಮೃತ ಗಂಗೆ//ರಘುನಂದನ ಕೆ.


ಮುಗಿಲೆತ್ತರ ಚಿಮ್ಮಿ ಸಿಡಿವ
ಬೆಳಕ ಗೋಳದ ಹೊಳಪು
ಅಂಗೈ ತುದಿಯ ಕಿಡಿಯಲ್ಲಿ
ಆಕಾಶ ಬೆಳಗುವ ಥಳುಕು
ಬಡ ಗುಡಿಲಸಲ ಕಂದನಿಗೆ
ಅವಕಾಶವಿಲ್ಲದೆಯೂ ಹಂಬಲ
ಸುಡಲೂ, ಬೆಳಗಲೂ;
ಗುರಿ ತಪ್ಪಿದರೆ ಗುಡಿಸಲೂ
ಬೆಳಕಿನ ಗೋಳ
ಉಳಿವ ಬೂದಿ...!!ಎಷ್ಟೋ ದಿನಗಳಿಂದ ಕೂಡಿಟ್ಟ
ಕನಸುಗಳ ಲೆಕ್ಕ ಯಾರಿಗಾಗಿ...??
ಒಂದು ದಿನದ ಸಡಗರದಲ್ಲಿ
ಸುಟ್ಟು ಕರಕಲಾಗುವ ದುಡ್ಡು
ಅಜ್ಜ ಹೇಳಿದ್ದ ಮಾತು
ದುಡ್ಡು ಸುಡುವ ಹಬ್ಬವಲ್ಲ ದೀಪಾವಳಿ...!!
ಬದುಕ ಬೆಳಗುವ ಹಬ್ಬ..
ಮಗನ ತಲೆಮಾರಿಗೆ
ಅಜ್ಜನೆಂದರೆ - ಪ್ರಶ್ನಾರ್ಥಕ ಚಿಹ್ನೆ..!
ವೃದ್ಧಾಶ್ರಮದ ಒಣಗಿದ ಎಲೆ...!!ಕೈ ಚಾಚಿ ಹ್ಮಾಂ ಹಾಗೇ...
ದೂರ ಕೂತು ಹಚ್ಚಿದ್ದು ಪಟಾಕಿ
ದಿಡೀರ್ ಬೆಳಕೇ ಬೇಕು ಎಲ್ಲರಿಗೂ
ಓಡುವ ತಲೆಮಾರು..!!
ಒಂದು ದಿನದ ಬೆಳಕಿಗೆ
ಕಣ್ಣ ದೀಪ ಆರಿ
ಬದುಕೀಗ ಗಾಢಾಂಧಕಾರ..!!


ದೇಹ ದೀಪ ಜ್ವಾಲೆ
ಉರಿವ ಸೂರ್ಯ ಬೆಳಕ ಚೆಲ್ಲುವ
ಸೋಜಿಗದ ಅರಿವು ;
ತಾರಾ ನಿಹಾರಿಕೆಗಳ ಸಿಡಿತ
ಬ್ರಹ್ಮಾಂಡವರಳಿಸಿದ ಬೆಳಕು ;
ಅಂತರಂಗದಲ್ಲಿ ಹಣತೆ ಹಚ್ಚಲು ಮರೆತು
ಕಳೆದಿದ್ದು ಶತಮಾನ... ಸಹಸ್ರಮಾನ...!!

ಹೊಸದಾಗಿ ಅರಳಿದ ಸೂರ್ಯನಿಗೆ
ಸುಟ್ಟ ದೇಹಗಳ ಕರಕಲು ನಾಥ
ಬೀದಿ ತುಂಬ ಹರಡಿಬಿದ್ದ
ದೀಪಾವಳಿಯ ಅವಶೇಷ
ಪೌರ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ
ಮುಗಿದ ದೀಪಾವಳಿ-ದಿವಾಳಿ..!
ಹಚ್ಚಿಟ್ಟ ಹಣತೆ
ಬದುಕಿಗೂ-ಸಾವಿಗೂ ಸೂಚಕ
ಮುಗಿದ ದೀಪಾವಳಿಯ ಸೂತಕ...!!


ದಿನಾಂಕ:06.12.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯಪುಟಗಳಲ್ಲಿ ಓದಲು  ಲಿಂಕ್ ಬಳಸಿ – http://avadhimag.com/?p=70306

Tuesday, 4 October 2011

ಹೀಗೊಂದು ಕವಿತೆ
ದೇವಾಮೃತ ಗಂಗೆ//ಕಾವ್ಯ-ಲಹರಿ

ಕೆಂಪು ಗುಲ್ ಮೋಹರ್ ಮರದ
ಬುಡದಲ್ಲಿ ಕಪ್ಪು ನೆರಳ
ಪಕಳೆ ಚೆಲ್ಲಾಡಿದೆ
ಯಾರದೋ ಪಾದದಡಿ ನಲುಗಿದ
ಹೂವ ನೋವ ಘಮ
ಗಾಳಿಯಲ್ಲಿನ್ನೂ ಸರಿದಾಡಿದೆ


ರಥಚಕ್ರದಡಿ ಅಪ್ಪಚ್ಚಿಯಾದ
ಹೂವ ನೋವಿಗೆ
ಭಕ್ತಿ-ಮುಕ್ತಿಯ ಬಣ್ಣ ಬಳಿವ ಮಂದಿ
ಮೃದು ಉಸಿರುಗಳ
ಸಮಾಧಿಯ ಮೇಲೆಯೇ ಸಾಗಬೇಕೇ
ಭಕ್ತಿಯ ಹಾದಿ....!!??


ಅರಿವಿಗೆ ನಿಲುಕಿ ಉಳಿದ ಗತ
ಇಲ್ಲಿ ಈಗ ಇತಿಹಾಸ
ಮೌನ ಸಂಗತಿಗಳಿಗಿಲ್ಲ ಜಾಗ
ದೇವರಿದ್ದ ಜಾಗದಲ್ಲೇ ದೇವದೂತ
ಮಂದಿರ ಉರುಳಿ ಬಸ್ತಿಯಾಗಿ
ಬಸ್ತಿ ಕಳೆದು ವಿಲಾಸ ಮಂಟಪವಾಗಿ
ಕೊನೆಗೊಮ್ಮೆ ಸರಿವ ಕಾಲದಡಿ
                                              ಪಾಳುಗುಡ್ಡೆಯಾಗಿ ಅನಾಥ

ಪರಮಾರ್ಥದ ಅರ್ಥ ಹೇಳುವ 
ಸ್ವಯಂ ಪಂಡೀತರು
ವಿಪರೀತಾರ್ಥಗಳ ಸೃಷ್ಟಿಸುವ
ವಿಚಿತ್ರ ಸೋಜಿಗ ಜಗ
ಆರತಿಯ ಜ್ವಾಲೆ 
ಹೂವ ಸುಡುವ ಬೆಂಕಿಯೂ....!!


                          
ಎಲ್ಲ ತೊರೆದವರ ಹಿಂದೆ
ಕೊಡುವ ಜನರ ಸಾಲು ಸಾಲು
ಹನಿ ನೀರ ಸಿಂಚನಕೆ ಕಾಯ್ವ
ಎಳೆಗಿಡದ ಬಯಕೆಗಿಲ್ಲಿ
ಬೆಲೆಯಿಲ್ಲ, ಕೊಡಲು ಪುರುಸೊತ್ತಿಲ್ಲ
ಇಲ್ಲಿ ಎಲ್ಲವೂ ಹೀಗೇ..
ವಿಚಿತ್ರ, ಕಲಸುಮೇಲೊಗರದ ಚಿತ್ರ
ಇದ್ದುದೆಲ್ಲವ ಬಿಟ್ಟು ನೆಟ್ಟಗೆ ನಿಂತ
ಗೊಮ್ಮಟನಿಗೆ ನಿರಂತರ ಮಸ್ತಕಾಭಿಷೇಕ....!!