ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday 17 December 2012

ಭಯವೆಂಬ ಗುಮ್ಮನ ಬೆನ್ನ ಹಿಡಿದು.

ಕಡಲಕಿನಾರೆಯ ಕಿನ್ನರ//ರಘುನಂದನ ಕೆ.




ಉದಯರವಿಯ ತಂಪು ಕಿರಣ, ಬೆಚ್ಚನೆಯ ಗೂಡುಗಳಿಂದ ಹೊರಬಂದ ಹಕ್ಕಿಗಳ ಚಿಲಿಪಿಲಿ ನಾದ, ಅರಳುತ್ತಿರುವ ಹೂವುಗಳ ಚಂದ, ಮುಂಜಾನೆಯ ಸುಪ್ರಭಾತದ ಗುನುಗು  ಆನಂದವಾಗಿ ಅರಳಬೇಕಿದ್ದ  ಮುಂಜಾನೆಗಳು ನಮ್ಮಲ್ಲಿ ಅರಿವಿಗೆ ನಿಲುಕದ ಅವ್ಯಕ್ತ ಆತಂಕದೊಂದಿಗೆ ಉದಯಿಸುತ್ತಿರುವಂತೆ ಭಾಸವಾಗುತ್ತಿದೆ. ದಿನ ನಿತ್ಯ ಕೇಳುವ ಸಾಮಾಜಿಕ ಅಲ್ಲೋಲಕಲ್ಲೋಲ, ದಿನದ ಕಾರ್ಯಾಚರಣೆಗಳ ದಾವಂತ, ಭವಿಷ್ಯದೆಡೆಗಿನ ಭಯ, ಬದುಕಿನ ಅನಿವಾರ್ಯತೆಗಳೆಡೆಗೆ ಅಂಜಿಕೆ - ಭೌತಿಕ ರೂಪದಲ್ಲಿ ಮಾತ್ರವಲ್ಲದೆ ಅಂತರಂಗದೊಳಗೂ ಭಯದ ಭೂತವಾಗಿ ಸೇರಿದಂತೆನಿಸಿ ಬೆಚ್ಚುತ್ತಿದ್ದೇವೆ. ಪಾರ್ಕ್ಗಳಲ್ಲಿ, ರಸ್ತೆಗಳಲ್ಲಿ, ಕಛೇರಿಗಳಲ್ಲಿ ಎಲ್ಲೆಲ್ಲೂ ನಮಗೆ ಅರಿವಾಗದ ಯಾವುದೋ ಭಯವೊಂದು ಸದಾ ನಮ್ಮನ್ನು ಆವರಿಸಿ ಕಾಡುತ್ತಿದೆಯೆಂಬಂತೆ ಬದುಕುತ್ತಿದ್ದೇವೆ. ನಮ್ಮದೇ ಮಕ್ಕಳು, ಸ್ನೇಹಿತರು, ಪರಿಚಿತರು ನಮ್ಮನ್ನು ಹೆದರಿಸುತ್ತಿದ್ದಾರೇನೋ ಎನ್ನುವಂತೆ ಕಂಗೆಡುತ್ತಿದ್ದೇವೆ. ಓಡುವ ಪ್ರಪಂಚ, ನಿಲ್ಲದ ಕಾಲ, ಒಂದಷ್ಟು ಮಾಲಿನ್ಯಗಳು, ಏರುತ್ತಿರುವ ಬೆಲೆ, ತಾಪಮಾನ, ಎಲ್ಲೋ ಸಿಡಿವ ಬಾಂಬ್ಗಳು, ಮತ್ತೆಲ್ಲೋ ಹಬ್ಬುವ ಬೆಂಕಿ, ಅಪಹರಣ, ಬ್ರಷ್ಟಾಚಾರ, ಅತ್ಯಾಚಾರ  ಅಂತರಂಗದ ತುಂಬ ಆತಂಕದ ನೆರಳು. ನಿಜವಾಗಿಯೂ ನಮ್ಮನ್ನು ಹೆದರಿಸುತ್ತಿರುವುದು ಇಂತಹದೇ ವಿಷಯಗಳಾ. ಇವುಗಳೆಲ್ಲದರ ವಿರುದ್ಧ ನಾವು ಎದೆಗೊಟ್ಟು ಹೋರಾಡಬಹುದೇನೋ ಆಗಲಿ ಅಂತರಂಗದಲ್ಲಿ ನಮ್ಮ ಅಂತಃಸತ್ವವೇ ಕುಸಿದು ನಿತ್ರಾಣವಾಗಿ ಹೋಗಿದ್ದು ಇವುಗಳಿಂದಲ್ಲವೆನ್ನುವುದು ನಮ್ಮ ಅರಿವನ್ನು ಮೀರಿಯೂ ಗೋಚರಿಸುತ್ತಿದೆಯೇನೋ ಎಂಬ ಸಂದೇಹ ಕಾಡಿ ಮತ್ತೆ ಭಯಗೊಳ್ಳುತ್ತೇವೆ. ಭೌತಿಕ ಅಸ್ತಿತ್ವದಲ್ಲಿನ ಅಲ್ಲೋಲಕಲ್ಲೋಲಗಳು ನಮ್ಮನ್ನು ಹೆದರಿಸುತ್ತಿವೆಯಾ ಅಥವಾ ಭಯವೆನ್ನುವುದು ಅಂತರಂಗದಲ್ಲೇ ಗೂಡು ಕಟ್ಟಿದೆಯಾ?


ಕಷ್ಟಪಟ್ಟು ದುಡಿದು, ಇಷ್ಟಪಟ್ಟು ಬದುಕ ಕಟ್ಟಿಕೊಂಡ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಸಣ್ಣ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ, ಕನಸ ಕನವರಿಕೆಯಂತೆ ಸೈಟು ಮನೆಗಳ ಮಾಡಿಕೊಂಡ ಹಿರಿಯ ಜೀವಗಳು ತಮ್ಮ ಮಕ್ಕಳಿಗೆ ಹೆದರುತ್ತಿದ್ದಾರೆ. ಯಾವುದೋ ಒತ್ತಡಗಳಲ್ಲಿ ಆತಂಕಗಳಲ್ಲಿ ಸಂಜೆ, ರಾತ್ರಿ ಮನೆಗಳಿಗೆ ಹಿಂತಿರುಗುವ ಮಕ್ಕಳು ಕರೆಂಟ್ ಬಿಲ್ಲ ಪಾವತಿಸಿಲ್ಲವೆಂಬಂತ ಸಣ್ಣ ಸಣ್ಣ ಕಾರಣಗಳಿಗೆ ಅಪ್ಪ ಅಮ್ಮಂದಿರನ್ನ - ಬೆಳಗಿಂದ ಖಾಲಿ ಕೂತಿರ್ತಿರಾ, ಒಂದು ಕೆಲಸ ಮಾಡಕ್ಕಾಗಲ್ವಾ, ಎಲ್ಲಾದ್ರೂ ಹಾಳಾಗ್ ಹೋಗಿ ಎಂದೆಲ್ಲಾ ಹೀನಾಯವಾಗಿ ಅರಚುತ್ತಿದ್ದರೆ ಗಟ್ಟಿಯಾಗಿ ಗದರಿಸಲೂ ಧ್ವನಿಯಿಲ್ಲದಂತೆ ಸುಮ್ಮನಿದ್ದು ಕುಗ್ಗಿಹೋಗುತ್ತಾ, ತಮಗಾಗುವ ತೊಂದರೆಗಳ ಹೇಳಿಕೊಳ್ಳಲಾಗದೆ ತಲೆ ತಗ್ಗಿಸಿ, ತಾವೇ ಹೋರಾಡಿ ಜೀವ ಸವೆಸಿ ಕಟ್ಟಿದ ಮನೆಗಳಲ್ಲಿ ಆಳಾಗಿ, ಅಪರಿಚಿತರಂತೆ ಬದುಕಬೇಕಾದ ಅನಿವಾರ್ಯತೆಗಳ ಸೃಷ್ಟಿಸಿದ ಭಯ ಯಾವುದು? ಮಕ್ಕಳು ನೋಡ ನೋಡುತ್ತಿದ್ದಂತೆಯೆ ಬೆಳೆದು ಅಂಕೆ ತಪ್ಪಿ ಗದರುವ ಮಟ್ಟಕ್ಕೆ ಮುಟ್ಟಿದ್ದು ಹೇಗೆ? ಅಪ್ಪಂದಿರೆದುರು ಮಾತಾಡಲು ಹೆದರುತ್ತಿದ್ದ ಮಕ್ಕಳು, ಅಪ್ಪ ಬದುಕಿದ್ದಾನೆಂಬ ಭಯಕ್ಕೂ, ಗೌರವಕ್ಕೂ ಮುರಿಯದೆ ಉಳಿಯುತ್ತಿದ್ದ ಕೂಡು ಕುಟುಂಬಗಳು  ಇಂದು ಮಕ್ಕಳೆದುರು ಕುಗ್ಗಿಹೋಗುತ್ತಿರುವುದರ ಕಾರಣ ಅರಿವಾಗದೆ ಹಿರಿಯ ಜೀವಗಳು ಚಡಪಡಿಸುತ್ತಿವೆ

ನಾವೇಕೆ ಹೆಜ್ಜೆ ಹೆಜ್ಜೆಗೂ ತಪ್ಪಿತಸ್ಥರಂತೆ ಬದುಕುತ್ತಿದ್ದೇವೆ? ಅಂತರಂಗದಲ್ಲೊಂದು ಆಂತರಿಕ ಭಯವದ್ಯಾವುದು ನಮ್ಮನ್ನು ಕಾಡುತ್ತಿರುವುದು? ತಪ್ಪು ನಮ್ಮದಲ್ಲದಿದ್ದರೂ ಹೆದರುತ್ತೇವೆ ಯಾಕೆ? ಯಾವ ಪಾಪ ಪ್ರಜ್ಞೆ ಇಡೀ ತಲೆಮಾರೊಂದನ್ನು ನರಳಿಸುತ್ತಿದೆ. ಕಛೇರಿಗಳಲ್ಲಿ ಕೆಳಗಿನ ಹುದ್ದೆಗಳವರ ಮೇಲೆ, ಮನೆಯಲ್ಲಿ ವೃದ್ಧ ಜೀವಗಳ ಮೇಲೆ ಅಬ್ಬರಿಸುವ ಮಂದಿ ಬೀದಿಗಳಿಗೆ, ರಸ್ತೆಗಳಿಗೆ ಇಳಿದೊಡನೆ ನಿಶ್ಯಕ್ತರಾಗುವುದೇಕೆ? ಬಸ್ಗಳಲ್ಲಿ, ಜನಸಂದಣಿಗಳಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಯರದೋ ಗದರುವಿಕೆಗೆ ನಾವ್ಯಾಕೆ ಭಯಗೊಳ್ಳುತ್ತೇವೆ? ಮಹಿಳೆಯರ ಸೀಟಲ್ಲಿ ಕುಳಿತವನಿಗೆ ಎದ್ದೇಳು ಎನ್ನಲು ಅವನ ಹಿಂದೆ ಕುಳಿತ ಗಂಡಸಿಗೂ ಭಯ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಯಾಕೆ ಮಾಡುತ್ತೀರಿ ಎನ್ನಲು ಭಯ. ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿರುವಾಗ ಅಚಾನಕ್ ಎದುರಾಗಿ ಬಿಡುವ ಅಪರಿಚಿತನ ಮುಗುಳ್ನಗೆಯೂ ನಮ್ಮನ್ನು ಹೆದರಿಸುತ್ತದೆ. ಪೋಲೀಸರ ಕಂಡೊಡನೆ ನಾವೇನೋ ತಪ್ಪು ಮಾಡಿದ್ದೀವೇನೋ ಎನ್ನುವಂತೆ ಕಣ್ತಪ್ಪಿಸಿ, ತಲೆತಗ್ಗಿಸಿ ಯಾ ತಲೆ ತಿರುಗಿಸಿ ಸರಸರನೆ ನಡೆಯುತ್ತೇವೆ. ಗುಂಪಿನಲ್ಲಿ ದೊಡ್ಡ ದೊಡ್ಡ ಮಾತನಾಡುವ ನಾವು ಚಿಕ್ಕ ತರಗೆಲೆಯಂತ ಕಾರಣಗಳಿಗೆ ಚದುರಿ, ಯಾವೂದೂ ಸಂಬಂಧವೇ ಇಲ್ಲವೆನ್ನುವಂತೆ ಹೊರಟು ಬಿಡುತ್ತೇವೆ


ಮೊದಲೆಲ್ಲಾ ಭಯವೆನ್ನುವುದು ಮಧ್ಯಮ ವರ್ಗದವರನ್ನು, ಶಹರದಲ್ಲಿನ ಜೀವಗಳನ್ನು ಮಾತ್ರ ಕಾಡುತ್ತವೇನೋ ಎನಿಸುತ್ತಿದ್ದವು. ಈಗ ಭಯವೆನ್ನುವುದು ಮಧ್ಯಮ ವರ್ಗದಲ್ಲಿ ಹುಟ್ಟಿ ಮೇಲ್ಮಧ್ಯಮ ವರ್ಗಕ್ಕೆ ಹರಡಿ, ಇತ್ತ ಬಡವರನ್ನೂ ಅತ್ತ ಶ್ರೀಮಂತರನ್ನೂ ಒಳಗೊಂಡು ಸಾರ್ವತ್ರಿಕವಾಗುತ್ತಿದೆಯಾ? ಯುವಜನತೆ ಮುಂದಿನ ದಾರಿಯ ಬಗ್ಗೆ ಯೋಚಿಸಿದರೂ ಭಯವಾಗುವುದೇನೋ ಎನ್ನುವಂತೆ ಕಾರಣವಲ್ಲದ ಕಾರಣಗಳಿಗೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಲ್ಲ ತಿಳಿದವರಂತೆ ಅಥವಾ ತಾವು ತಿಳಿದಿರುವುದೇ ನಿಜವೆನ್ನುವಂತೆ ಅಬ್ಬರಿಸುವ ಯುವಕರು ಏಕಾಂತಗಳ ನಿಶ್ಯಬ್ದಕ್ಕೆ ದಿಗಿಲುಗೊಳ್ಳುತ್ತಿದ್ದಾರೆ. ಅಷ್ಟಕ್ಕೂ ನಮ್ಮ ಬೆನ್ನು ಬಿದ್ದಿರುವ ತಪ್ಪಿತಸ್ಥ ಭಾವ ಅದ್ಯಾವುದು? ಮಕ್ಕಳು ಹೆತ್ತವರ ಕಣ್ತಪ್ಪಿಸುತ್ತಿದ್ದಾರೆ, ಗಂಡ-ಹೆಂಡತಿ ಪರಸ್ಪರ ಕಣ್ಣ ಬೆರೆಸಲು ಅಂಜುತ್ತಿದ್ದಾರೆ, ಅಜ್ಜ ಅಜ್ಜಿ ಮಕ್ಕಳು ಕತ್ತು ಹಿಡಿದು ಹೊರ ನೂಕುತ್ತಾರೇನೋ ಎನ್ನುವಂತೆ ಕನಸಾಗಿ ಬೆಚ್ಚುತ್ತಿದ್ದಾರೆ. ಯುವಕರಿಗೆ ಅಸ್ಪಷ್ಟ ಭವಿಷ್ಯದ ಭಯ, ನಡುವಯಸ್ಸಿನವರಿಗೆ ಏರುವ ಬೆಲೆಗಳ, ಕೆಲಸದಿಂದ ತೆಗೆದುಹಾಕಲ್ಪಡುವ ಭಯ, ವೃದ್ಧರಿಗೆ ವೃದ್ಧಾಶ್ರಮಗಳ ಭಯ!! ಯಾರನ್ನೂ ಯಾರೂ ನಂಬಲಾಗದ ಪ್ರೀತಿಸಲಾಗದ ಸ್ಥಿತಿಯತ್ತ ನಾವು ಸಾಗುತ್ತಿದ್ದೇವಾ? ಮನುಷ್ಯರು ಮನುಷ್ಯರಾಗಿರುವುದನ್ನೇ ಮರೆತು ಭಯ ಜೀವಿಗಳಾಗುತ್ತಿದ್ದಾರಾ?

 ಭಯದ ತೀವ್ರತೆ ನಗರದಲ್ಲಿದ್ದಷ್ಡು ಹಳ್ಳಿಗಳ ಕಾಡುತ್ತಿಲ್ಲವೇನೋ. ಈಗಲೂ ಹಿರಿಯರಿಗೆ ಗೌರವ ನೀಡುವ ಮಕ್ಕಳು, ಕೂಡು ಕುಟುಂಬಗಳು ಅಲ್ಲಲ್ಲಿ ಸಿಗುತ್ತವೆ. ಅಪ್ಪ-ಅಮ್ಮ ಬದುಕಿದ್ದಾರೆಂಬ ಕಾರಣಕ್ಕಾಗಿಯಾದರೂ ಒಟ್ಟಿಗಿರುವ ಅಣ್ಣ ತಮ್ಮಂದಿರಿದ್ದಾರೆ. ಹಳ್ಳಿಯ ಏಕತಾನತೆಯಲ್ಲಿ ಅಪರಿಚಿತನೊಬ್ಬ ಸಿಕ್ಕಾಗ ಹೆದರದೆ ಬಾಯ್ತುಂಬ ಮಾತಾಡಿಸಿ ಮನೆಗೆ ಕರೆದೊಯ್ದು ಉಪಚರಿಸುವ ಜನರಿದ್ದಾರೆ. ಆದರೀಗ ಹಳ್ಳಿಗಳೂ ಶಹರಗಳಾಗಿ ಬದಲಾಗುವ ಗತಿಯಲ್ಲಿರುವಾಗ ಭಯ ನಿಧಾನವಾಗಿ ಹಳ್ಳಿಗಳನ್ನೂ ಆವರಿಸುತ್ತಿದೆಯೇನೋ ಅನಿಸುತ್ತಿದೆ. ಒಂದು ತಲೆಮಾರು ಭಯದ ಅಡಿಯಾಳಾಗಿ ಬದುಕಬೇಕಿದೆಯೇನೋ ಎಂಬಂತೆ ಪ್ರಪಂಚ ನೋಡುತ್ತಿದೆ. ಮಾನ ಮರ್ಯಾದೆಗಳ ಭಯ ಕರಗಿ ಬದುಕುಳಿಯುವ ಭಯಗಳು ಹುಟ್ಟಿವೆ. ಸಾಯುವ ಕನಸುಗಳ ಭಯ, ಏನೂ ಮಾಡಲಾಗದ ಅಸಹಾಯಕತೆಯ ಭಯ, ಸೋಲಿನ ಭಯ - ಅಳುದುಳಿದ ಧೈರ್ಯವಂತರನ್ನೂ ಕಾಡಿ ಅಂಜಿಸುತ್ತಿದೆ.

ಎರಡು ದಶಕಗಳ ಹಿಂದೆ ಸುಂದರವಾಗಿ ಪ್ರಶಾಂತವಾಗಿದ್ದ ಬದುಕು, ಕೈ ತೋಟದಲ್ಲಿ ಗುಲಾಬಿ ಅರಳುವುದ ನೋಡುತ್ತ, ಮುಸ್ಸಂಜೆಯಲ್ಲಿ ಮನೆಗೆ ಹಿಂತಿರುಗುವ ದನ ಕರುಗಳ ಕೊರಳ ಗಂಟೆಯ ನಾದಗಳ ಆಲಿಸುತ್ತ, ಅಪ್ಪ ಅಮ್ಮನೊಂದಿಗೆ ಕೈ ತುತ್ತು ತಿನ್ನುತ್ತ, ಅಣ್ಣ ತಮ್ಮಂದಿರೆಲ್ಲ ಒಟ್ಟಾಗಿ ತೆರೆದ ಬಾವಿಗಳಲ್ಲಿ ಈಜು ಬೀಳುತ್ತ, ತಂಗಿಯ ನೆನಪಲ್ಲಿ ನೇರಳೆ, ಪೇರಲೆ ಹಣ್ಣುಗಳ ಆಯ್ದು ತರುತ್ತ - ಸುಖಿಸುತ್ತಿದ್ದ ಜೀವನದಲ್ಲಿ ಭಯ ದಾಳಿಯಿಟ್ಟದ್ದು ಹೇಗೆ? ಜಾಗತೀಕರಣದ ಹೆಸರಲ್ಲಿ ಭಯ ಮೊದಲಿಗೆ ಸಮಾಜವನ್ನೂ ಈಗ ಮನಸ್ಸುಗಳನ್ನೂ ಆವರಿಸಿ ಹೆದರಿಸುತ್ತಿರುವುದು ಸತ್ಯವಾ? ಹಣದಾಚೆಗೂ ಬದುಕು ಕಾಣುತ್ತಿದ್ದ ಮನಸ್ಸುಗಳಲ್ಲಿ ಕಾಂಚಾಣ ಬಯಕೆಯ ಕಿಚ್ಚು ಹತ್ತಿಸಿ ಭಾವಗಳನ್ನು ಕೊಲ್ಲುತ್ತ ಭಯದ ಗಾಳಿ ಹರಿಸಿದ ಮಾಯೆ ಅದ್ಯಾವುದು? ಮನುಷ್ಯರ ನಡುವಿನ ಬಂಧಗಳು ಸಡಿಲವಾಗಿ, ಪ್ರೇಮ ಎಂಬ ಭಾವನೆಯ ವ್ಯಾಖ್ಯೆ ಬದಲಾಗುತ್ತ, ಮಾನವತ್ವ ಮರೆತ ಮನುಷ್ಯನ ಎದೆಯಲ್ಲಿ ಭಯ ಮೊಳಕೆಯೋಡೆಯಿತಾ? ಸಾಮಾಜಿಕ ಅಸಮಾನತೆ, ಆರ್ಥಿಕ ಅನಿವಾರ್ಯತೆ, ಪುರುಸೊತ್ತಿಲ್ಲದಂತೆ ಓಡಿಸುವ ಕಾಲ, ಹೆದರಿಸುತ್ತಿರುವ ಬ್ರಷ್ಟತೆ - ನಾಯಕತ್ವಗಳು, ಜಾತಿ ಮತಗಳ ಹೆಸರಲ್ಲಿ ಮಾನವತೆಯ ಸುಡುವ ಹಠ, ಮುಗಿಯದ ಸ್ಪರ್ಧೆ, ನಮ್ಮ ಮಧ್ಯದಲ್ಲಿನ ಮಂದಿಯೇ ಉಗ್ರವಾದಿಗಳಾಗಿ ಕೊಲ್ಲುವ ವಾಸ್ತವಗಳು  ಎಲ್ಲ ಭಯಗಳ ಬೇರ ಕಳೆದು ಪ್ರೇಮದ ಪನ್ನೀರ ಸಿಂಪಡಿಸಿ ಮಾನವರ ಮನದಲ್ಲಿ ಜೀವಂತಿಕೆಯ ಹಸಿರು ಭಾವಗಳ ಸೃಷ್ಟಿಸಿದಾಗ ಭಯ ದೂರವಾದೀತೇನೋ.


ಮನದ ಹಸಿರಲ್ಲಿ ಹಕ್ಕಿಗಳ ಚಿಲಿಪಿಲಿ, ಗುಬ್ಬಚ್ಚಿ ಗೂಡಿನ ಬೆಚ್ಚನೆಯ ಬಿಸುಪು, ಕಾಣದ ಶಕ್ತಿ ನೀಡುವ ಧೈರ್ಯದ ನಂಬಿಕೆ ಆತಂಕಗಳ ಕರಗಿಸಿ ಆನಂದವ ಹಂಚಬಲ್ಲದಲ್ಲವಾ? ಸಂಬಂಧಗಳ ಬಂಧ ಬಿಗಿಯಾದಾಗ, ಕೃತ್ರಿಮತೆಯ ಮಂಜು ಕರಗಿದಾಗ, ಹೆಪ್ಪುಗಟ್ಟಿದ ಖಿನ್ನತೆಯ ಮೋಡ ಕರಗಿದಾಗ ಎದೆಯಾಳದಲ್ಲಿ ಧೈರ್ಯ ಮೊಳಕೆಯೊಡೆಯುತ್ತದೆ. ಎಲ್ಲ ಸ್ಫರ್ಧೆಗಳ ನಡುವೆಯೂ ಗುರಿಯೆಡೆಗಿನ ಸ್ಪಷ್ಟತೆ ಆನಂದದ ತಂಪು ಬೀರುತ್ತದೆ. ಎಲ್ಲ ಭೌತಿಕ ಹೊಡೆದಾಟ ಬಡಿವಾರಗಳ ನಡುವೆ ಮನುಷ್ಯನ ಮನದಲ್ಲಿ ಆಂತರಂಗಿಕ ಅಂತಃಸತ್ವಗಳ ಬೇರು ಗಟ್ಟಿಯಾಗಲಿ, ಅಂತರಂಗದಲ್ಲಿ ಬೆಳೆವ ಹಸಿರ ಉಸಿರಲ್ಲಿ ಧೈರ್ಯ ವಿಶ್ವಾಸಗಳು ತುಂಬಲಿ, ತಪ್ಪು ಮಾಡುವ ಮಕ್ಕಳಿಗೆ ಗದರುವ ಛಾತಿ, ಹೆತ್ತವರ ಹಿರಿಯರ ಗೌರವಿಸುವ ರೀತಿ, ಕಣ್ಣಲ್ಲಿ ಕಣ್ಣಿಟ್ಟು ಬದುಕಬಲ್ಲವರಾಗುವ ಪ್ರೀತಿ, ಮೃತ ವಸ್ತುಗಳಿಗಿಂತ ಜೀವಂತಿಕೆಗೆ ಬೆಲೆ ನೀಡುವ ಶಕ್ತಿ ಎಲ್ಲರಲ್ಲಿ ತುಂಬಲಿ. ಭಯದಾಚೆಯ ಲೋಕವೊಂದು ಅರಳಿ ಸದೃಢ ಶಕ್ತಿವಂತ ತಲೆಮಾರುಗಳ ಸೃಷ್ಟಿಯಾಗಲಿ.

* * * * * * * * * *

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

"ವಿಜಯ ವಾಣಿ - ವಿಜಯ ವಿಹಾರ"ದಲ್ಲಿ ಪ್ರಕಟಿಸಲ್ಪಟ್ಟಿದೆ.

ದಿನಾಂಕ: 17.12.2012ರಂದು ಅವಧಿ ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು 
ಲಿಂಕ್ ಬಳಸಿ –