ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday 31 January 2013

ನೆನಪು -ನವಿಲುಗರಿ


ದೇವಾಮೃತ ಗಂಗೆ//ರಘುನಂದನ ಕೆ.

ಅತ್ತಿತ್ತ ಸುತ್ತಮುತ್ತ
ಸುಳಿದಾಡಿ ಮನಸು
ನೆನಪ ಪುಟ ತಿರುವಲು
ಕಂಡದ್ದು
ಬೆಚ್ಚಗೆ ಮಲಗಿದ್ದ
ನಿನ್ನ ನೆನಪ ನವಿಲುಗರಿ


ಕೈಯಲ್ಲಿ ಕೈ ಬೆಸೆದು
ಬೆರಳ ಎಣಿಸುತ್ತ
ಮೌನ ಕೊಲ್ಲುತ್ತ
ಸಾಗರ ತೀರದ ಮರಳಲ್ಲಿ
ಮೂಡಿಸಿದ್ದ
ಜೋಡಿಪಾದಗಳ ಗುರುತ
ನುಂಗಿದ್ದು
ಮರಳೋ, ಅಲೆಯೋ
ಇನ್ನೂ ತಿಳಿಯಲಾಗಿಲ್ಲ...!

ಮುಳುಗುವ ಸೂರ್ಯನ ನೋಡುತ್ತ
ಬದುಕ ಬೆಸೆವ 
ಮಾತಾಡಿದವರಿಗೆ
ಬೆಸೆದ ಕೈ ಬೇರೆಯಾದದ್ದು
ಅರಿವಾಗುವ ಮೊದಲೇ
ಸೂರ್ಯ
ಅಸ್ತಮಿಸಿಬಿಟ್ಟಿದ್ದ...

ಈಗ,
ಮತ್ತದೇ ತೀರದಲ್ಲಿ
ಹೆಜ್ಜೆ ಹುಡುಕಿದರೆ;
ಗೆಜ್ಜೆ ಕಟ್ಟಿದ ಪಾದ
ಎಲ್ಲೋ ಮಾಯ,
ಎಷ್ಟು ಎಣಿಸಿದರೂ
ಲೆಕ್ಕಕ್ಕೆ ಸಿಗುವುದು
ಐದೇ ಬೆರಳು...!!


ನವಿಲು ಮರೆತ ನವಿಲುಗರಿಯ
ನೆನಪ ಹೊತ್ತಿಗೆಯಲ್ಲಿ
ಮುಚ್ಚಿಟ್ಟು
ಮತ್ತದೇ ಸಾಗರ ತೀರಕ್ಕೆ
ಸಾಗುತ್ತೇನೆ ಸದಾ
ಬೆಸೆಯಲಾರದ ಬೆರಳುಗಳ ಹುಡುಕಿ.




ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

ದಿನಾಂಕ: 31.01.2013ರಂದು ಅವಧಿ ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು 
ಲಿಂಕ್ ಬಳಸಿ – http://avadhimag.com/?p=76173  


Tuesday 8 January 2013

ಕ್ಷಣಗಳ ಇಬ್ಬನಿಯಲ್ಲಿ - ನವ ಪಲ್ಲವಕ್ಕೊಂದು ಪಲ್ಲವಿ...



ನಿಜಘನ ಮಕರಂದ//ರಘುನಂದನ ಕೆ.


ಇರುಳ ನಕ್ಷತ್ರ ಜಾರಿ ಹಿಮಬಿಂದುವಿನ ಹೊಳೆವ ಮುತ್ತಾಗಿ, 
ಕಾಡು ಮಲ್ಲಿಗೆಯ ಮೊಗ್ಗಿನ ಮೇಲೆ ಪಲ್ಲವಿಸಿ, 
ಅರುಣ ಕಿರಣಗಳ ಪ್ರತಿಫಲಿಸಲು ಕಾದಿರುವಾಗ.... 

ಮೆಲ್ಲನೆ ಜಾರಿಹೋಗಿದೆ ಮತ್ತೊಂದು ವರ್ಷಸರಿವ ಕಾಲನ ಕಾಯಕ್ಕೆ ನೆರಳಿಲ್ಲಮತ್ತೆ ಮರಳುವ ಹಂಗಿಲ್ಲಮನುಷ್ಯನಿಗೆ ಬೇಕು ಕಾಲನ ಲೆಕ್ಕ, ಒಂದು ಚೌಕಟ್ಟು... ಮುಗಿದ ವರ್ಷಕ್ಕೊಂದು ನೆನಹುಬರುವ ವರ್ಷಕ್ಕೊಂದು ಕನಸು... ಒಂದರ ಮುಕ್ತಾಯ ಮತ್ತೊಂದರ ಆರಂಭ ಕೂಡ... ಕಳೆದ ವರ್ಷದ ಮಂಗಳ ಗೀತೆ ಕಾಲನ ನಡಿಗೆಯಲ್ಲಿ ಹೊಸ ವರ್ಷದ ಸ್ವಾಗತ ಗೀತೆ ಕೂಡ... 

ಎಂದೋ ಭುವಿಗೆ ಬಂದ ಕುರುಹಿನ ಆಚರಣೆಗೆ ಹಬ್ಬದ ಸಡಗರ, ಜಗವೆಲ್ಲ ಹೊಸ ವರ್ಷವಾಚರಿಸಿ ಎಂಟು ದಿನಗಳ ನಂತರ ನನ್ನ ಹೊಸ ವರ್ಷದ ಗಂಟು ಬಿಚ್ಚುತ್ತದೆ, ಜನ್ಮ ದಿನದ ಹರುಷ ವರುಷಗಳ ಲೆಕ್ಕದಲ್ಲಿ ಜಮೆಯಾಗುತ್ತದೆ. ಒಳಹೊರಗಿನ ಪ್ರಪಂಚಗಳು ಹೊಳೆಹಿಸಿದ ಹೊಸ ಅನುಭವ ವಿಚಾರಗಳ ಕ್ಷಣಗಳಲ್ಲಿ ಬಂಧಿಸಿ, ಭವಿಷ್ಯತ್ತಿನ ದಿನಗಳಿಗೆ ಪಾಠವಾಗಿ, ಭೂತ ಕಲಿಸಿದ ಜ್ಞಾನವಾಗಿ, ವರ್ತಮಾನದ ಅಚ್ಚರಿಯಾಗಿ... ಒಳಸ್ಪಂದನ ತಾಳಗಳ, ಕಪ್ಪೆಚಿಪ್ಪೊಳಗಿನ ಘರ್ಷಣೆ ಸೃಷ್ಠಿಸುವ ಮುತ್ತುಗಳ ಪುಟಗಟ್ಟಿದ ಹೊತ್ತಿಗೆಯಾಗಿ ಜಾರಿದೆ ಬದುಕಿನ ಲೆಕ್ಕದಿಂದ ವರ್ಷ ಮತ್ತೊಂದು...

ಪ್ರತಿ ದಿನ ಉದಯಿಸುವ ಸೂರ್ಯಂಗೆ ಯಾವತ್ತು ಹುಟ್ಟಿದ ಹಬ್ಬ...? ಪ್ರತಿ ಸಂಜೆ ಅಸ್ತಮಿಸುವ ಸೂರ್ಯ ನಾಳೆ ಹೊಸ ಅನುಭವಗಳ ಸಿಹಿ ಕಹಿ ಹೊತ್ತು ಮತ್ತೆ ಬರುತ್ತೇನೆ ಎಂದೇ ಹೋಗುತ್ತಾನೆ. ಹಳೇ ವರ್ಷ ಕೂಡ ಹೊಸ ಕ್ಷಣಗಳ ಭರವಸೆಯಲ್ಲಿ ಕಳೆದಿದೆ... 
ದೇವ ಕೊಟ್ಟ ಪುಟ್ಟ ಉಡುಗೊರೆ ಬದುಕು
ಪ್ರತಿ ದಿನವೂ ಸೂರ್ಯ ದೇವನಿಂದ ಹೊಸ ಬೆಳಕು
ಪ್ರತಿ ಕ್ಷಣದ ಪ್ರತಿ ಉಸಿರಲ್ಲೂ ಹೊಸ ಪ್ರಾಣವಾಯುವಿನದೇ ಸಂಚಾರ
ಕಾಲದ ಕಣ ಕಣದಲ್ಲೂ ಅನುಭವಗಳ ಇಂಚರ...

ಗೂಢ ಪ್ರಪಂಚದಲ್ಲಿ ನನ್ನ ಭವಿಷ್ಯತ್ತಿನ ಮೂಢ ಕನಸುಗಳು ರೆಕ್ಕೆ ಬಿಚ್ಚಿ ಹಾರುತ್ತವೆ. ಭೂತ ಕಾಲದ ಮಳೆ ನಿಂತ ಮೇಲಿನ ಹನಿಗಳ ತಂಪು ಘಮಘಮಿಸುತ್ತದೆ. ವರ್ತಮಾನದ ಭಾವ ಭವ ತರಂಗಗಳುದ್ಭವಿಸುತ್ತವೆ. ಯಾವುದೋ ಚಿತ್ರ ಚೆಲ್ಲಿದ ಬಣ್ಣ, ಯಾವುದೋ ಪುಸ್ತಕ ಹೊಳೆಹಿಸಿದ ಬೆಳಕು, ಯಾವುದೋ ಹಾಡು ಕದಲಿಸಿದ ನೆನಪು, ಯಾವುದೋ ಘಟನೆ ಕಲಿಸಿದ ಪಾಠ... ಮನಸ್ಸಿನ ಭಾವಕೋಟೆಗೆ ಲಗ್ಗೆಯಿಟ್ಟು ಕನವರಿಸಿದಾಗ ಹೊಸ ವರ್ಷದ ಕ್ಷಣಗಳು ನೇವರಿಕೆಯಾಗುತ್ತವೆ. ತಪ್ಪಿ ಇಟ್ಟ ಹೆಜ್ಜೆ, ಇಡಬೇಕೆಂದುಕೊಳ್ಳುತ್ತಾ ಹಿಂತೆಗೆದುಕೊಂಡ ಹೆಜ್ಜೆಯ ಗುರುತು, ವೇದನೆ ಉಳಿಸಿ ಹೋಗುವ ಆನಂದ, ಮನವರಳಿಸುವ ಕಲ್ಯಾಣಿ ರಾಗ ತರಂಗ, ನನ್ನೆದೆಯ ಬೆಚ್ಚನೆಯ ಗೂಡಿಂದ ಹೊರಬಂದ ಗುಬ್ಬಚ್ಚಿ ರೆಕ್ಕೆಯ ಪಟಪಟ... ಸೂರ್ಯನ ಕಿರಣಗಳ ಮೀಟುವಿಕೆಗೆ ಸ್ಪಂದಿಸುತ್ತಾ ಸುಖದಿಂದರಳುವ ತಾವರೆಯ ದಳದಂತೆ... 

ಬದುಕೆನ್ನುವುದು ಅರಳುವ ಮೊಗ್ಗಿನೊಳಗೆ ಜಾರುವ ಇಬ್ಬನಿಯ ಹನಿ
ಪ್ರತಿ ದಿನವೂ ಹೂವಾಗಿ
ಕಾಲ ಕರಗುವ ಹಿಮಮಣಿಯಾಗಿ ಪಿಸುಗುಡುತ್ತಲೇ ಇರುತ್ತದೆ... 
ಹನಿ ಹನಿ ಹಜಾರ್ ಕಹಾನಿ... 

ಅವಲೋಕನ ಮುಗಿದಿದೆ, ಸಂಕಲನ ಮುಗಿಯಬೇಕಲ್ಲ, ಜೀವನದಲ್ಲಿ ಕಾಲ ಸದಾ ವ್ಯವಕಲನವೇ ಆದರೂ ಏನೇನನ್ನೋ ಕೂಡಿರುತ್ತದೆ, ಕೂಡಿಸಿರುತ್ತದೆ - ಒಂದು ಮನಸನ್ನು, ನೂರು ಕನಸನ್ನು, ಸಹಸ್ರ ನಕ್ಷತ್ರಗಳ ನಗುವನ್ನು, ಸೂರ್ಯನಾಚೆಯ ಜ್ಞಾನದ ಕಿರಣದಿಂದೊಂದು ಬಿಂದುವನ್ನ, ದಿಗಂತದಾಚೆಯ ಅವ್ಯಕ್ತ ಸಂದೇಶವನ್ನು, ಎಲ್ಲವನ್ನೂ... ಕೂಡಿಸುತ್ತದೆ ಕಾಲ, ಕೂಡುತ್ತಾ ಕಳೆಯುತ್ತಾ ಬೆಳೆವ ಬೆಳೆಸುವ ಕಾಲಕ್ಕೆ ವಂದಿಸುತ್ತಾ... ಮತ್ತೊಂದು ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತು ಹೊಸ ಹೊಸ ಸೂರ್ಯೋದಯಗಳ ಅನುಭವಗಳ ಉಸಿರ ಕಲರವವನ್ನು ನೆನಪ ಸರಿಗಮದ ಸಲುವಾಗಿ ಅಣು ಮಾತ್ರದಷ್ಟಾದರೂ ಹಿಡಿದಿಡಲು ಹೊಸ ಕ್ಷಣಗಳೊಡನೆ ಸಂಭಾಷಣೆ... ಬದುಕೆಂಬ ಬಾವಿಯಿಂದ ತಣ್ಣಗಿನ ಅನುಭವಗಳನ್ನು ಮೊಗೆಮೊಗೆದು ಸದ್ದಿಲ್ಲದೆ ಹೊಟ್ಟೆಯೊಳಗಿನ ಸಂತೋಷಗಳನ್ನು ಸಂಗತಿಗಳನ್ನು ಹೂವಾಗಿಸುವ ಗುಲಾಬಿಯ ಲವಲವಿಕೆಯೊಂದಿಗೆ... 

ಕ್ಷಣಗಳ ಸುಪ್ತ ಭಾವ ದಿನಚರಿಯಲ್ಲಿ ಜಂಜಾಟಗಳ ಟಿಪ್ಪಣಿಯಿಲ್ಲ, ನೋವು ನಲಿವಿನ ಚಿತ್ರಣದೊಳಗಿಂದ ಉದ್ಭವಿಸಿದ ಚಿಂತನೆಯಿದೆ. ವ್ಯಕ್ತಿ ಭಕ್ತಿಗಳ ವಿಮರ್ಷೆಯಾಚೆ ವ್ಯಕ್ತಿತ್ವ ಅರಳಿಸುವ ಸಂಘರ್ಷವಿದೆ... ಮತ್ತೊಮ್ಮೆ ವಿದಾಯ ಹೇಳಬೇಕಿದೆ ಈಗ, ಕನಸು ಕೊಟ್ಟ ವರ್ಷಕ್ಕೆ ಮನಸುಗಳ ಬೆಸೆದ ವರ್ಷಕ್ಕೆ, ಮನಸ್ಸಿನ ಮೂಲೆಯಲ್ಲೊಂದು ಪೊರೆ ಅಹಂನ ತೆರೆ... ಅಷ್ಟಷ್ಟೆ ಸರಿಸಿ, ಹರಸಿ ಮೌನದಿಂದ ಮಾತಿಗೆ, ಮಾತಿನಿಂದ ಮೌನಕ್ಕೆ, ಮೌನದಾಚೆಯ ಲೋಕಕ್ಕೆ, ಚಿಕ್ಕ ಚಿಕ್ಕ ಕ್ಷಣಗಳ ಜೀವದ ಪಯಣ ಮುಗಿದು, ಮೃದು ಮಧುರ ಜೊನ್ನ ಜೇನ ಬಂಧ ಬೆಸೆದು, ತುಂಬಾ ತುಂಬಾ ಬೆಳೆಸಿದ ಕಳೆಸಿದ ಜೀವ ಭಾವ ಮೇಳೈಸಿದ ಹರುಷ ವರುಷದ ವಿದಾಯದಂಚಲ್ಲಿ... ಚಲಿಸಿದೆ ಅನುರಾಗ ಪವನ ಪರಿಮಳ, ಸರಿದಿದೆ ಕಾಲ ಸರಸರ...

ಹುಣ್ಣಿಮೆಯ ಚಂದ್ರ ಉದಯಿಸಿ ಇಬ್ಬನಿಗೆ ಬೆಳ್ಳಿ ರಂಗ ಲೇಪಿಸುತ್ತಿರುವಾಗ ಜೀವನದ ಸಂಗೀತದಲ್ಲಿ ಪ್ರತಿಯೊಂದು ವರ್ಷವೂ ಒಂದೊಂದು ರಾಗ. ಹಂಸಗಳ ಧ್ವನಿಯಲ್ಲಿ ಅಮೃತ ವರ್ಷಿಸುವಾಗ ಬೃಂದಾವನದಲ್ಲಿ ಸಾರಂಗ ರೆಕ್ಕೆ ಬಿಚ್ಚಿ ನವಿಲಿನೊಡಗೂಡಿ ಕುಣಿಯುತ್ತದೆ. ಕ್ಷಣಗಳ ಅನುಭಾವಗಳ ಸ್ವರಗಳ ನುಡಿಸಿ, ಮೌನ ರಾಗದ ಮನೋ ವಿಲಾಸಗಳ ಉಸಿರಾಗಿಸಿ, ಸಂತಸಕ್ಕೊಂದು ಸಾಂತ್ವನಕ್ಕೊಂದು ಸಂಭ್ರಮ ನೀಡಿ ಮುದಗೊಳಿಸಿ ಕೊನೆಗೂ ಮುಗಿದಿದೆ ವರ್ಷ. ಪ್ರಿಯ ವರ್ಷವೇ, ನಿನ್ನ ನೆನಪು ಮನೋ ವೇದಿಕೆಯಲ್ಲಿ ಸದಾ ನರ್ತಿಸುತ್ತಲೇ ಇರುತ್ತದೆ
ಮೇರೆ ಮನ ಮಯೂರ ನಾಚೆ, ತೇರೇ ಯಾದೋಂಕೆ ಆಂಗನ ಮೇ

ಉಸಿರು... ನಿನ್ನ ಕ್ಷಣಗಳ ಉಸಿರಲ್ಲಿ ನನ್ನ ಜೀವದ ಉಸಿರ ಬೆರೆಸಿ ಬದುಕ ತುಂಬ ಲಾಲಿ ಹಾಡ ಗುನುಗುತ್ತಲೇ ಇರುತ್ತದೆ. ಅಕ್ಕರೆ ಕಲ್ಲುಸಕ್ಕರೆ ಕರಗದೇ ಉಳಿಯಬಲ್ಲದೇ, ಕರಗದಿದ್ದರೂ ಸಿಹಿ ಕ್ಷಣಗಳ ಸ್ಫುರಿಸಬಲ್ಲದೇ... ತಂಗಾಳಿ ಬೀಸ್ವ ತಂಪಿರುಳ ಬಯಲಲ್ಲಿ ನಿಂತು ಮುಗಿಲ ನೀಲಿಯಲ್ಲಿ ನಕ್ಷತ್ರಗಳ ಎಣಿಸುವ, ಸಂಘರ್ಷಗಳಲ್ಲಿ ಸಂಚರಿಸಿ ಸ್ವಚ್ಛವಾಗಿ ಸ್ವಚ್ಛಂದವಾಗಿ ವಿಹರಿಸುವ - ಪುಟ್ಟ ಪೋರ,  ಕನಸುಗಳನ್ನ ಇಬ್ಬನಿಯಲ್ಲಿ ನೆನೆಸುತ್ತಮನಸ ತುಂಬ ಮೌನ ಗಾನದ ಲಹರಿ ಹರಿಸುತ್ತ, ಹೋಗುತ್ತಿರುವ ನಿನಗೆ ವಿದಾಯ ಕೋರುತ್ತಾನೆ, ಬರುವ ಹೊಸತಿಗಾಗಿ ಸಂಭ್ರಮಿಸುತ್ತಾನೆ... 

* * * * * * * * * *

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)