ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday 11 April 2016

ಗರ್ಭ ಕೂಗಿನ ಋತುಗಾನ

ಕಾವ್ಯ ಲಹರಿ//ರಘುನಂದನ ಕೆ.
ಸ್ವಪ್ನ ಸಂತೆಯ ಬೀದಿಯಲ್ಲಿ
ದ್ವೀಪದೂರಿನ ರಾಜಕುಮಾರ
ಎದೆಯ ತುಡಿತದ ಬಿಗುವಲ್ಲಿ
ಕುದುರೆ ಖುರಪುಟದ ನಾದ
ದೇಹದೊಡಲ ಬಯಕೆ ವಸಂತಗಾನ
ಹೊಕ್ಕುಳ ಸುಳಿಯ ತಿರುವಲ್ಲಿ
ಹೊಸ ಹರೆಯ ಹೂ ಕಂಪನ

ಅಂತರಾಳದಾಸೆ ಪಟಪಟಿಸಲು
ಹಸಿ ನೆಲದ ಕನಸಿಗೂ ಹಸಿವು
ರೆಕ್ಕೆ ಬಿಚ್ಚಿ ಹರೆಯ ತೆರೆಯಲು
ಮೌನ ರಾಗದ ಬಯಕೆ ಬಿಸುಪು
ಕೊರಳ ಕೊಳಲಿಗೆ ತುಟಿ ಸೋಕಿ
ಸ್ವಪ್ನಲೋಕದ ತುಂಬ ಪಿಸುಮಾತು
ಬಯಕೆ ಹೂ ಗಂಧ; ಸುಡುವ ಬೆಳದಿಂಗಳು


ಚಿಟ್ಟೆ ರೆಕ್ಕೆ ಬಿಚ್ಚುವ ಬೆರಗು
ಎದೆ ಮೊಳಕೆಯೊಡೆವ ಪುಳಕ
ಹರೆಯ ಕುಡಿಯೊಡೆವ ದುಗುಡ
ಚೈತ್ರ ಚಿಗುರಿನ ಸಂಭ್ರಮ
ಮೊದ ಮೊದಲ ಮೊಗ್ಗು ಬಿರಿದಂತೆ
ಗರ್ಭ ಕೂಗಿನ ಋತುಗಾನ
ತಾಯ ತೊಟ್ಟಿಲ ಸಂಕಲನ
  * * * * * * * * *
2015ರ ಹೊಸದಿಗಂತ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿಸಲ್ಪಟ್ಟಿದೆ.
&
ದಿನಾಂಕ: 08.04.2016ರಂದು 'ಅವಧಿ' ಯಲ್ಲಿ ಪ್ರಕಟಿಸಲ್ಪಟ್ಟಿದೆ.

ಚಿತ್ರಕೃಪೆ : ಅವಧಿ & ಅಂತರ್ಜಾಲ

Monday 15 February 2016

ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ...!!

ಮೋಹಮತಿ ಕಥಾಮುಖಿ//ರಘುನಂದನ ಹೆಗಡೆ.

ಪುಟ್ಟ ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ ಉಡುಗೊರೆ ಕಾದಿಟ್ಟ ಕನಸು, ಮನಸ್ಸಿನಲ್ಲಿ ಮಾನಸ ಸರೋವರದ ತಣ್ಣನೆಯ ಹಿಮರಾಶಿ. ಜಾರಬಹುದಾದ ದಾರಿಯೇ ಹಜಾರ್ ದೇತಾ ಹೈ, ಜಾರಿ ಬಿದ್ದರೆ ದಾರಿಯೂ ನಗುತ್ತದೆ. ಮುಗಿಲು ಮಾತ್ರ ನಾನಿಲ್ಲಿದ್ದೇನೆ ಬಾ ಎನ್ನುತ್ತದೆ. ನಿನಗಿನ್ನೂ ತ್ರಾಣವಿದೆ, ನಡೆಯಬೇಕಾದ ದಾರಿ ನೂರು, ಆದರೆ ನಾನು ಮಾತ್ರ ಒಂದೇ, ನಿನಗೆಂದೇ ಕಾಯುತ್ತಿರುವೆ, ಆಕಾಶ ಕೂಗಿ ಕರೆಯುತ್ತದೆ. ಪಾತಾಳ ಲೋಕದಲ್ಲೊಂದು ಕ್ಷೀಣ ಸ್ವರ, ಬರುತ್ತೇನೆ ಖಂಡಿತ ಎದ್ದು ಬರುತ್ತೇನೆ ಎಂಬ ಕನವರಿಕೆಯ ಸ್ವರ. ಮುಂಬಯಿಯ ಪುಟ್ಪಾತ್ಗಳಲ್ಲಿ, ಲೋಕಲ್ ರೈಲಿನ ಗಡಿಬಿಡಿಯ ಗಜಿಬಿಜಿಯಲ್ಲಿ, ಪಾವ್ಬಾಜಿವಾಲಾ ಲಾಟೀನ್ ಬೆಳಕಲ್ಲಿ ಬಿಸಿ ಬಿಸಿ ಕನಸುಗಳ ಮಾರುತ್ತಾನೆ. ಜೊತೆ ನಡೆದ ಬದುಕಿನ ಪುಸ್ತಕದಲ್ಲಿ ಇಂತ ನೂರು ನೆನಪ ಹಾಳೆಗಳಿವೆ. ಅವನ್ನೆಲ್ಲ ಅಳಿಸಿ ಹಾಕುವ ಕಾಲನ ಹೊಡೆತಕ್ಕೆ ಏನು ಹೇಳುವುದು.

ಭೂತಕಾಲವನ್ನು ನೆನಪುಗಳಾಗಿ ತಂದು ಕಣ್ಣ ಆಗಸದಲ್ಲಿ ವರ್ಷಿಸುತ್ತದೆ ವರ್ತಮಾನ. ಭವಿಷ್ಯತ್ಗೆ ಏನನ್ನ ಉಳಿಸಲಿ. ಎದುರಿಗೆ ಕುಳಿತು ನೀನು ಶೂನ್ಯವನ್ನ ದಿಟ್ಟಿಸುತ್ತೀಯ, ನಾನು ನಿನ್ನನ್ನ. ತಳವಿಲ್ಲದ ಆಳ ನಿನ್ನ ಕಣ್ಣು. ಆದರೂ ಹುಡುಕುತ್ತೇನೆ ಏನಾದರೂ ಸಿಕ್ಕೀತು, ಉಹೂಂ, ಮತ್ತೂ ಆಳಕ್ಕೆ ಸೆಳೆಯುತ್ತೀಯ. ಒಳಸುಳಿಯಲ್ಲಿ ನಾನೇ ಮುಳುಗಿ ಹೋಗುತ್ತೇನೆ. ನನ್ನ ಆಳವನ್ನೆಲ್ಲ ಭೇದಿಸಿ ನನ್ನನ್ನ ಮುಳುಗಿಸುತ್ತೀಯ. ಆಳ ಧಕ್ಕದೆ ನಾನಲ್ಲಿ ತೇಲುತ್ತೇನೆ. ಕಂಗಾಲಾಗುತ್ತೇನೆ. ನನ್ನ ಬದುಕಿನಂತೆ ನಿನ್ನ ಕಣ್ಣುಗಳೂ, ಆಳ ತಳ ಧಕ್ಕದು. ನಿನ್ನನ್ನೆ ನೋಡುತ್ತ ಬದುಕೆಲ್ಲ ಕಳೆದು ಬಿಡಬಲ್ಲೆ ಅಂತೆಲ್ಲಾ ಮಾತಾಡುವವರೆಲ್ಲ ಎಷ್ಟು ದಿನ ನೋಡಬಲ್ಲರೋ ಗೊತ್ತಿಲ್ಲ. ನಾನು ಮಾತ್ರ ನೋಡುತ್ತ ಕುಳಿತೇ ಇದ್ದೇನೆ, ಎಷ್ಟು ವಸಂತ ಕಳೆದವೋ ಗೊತ್ತಿಲ್ಲ. ಒಂದಲ್ಲ ಒಂದು ದಿನ ಮತ್ತೆ ಎಲ್ಲ ಸರಿ ಹೋಗಬಹುದು ಎನ್ನುವ ಕನಸು.

ಸಮುದ್ರ ತೆರೆಗಳ ಭೋರ್ಗರೆತ. ಮನಸ್ಸಿನಲ್ಲಿ ದುಗುಡದ ಮರಳ ರಾಶಿ. ಮತ್ತೆ ಮತ್ತೆ ಅದೇ ಮಾತು ಅಲೆ ಅಲೆಯಾಗಿ ಅಪ್ಪಳಿಸುತ್ತದೆ. ನೀವು ಒಪ್ಪಿಗೆ ಕೊಟ್ರೆ ಕೊನೆಯ ಪ್ರಯತ್ನ ಮಾಡಬಹುದೇನೋ, ಆದರೂ ಗತವನ್ನ ನೆನಪುಗಳನ್ನ ಉಳಿಸಲಾಗದೇನೋ ಅನ್ಸುತ್ತೆ, ನೀವೇನು ಹೇಳ್ತೀರಿ. ಏನ್ ಹೇಳುವುದು, ಹೇಳಲಾಗದ್ದನ್ನ ಹೇಳು ಅಂದರೆ, ಹೇಳಬಾರದ್ದನ್ನ ಹೇಳಬೇಕಾಗಿ ಬಂದರೆ, ಆದರೂ ಹೇಳಲೇ ಬೇಕು. ಗತವನ್ನ ಉಳಿಸಲಾಗುವುದಿಲ್ಲ ಅಂದರೆ ಅಷ್ಟೇನು ಬೇಸರವಿರುತ್ತಿರಲಿಲ್ಲವೇನೋ ಎಂದು ಈಗೀಗ ಎನಿಸುತ್ತಿದೆ. 

ಏನಾಗುತ್ತಿತ್ತು, ನಿನ್ನ ಗತ ನಿನ್ನಲ್ಲಿ ಉಳಿಯದಿದ್ದರೆ, ನಮ್ಮ ಎಷ್ಟೋ ಹಳೆಯ ಕಳೆದ ದಿನಗಳು ಮರೆಯಾಗುತ್ತಿದ್ದವಷ್ಟೆ, ನಾನು ಮತ್ತೆ ಹೊಸದಾಗಿ ಪ್ರೇಮಿಯಾಗಿ, ನಿನಗೆ ಪ್ರಫೋಸ್ ಮಾಡಿ ಮತ್ತೆ ಜೊತೆ ಸೇರಿ, ರಾತ್ರಿಯ ನೀರವ ಬೀದಿಗಳಲ್ಲಿ ಸಂಚರಿಸಿ, ಬೆಳದಿಂಗಳಲ್ಲಿ ಮಲ್ಲಿಗೆ ಹುಡುಕುತ್ತ ಕಾಡುಗಳಲ್ಲಿ ಸುತ್ತಾಡಿ... ನಿನ್ನ ಮನೋ ಭೂಮಿಕೆಯಲ್ಲಿ ಹಳೆಯದಕ್ಕಿಂತ ಚೆಂದನೆಯ ಹೊಸ ನೆನಪುಗಳ ಉದ್ಯಾನವನ್ನ ಮೂಡಿಸಿ ಅಲ್ಲಿ ನಮ್ಮ ಪ್ರೇಮದ ಸರೋವರವನ್ನ ಪ್ರತಿಷ್ಠಾಪಿಸಿ ಇಬ್ಬರೂ ವಿಹರಿಸಬಹುದಿತ್ತು. ಆದರೆ ನನಗೆ ಗೊತ್ತಿತ್ತಲ್ಲ, ಭವಿಷ್ಯತ್ ಪುಟಗಳು ಕೂಡ ನಿನ್ನಲ್ಲಿ ಅರೆ ಕ್ಷಣಗಳಿಗಿಂತ ಹೆಚ್ಚು ದಾಖಲಾಗುವುದಿಲ್ಲ ಎಂದು. ಆದರೇನಂತೆ ಪ್ರತಿ ದಿನ ಪ್ರೇಮಿಯಾಗುವ ಅವಕಾಶ ಅಲ್ಲವಾ ಎನಿಸಿ ಹೂಂ ಅಂದೆನಾ, ವೈದ್ಯಶಾಸ್ತ್ರವನ್ನ ಮೀರಿದ ಶಕ್ತಿ ಮತ್ತೆ ಅದೇ ನಿನ್ನನ್ನ ನನ್ನವಳನ್ನಾಗಿಸಬಹುದು ಎನಿಸಿ, ನಿಮ್ಮ ಪ್ರಯತ್ನ ನೀವು ಮಾಡಿ ಎಂದೆನಾ ಗೊತ್ತಿಲ್ಲ. ಅವರ ಕೊನೆಯ ಪ್ರಯತ್ನ ಯಶಸ್ವಿಯಾಯಿತು, ನೀನು ಉಳಿದೆ ಆದರೆ ನನ್ನನ್ನ ಕಳೆದುಬಿಟ್ಟೆ.

* * * * * * * * * *
ಪ್ರಿಯತಮ, ನಿನ್ನ ನನ್ನ ಕಣ್ಣ ಕೊಳದೊಳಗೆ ಮುಳಗಿಸಿ ಕೊಲ್ಲಲು ಕಾಯುತ್ತಿರುವೆ,
ಬರದೆ ಇರಬೇಡ, ಕಣ್ಣು ಸೋಲುತ್ತಿದೆ.
ಕಿರುನಗೆಯ ತುತ್ತನಿಟ್ಟು ನಿನ್ನ ತುಟಿಗಳಿಂದ ಜಾರುವ ಮುತ್ತ ನುಂಗಲು ಹಸಿದು ಕಾದಿರುವೆ
ತಡಮಾಡಬೇಡ, ಕಿರುನಗೆ ಮಾಸುತ್ತಿದೆ.

ಅರೆ ಇಬ್ಬನಿಯ ರಾತ್ರಿಯಲ್ಲಿ ಕೈ ಹಿಡಿದು ನಡೆಸಿದ ಗೆಳೆಯ ಅವನೆಲ್ಲಿ ಹೋದಾ. ಅವನಿಗೆ ಗೊತ್ತಿಲ್ಲವೇ ನಾನಿನ್ನು ಬೆಳೆಯಬೇಕಿದೆ. ನನ್ನ ಕನಸುಗಳಲ್ಲಿನ ಅವನನ್ನು ಬದುಕಿಗೆ ಎಳೆದು ತಂದುಕೊಳ್ಳಬೇಕಿದೆ. ಮತ್ತೆ ಇಬ್ಬನಿಯ ರಾತ್ರಿಗಳಲ್ಲಿ ಜೊತೆ ಸೇರಿ ನಡೆಯಬೇಕಿದೆ. ಮಾತುಗಳ ಮೆಲ್ಲಬೇಕಿದೆ, ಕನಸುಗಳ ಖರೀದಿಸಬೇಕಿದೆ. ಈ ಬಿಳಿ ಬಿಳಿ ಚಾದರ, ಹಾಸಿಗೆ, ಘಮಗಳ ನಡುವಿಂದ ಎದ್ದು ಓಡಬೇಕಿದೆ. ಮನಸ್ಸಿನ ಕರೆ ಅರ್ಥವಾಗಿ ರಂಗಭೂಮಿಯ ತೆರೆ ಸರಿಸಿ, ಬಂದ ನಿನ್ನ ಕಣ್ಣಲ್ಲಿ ಪ್ರಶ್ನೆ. ಚೆನ್ನಾಗಿದ್ದೀಯಾ? ಆಡಿಯೂ ಬಿಟ್ಟೆ ನೀನು. ನಿನ್ನ ಪ್ರಶ್ನೆ ನಿನಗೇ ವಿಚಿತ್ರ ಅನ್ನಿಸದಾ, ಆಸ್ಪತ್ರೆಯಲ್ಲಿ ಮಲಗಿದವರನ್ನ ಚೆನ್ನಾಗಿದೀಯಾ ಎಂದು ಕೇಳಬಹುದಾ? ಅಂತೆಲ್ಲಾ ನಾನು ಅನ್ನುತ್ತಾ ಇದ್ದರೆ ನಿನ್ನಲ್ಲಿ ದುಗುಡ ಜಾಸ್ತಿ ಆಗುತ್ತದಾ. ಆದರೂ, ನನಗೇನಾಗುತ್ತಿದೆ, ಹೇಗೆ ಹೇಳಲಿ ನಿನಗೆ, ಅಷ್ಟಷ್ಟೆ ಕರಗುತ್ತಿರುವ ನಿನ್ನ ಕ್ಷಣಗಳನ್ನ ನನ್ನದಾಗಿಸಿಕೊಂಡಿದ್ದೇನೆಂದು.

ಬದುಕಿನ ದಾರಿಯಲ್ಲಿ ಒಂಟಿಯಾಗಿ ನಡೆಯುತ್ತಿದ್ದವಳಿಗೆ ನೀನು ಯಾಕೆ ಸಿಕ್ಕೆ ಅಂತ ನಾನು ಕೇಳಿಕೊಂಡಿದ್ದೇ ಇಲ್ಲ ಕಣೋ. ನಿನಗಾಗೇ ಕಾದಿದ್ದವಳ ಹಾಗೆ ಹೇಗೆಲ್ಲ ಒಪ್ಪಿಕೊಂಡು, ಅಪ್ಪಿಕೊಂಡು ಕಾಡಿದೆ ನಿನ್ನನ್ನ. ಗೋದಾವರಿ ನದಿ ತೀರದ ಬತ್ತದ ಗದ್ದೆಗಳಲ್ಲಿ ತಂಪು ತಂಪು ರಾತ್ರಿಯಲ್ಲಿ ಹೆಜ್ಜೆ ಇಡುವಾಗ ಬೆಚ್ಚಗಿನ ನಿನ್ನ ಹಿಡಿತದ ಸೊಬಗು,  ಹೆಸರಿಲ್ಲದ ಹಳ್ಳದ ನೀರ ಝರಿಯಿಂದ ನೀನು ನನ್ನ ಎಳೆದೊಯ್ಯುವಾಗ ಮೂಡುವ ಹಠ ಎಲ್ಲ ನಿನಗಾಗೇ ಕಾದಿರಿಸಿದ್ದು. ನೀನೋ ಮಹಾ ವಿಜ್ಞಾನಿ, ಅದೇನು ಶೋಧಿಸುತ್ತೀಯೋ. ಮೆದುಳಿನೊಳಗಿನ ನೆನಪ ಸಾಗರದಲ್ಲಿ ಒಂದನ್ನಾದರು ಹುಡುಕು ನೋಡೋಣ, ಎದೆಯಂಗಳದ ಬಯಲಲ್ಲಿ ಬೆಳೆದ ಪಾರಿಜಾತ ಅಂದರೇನೆಂದು ಗೊತ್ತಾ ಅಂತೆಲ್ಲ ನಿನ್ನ ಕಾಡುವಾಗ ಏನೂ ಮಾಡಲು ತಿಳಿಯದ ನೀನು ಬಾಚಿ ತಬ್ಬಿ ನನ್ನ ಸುಮ್ಮನುಳಿಸುತ್ತಿದ್ದರೆ ನನ್ನಲ್ಲಿ ಎಷ್ಟೆಲ್ಲ ಆಸೆಗಳ ಮೆರವಣಿಗೆ ಗೊತ್ತಾ.

ಕುಂಟಾಬಿಲ್ಲೆ ಆಡದೆ ಎಷ್ಟು ದಿನ ಆಯ್ತು ಗೊತ್ತಾ, ನನ್ನನ್ನ ಈ ಆಸ್ಪತ್ರೆಯ ಘಮದಿಂದ ಬಿಡಿಸಿಕೊಂಡು ಹೋಗು, ಬಿಳಿ ಚಾದರಗಳ ನಡುವಿಂದ ಎತ್ತೊಯ್ದು ಬಣ್ಣಬಣ್ಣದ ಹೂವಿನ ಚಾದರದೊಳಗೆ ಅಡಗಿಸಿಡು ಅಂತೆಲ್ಲ ನಾನು ಕೇಳಿದರೆ ನಿನ್ನ ಮುಖದಲ್ಲಿ ಪುಟ್ಟ ಮಂದಹಾಸ, ಯಾವುದು ಕಳೆದರೂ ಇದನ್ನ ಬಿಟ್ಟುಕೊಡಲಾರೆ ಎಂಬಂತೆ. ನಿನ್ನ ಮಂದಹಾಸವನ್ನ ನಾನು ಕದ್ದೊಯ್ಯುತ್ತಿದ್ದೇನಾ. ನೀನೇ ಹೇಳಿದ್ದು ಹಿಂದೊಮ್ಮೆ, ಲಾಸ್ಟ್ ಇಸ್ ಪಾಸ್ಟ್ & ಪಾಸ್ಟ್ ಇಸ್ ಆಲ್ವೇಯ್ಸ್ ಪಸ್ಟ್, ನೆನಪಿದೆಯಾ, ನಿರಾಸೆ ತುಂಬಿ ನಿಂತ ನನ್ನನ್ನ ಈ ಮಾತ ಹೇಳಿ ಮರಳ ತೀರದಲ್ಲಿ ಓಡಿಸಿ, ಕಾಡಿಸಿ, ಈಗ ನಿನ್ನ ಬಿಟ್ಟುಕೊಡಲಾರೆ ಎಂಬಂತೆ, ಮಾತಾಡಿದರೆ ಚೆನ್ನವಲ್ಲವೆನ್ನಿಸಿತೋ ಏನೋ, ಕಂಠ ಕಟ್ಟಿ ಕಣ್ಣಿಂದ ಪುಟ್ಟ ಬಿಂದು, ಆಕಾಶ ಕರೆಯುತ್ತಿದೆ, ನಿನಗಾಗಿ ನಕ್ಷತ್ರಗಳ ಸಿಂಗರಿಸಿ ಚಾದರವ ಕಾಯ್ದಿರಿಸಿರುವೆನೆಂದು, ಸೂರ್ಯನಿಂದ ಕಾಮನಬಿಲ್ಲನ್ನ ಚಂದಿರನಿಂದ ಬೆಳದಿಂಗಳನ್ನ ನಿನಗಾಗೇ ತೆಗೆದಿಟ್ಟಿರುವೆನೆಂದು.

* * * * * * * * * *
ನಿಮಗೆ ಗೊತ್ತಿದೆ, ಮೆದುಳು ಅತಿ ಸೂಕ್ಷ್ಮವಾದದ್ದು, ವಿಜ್ಞಾನ ಎಷ್ಟು ಪ್ರಯತ್ನಪಟ್ಟರೂ ಮೆದುಳಿನ ಫಿಜಿಕಲ್ ಸ್ವರೂಪವನ್ನ ಅರಿತಿದೆಯೇ ಹೊರತು ಅದರ ಆಳವನ್ನ ಅರಿಯಲು ಸಾಧ್ಯವಾಗಿಲ್ಲ. ಹಾಗೇ ಮೆದುಳಿಗೆ ಬರುವ ರೋಗಗಳಿಂದ ಉಂಟಾಗುವ ಪರಿಣಾಮಗಳಿಗೆ ಕೂಡ ಸೂಕ್ತ ಉತ್ತರ ದೊರೆಯುತ್ತಿಲ್ಲ, ಎಂದೆಲ್ಲ ಅವರು ಮಾತು ಆರಂಭಿಸಿದಾಗ ಏನೂ ಭಾವನೆಗಳೇ ಇಲ್ಲದಂತೆ ನೇರವಾಗಿ ಕೇಳಿದ್ದೆ, ಉಪೋದ್ಘಾತ ಸಾಕು, ಅವಳನ್ನ ಬದುಕಿಸಲು ಸಾಧ್ಯವಿಲ್ಲವಾ ಹೇಳಿ. ಅವರೆಂದಿದ್ದರು, ಕೊನೆಯ ಪ್ರಯತ್ನ ಮಾಡಬಹುದೇನೋ ಆದರೆ, ಬದುಕಿಸುವ ಪ್ರಯತ್ನದಲ್ಲಿ ಅವಳ ನೆನಪಿನ ಕೋಶಗಳು ಸಾಯುವ ಅಪಾಯವಿದೆ. ಬದುಕಿರುವವರೆಗೂ ಅವಳು ಪರಾವಲಂಬಿಯಾಗೇ ಬದುಕಬೇಕಾದೀತು. ಅಲ್ಜೀಮರ್ ಎನ್ನುವ ನೆನಪಿನ ಶಕ್ತಿಯನ್ನು ಕೊಲ್ಲುವ ರೋಗವಿದೆ. ಸಾಮಾನ್ಯವಾಗಿ ಬದುಕಿನ ಇಳಿ ಸಂಜೆಯಲ್ಲಿ ಆವರಿಸುವ ಈ ರೋಗ ಜ್ಞಾಪಕ ಶಕ್ತಿಯನ್ನ ಕಳೆಯುತ್ತದೆ. ಬದುಕಿನ ಹಿಂದಿನ ಪುಟಗಳೆಲ್ಲ ದಿಢೀರ್ ಖಾಲಿ ಖಾಲಿ. ಈ ರೋಗ ಆವರಿಸಿದವರು ಮಗುವಾಗಿಬಿಡುತ್ತಾರೆ. ಎಷ್ಟೋ ಬಾರಿ ದೈನಂದಿನ ಕೆಲಸಗಳನ್ನೂ ಮರೆತುಬಿಡುತ್ತಾರೆ. ಸಲಹುವುದಕ್ಕೆ ಅಪಾರ ಸಹನೆ ಬೇಕಾಗುತ್ತದೆ. ಬಹುಶಃ ಅವಳ ಮುಂದಿನ ಬದುಕು ಅಲ್ಜೀಮರ್ ರೋಗಿಗಳ ಬದುಕಿನಂತಾಗಬಹುದು.

ನಿಮಗೆ ವೈದ್ಯ ಶಾಸ್ತ್ರ ಹೊಸತಲ್ಲ. ನನಗಿಂತಲೂ ಬಲ್ಲವರು. ನಿಮಗೆ ತಿಳಿಯದ್ದೇನಿದೆ. ಎಂಥ ತಣ್ಣನೆಯ ಸ್ವರ. 25 ವರ್ಷದ ಹಿಂದೆ ಅವರು ತಣ್ಣಗೆ ಹೇಳುತ್ತಿದ್ದರೆ ನಾನು ಅರ್ಥವಾಗದವನಂತೆ ಅರ್ಥವಾಗಬಾರದು ಎನ್ನುವಂತೆ ನಿಂತಿದ್ದು ನೆನಪಾಗುತ್ತದೆ. ನನ್ನೆದುರು ಆಯ್ಕೆಯಿತ್ತು, ಜಾತ್ರೆಯಲ್ಲಿ ಗೊಂಬೆಯಾ ಮಿಠಾಯಿಯಾ ಎನ್ನುವ ಆಯ್ಕೆಗೆ ಗೊಂದಲಗೊಂಡ ಮಗುವಿನ ಹಾಗಲ್ಲ ಇದು, ಜೀವವಾ ಜೀವನವಾ ಎನ್ನುವ ಆಯ್ಕೆ. ವಿಚಿತ್ರ ಅನ್ನಿಸುತ್ತಲ್ಲ, ಜೀವ ಇದ್ದರೆ ಜೀವನವೂ ಇದ್ದಂತೆ ಅನ್ನಿಸಿಬಿಡುತ್ತಲ್ಲ, ಉಹೂಂ, ಅಷ್ಟು ಸುಲಭವಲ್ಲ ಎಲ್ಲ. ನನಗೆ ನಿನ್ನನ್ನ ಸಲಹುವ ಜೀವನವಿದೆ, ಆದರೆ ಜೀವ ಉಳಿದಿಲ್ಲ. ನಿನಗೆ ಜೀವ ಇದೆ, ಆದರೆ ಜೀವನವೇ ಇಲ್ಲ. ನಿನ್ನ ಜೀವವನ್ನ ನನ್ನದಾಗಿಸಿಕೊಂಡು ನನ್ನ ಜೀವನವನ್ನ ನಿನ್ನೊಂದಿಗೆ ಕಳೆಯುವ ಉದ್ದೇಶವೊಂದೆ ಸಾಕೇ ಬದುಕಿಗೆ. ಯಾಕೋ ಈಗೀಗ ಸೋಲುತ್ತಿದ್ದೇನೆ ಎನಿಸುತ್ತಿದೆ.

ಆವತ್ತು ಕನಿಷ್ಠ ನಿನ್ನನ್ನ ಉಳಿಸಿಕೊಳ್ಳಬೇಕೆನಿಸಿತ್ತು. ಮುಂದಿನ ಬದುಕೇ ಇಲ್ಲದಂತೆ ಖಾಲಿ ಖಾಲಿಯಾಗಿ ಇದ್ದುಬಿಡುವ ದಿನಗಳ ಅರಿವಿರಲಿಲ್ಲ. ಇವತ್ತು ಮೊದಲ ಬಾರಿಗೆ ಅನ್ನಿಸ್ತಿದೆ ಬದುಕು ತುಂಬಾ ಸಂಕೀರ್ಣವಾದದ್ದು ಅಂತ. ಇದರಲ್ಲಿ ಭಾವನೆಗಳಿಗೆ ಕನಸುಗಳಿಗೆಲ್ಲ ಬೆಲೆ ವಾಸ್ತವದ ಅವಶ್ಯಕತೆಗಳೆಲ್ಲ ಪೂರ್ಣಗೊಂಡಾಗ ಮಾತ್ರವೇನೋ. ಇಷ್ಟು ದಿನ ಕೇವಲ ಭಾವಗಳ ಪ್ರಪಂಚದಲ್ಲಿದ್ದು ವಾಸ್ತವವನ್ನ ಮರೆತಿದ್ದೆ. ಅವಶ್ಯಕತೆ ಹೀಗೆ ಹಿಂದಿನಿಂದ ಹೊಡೆಯಬಹುದು ಅಂದುಕೊಂಡಿರಲಿಲ್ಲ. ಅಫ್ಕೋವರ್ಸ್ ಅವಶ್ಯಕತೆಗೆ ಬೆನ್ನು ಹಾಕಿ ನಿಂತರೆ ಅದು ಹಿಂದಿನಿಂದ ತಾನೇ ಹೊಡೆಯೋದು, ಬೆನ್ನು ಹಾಕದೇ ಇದ್ದಿದ್ದರೆ ಎಳೆದು ರಪ್ಪಂತ ಕೆನ್ನೆಗೆ ಬಾರಿಸುತ್ತಿತ್ತೇನೋ. ನನ್ನ ಬದುಕು ಮುಗಿಯುತ್ತಿದೆ, ನಿನ್ನ ಬದುಕು ಮುಗಿಯುವ ಲಕ್ಷಣಗಳೇ ಇಲ್ಲ, ನನ್ನ ನಂತರದ ನಿನ್ನನ್ನು ನೆನೆಸಿಕೊಳ್ಳಲಾರೆ ನಾನು.

* * * * * * * * * 
ಅರೆ, ನೀನ್ಯಾಕೆ ನನ್ನ ಇಷ್ಟು ಪ್ರೀತಿಸುತ್ತೀಯ. ನಾವಿಬ್ಬರೂ ಗಂಡ ಹೆಂಡತಿಯಾ. ಮುಂಜಾನೆ ನನ್ನ ಎಬ್ಬಿಸಿ ರಂಗೋಲಿ ಹಾಕಿಸುತ್ತೀಯ ನೀನು, ನನಗೆ ಈ ಚುಕ್ಕಿ ಗೆರೆಗಳೇ ಅರ್ಥವಾಗುವುದಿಲ್ಲ. ಏನೇನೋ ಗೊಜಲು ಗೊಜಲು. ನನ್ನೇ ನೋಡುತ್ತ ಕುಳಿತ ನೀನು ಕೈ ಹಿಡಿದು ಎಷ್ಟು ಚೆಂದದ ಚಿತ್ರ ಮೂಡಿಸುತ್ತೀಯಲ್ಲ, ನಂಗೆ ತಡೆಯಲಾರದಷ್ಟು ಪ್ರೀತಿ ಬರುವ ಹಾಗೆ. ನನಗೇನಾಗಿದೆ ಎಂದೇ ಅರಿವಾಗುವುದಿಲ್ಲ, ಎಲ್ಲ ಒಮ್ಮೆಲೆ ಮರೆತು ಹೋಗುತ್ತೇನೆ, ಮತ್ತೆ ಏನೇನೋ ನೆನಪಾಗುತ್ತದೆ. ಎಲ್ಲಿ ನಿನ್ನನ್ನೂ ಮರೆತು ಬಿಡುತ್ತೇನೋ ಎಂದು ಭಯವಾಗುತ್ತದೆ. 

ಅರೆ, ಮರೆಯಲು ನಿನ್ನ ಬಗ್ಗೆ ನನಗೆ ಗೊತ್ತಿರುವುದಾದರೂ ಏನು, ಎಷ್ಟೋ ದಿನಗಳಿಂದ ನೀನು ನನ್ನ ಸಲಹುತ್ತಿದ್ದೇಯೆಂದು ಅನಿಸುತ್ತೆ, ಆದರೆ ಎಷ್ಟು ದಿನಗಳಿಂದ, ಅಷ್ಟಕ್ಕೂ ನೀನು ನನಗೇನಾಗಬೇಕು, ಗೆಳೆಯನಾ, ಗಂಡನಾ, ಪ್ರೇಮಿಯಾ ಉಹೂಂ ಗೊತ್ತಿಲ್ಲ. ಆದರೆ ನಿನ್ನ ಪ್ರೀತಿಯ ಅರಿವಿದೆ. ನೀನು ಕೈ ಹಿಡಿದು ನಡೆವಾಗ ಎಲ್ಲಿಂದ ಹೊರಟಿದ್ದು ಎಲ್ಲಿಗೆ ಹೋಗುತ್ತಿರುವುದು ಎನ್ನುವುದೇ ನೆನಪಾಗದು. ಎಷ್ಟೋ ಬಾರಿ ಅನಿಸಿದ್ದಿದೆ, ನಿನ್ನ ಹೊರತು ನನ್ನ ಅಸ್ತಿತ್ವವೇನು ಎಂದು, ನನ್ನ ಗತದ ಪುಟಗಳೇ ಕಳೆದುಹೋಗಿದೆ ಅಲ್ಲಾ ಎಂದು ಕೇಳಿದರೆ ನಿನ್ನ ಗತ ಭವಿಷ್ಯತ್ ಎಲ್ಲಾ ನಾನೆ ಕಣೇ ಅನ್ನುತ್ತೀಯ. ಅಷ್ಟಕ್ಕೂ ನೀನು ಯಾರು, ಕೇಳಲಾರೆ, ಕೇಳಿ ನಿನ್ನ ನೋಯಿಸಲಾರೆ. ನನ್ನ ಈ ಕ್ಷಣದಿಂದ ನಿನ್ನ ಯಾವ ಮರೆವಿನ ರಾಕ್ಷಸನೂ ಎತ್ತೊಯ್ಯದಿರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತೇನೆ.

ಸಮುದ್ರ ತೀರದ ಮರಳಲ್ಲಿ ಇಬ್ಬರೂ ಸೇರಿ ಮರಳ ಗೂಡು ಕಟ್ಟುವಾಗ, ನಕ್ಷತ್ರ ಮೀನುಗಳ ಆಯ್ದು ಸಮುದ್ರಕ್ಕೆ ಮತ್ತೆ ಎಸೆಯುವಾಗ, ಬೊಂಬೆ ಮಿಠಾಯಿಯ ಬಾಯಲ್ಲಿಟ್ಟು ಕರಗಿಸುವಾಗ, ಬಿರು ಮಳೆಯಲ್ಲಿ ಜೊತೆ ಸೇರಿ ನೆನೆಯುವಾಗ, ಮಧ್ಯ ರಾತ್ರಿ ಎದ್ದು ನೀರವ ಬೀದಿಗಳಲ್ಲಿ ಅಲೆದು ಪಾವ್ಬಾಸಜಿವಾಲಾನನ್ನು ಹುಡುಕುವಾಗ, ನಿನ್ನೊಡನೆ ಕುಳಿತು ಗಜಲ್ ಕೇಳುವಾಗ, ಆಕಾಶದ ನಕ್ಷತ್ರಗಳ ಎಣಿಸುತ್ತಾ ಅದು ನಿನ್ನದು ಇದು ನನ್ನದು ಎಂದೆಲ್ಲ ಜಗಳವಾಡುವಾಗ ನಿನ್ನ ಮೇಲೆ ತಡೆಯಲಾರದಷ್ಟು ಪ್ರೇಮ ಉಕ್ಕಿ ಪ್ರಪಂಚವೇ ಮರೆತು ಹೋಗುತ್ತೇನೆ. ಸಧ್ಯ ಇಂತಹ ಸಿಹಿ ಸಂಗತಿಗಳೆಲ್ಲ ಆಗಾಗ ನೆನಪಾಗುತ್ತೆ ನೋಡು.

* * * * * * * * * *
ನಿನ್ನ ಕಣ್ಣಲ್ಲಿ ನಾನು ಯಾರು ಎನ್ನುವ ಪ್ರಶ್ನೆ ಹಾದುಹೋಗುವಾಗ ವೇದನೆಯಾಗುತ್ತೆ ಕಣೆ. ಆದರೂ ನೀನು ಬಾಯ್ಬಿಟ್ಟು ಕೇಳದೆ ಇರುವ ಪ್ರಯತ್ನ ಮಾಡ್ತೀಯಲ್ಲ, ಆ ಒಂದು ಎಳೆ ನನ್ನ ಖುಷಿಯಾಗಿಟ್ಟಿದೆ. ಮಧ್ಯ ರಾತ್ರಿಯಲ್ಲಿ ನನ್ನ ಎಬ್ಬಿಸಿ ಐಸ್ ಕ್ರೀಮ್ ಬೇಕು ಎಂದು ನೀನು ಹಠ ಮಾಡುವಾಗ, ರಂಗೋಲಿ ಹಾಕುತ್ತ ಹಾಕುತ್ತ ಏನು ಮಾಡಬೇಕೆಂದೇ ಗೊತ್ತಾಗದೆ ನನ್ನೆಡೆ ಅಳು ಮುಖ ಮಾಡಿ ನೋಡುವಾಗ, ಕುಂಟಬಿಲ್ಲೆ ಆಡೋಣ ಬಾ ಎಂದು ಕರೆದೊಯ್ಯುವಾಗ, ಮರಳ ರಾಶಿಯ ಮೇಲೆ ಹೆಜ್ಜೆಯೊಳಗೆ ಹೆಜ್ಜೆ ಇಟ್ಟು ನಡೆವಾಗ ಎಷ್ಟೋ ಬಾರಿ ಅನ್ನಿಸುತ್ತೆ, ಕೇವಲ ಖುಷಿ ಕ್ಷಣಗಳನ್ನು ಮಾತ್ರ ಉಳಿಸುವುದಕ್ಕಾಗಿ ನಾವು ಬದುಕುತ್ತಿದ್ದೇವೇನೋ ಎಂದು.

ನಿನಗೋ ಪ್ರತಿ ದಿನ ಹೊಸತು, ನನಗೆ ನಿನ್ನ ಪ್ರತಿ ಕ್ಷಣವನ್ನ ಹೊಸದಾಗಿಸುವ ಪ್ರೀತಿ. ಗತವೇ ಇಲ್ಲದ ನಿನ್ನ ನೋಡುತ್ತಾ ಭವಿಷ್ಯತ್ನನ ಮರೆಯುತ್ತೇನೆ. ನಮ್ಮ ಬದುಕಿಗೆ ವರ್ತಮಾನದ ಸೊಗಸು ಮಾತ್ರ ಸಾಕು ಅಲ್ಲವಾ. ಕೈ ಹಿಡಿದು ನಡೆಯೋಣಾ, ಪ್ರತಿ ದಿನ ನಿನ್ನನ್ನ ನಾನು ನನ್ನನ್ನ ನೀನು ಹೊಸದಾಗಿ ಕಂಡುಕೊಳ್ಳೋಣ. ನಿನ್ನನ್ನ ನಾನು ಸಲಹುತ್ತಿದ್ದೇನೆನ್ನುವುದು ಸುಳ್ಳು, ನನ್ನನ್ನ ನೀನು ಪೊರೆಯುತ್ತಿದ್ದೀಯ. ನಿನಗೆ ಪ್ರತಿ ದಿನ ನನ್ನನ್ನ ನೆನಪಿಸುವುದರಲ್ಲೇ ನನ್ನ ಬದುಕಿನ ಪೂರ್ಣತೆಯನ್ನ ಕಂಡುಕೊಳ್ಳುತ್ತೇನೆ ನಾನು. ನೆನಪುಗಳಿಲ್ಲದ ಬದುಕಿಗೆ ಅಹಂಕಾರವೂ ಇಲ್ಲ, ಸಾಧನೆಗಳ ಚಪಲವೂ. ಮಗುವಂತೆ ಬದುಕುವ ಆನಂದಕ್ಕಾಗೇ ಅಲ್ಲವಾ ಎಲ್ಲ ಹೋರಾಟಗಳು. ಎಲ್ಲ ಸಾಧಿಸುವ ಭರದಲ್ಲಿ ನಮ್ಮನ್ನ ನಾವು ಕಳೆದುಕೊಳ್ಳುತ್ತೇವಲ್ಲ, ಹಾಗೆಲ್ಲ ಕಳೆದುಕೊಳ್ಳಲು ಬಿಡದೆ ನನ್ನನ್ನ ನನಗೇ ಉಳಿಸಿದವಳು ನೀನು. ನನ್ನ ಜೀವನವನ್ನ ನಿನಗೂ ನಿನ್ನ ಜೀವವನ್ನ ನನ್ನೊಳಗೂ ಇರಿಸಿಕೊಂಡು ಜೊತೆ ನಡೆಯೋಣ

ಒಂದೇ ಬದುಕಲ್ಲಿ ಎಷ್ಟೊಂದು ಅಲೆ, ಎಷ್ಟು ಸೆಳವು, ಎಷ್ಟು ಸುಳಿ
ನಾನು ಶ್ರೀಮಂತ ಚಂದ್ರ, ನೀನು ಐಶಾರಾಮಿ ಬೆಳದಿಂಗಳು
ನಮ್ಮ ಜ್ಞಾಪಕಗಳ ಚಿತ್ರಶಾಲೆಯಲ್ಲಿ ಮಾತ್ರ ಕನಸುಗಳಿಲ್ಲ.
* * * * * * * * * *