ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday 5 April 2019

ಜೈ ಯುಗಾದಿ..!!

ಕಾವ್ಯ ಲಹರಿ//ರಘುನಂದನ ಕೆ.

ಎಲೆಯುದರಿಸಿ ಬೋಳಾಗಿ ನಿಂತ 
ಮರಗಿಡಗಳಿಗೆ ಹೊಸ ಹಸಿರ ಕನಸು,
ತುಂತುರು ಮಳೆಯ ಸಿಂಚನಕೆ
ಬಾಯಾರಿ ಕಾದ ಭುವಿಗೆ,
ಒಡಲ ದಾಹ ಉಕ್ಕೇರಿ
ವರ್ಷಧಾರೆಯ ಬಯಕೆ!
ಬಿರು ಬಿಸಿಲ ಉರಿ ಧಗೆಯಲ್ಲಿ
ದೇಹ ಧಾರೆ ಧಾರೆ
ಜೀವ ಭಾವಕ್ಕೆ ತಂಪಾಗುವ ಆಸೆ!!

ಹೊಸ ಹಬ್ಬದ ಅಳಿಯನಿಗೆ
ಹೋಳಿಗೆ ತುಪ್ಪದ ಭೋಜನ,
ಹಿನ್ನಲೆಯಲ್ಲಿ ಪದುಮಳು
ಒಳಗಿಲ್ಲ ಎನ್ನುವ ಗಾಯನ!
ಟಿವಿಯಲ್ಲಿ ನವ ಸಂವತ್ಸರದ
ಭವಿಷ್ಯ ಉದ್ಧರಿಸಿ ಹೆದರಿಸುವ
ಪ್ರಕಾಂಡ ಪಂಡೀತೋತ್ತಮರು;


ಮಳೆ ಬೆಳೆಯ ಲೆಕ್ಕಾಚಾರ,
ರಾಜಕಾರಣದ ಗುಣಾಕಾರ,
ನಿತ್ಯ ಉರಿವ ಧರೆಗೆ
ನೀರ ದಾಹ ಹಸಿರ ಮೋಹ,
ಚಂದ್ರ ದರ್ಶನದ ಸಂಭ್ರಮ
ಕಾಲ ಚಕ್ರ ಗತಿಯ ಚಿಂತನೆ
ಸುಖೇದುಃಖೇ ಸಮೇಕೃತ್ವಾ..!!

ಪಂಚಾಂಗ ಪಠಣದಲ್ಲಿ
ಭವಿಷ್ಯವೊಂದೆ ಅರ್ಥವಾದದ್ದು
ವರ್ತಮಾನ ಹಬ್ಬಕ್ಕೆ ಮಾತ್ರ,
ಪರವೆಂದರೆ ಕಾಲಾತೀತ
ಅಪರದ ನಮಗೆ ಕಾಲನ ಲೆಕ್ಕ
ವರ್ಷಕ್ಕೊಂದು ಯುಗಾದಿ
ಒಂದು ಹೊಸ ಪಂಚಾಂಗ!!

ಜಗದ ದುರಾಸೆಗಳೆಲ್ಲ ಅಳಿದು 
ಸದಾಚಾರ ಸಂಭ್ರಮದ ಬಯಕೆ
ಹೊಸ ಸಂವತ್ಸರಹೊಸ ವಿಚಾರ;
ಘಮಘಮಿಸುವ ಮಾವು 
ಬೇವುಗಳ ಸಿರಿ ಹಸಿರೆನ್ನುವುದು
ಮನಸೊಳಗು ಅರಳಲೆನ್ನುವ ಆಶಯ.

ಬಿಸಿಲುಗಾಲದಲ್ಲು ತಂಗಾಳಿ ಬೀಸಿ
ವಸಂತನಾಗಮನಕ್ಕೆ ಸಂತರೆಲ್ಲರ 
ಶುಭ ಆಶಿರ್ವಚನವಾಗಲಿ,
ಜಗದೊಳಿತು ಪಂಚಾಂಗ ದಾಟಿ 
ಮನೆ ಮನಗಳಿಗೂ ವಿಸ್ತರಿಸಲಿ.
ಜೈ ಯುಗಾದಿ.