ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday 31 January 2013

ನೆನಪು -ನವಿಲುಗರಿ


ದೇವಾಮೃತ ಗಂಗೆ//ರಘುನಂದನ ಕೆ.

ಅತ್ತಿತ್ತ ಸುತ್ತಮುತ್ತ
ಸುಳಿದಾಡಿ ಮನಸು
ನೆನಪ ಪುಟ ತಿರುವಲು
ಕಂಡದ್ದು
ಬೆಚ್ಚಗೆ ಮಲಗಿದ್ದ
ನಿನ್ನ ನೆನಪ ನವಿಲುಗರಿ


ಕೈಯಲ್ಲಿ ಕೈ ಬೆಸೆದು
ಬೆರಳ ಎಣಿಸುತ್ತ
ಮೌನ ಕೊಲ್ಲುತ್ತ
ಸಾಗರ ತೀರದ ಮರಳಲ್ಲಿ
ಮೂಡಿಸಿದ್ದ
ಜೋಡಿಪಾದಗಳ ಗುರುತ
ನುಂಗಿದ್ದು
ಮರಳೋ, ಅಲೆಯೋ
ಇನ್ನೂ ತಿಳಿಯಲಾಗಿಲ್ಲ...!

ಮುಳುಗುವ ಸೂರ್ಯನ ನೋಡುತ್ತ
ಬದುಕ ಬೆಸೆವ 
ಮಾತಾಡಿದವರಿಗೆ
ಬೆಸೆದ ಕೈ ಬೇರೆಯಾದದ್ದು
ಅರಿವಾಗುವ ಮೊದಲೇ
ಸೂರ್ಯ
ಅಸ್ತಮಿಸಿಬಿಟ್ಟಿದ್ದ...

ಈಗ,
ಮತ್ತದೇ ತೀರದಲ್ಲಿ
ಹೆಜ್ಜೆ ಹುಡುಕಿದರೆ;
ಗೆಜ್ಜೆ ಕಟ್ಟಿದ ಪಾದ
ಎಲ್ಲೋ ಮಾಯ,
ಎಷ್ಟು ಎಣಿಸಿದರೂ
ಲೆಕ್ಕಕ್ಕೆ ಸಿಗುವುದು
ಐದೇ ಬೆರಳು...!!


ನವಿಲು ಮರೆತ ನವಿಲುಗರಿಯ
ನೆನಪ ಹೊತ್ತಿಗೆಯಲ್ಲಿ
ಮುಚ್ಚಿಟ್ಟು
ಮತ್ತದೇ ಸಾಗರ ತೀರಕ್ಕೆ
ಸಾಗುತ್ತೇನೆ ಸದಾ
ಬೆಸೆಯಲಾರದ ಬೆರಳುಗಳ ಹುಡುಕಿ.




ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

ದಿನಾಂಕ: 31.01.2013ರಂದು ಅವಧಿ ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು 
ಲಿಂಕ್ ಬಳಸಿ – http://avadhimag.com/?p=76173  


2 comments:

  1. ಸುಂದರ ಭಾವಗಳ ಗುಚ್ಛ
    ಈ ಕವನ.....

    ತುಂಬಾನೇ ಚನ್ನಾಗಿದೆ.......

    ಮುಂದುವರೆಯಲಿ ಪಯಣ....

    ReplyDelete
  2. ಅರ್ಥಗರ್ಭಿತ ಗೊಂಚಲು ಕವಿತೆಗಳು ತುಂಬಾ ಚೆನ್ನಾಗಿವೆ. ಕವಿಯ ಭಾವ ಕವಿತೆಗೆ ಜೀವ..

    ReplyDelete

ನಿಮ್ಮ ಅನಿಸಿಕೆ