ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday 18 March 2014

ಕಾಡು ಹಾದಿಯ ಕನವರಿಕೆಗಳು . . .

ಮೋಹಮತಿ ಕಥಾಮುಖಿ//ರಘುನಂದನ ಕೆ.

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

ದೇವರನ್ನ ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ವ್ರ, ಉಪವಾಸ ಮಾಡಿದರಷ್ಟೆ ಸಾಕು ಎಂದು ಯಾರು ಹೇಳಿ ಬಿಟ್ಟಿದ್ದಾರೋ. ಒಂದೊಂದು ಬೇಡಿಕೆಗೆ ಒಬ್ಬೊಬ್ಬ ದೇವರು. ಶಕ್ತಿಗೆ, ಸಂಪತ್ತಿಗೆ, ವಿದ್ಯೆಗೆ, ಪಾಪ ಪರಿಹಾರಕ್ಕೆ, ಹರಕೆಗೆ ಎಲ್ಲದಕ್ಕೂ ದೇವರು. ಎಷ್ಟಾದರೂ ಅವನು ಅನಂತನಲ್ಲವೇ. ಆದರೆ ಸೋಜಿಗ ಎಂದರೆ ಭಕ್ತಿಗೆ ದೇವರೇ ಸಿಗುತ್ತಿಲ್ಲ!!

ಅಕ್ಕ ಮಹಾದೇವಿಗೆ ಸಿಕ್ಕವ, ಮೀರಾಗೆ ಒಲಿದವ, ಶಬರಿಗೆ ಕಂಡವ ಉಹ್ಞೂಂ ಯಾರೂ ಭಕ್ತಿಯನ್ನ ಹುಟ್ಟಿಸುತ್ತಿಲ್ಲ. ಆದರೂ ಪ್ರಪಂಚದಲ್ಲಿ ಎಷ್ಟೊಂದು ದೇವರು, ಹಾದಿ ಬೀದಿಗೊಬ್ಬ ಧರ್ಮಗುರು. ಅಂತರಂಗದ ದೇವರಿಗೆ ಉಪವಾಸ, ಬಹಿರಂಗಕ್ಕೆ ಆಡಂಬರದ ಅಬ್ಬರ. ಕವಿತ್ವದಲ್ಲಿ, ಸಾಹಿತ್ಯದಲ್ಲಿ, ಬರಹದಲ್ಲಿ ಕೊನೆಗೆ ಜಗಳದಲ್ಲೂ ಆಧ್ಯಾತ್ಮದ್ದೆ ಉಗುಳು. ಅದರ ಮೇಲೆ ನಮ್ಮದು ಮತ್ತಿಷ್ಟು. ಆದರೆ ಮನಸ್ಸಲ್ಲಿ ಮಾತ್ರ ಅವ ಕಳೆದು ಹೋಗಿದ್ದಾನೆ.

ದೇವರೊಬ್ಬನಿದ್ದರೆ ಎಷ್ಟೊಂದು ಪಾಪ ಅಲ್ವಾ ಆತ ಎಂದು ಅವ ಕಾಡಲ್ಲಿ ಕುಳಿತು ಮಾತನಾಡುತ್ತಿದ್ದರೆ ನನ್ನಲ್ಲಿ ಬೆರಗು. ಬಹುಶಃ ಎಂದೋ ಕಳೆದು ಹೋಗಿದ್ದ ನೀನು ಮತ್ತೆ ನನಗೆ ಸಿಕ್ಕಂತಾಗಿ ಬೆಚ್ಚುತ್ತೇನೆ. ಕೊಡಚಾದ್ರಿಯ ಬೆಟ್ಟಗಳಲ್ಲಿ, ಕುಮಾರ ಪರ್ವತದ ತಪ್ಪಲಲ್ಲಿ, ದೂದ ಸಾಗರ ಜಲಪಾತದ ಎದುರಿನಲ್ಲಿ ಕೈ ಹಿಡಿದು ಕುಳಿತು ನೀನು ದೇವರ ಬಗ್ಗೆ, ದೇವರನ್ನ ಸೃಷ್ಟಿಸಿದ ಮನುಷ್ಯರ ಬಗ್ಗೆ, ಕಾಡಿನ ಬಗ್ಗೆ ಮಾತಾಡುತ್ತಿದ್ದರೆ ಕಣ್ಣುಗಳಲ್ಲಿ ವಿಸ್ಮಯ ತುಂಬಿಕೊಂಡು ಕಂಗಾಲಾಗುತ್ತಿದ್ದೆ ನಾನು. ಅಕಸ್ಮಾತಾಗಿ ಎಂಬಂತೆ ಸಿಕ್ಕ ನೀನು, ಸಿಕ್ಕಷ್ಟೆ ವೇಗವಾಗಿ ಕಳೆದು ಹೋಗದಿದ್ದರೆ ಇವತ್ತು ನಾನು ಕಾಡಲ್ಲಿ ಕುಳಿತು ಇವನ ಗಡ್ಡದಲ್ಲಿ, ಮಾತಿನಲ್ಲಿ ನಿನ್ನ ಹುಡುಕುತ್ತಿರಲಿಲ್ಲ. ಅಷ್ಟಕ್ಕೂ ನನಗೆ ಕಾಡು ಕಾಡುವಂತೆ ಮಾಡಿದ್ದು ನೀನೇ ಅಲ್ಲವೇ.

ಇರಲಿ ಬಿಡು, ನೀನಂತು ಕಳೆದು ಹೋದೆ, ಆದರೆ ನೀನೇ ಹೇಳುತ್ತಿದ್ದೆಯಲ್ಲ, ನಾಡು ಅರ್ಥವಾದ ಮೇಲೆ ಕಾಡಿಗೆ ಬಂದು ಕುಳಿತರೆ ನಮ್ಮಲ್ಲೊಂದು ಆಧ್ಯಾತ್ಮಿಕ ಅರಿವು ಜಾಗೃತವಾಗುತ್ತದೆ ಅಂತ. ಇವನಿಗೂ ಹಾಗೇ ಆಗಿರಬಹುದೇ ಎಂದರೆ, ಕಾಡಿನ ಬಗ್ಗೆ ಮಾತಾಡಿದಷ್ಟೆ ತಾಧ್ಯಾತ್ಮದಿಂದ ಇವ ಹೆಣ್ಣಿನ ಬಗ್ಗೂ ಮಾತಾಡಿ ನನ್ನನ್ನ ಗೊಂದಲಗೊಳಿಸಿ ಬಿಡುತ್ತಾನೆ. ಮತ್ತೇ, ಥೇಟ್ ನಿನ್ನಂತೆಯೇ..!! ಕಾಡ ಮಲ್ಲಿಗೆಯ ನೆರಳಲ್ಲಿ ನನ್ನರಿವಿನ ಪರಿಮಳ ಸಿಕ್ಕಿತೇನೋ ಎಂದು ಹುಡುಕಿ ಇಲ್ಲಿಯವರೆಗೆ ಬಂದಿದ್ದೇನೆ. ಮರೆತುಹೋಗಿದ್ದ ನೀನು ಸಿಗುತ್ತಿದ್ದೀಯ. ನಿನ್ನ ಅರಿಯುವುದೇ ನನ್ನ ಅರಿವಿನ ಮೂಲವೂ ಆದೀತು ಎಂದುಕೊಳ್ಳಲೇ.

ಪುಟ್ಟಿ, ಬಾ ಇಲ್ಲಿ, ಜೀವ ಸ್ವಲ್ಪ ಬೆಚ್ಚಗಾಗಲಿ.” ಅವ ಬಿಸಿ ಬಿಸಿ ಹಸಿರು ಕಷಾಯ ಮಾಡಿದಂತಿದೆ. ಕಾಡ ಡೈರಿಗೆ ಬೆಳಗಿಗೆ ಇಷ್ಟು ಸಾಕು ಬರದದ್ದು. ಮತ್ತೆ ಬರೆಯುವಾಗ ನಿನ್ನೊಳಗಿನ ಕಾಡು ನನಗೆ ಸಿಕ್ಕಿರುತ್ತದಾ..?

* * * * * * *

ಕಷಾಯಕ್ಕೆ ಯಾವ ಎಲೆಯನ್ನ ಹಾಕಿದ್ದೀಯ, ಇದನ್ನ ಕುಡಿಯುತ್ತಿದ್ದರೆ ಎಷ್ಟೊಂದು ಖುಷಿಯಾಗುತ್ತೆ ಎನ್ನುತ್ತ ಬಂದವಳಿಗೆ, ಯಾವ ಎಲೆಯಾದರೇನು ಪುಟ್ಟಿ, ನಾವು ಸೇವಿಸುವ ಆಹಾರದಲ್ಲಿ ಗಾಳಿಯಲ್ಲಿ ಜೀವಂತಿಕೆಯಿರಬೇಕು, ಆಗಲೇ ಆನಂದ ಅರಳೋದು ಅಷ್ಟೆ ಎನ್ನುತ್ತ ತಲೆ ನೇವರಿಸಿ ಅವ ಹೊರಗೆ ಹೋಗಿದ್ದ

ನಿನ್ನೆ ಇದೇ ಹೊತ್ತಿಗೆ, ಮುಂಜಾನೆಯ ಅಂಗಳದಲ್ಲಿ ಸೂರ್ಯಕಿರಣ ನೆರಳುಗಳೊಂದಿಗೆ ಸೇರಿ ರಂಗೋಲಿ ಬಿಡಿಸುತ್ತಿದ್ದರೆ, ಅವ ಚೌರಾಸಿಯಾರವರ ಕೊಳಲ ಕೊರಳಿಂದ ಹೊಮ್ಮುವ ರಾಗದಲ್ಲಿ ತನ್ಮಯನಾಗಿ ಕಣ್ಮುಚ್ಚಿ ಕೂತಿದ್ದ. ಹಕ್ಕಿಗಳ ಚಿಲಿಪಿಲಿ, ಗುಬ್ಬಚ್ಚಿಗಳ ರೆಕ್ಕೆ ಸದ್ದು, ದೂರದಲ್ಲಿ ಹರಿಯುತ್ತಿರುವ ಜಲರಾಶಿಯ ಜುಳು ಜುಳು ನಾದ ಇವುಗಳ ಮಧ್ಯೆ ಕಳೆದು ಹೋಗಿದ್ದ ಅವನೆದುರು ಯಾವುದೋ ಅನ್ಯಗ್ರಹದಿಂದ ಪ್ರತ್ಯಕ್ಷವಾದಂತೆ, ನೀಲಿ ಜೀನ್ಸ್ ಮೇಲೆ ಪುಟ್ಟ ಶಾರ್ಟ್ ಹಾಕಿಕೊಂಡು, ಸೊಂಟಕ್ಕೊಂದು ಸ್ವೆಟರ್ ಕಟ್ಟಿಕೊಂದು, ಬೆನ್ನಿಗೊಂದು ಟ್ರೆಕಿಂಗ್ ಬ್ಯಾಗ್ನ್ನು ಕುತ್ತಿಗೆಗೊಂದು ಕ್ಯಾಮರಾವನ್ನು ಜೋಲಿ ಬಿಟ್ಟು ಎದುಸಿರು ಬಿಡುತ್ತ ನಿಂತಿದ್ದಳು ಅವಳು.

ನಾನು ಕಾಡಲ್ಲಿ ದಾರಿ ತಪ್ಪಿದೀನಿ ಅನ್ಸುತ್ತೆ. ಬೆಳಿಗ್ಗಿನ ನಾಲ್ಕರ ಜಾವದಲ್ಲಿ ಒಟ್ಟಿಗೆ ಹೊರಟದ್ದು ನಾವು, ಒಂದು ಕ್ಷಣ ಮೈ ಮರೆತು ಹರಿವ ವಿಚಿತ್ರ ಹಸಿರು ಹುಳದ ಪೋಟೋ ತೆಗೆಯುತ್ತ ನಿಂತೆ ನೋಡಿ, ಅವರೆಲ್ಲ ಮುಂದೋಗಿ ಬಿಟ್ಟಿದ್ರು, ಆಮೇಲೆ ಸಿಗಲೇ ಇಲ್ಲ. ತುಂಬಾ ಹಸಿವಾಗ್ತಿದೆ, ಭಯಾನೂ ಎಂದು ಒಂದೇ ಉಸಿರಲ್ಲಿ ಹೇಳಿ ಅವಳು ಅಂಗಳದ ತುಳಸಿ ಪೀಠದೆದುರು ಕುಸಿದು ಬಿಕ್ಕಳಿಸುತ್ತಿದ್ದರೆ, ಅವ ಆರಾಮು ಖುರ್ಚಿಯಿಂದ ಎದ್ದು ನಿಧಾನವಾಗಿ ಅವಳ ಬಳಿ ಬಂದು, ಭಯ ಬೇಡ ಪುಟ್ಟಿ, ಸ್ವಲ್ಪ ರಿಲ್ಯಾಕ್ಸ್ ಆಗು, ಕಳೆದು ಹೋದ ನಿನ್ನನ್ನು ಹುಡುಕಿಕೊಳ್ಳುವುದಕ್ಕಾಗೇ ಅಲ್ಲವೆ ನೀ ಕಾಡೊಳಗೆ ಹೆಜ್ಜೆ ಇಟ್ಟದ್ದು, ಅದಾಗುವವರೆಗೆ ಕಾಡು ನಿನ್ನ ಬಿಡದು ಅಷ್ಟೆ ಎಂದಿದ್ದ. ಮೊದಲೇ ಗೊಂದಲದಲ್ಲಿದ್ದವಳಿಗೆ, ಉತ್ತರಾಂಚಲದ ಕಾಡೊಳಗೆ ಕಂಡಿದ್ದ ಅಘೋರಿಗಳೆಲ್ಲ ನೆನಪಾಗಿ ವಿಚಿತ್ರ ಕಂಪನವಾಗಿತ್ತು. ಆದರೆ ಅವನ ಗಡ್ಡದಲ್ಲಿ ಏಕಕಾಲದಲ್ಲಿ ಠಾಗೋರರು, ಅರಬಿಂದೋ ಗುರುಗಳು ಕಂಡಂತಾಗಿ ಸಮಾಧಾನವೂ ಆಗಿತ್ತು.

* * * * * * *

ಕಾಡೊಳಗೆ ನಿಮಗೆ ಒಬ್ಬಂಟಿತನ ಕಾಡುವುದಿಲ್ಲವಾ?? ಎಲ್ಲಿಯ ಒಂಟಿತನ ಪುಟ್ಟಿ, ಇಷ್ಟೊಂದು ಮರಗಿಡ, ಹಕ್ಕಿಗಳ ಮಧ್ಯೆ ಸಮಯ ಕಳೆದದ್ದೆ ಗೊತ್ತಾಗದು. ನಮ್ಮೊಳಗಿನ ನಮ್ಮನ್ನು ಕಂಡುಕೊಳ್ಳುವುದಾದರೆ ಜನರಿಂದ ದೂರವೇ ಇರಬೇಕಾಗುತ್ತೆ. ಜೀವನ ಎಂದರೆ ನಮಗೆ ಬೇಕಾದಂತೆ ಮಾತ್ರ ಇರುವುದಲ್ಲ, ಅದು ಬಂದಂತೆ ಸ್ವೀಕರಿಸುವ, ಸ್ವೀಕೃತಿಯಲ್ಲಿ ನಮ್ಮೊಳಗು ಖುಷಿ ಪಡುವ ಹಂತಕ್ಕೆ ತಲುಪುವುದು. ಹಾಗೆ ತಲುಪಬೇಕಾದರೆ ನಮ್ಮೊಳಗೊಂದು ಕಾಡು ಮೂಡಬೇಕು. ಅದು ಜೀರ್ಣವಾಗಬೇಕು

ಸಂಬಂಧಗಳ ಸಂತೆ ಬಿಟ್ಟು ರಾಮ ಸೀತೆಯರು ತಮ್ಮನ್ನ ಕಂಡುಕೊಂಡ ಜಾಗ ಕಾಡು. ಆದರೆ ವಿಚಿತ್ರ ನೋಡು, ಮೂಲಗುಣ ಬಿಡದು ಅಂತಾರಲ್ಲಾ ಹಂಗೆ, ಕಾಡಿಂದ ಆಚೆ ಕಾಲಿಟ್ಟೊಡನೆ ರಾಮ ಸೀತೆಯನ್ನ ಬಿಟ್ಟ. ಅವನೊಳಗೆ ಕಾಡು ಮಾತ್ರ ಉಳಿದು ಬಿಟ್ಟಿತ್ತಾ, ಅಲ್ಲಿ ಸೀತೆಗೆ ಜಾಗವಿರಲಿಲ್ವಾ. ಕಾಡು ಅಂದರೆ ಪ್ರಕೃತಿ, ಅಂದರೆ ಹೆಣ್ಣು. ಎರಡೂ ಅಷ್ಟು ಸುಲಭದಲ್ಲಿ ಅರ್ಥವಾಗದು. ಹಾಗಾಗೇ ರಾಮ ಅರ್ಥೈಸಿಕೊಳ್ಳಲು ಸೋತನೇನೋ. ಇದೆಲ್ಲ ನಮ್ಮೊಳಗು ಮಾತ್ರ, ನಮ್ಮನ್ನ ಕಂಡುಕೊಳ್ಳುವುದಕ್ಕೆ ಅವನ ವಿಶ್ಲೇಷಣೆ. ಅವನ ಅರಿವು ನಮ್ಮದಕ್ಕಿಂತ ಹೆಚ್ಚಿದ್ದಾಗ ನಮಗೆ ಅವ ಹೇಗೆ ಅರ್ಥವಾಗಬೇಕು ಹೇಳು.

ಎಷ್ಟೊ ಜನ ಸಂತೆಯಿಂದ ಓಡುತ್ತಾರೆ, ತಮ್ಮೊಳಗಿನ ಏಕಾಂತದಿಂದಲೂ. ಏಕಾಂತದಲ್ಲಿ ನಮ್ಮೊಳಗಿನ ಗದ್ದಲ ಆಚೆ ಬರುತ್ತೆ, ಮುಖವಾಡಗಳು ತಪತಪನೆ ಕಳಚಿ ಬೀಳುತ್ತೆ. ಸತ್ಯವನ್ನ ಎದುರಿಸಲು ಹೆದರಿಕೆ ನಮಗೆ ಹಾಗಾಗೇ ಒಬ್ಬಂಟಿತನ ಭಯಗೊಳಿಸುತ್ತೆ. ಸಂತೆಯಲ್ಲೂ, ಅಂತರಂಗದ ಕತ್ತಲಲ್ಲೂ ತಾನೇ ತಾನಾಗಿ ಇರುವ ಶಕ್ತಿ ಬರೋವರೆಗೂ ಬದುಕು ಸಿಕ್ಕದೇನೋ ಅನ್ನಿಸುತ್ತೆ ನಂಗೆ. ನಾಡಿನ ಮುಖವಾಡಗಳ ಸಂತೆಯಲ್ಲಿ ಬದುಕುವಾಗ, ಪುರುಸೊತ್ತಿಲ್ಲದೆ ಗಡಿಯಾರ ಓಡುತ್ತಿರುವಾಗ, ಮನುಷ್ಯ ನಿರ್ಮಿತ ಗದ್ದಲಗಳು ಅಪ್ಪಳಿಸುವಾಗಲೂ ಒಬ್ಬಂಟಿತನ ಕಾಡುವುದಿಲ್ಲವೆ

ನೋಡು ದಡದಲ್ಲಿರುವುದೆಲ್ಲಾ ದಡದಲ್ಲೂ ಇರುತ್ತದೆ ಎನ್ನುತ್ತಾರೆ. ಕಾಡು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ, ನಾಡಿಂದ ನೇರವಾಗಿ ಕಾಡಿಗೆ ತಂದೆಸೆದ ಮನುಷ್ಯನಿಗೆ ಅಂತರಂಗದ ಗದ್ದಲಗಳು ಕೇಳಿ, ಅಚಾನಕ್ ಮೂಡಿದ ನಿರ್ವಾತದಿಂದ, ವಿರಾಮದಿಂದ ಹುಚ್ಚೂ ಹಿಡಿಯಬಹುದು, ಇಲ್ಲಾ ಬದುಕು ಅರ್ಥವಾಗಬಹುದು. ಕಾಡಲ್ಲೇ ಹುಟ್ಟಿ ಬೆಳೆದವಗೆ ಕಾಡು ಕೂಡ ಒಂದು ನಾಡೇ ಅಲ್ಲವೆ. ನಾಡಲ್ಲಿರುವವನಿಗೂ ಕಾಡಲ್ಲಿರುವವನಿಗೂ ಒಂದಲ್ಲ ಒಂದು ದಿನ ಕಾಡು ಸಿಕ್ಕಿಬಿಡಬಹುದು. ಬದುಕಿನ ಪಾಠ, ಅನುಭವಗಳಿಲ್ಲದೆ ಕಾಡು ಅರ್ಥವಾದೀತಾದರೂ ಹೇಗೆ. ಅದಕ್ಕೇ ಇರಬೇಕು ವಾನಪ್ರಸ್ತ ಮನುಷ್ಯ ಜೀವಿತದ ಕೊನೆಯ ಹಂತವಾಗಿದ್ದು.

* * * * * * * *

ನಿಜ, ನೀನು ಒಂದು ಕಾಲದಲ್ಲಿ ನನಗೆ ಸಿಕ್ಕು ಅಷ್ಟೆಲ್ಲಾ ಮಾತಾಡದೇ ಹೋಗಿದ್ದರೆ ಇವತ್ತು ಮಾತುಗಳ್ಯಾವುದೂ ನನಗೆ ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲವೇನೋ. ಕಾಡನ್ನು ಓದಲು ಕಲಿಸಿದ್ದೆ ನೀನು ತಾನೆ. ನಾಡೊಳಗಿನ ಬಿಸಿ ಬಿಸಿ ಬದುಕಿನಲ್ಲಿ ಕಾಡೆಂದರೆ ನಮಗೆಲ್ಲಾ ವೀಕೆಂಡ್ ತಾಣ ಮಾತ್ರ ಆಗಿತ್ತಲ್ಲ. ಒಂದಷ್ಟು ಮೋಜು, ಫೈರ್ ಕ್ಯಾಂಪ್, ಮತ್ತಷ್ಟು ಗಲಾಟೆ ಮಾಡಿ ಕಾಡು ನೋಡಿದ ಪೋಟೋಗಳನ್ನ ಪೇಸ್ಬುಕ್ ಗೋಡೆಗೆ ಅಂಟಿಸಿ ಎಷ್ಟು ಲೈಕು, ಮತ್ತೆಷ್ಟು ಕಮೆಂಟುಗಳು ಬಿದ್ದವು ಎನ್ನುವಷ್ಟರ ಮಟ್ಟಿಗೆ ಮಾತ್ರ ನಮಗೆ ಕಾಡು ಕಾಣುತ್ತಿದ್ದುದು. ಸಹಜೀವನದ ಗೆಳೆಯ ಧಿಕ್ಕರಿಸಿ ಹೋದಾಗ, ಹುಚ್ಚು ಸಂಪಾದನೆಯ ಕೆಲಸ ಬಿಡಬೇಕಾಗಿ ಬಂದಾಗ, ಅಪ್ಪ ಅಮ್ಮಂದಿರ ಮುಖ ಕಾಣುವುದೇ ಅಪರೂಪವಾಗಿ ಹೋದಾಗ, ತಲೆ ಕೆಟ್ಟು ಯಾವುದೋ ಚಾರಣಕ್ಕೆ ಅಪ್ಲಿಕೇಷನ್ ತುಂಬುತ್ತಿದ್ದಾಗ ಗೊತ್ತಿರಲಿಲ್ಲ ನೀನು ಸಿಗುತ್ತೀ ಅಂತ.

ನಾಡನ್ನ ಧಿಕ್ಕರಿಸಿ ಪೋಟೋ ಪ್ರೇಮ್ನಾಚೆಗೂ ಕಾಡನ್ನು ನೋಡಲು ಸಾಧ್ಯವಾದೀತಾ ಎಂದುಕೊಂಡು ಹೊರಟಾಗ ನನ್ನನ್ನ ಒಬ್ಬಂಟಿತನ ಸುಡುತ್ತಿತ್ತು. ಹದಿನೈದು ಜನರ ಚಾರಣ ತಂಡದಲ್ಲಿ ಎಲ್ಲರೂ ಪರಿಚಯದೊಂದಿಗೆ ಸ್ನೇಹಿತರೊಂದಿಗೆ ಬಂದಿದ್ದರೆ ನಾನು ಮಾತ್ರ ಒಬ್ಬಳೇ ಅಂದುಕೊಳ್ಳುತ್ತಿರುವಾಗ, ಯಾವುದೋ ಮರದಲ್ಲಿ ಏನನ್ನೋ ಹುಡುಕುತ್ತಿದ್ದ ನೀನು ಕಂಡು, ಅರೆ ಇವ ಕೂಡ ಒಂಟಿನೇ ಅನ್ನಿಸಿ ನಿನ್ನ ಮಾತಾಡಿಸಿದಾಗ, ಏಕಾಂತ ಭಂಗವಾದಂತೆ ಕೆಕ್ಕರಿಸಿದ್ದೆಯಲ್ಲ ನೀನು. ಅಲ್ಲಿಂದಲೇ ಶುರುವಾದದ್ದು ನೋಡು ಬದುಕು ದಿಕ್ಕು ತಪ್ಪಿದ್ದು ಅಂದುಕೊಂಡರೆ ನೀನು ಮಾತ್ರದಿಕ್ಕು ತಪ್ಪುವುದಕ್ಕೆ ಇದು ಜನ ಜಾತ್ರೆಯಲ್ಲ. ಒಳಯಾತ್ರೆ. ಕಾಡು ಕಾಲು ತಪ್ಪಿಸಬಹುದು, ಕಾಲವನ್ನೂ, ಆದರೆ ಬದುಕನ್ನಲ್ಲಎಂದಾಗ, ನಂಗೆ ನಿಜ್ಜ, ಏನೇನೂ ಅರ್ಥವಾಗಿರಲಿಲ್ಲ. ಮೈಯೆಲ್ಲ ಬೆವತು ಇನ್ನು ಏರುವುದಕ್ಕೆ ಆಗುವುದೇ ಇಲ್ಲ ಎಂದು ಕುಳಿತಾಗ ಕೈ ಹಿಡಿದು ಎಳೆದುಕೊಂಡು ಹೋದದ್ದು ನೀನು. ಆವಾಗಿನಿಂದ ನಡೆಯುತ್ತಲೇ ಇದ್ದೇನೆ, ಏರುತ್ತಲೂ.

ಹೆಣ್ಣು ಕಣೋ ನಾನು, ನಿನ್ನ ಕಾಡದೇ ಬಿಡುವುದಿಲ್ಲ ಅಂತ ಹಠ ಹಿಡಿದ ನನ್ನ ಮನಸ್ಸನ್ನ ಅರ್ಥವಾಗಿಸಿಕೊಂಡೂ ಅರ್ಥವಾಗದಂತೆ ನಡೆದುಬಿಟ್ಟವ ನೀನು. ಕೊಡಚಾದ್ರಿಯ ಸರ್ವಜ್ಞ ಪೀಠದಲ್ಲಿ, ಅಜಂತಾದ ಪದ್ಮಪಾಣಿ ಗುಹೆಯಲ್ಲಿ, ಉತ್ತರಾಂಚಲದ ಅಘೋರ ಕಾಡುಗಳಲ್ಲಿ, ಎಷ್ಟೊಂದು ಜಲಪಾತಗಳ ಎದುರಲ್ಲಿ ನಾವು ಮಾತಾಗಿಲ್ಲ, ಮಾತು ಮರೆತು ಮೌನವಾಗಿಲ್ಲ. ಕುಮಾರಪರ್ವತದ ಕತ್ತಲೆಯ ರಾತ್ರಿಯಲ್ಲಿ ನಕ್ಷತ್ರ ಹುಡುಕುತ್ತ ದಾರಿ ತಪ್ಪೋಣ, ಕಾಡುವಂತೆ ತಪ್ಪೊಂದ ಮಾಡೋಣ, ನಕ್ಷತ್ರಗಳನ್ನೆಲ್ಲ ಮೈಯ ಮಚ್ಚೆಗಳಾಗಿಸಿ ಲೆಕ್ಕ ಮಾಡೋಣ ಅಂತೆಲ್ಲ ನೀ ಆಗಾಗ ಚೂರು ಪೋಲಿಯಾಗುತ್ತಿದ್ದರೆ ನನ್ನ ಕಣ್ಣಲ್ಲಿ ಎಷ್ಟು ನಿಹಾರಿಕೆ ಗೊತ್ತಾ. ಉಹ್ಞೂಂ, ನೀನು ಎಲ್ಲಿಯೂ ಕೆರಳಲಿಲ್ಲ, ಕೆರಳಿಸಲೂ ಇಲ್ಲ, ಕೊರಳ ತಬ್ಬಿ ಮಲಗಿದಾಗಲೂ ತಣ್ಣನೆಯ ಶಿವನಾಗಿಬಿಟ್ಟವ ನೀನು.

ನೋಡು ಪ್ರಕೃತಿ ಮಾತ್ರ ಶಾಶ್ವತ, ಪುರುಷನಲ್ಲ. ಪ್ರಕೃತಿ ತನ್ನ ಪೂರ್ಣತೆಗಾಗಿ ಸೃಷ್ಟಿಸಿಕೊಂಡಿದ್ದು ಪುರುಷನನ್ನ. ಅದು ಪುರುಷನನ್ನ ಸೃಷ್ಟಿಸುತ್ತೆ, ಲಾಲಿಸುತ್ತೆ, ಬೆಳೆಸುತ್ತೆ, ಗೆಲ್ಲಿಸುತ್ತೆ, ಕೊನೆಗೆ ತನ್ನೊಡಲಲ್ಲೇ ಶಾಶ್ವತ ನಿದ್ರೆಯನ್ನೂ ದಯಪಾಲಿಸುತ್ತೆ. ಆದರೆ ಪುರುಷನಿಗೆ ಎಲ್ಲಾ ತನ್ನಿಂದಲೇ ಎನ್ನುವ ಅಹಂಕಾರ. ಆದರೆ ಅವನೆಷ್ಟು ನಿಸ್ಸಾಯಕ ಗೊತ್ತಾ, ಅವನ ಸೋಲಿಗೆ ಸಾಂತ್ವನಕ್ಕೂ, ಅವನ ಗೆಲುವಿನ ವಿಜೃಂಭಣೆಗೂ, ಅವನ ಬೇಸರದ ಏಕಾಂತಕ್ಕೂ ಹೆಣ್ಣು ಬೇಕು. ಅವನಿಗೆ ಆಸರೆಯಿಲ್ಲದೆ ಬದುಕಲಾರ. ಅದು ಅವನಿಗೂ ಗೊತ್ತು. ಭಯ ಅವನಿಗೆ, ಆದ್ದರಿಂದಲೇ ಹೆಣ್ಣನ್ನ ನಿಯಂತ್ರಿಸುವ ಹಿಡಿದಿಟ್ಟುಕೊಳ್ಳುವ ಹಠ ಅವನದು. ಚರಿತ್ರೆ ಪೂರ್ತಿ ಇಂಥ ಹಠದ ಪುಟಗಳೇ. ಥೇಟ್ ಹೆಣ್ಣಿನಂತೆಯೇ ಕಾಡು ಕೂಡ. ಪ್ರತಿ ಕಾಡು ಬೇರೆಯೇ, ನಿಗೂಢವೇ, ವಿಸ್ಮಯವೇ. ಕಾಡನ್ನ ಅರಿಯುವುದು ಅಷ್ಟು ಸುಲಭವಲ್ಲ, ಒಮ್ಮೆ ಒಳಹೊಕ್ಕರೆ ಸಾಕು ಅದು ಕಾಡುತ್ತದೆ.

ನೀ ಹೀಗೆಲ್ಲ ಮಾತಾಡಿಯೇ ಇರಬೇಕು, ನನ್ನೊಳಗೂ ಕಾಡು ಸೇರಿಹೋಗಿದ್ದು. ಒಂದಿನ ನೀನು ಕಳೆದುಹೋದೆ. ಎಲ್ಲಿ ಹೋದೆ, ನಾ ಕೇಳಲಿಲ್ಲ. ನೀನೇ ಕಲಿಸಿದ್ದ ಪಾಠ ಅದು, ಸಂಬಂಧಗಳು ಅದಾಗೇ ಹುಟ್ಟಿ ಅದಾಗೇ ಕಳೆದುಹೋಗಿಬಿಡಬೇಕು. ನಾವು ಬೆನ್ನಟ್ಟಬಾರದು. ಬೆನ್ನಟ್ಟಿ ಹಿಡಿದರೆ, ಅದನ್ನು ದಕ್ಕಿಸಿಕೊಳ್ಳ ಹೊರಟರೆ ಅದು ಸತ್ತೋಗುತ್ತೆ ಕಣೆ. ಯಾವ ಸಂಬಂಧಗಳೂ ಸಾಯಬಾರದು ಅಷ್ಟೆ ಎಂದವ ನೀನು. ಇಲ್ಲ, ನಿನ್ನ ಹುಡುಕಲಿಲ್ಲ ನಾ. ನನ್ನೊಳಗೆ ನಿನ್ನ ಮುಚ್ಚಿಟ್ಟುಕೊಂಡು ನಿನ್ನನ್ನೇ ಅರಿಯುವ ಹುಡುಕಾಟಕ್ಕೆ ಬಿದ್ದುಬಿಟ್ಟೆ. ನೀನಿಲ್ಲದೆಯೂ ಕಾಡ ದಾರಿಗಳ ತುಳಿದೆ. ಬದುಕ ಬೀದಿಗಳಲ್ಲಿ ನಡೆದೆ. ಇವತ್ತು ಹೀಗೆ ಇವನೆದುರು ಕೂತಿದ್ದೇನೆ. ಪುಟ್ಟಿ ಎನ್ನುತ್ತಾನೆ ಎನ್ನುವುದು ಬಿಟ್ಟರೆ ಥೇಟ್ ನಿನ್ನಂತವನೇ ಇವನು. ತಿರುಗಿದ್ದು ಸಾಕು ಎಂದು ಕಾಡಲ್ಲಿ ಬಂದು ಕುಳಿತಂತಿದೆ ನೀನು.

* * * * * * * *

ಅಂಗಳದ ಎದುರು ಪುಟ್ಟ ಹೂತೋಟ ಮಾಡಿದ್ದಾನೆ ಇವ. ಅದರಾಚೆ ಯಾವುದೋ ತೋಟವೂ ಇದೆ. ಬದುಕಿಗೆ ಸಾಕಾಗುವಷ್ಟು ಬೆಳೆದುಕೊಳ್ಳುತ್ತಾನೇನೋ. ಇಲ್ಲ ಬೆಳೆದದ್ದರಲ್ಲೆ ಬದುಕಿಕೊಳ್ಳುತ್ತಾನೋಹಾಸಿಗೆ ಇದ್ದಷ್ಟು ಕಾಲು ಚಾಚುವ ಕಾಲ ಹೋಯಿತು, ಕಾಲು ಚಾಚಬೇಕೆನಿಸುವಷ್ಟು ಹಾಸಿಗೆಯನ್ನೆ ದೊಡ್ಡದಾಗಿಸಿ ಎಂದು ಮ್ಯಾನೆಜ್ಮೆಂಟ್ ಪಾಠ ಕೇಳಿ ಬೇಳೆದವಳು ನಾನು. ಹಾಸಿಗೆ ಬೆಳೆಸುವುದರಲ್ಲೆ ಬದುಕು ಕಳೆದುಕೊಳ್ಳುತ್ತಿದ್ದೆನೇನೋ, ನೀನು ಸಿಗದೆ ಹೋಗಿದ್ದರೆ. ಯಾಕೋ ಕಳೆದುಹೋದವಳು ನಾನು ಅನ್ನೋದೆ ಮರೆತು ಹೋಯ್ತು ನೋಡು ಇವನಿಂದ. ನಿನ್ನಷ್ಟು ಮಾತಾಡುವುದಿಲ್ಲ ಇವ. ಹೆಚ್ಚು ಕಾಡು ಕಂಡವನು, ಅಲ್ಲಾ ಬದುಕು ಕಂಡವನೂ ಇರಬಹುದು.

ಸಣ್ಣ ಕುತೂಹಲ ನನಗೆ, ನಿಮ್ಮ ಬದುಕು ಹೇಳಿ ಅಂದೆ. ಬದುಕು ಹೇಳುವುದಕ್ಕಲ್ಲ, ಬದುಕುವುದಕ್ಕೆ ಮಾತ್ರ. ಹೇಳಿದಷ್ಟು ಸಣ್ಣಗಾಗುತ್ತದೆ ಅದು. ಹೀಗೆ ಮಾಡಬಹುದಿತ್ತು, ಮಾಡಬಾರದಿತ್ತು, ಏನೆಲ್ಲ ಮಾಡಿದೆ ಉಫ್ ಮುಖವಾಡಗಳ ಧರಿಸಿ ಬಿಡುತ್ತದೆ ಅಂದ.

ಹೆಸರೇನು ಅಂದೆ, ಹೆಸರು ಕಳೆದೋಗಿದೆ ಕಾಡಲ್ಲಿ, ಹುಡುಕಿಕೋ ಎಂದ. ತುಂಟತನವಾ, ಮುಖವನ್ನಾ ದಿಟ್ಟಿಸಿ ನೋಡಿದೆ, ಗೊತ್ತಾಗಲಿಲ್ಲ. ಅವನ ಜ್ಞಾಪಕ ಚಿತ್ರಶಾಲೆಯಲ್ಲಿ ಬದುಕಿನ ಏನೆಲ್ಲ ಇದೆಯೋ

ಬದುಕನ್ನ ಧಿಕ್ಕರಿಸಿ ಹೀಗೆ ಕಾಡು ಸೇರುವುದು ತಪ್ಪಲ್ಲವೇ ಎಂದೆ. ಬದುಕು ದಕ್ಕಿದೆ ಎನಿಸಿದ ಮೇಲೆ ಕಾಡು ಸೇರಿ ಮತ್ತೆ ತನಗಾಗಿ ಬದುಕುವುದನ್ನ ವಾನಪ್ರಸ್ಥ ಎನ್ನುತ್ತಾರೇನೋ ಎಂದ

ಕುಟುಂಬ ಸಂಸಾರದ ಜವಾಬ್ದಾರಿಗಳಿಂದ ಓಡಿ ಬಂದಿದ್ದೀರಾ ಎಂದೆ, ಬದುಕಲು ಕಲಿಸಿದ್ದೇ ಅವಳು, ಕಲಿತೆ ಎನಿಸಿತೇನೋ ಮುಂದೆ ಹೋಗಿದ್ದಾಳೆ ಎಂದ

ಕಾಡು ತೋರಿಸಿ ಅಂದೆ, ಕಾಡು ಕಾಣ್ಕೆ, ತೋರಿಸಲಾಗದು ಕಾಣಬೇಕು ಅಷ್ಟೆ ಎಂದ

ಒಂದಷ್ಟು ಜೊತೆಗೆ ನಡೆದೆ, ಮತ್ತಷ್ಟು ಒಬ್ಬಳೆ. ಅವನಿದ್ದೂ ಇಲ್ಲದಂತೆ ಇದ್ದ, ನೀನೂ ಕೂಡ

ಸಾಕು ಹೊರಡುತ್ತೇನೆ ಎಂದೆ. ದಾರಿ ತೋರಿಸಿ ನಡೆಯುತ್ತಿರು ಎಂದ. ನೀನು ಇದನ್ನೇ ಅಲ್ಲವೇ ಹೇಳಿದ್ದುನಡೆಯುತ್ತಿದ್ದೇನೆ ಈಗ ನಿರಂತರ. ನಿನ್ನನ್ನು, ನಿನ್ನಂತ ಅವನನ್ನು, ನನ್ನನ್ನು, ಕಾಡುವ ಕಾಡನ್ನು, ಮುಗಿಯುತ್ತಿರುವ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ.

* * * * * * * *

ದಿನಾಂಕ: 18.03.2014ರಂದು “ಅವಧಿ” ಯಲ್ಲಿ ಮೊದಲರ್ಧ ಭಾಗ ಪ್ರಕಟಿಸಲ್ಪಟ್ಟಿದೆ. 

ಚಿತ್ರಕೃಪೆ : ಅಂತರ್ಜಾಲ, ಶಿವಾನಂದ, ವತ್ಸ

3 comments:

  1. ನಡೆಯುತ್ತಿದ್ದೇನೆ ಈಗ ನಿರಂತರ. ನಿನ್ನನ್ನು, ನಿನ್ನಂತ ಅವನನ್ನು, ನನ್ನನ್ನು, ಕಾಡುವ ಕಾಡನ್ನು, ಮುಗಿಯುತ್ತಿರುವ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ.

    Sooper..:)

    ReplyDelete
  2. ಇತ್ತೀಚಿನ ದಿನಗಳಲ್ಲಿ ತುಂಬಾ ಹಿಡಿಸಿದ ಮತ್ತು ಕಾಡಿದ ಬರಹ.. ಸೊಗಸು :-)

    ReplyDelete
  3. matillada movanadalli mundina bhagakke kayutta...

    ReplyDelete

ನಿಮ್ಮ ಅನಿಸಿಕೆ