ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday 8 March 2019

ಬಹಳ ಕಷ್ಟ ನೆನಪಿಲ್ಲದ ದಾರಿ...!!


 ಕಾವ್ಯ ಲಹರಿ//ರಘುನಂದನ ಕೆ.
 ಹೂಂ ನನ್ನ ಬೆನ್ನು
ಈಗ ನಾಚುವುದ ನಿಲ್ಲಿಸಿದೆ,
ನಿನ್ನ ಕಣ್ಣು ನೋಡುವುದನ್ನು
ನಿಲ್ಲಿಸಿರಬೇಕು ಬಹುಶಃ!
ಇಗೀಗ ನಿನ್ನ ಕಂಡೊಡನೆ
ಎದೆ ಢವ ಢವಿಸುವುದಿಲ್ಲ,
ಕಣ್ಣು ಕುಣಿಯುವುದಿಲ್ಲ,
ನಾಸಿಕಾಗ್ರ ಅರಳುವುದಿಲ್ಲ,
ಹೃದಯ ಬಿರಿಯುವುದಿಲ್ಲ.

ಮಳೆಗಾಲ ನಿಂತ ಮೇಲೆ
ಹನಿಗಳು ಎಷ್ಟು ದಿನ
ತೊಟ್ಟಿಕ್ಕಿಯಾವು ಹೇಳು?
ಚಳಿಗಾಲಕ್ಕೆ ನಿನ್ನ ಬಿಸಿ
ಸಾಲದಾ ತಿಳಿಯುವುದಿಲ್ಲ,
ಇಗೀಗ ಕನಸಲ್ಲೂ
ನೀನು ಕಾಣುವುದಿಲ್ಲ,
ಹುಡುಕುತ್ತೇನೆ ಎಲ್ಲಿ ನೀನು,
ಇಲ್ಲ ಕನಸಿನ ಕಿಟಕಿ
ನಿನಗೀಗ ಎಟಕುವುದಿಲ್ಲ

ತಾರಾ ಲೋಕಕ್ಕೆ
ನಿನ್ನೊಡನೆ ನಾ ಬರಲಾರೆ,
ನೀರ ಝರಿಯಲ್ಲಿ
ಈಗ ನಾನೊಬ್ಬನೇ ;
ಕೈ ಹಿಡಿದು ತಂದ ನಿನ್ನ
ಎಲ್ಲಿ ಬಿಟ್ಟೆ ಗೊತ್ತೇ ಆಗಲಿಲ್ಲ
ಬಹಳ ಕಷ್ಟ ನೆನಪಿಲ್ಲದ ದಾರಿ!
ತುಂಬಾ ನಿಕೃಷ್ಠ ಕನಸಿರದ ಸವಾರಿ!!

ನೆನಪಿನಾಳದಲ್ಲಿ ನಿನ್ನ ಪ್ರೇಮ
ಸಾಗರ ಗರ್ಭದ ಕಿರು ಮೀನಿನಂತೆ
ಸುಳಿದಾಡುತ್ತ ಅಲೆ ಎಬ್ಬಿಸುತ್ತದೆ
ಸುರಿಯುತ್ತಿರುವ ಮಳೆ
ಸವೆಯುತ್ತಿರುವ ದಾರಿ
ಮುಚ್ಚಿಟ್ಟ ನಿನ್ನ ಪತ್ರಗಳಲ್ಲಿನ
ಏಕಾಂತ ಪಿಸು ನುಡಿಯುತ್ತದೆ
ಪ್ರೀತಿ ಎಂದರೆ ಸಿಗದಿರುವುದನ್ನು
ಕಾಯುವುದಾಮರೆಯುವುದಾ?

 ಹುಂಬೇಡ
ಎದುರಿಗೆ ಸಿಗಬೇಡ ನೀನು
ನನ್ನ ಕಣ್ಣಲ್ಲಿ
ನಿನ್ನ ಹೆಣ ಕಂಡೀತು
ಮತ್ತದು ನಿನಗೆ
ಅರ್ಥವೂ ಆಗಿ ಬಿಡುತ್ತದೆ
ಎನ್ನುವ ಭಯ ನನಗೆ ;
ನಿನ್ನ ನೆನಪಿನ ಶವಕ್ಕೆ
ಕತ್ತಲೆ ಕಣ್ಣೀರ ಸಂಸ್ಕಾರ ಅಷ್ಟೇ!!

* * * * * * * *
ಚಿತ್ರಕೃಪೆ : ಅಂತರ್ಜಾಲ

2 comments:

  1. ಒಂದೇ ಉಸಿರಿಗೆ ಓದಿ ಮುಗಿಸಿದೆ. ಇಷ್ಟವಾಯ್ತು....

    ReplyDelete

ನಿಮ್ಮ ಅನಿಸಿಕೆ