ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday 2 October 2019

ತೆರೆದು ಬದುಕು, ಖುಲಕೆ ಜಿಯೋ!!

ಕಾವ್ಯ ಲಹರಿ//ರಘುನಂದನ ಕೆ.
ಕಂದ ನೀನು ಅಳುತ್ತೀಯೆ,
ಯಾಕೆ? ಗೊತ್ತಾಗಲ್ಲ ನಮಗೆ
ಹಸಿದಿರಬೇಕು, ಒದ್ದೆಯಾಗಿರಬೇಕು,
ಏನೋ ಕಚ್ಚಿರಬೇಕು ಅಂತೆಲ್ಲ ಯೋಚಿಸಿ
ಆಟ ಶುರು ಮಾಡುತ್ತೇವೆ,
ಕುಡಿಸುತ್ತೇವೆ, ಆಡಿಸುತ್ತೇವೆ
ಒಟ್ಟಿನಲ್ಲಿ ಸುಮ್ಮನಿರಬೇಕು ನೀನು
ಇಲ್ಲಿಂದ ಶುರು ಪುಟ್ಟ ನಿನ್ನ
ಸ್ವಾತಂತ್ರ ನೀನು ಕಳೆದುಕೊಳ್ಳೊ ಆಟ!!
 ಸಿಟ್ಟಾದೆಯಾ, ಉಹೂಂ
ಸಿಟ್ಟಾಗಬೇಡ ನಗು ಎನ್ನುತ್ತೇವೆ
ಅತ್ತೆಯಾ, ಊಹೂಂ ಅಳಬೇಡ
ಒರೆಸಿಕೊ ಕಣ್ಣೀರ, ಸುಮ್ಮನಿರು ಎನ್ನುತ್ತೇವೆ
ನೋಡಿದವರು ಏನೆಂದಾರು,
ಶುದ್ಧ ಅಳುಮುಂಜಿ
ನಾವು ದೊಡ್ಡವರು ಸರಿ ಇಲ್ಲ ಚಿನ್ನು
ನಮ್ಮ ಮಾತು ಕೇಳಬೇಡ ನೀನು
ತೆರೆದು ಬದುಕು, ಖುಲಕೆ ಜಿಯೋ!!

ಸಿಟ್ಟಾಗಬೇಡ, ಅಳಬೇಡ, ಬೇಸರ ಪಡದಿರು
ಎಂದೆಲ್ಲ ನಿನ್ನ ಭಾವಗಳ ಸಿಸ್ಟಮ್ಮೆ
ಹದಗೆಡಿಸಿಬಿಡುತ್ತೇವೆ ನಾವು
ಆಮೇಲೆ ಪ್ರೀತಿಸು ಎಂದರೆ
ಎಲ್ಲಿಂದ ತರ್ತೀಯ ಮಗನೆ ಫೀಲಿಂಗ್ಸು
ಬಂದ ಫೀಲಿಂಗ್ಸೆಲ್ಲ ಮಾಡಬೇಡ
ಎಂದೇ ಅಲ್ಲವಾ ನಾವು ಕಲಿಸಿದ್ದು
ಊಹೂಂ, ಇದೆಲ್ಲ ಸರಿ ಇಲ್ಲ ಕಂದ


ನಗುವಾಗ ನಕ್ಕು ಬಿಡು, ಸಿಟ್ಟು ಬಂದರೆ
ಹೊರ ಹಾಕು, ಅಳು ಬಂದರೆ ಅತ್ತು ಬಿಡು
ಮುಚ್ಚಿಟ್ಟು ಕಣ್ಣೀರ ಉಳಿಸಿ ಯಾವ
ರಾಜ್ಯಕ್ಕೆ ನೀರ ಕೊಡಬೇಕು ನೀನು!
ನಿನ್ನ ಬದುಕನ್ನ ನಾವು ಪೇರೆಂಟ್ಸು,
ಸಂಬಂಧಿಗಳು, ಸಮಾಜ ಹರಿದು
ತಿಂದು ಬಿಡುತ್ತೇವೆ, ಹುಶಾರು ಕಂದ
ನಾವು ದೊಡ್ಡವರೆಲ್ಲ ನಿನ್ನಷ್ಟು ಚಿಕ್ಕವರಲ್ಲ
ಚಿಕ್ಕ ಸಂಗತಿಗಳು ನಮಗೆ ಅರ್ಥವೂ ಆಗಲ್ಲ!!

ನಮಗೆಲ್ಲ ನಮ್ಮ ನೋಡುತ್ತಿರುವವರ
ಎದುರಿಗೆ ಮುಗ್ಗರಿಸದ
ವ್ಯಂಗ್ಯವಾಗದ, ಶಾಂತವೆನಿಸುವ
ದುಸ್ತರ ಬದುಕು ಬೇಕು ಅಷ್ಟೆ
ನಿನ್ನಂತೆ ಖುಲಕರ್ ಅಳಲಾರೆವು ನಾವು,
ಖುಲ್ ಕರ್ ಮಾತೂ ಆಡಲಾರೆವು,
ಭಾವನೆಗಳ ತೆರೆದಿಡುವುದಂತೂ ದೂರ
ಮುಖವಾಡ ಸಣ್ಣದಲ್ಲ ಮಗನೆ.


ಇಷ್ಟೆಲ್ಲ ಇರುವಾಗ ಖುಲ್ ಕರ್
ಪ್ರೀತಿಸುವುದು ಹೇಗೆ
ಬಾಯ್ತೆರೆದು ಅಳಲಾರೆಯಾದರೆ
ಎದೆ ತುಂಬಿ ನಗಲೂ ಆರೆ ಕಂದ,
ಮೋಡ ಕರಗಿ ಮಳೆಯಾಗದೆ
ಬಿಸಿಲೂ ಬೆಳದಿಂಗಳೂ ಎರಡೂ
ತೆರೆದು ಕಾಣಲಾರವು ತಾನೆ.

* * * * * * * *
ಚಿತ್ರಕೃಪೆ : ಅಂತರ್ಜಾಲ

No comments:

Post a Comment

ನಿಮ್ಮ ಅನಿಸಿಕೆ