ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday, 21 June 2013

ಹೆಸರ ಹಸಿವಿಲ್ಲ ಉಸಿರಿಗೆ..

ದೇವಾಮೃತ ಗಂಗೆ//ರಘುನಂದನ ಕೆ.


ಬೆಳದಿಂಗಳು ಚೆಲ್ಲಿತ್ತು
ಹೂವರಳಿ ನಗುತಿತ್ತು
ಇಬ್ಬನಿಯು ಮುಸುಕಿತ್ತು
ಅಂಗಳದ ತುಂಬ ಸ್ವಪ್ನ ಹಾಸಿತ್ತು
ಬಾಗಿಲಿಲ್ಲದ ಗುಡಿಸಲೆದುರು
ಬಡವನೆಂಬ ಭೇದ ಜಗದೊಳಗೆ
ಯಾವುದೂ ಮಿಗಿಲಲ್ಲ ಆಗಸದ ಕೆಳಗೆ


ಇಲ್ಲೊಂದು ರೂಪ, ಅಲ್ಲೊಂದು ದೀಪ
ಕಣ್ ಕಾಣ್ಕೆ ಚೆಲುವು
ಮನದೊಳಗಿಂದ ಒಲವು
ಶಾಪಗಳ ದಾಟದಿರಲು
ಅನಿಕೇತನದ ಹಸಿವಿಲ್ಲ ಜಗದೆದುರು
ನೋಟಗಳ ಗುಂಗಿಲ್ಲ ರವಿಗೆ
ಗೋಡೆಗಳ ಹಂಗಿಲ್ಲ ಭುವಿಗೆ


ನೀ ಮುಟ್ಟದಿರು, ನೆಲವ ಮೆಟ್ಟದಿರು
ಬಿಟ್ಟೆದ್ದರೂ ಬಿಡದಂತಿರು
ಹೋರಾಡು ಹಾರಾಡು ಹೆಸರಿಗೆ
ಹಣ ಹೊರಳಿ ಹೆಣವುರಳಿ
ಉಸಸಿರಿಲ್ಲ ಕಳೆಬರಗಳ ಸ್ವಪ್ನದಲ್ಲಿ
ಕೆಸರ ಮಸಿಯಿಲ್ಲ ಹಸಿರಿಗೆ
ಹೆಸರ ಹಸಿವಿಲ್ಲ ಉಸಿರಿಗೆ


ಕೈ ಮುಗಿದು ತಲೆಬಾಗಿ
ಶರಣಾಗು ಮರಣವಾಗು
ಒಳಗಿಲ್ಲ ಹೊರಗಿಲ್ಲ 
ಸುತ್ತೆಲ್ಲ ಹುಡುಕಿ ಸತ್ತು ಸಂತನಾಗು
ಊರೊಳಗೊಬ್ಬ ಊರಾಚೆಗೊಬ್ಬ ಜಗದ್ಗುರು
ಧರ್ಮ ಕರ್ಮಗಳ ಬಂಧವಿಲ್ಲ ಭಕ್ತಿಗೆ
ಅಂದ ಚೆಂದಗಳ ಗಂಧವಿಲ್ಲ ಮುಕ್ತಿಗೆ

  * * * * * * * * * *

 ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿhttp://samudrateera.wordpress.com/)

Friday, 10 May 2013

ಕಪ್ಪು ಚಿತ್ರದೊಳಗೊಂದು ಬೆಳಕು



ದೇವಾಮೃತ ಗಂಗೆ//ರಘುನಂದನ ಕೆ.

1

ಪುಟ್ಟಿಯ ಪುಟಾಣಿ ಕೈಯಲ್ಲಿ
ಜಗವೊಂದು ಸೃಷ್ಠಿಯಾಗುವ ಸೋಜಿಗ
ಖಾಲಿ ಹಾಳೆಯ ಮೇಲೆ
ಎಳೆದ ಗೆರೆಗಳಲ್ಲೀಗ
ಚರಾಚರಗಳ ಸಂಚಾರ



ವಿಶ್ವದ ಬೃಹತ್ ಗೋಳದೊಳಗೆ
ರೇಖೆ ಚುಕ್ಕಿಗಳಾಗಿ ಮನುಷ್ಯರು
ಪುಟ್ಟ ಬೆರಳು ಗೀಚಿದ
ಹಾಳೆ ತುಂಬ ಬ್ರಹ್ಮಾಂಡ ಕನಸು
ನಳನಳಿಸುವ ಪ್ರೇಮ ಸೊಗಸು


ಪೆನ್ಸಿಲ್ ಗೆರೆಯ ಬೂದು ಬಣ್ಣದಲ್ಲಿ
ಪುಟ್ಟಿಯ ರಂಗುರಂಗಿನ ಪ್ರಪಂಚ
ಅಲ್ಲೆಲ್ಲೋ ಅಜ್ಜಿ ಕಥೆಯ ರಾಜಕುಮಾರ
ಕಣ್ರೆಪ್ಪೆಗಳ ಮೇಲೆ ಕನಸ ಚಿತ್ತಾರ
ವಿಶ್ವವೀಗ ಬಣ್ಣಗಳ ರಂಗೀಲಾರೇ...!

2
ಪುಟ್ಟಿ ಬೆಳೆದಂತೆ ವಿಶ್ವ ಚಿಕ್ಕದು
ಕೈಯೊಳಗಿನ ಪೆಪ್ಪರುಮೆಂಟ ಮುತ್ತಿಕ್ಕಲು
ಕಾದು ನಿಂತಿವೆ ಕಣ್ ದಾಹದ 
ಸಾವಿರ ಇರುವೆಗಳ ಸಾಲು;
ಪುಟ್ಟಿಯ ವಿಶ್ವಕ್ಕೀಗ ಬಣ್ಣಗಳಿಲ್ಲ
ಬಿಳಿಯ ಕ್ಯಾನ್ವಾಸ್ ತುಂಬ
ಹರಿದು ತಿನ್ನುವ ಕಪ್ಪು ಮನುಷ್ಯರು


ಪುಟ್ಟಿಯ ಹಸಿ ಮಣ್ಣ ಮನಸೊಳಗೆ
ಪುರುಷ ಲೋಕದ ಕರಾಳ ರೇಖೆ
ಬದುಕ ಚಿತ್ರ ಕಪ್ಪಿಟ್ಟಂತೆ ಕನಸು
ಬೆಚ್ಚಿ ಬೀಳುತ್ತಾಳೆ ಪುಟ್ಟಿ ನನಸಲ್ಲೂ
ಉಸಿರುಗಟ್ಟಿದೆ ನಿಜದ ಭಾರಕ್ಕೆ
ಕಪ್ಪು ಚಿತ್ರದೊಳಗೊಂದು ಬೆಳಕು


ಚಿತ್ರದೊಳಗಾದರೂ ರಚಿಸಬೇಕಿದೆ
ಎದೆಯ ಬೆಳಗೋ ಮಾನವತೆಯ ಗೀತೆಯ
ಮನುಜ ಪ್ರೇಮದ ಮಮತೆಯ
ಶಕ್ತಿ ಬರಲಿ ಪುಟ್ಟಿಯ ಎಳೆಯ ಬೆರಳಲಿ
ಜಗದ ಕೆಸರ ತೊಳೆದು ರಂಗು ತುಂಬಲು
ನವಿರು ಪ್ರೇಮವ ಬೆಳೆಸಲು.

 * * * * * * * * * *

 ಚಿತ್ರಕೃಪೆ : ಅಂತರ್ಜಾಲ/ಅವಧಿ


10.05.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು  ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/ )

Thursday, 25 April 2013

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ


ದೇವಾಮೃತ ಗಂಗೆ//ರಘುನಂದನ ಕೆ.


ಕ್ಲಬ್ಬಿನಲಿ ಕವಿದ
ಮಬ್ಬು ಬೆಳಕಿನ ಮುಸುಕಿನಲ್ಲಿ
ಉನ್ಮಾದದ ಝಲಕು
ಮೂಲೆಯಲಿ ಒತ್ತಿ ನಿಂತವರ
ಸುತ್ತ ಸೆಂಟಿನ ಘಾಟು
ಬಣ್ಣ ಬಣ್ಣದ ಶೀಷೆಗಳಲ್ಲಿ
ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ
ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ
ಬೆಳಕೂ ಕಪ್ಪಿಟ್ಟಿದೆ... 


ರಾತ್ರಿ ಪಾಳಿಯ ಬಡ ದೇಹಕ್ಕೂ
ದುಬಾರಿ ಸಿಗರೇಟೇ ಬೇಕು ಸುಡಲು
ನಗರ ವ್ಯಾಮೋಹದ ಕಿಡಿಯಲ್ಲಿ
ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು
ಇಲ್ಲ ಶಹರದಲಿ ತಾರೆಗಳ ಹೊಳಪು
ಇರುಳೆಲ್ಲ ಕೃತಕ ದೀಪಗಳ ಬಿಳುಪು

ನುಗ್ಗಿ ಬರುವ ಪತಂಗಗಳ
ಜೀವ ಭಾವ - ರೆಕ್ಕೆಗೆ ಬೆಂಕಿ,
ಕೆಂಪು ನೋಟೊಳಗೆ ಗಾಂಧಿಯ ನಗು
ಸುತ್ತಮುತ್ತೆಲ್ಲ ಗಾಂಧಾರಿಯ ಮಕ್ಕಳು

                               
ಅರ್ಥ ಮಾಡಿಸ ಹೊರಟ ಬುದ್ಧಿಜೀವಿಗಳ
ಮಾತಲ್ಲಿ ಅಪಾರ್ಥಗಳ ತಳುಕು
ಧರ್ಮ ಕರ್ಮಗಳ ವಿಪರೀತಾರ್ಥದಲ್ಲಿ
ನಶೆಯೇರಿದ ದಾನವತೆಯ ಕೊಳಕು
ಕಣ್ ಕತ್ತಲಿಟ್ಟಿದೆ ನಗರ-ಬೆಳಕು
ಕೊಳೆತ ಮನಸುಗಳ ಘಾಟು ಕಳೆಯಲು
ಶೀಷೆ ತುಂಬಿದ ದ್ರಾವಕಗಳ ಉನ್ಮಾದ
ಮುಖ ನೋಡಲಾರದ ಕಣ್ಗಳಿಗೆ
ಮುಖವಾಡಗಳ ಬಣ್ಣ ವಿಷಾದ...!!


ಚಿತ್ರಕೃಪೆ : ಅಂತರ್ಜಾಲ

 ಪಂಜು-ಅಂತರ್ಜಾಲ ಸಾಪ್ತಾಹಿಕ ಲ್ಲಿ 11.03.2013ರಂದು ಪ್ರಕಟಿಸಲ್ಪಟ್ಟಿದೆಪಂಜುವಿನ ಪುಟಗಳಲ್ಲಿ ಓದಲು  ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

Wednesday, 20 March 2013

ಶಿಲೆಯಾದಳು ರಾಧೆ...


ದೇವಾಮೃತ ಗಂಗೆ//ರಘುನಂದನ ಕೆ.

ರಾಧೆಯ ಮಡಿಲಲಿ ಮಲಗಿದ ಕೊಳಲು
ಮೌನ ರಾಗವ ಧ್ವನಿಸುತಿದೆ
ಮೋಹನನಿಲ್ಲದೆ ರಾಧೆಯ ಮನವು
ವಿರಹದುರಿಯಲಿ ನೋಯುತಿದೆ




ಅತ್ತಿತ್ತ ಸರಿದಾಡುವ ಕಂಗಳು
ಬಾರದ ಕೃಷ್ಣನ ಹುಡುಕುತಿದೆ
ಕೊಳದಲಿ ಕಂಡಾ ಚಂದಿರ ಬಿಂಬದಿ
ಶ್ಯಾಮನ ಮೊಗವು ಕರಗುತಿದೆ

 

ಮಧುರೆಯ ಸೇರಿದ ಕೃಷ್ಣಗೆ
ರಾಧೆಯ ನೆನಪು ಬಾಡುತಿದೆ
ಪಾಂಚಜನ್ಯದಾ ನಾದದಿ
ಕೊಳಲಾ ಗಾನವು ಮರೆಯುತಿದೆ


ಅಂತಃಪುರದ ಮೋಹದ ತೆರೆಯು 
ಬೃಂದಾವನವ ಮುಸುಕುತಿದೆ
ಮಧುರೆಯ ಮಧುರಸದಾ ಸ್ವಾದವು
ಗಡಿಗೆಯ ಮೊಸರಾ ಮರೆಸುತಿದೆ

ಕೃಷ್ಣನ ಕಾಯುತ ಶಿಲೆಯಾದಳು ರಾಧೆ
ಜಾರಿದ ಕಂಬನಿ ಆರುತಿದೆ
ಬತ್ತಿದ ಕೊಳಕೆ ಜೀವವ ತುಂಬಲು
ನೆನಪಿನ ಚಿಲುಮೆಯು ಸೋಲುತಿದೆ.


* * * * * * * *

ಕಾಲೇಜು ದಿನಗಳಲ್ಲಿ ಕವನವೆಂದರೆ ಪ್ರೇಮ. ಪ್ರೇಮವೆಂದರೆ ರಾಧಾ-ಕೃಷ್ಣ
ಹೆಚ್ ಎಸ್ ವೆಂಕಟೇಶಮೂರ್ತಿಯವರ ಕವನ, ಅನಂತಸ್ವಾಮಿಯವರ ಭಾವಗೀತೆ ಎಲ್ಲಾ ರಾಧಾ-ಕೃಷ್ಣರಾಗಿ, ಪ್ರೇಮವಾಗಿ ಕಾಡುತ್ತಿದ್ದ ಕಾಲ
ಬರಹದ ಮೊದಲ ಸಾಲುಗಳು ಚಿಗುರು ಮೀಸೆಯಂತೆ ಮೂಡುತ್ತಿದ್ದ ದಿನಗಳು
2006 ಸಂಜೆಯೊಂದರಲ್ಲಿ ಬೀಸುವ ಗಾಳಿ ಎದೆಯಲ್ಲಿ ತಂದೆಸೆದ ಭಾವಗಳೇ ಕವನವಾಗಿ ಮೂಡಿ
ಈಗ ಇಲ್ಲಿ ಸಮುದ್ರ ತೀರದ ಅಲೆಯ ಒಲುಮೆಯಾಗಿ ನಿಮ್ಮೆದುರು ರೆಕ್ಕೆ ಬಿಚ್ಚಿದೆ
ಓದುವ ಪ್ರೀತಿಯಿರಲಿ. ಅಕ್ಷರ ನಮ್ಮೆಲ್ಲರ ಬೆಳೆಸಲಿ, ಬೆಳಗಿಸಲಿ.


ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)