ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday, 17 July 2012

ತಾರಾಲೋಕದಲ್ಲಿ ಪುಟಾಣಿ ಮಿಂಚು...

ಮೋಹಮತಿ ಕಥಾಮುಖಿ//ರಘುನಂದನ ಕೆ.


ತುಂತುರು ಮಳೆ, ಮನಸ್ಸು ಮಗುವಾಗಿ ಮೆದುವಾಗಿಬಿಟ್ಟಿತ್ತು. ಮನಸ ತುಂಬಾ ಕಥೆಗಳ ಸಾಲು. ಪುಟಾಣಿ ಮಕ್ಕಳ ಸುತ್ತ ಕೂರಿಸಿಕೊಂಡು ಕಥೆ ಹೇಳುವ ಬಯಕೆ. ಈ ಶಹರದಲ್ಲಿ ಎಲ್ಲಿ ಹುಡುಕಲಿ, ಕನ್ನಡದ ಕಥೆ ಕೇಳೋ ಮಕ್ಕಳ. ಅದ್ಕೆ ಇಲ್ಲಿ ಹೇಳೋಣಾ ಅಂತ ಬಂದೆ. ತುಂಬಾ ಹಿಂದೆ ಕತ್ತಲ ರಾತ್ರಿಯಲ್ಲಿ ದೊಡ್ಡ ಆಟದ ಮೈದಾನವೊಂದರಲ್ಲಿ ವಿಶಾಲವಾದ ನೀಲ ಆಕಾಶವನ್ನ ನೋಡುತ್ತಾ, ಹೊಳೆವ ನಕ್ಷತ್ರಗಳ ಎಣಿಸುತ್ತಾ ಹೀಗೊಂದು ಕಥೆ ಹುಟ್ಟಿತ್ತು. ಪುಟಾಣಿ ಮರಿಯೊಂದಕ್ಕೆ ಅದನ್ನು ಹೇಳಿ, ಅದರ ಕಣ್ಣ ಪಿಳಿಪಿಳಿಯಲ್ಲಿ ಖುಷಿಯ ಮಿಂಚ ಕಂಡು ಆನಂದಿಸಿದವ ನಾನು. ಈಗ ನಿಮ್ಮೆದುರಿಗೆ ಹರವಿ ಕೂತಿದ್ದೇನೆ…


ಅನಂತ ನೀಲ ಅಂತರಿಕ್ಷದ ಸಾಗರ, ತೇಲಿ ಗಿರ ಗಿರ ಸುತ್ತುವ ಭೂಮಿಯ ಲೋಕದಾಚೆ ಹರಡಿಬಿದ್ದ ನಕ್ಷತ್ರಗಳ ಉಂಡೆ, ಚಿಮ್ಮಿ ಒಂದರೊಳಗೊಂದು ಬೆರೆತ ಬೆಳಕ ಕಿರಣ, ದೃಕ್ಪಥದಾಚೆ ಕ್ಷೀರಪಥದ ದಾರಿಯಲಿ - ಬೆಳಕ ಲಂಗ ಧರಿಸಿ ಆಟವಾಡುವ ಕಿನ್ನರಿ…


ಅಂತರಂಗದಾಚೆಯೊಂದು ಅಂತರಿಕ್ಷ. ಅಲ್ಲೊಂದಿಷ್ಟು ನಕ್ಷತ್ರಗಳ ಗುಂಪು. ಅವುಗಳ ಜೊತೆ ಮುದ್ದು ರಾಜಕುಮಾರಿಯಂತ ಪುಟಾಣಿಮರಿಯ ಆಟ. ನಕ್ಷತ್ರ ಚಿಮ್ಮುವ ಕಿರಣಗಳ ಜೋಡಿಸಿ ಕಿರೀಟ ಮಾಡುವ ಆಟ. ಸುತ್ತುಗಟ್ಟಿದ ಕಿರಣಗಳ ಸಾಲು. ಕಣ್ಣಾ ಮುಚ್ಚಾಲೆ ಆಡೋ ತಾರೆಗಳ ಮೋಜು.

ಜೋಡಿಸಿ ಬೆಸೆಯ ಹೊರಟ ಬೆಳಕ ದಾರಗಳೆಲ್ಲ ಸಿಕ್ಕು ಸಿಕ್ಕಾಗಿ ಗಂಟುಗಳಾಗಿ… ಅವುಗಳ ಹಿಡಿದು ಕಿರೀಟವಾಗಿಸೋದು ಹೇಗೆ? ಬೆಳಕ ರೇಖೆಗಳ ಮೈ ಸುತ್ತ ಸುತ್ತಿಕೊಂಡ ಪುಟಾಣಿ ಮರಿಗೆ ಸುಸ್ತಾಗಿ ಹೋಗಿ, ಇನ್ನೂ ಆರಂಭವೇ ಆಗಿಲ್ಲ ಕಿರೀಟದಾಟ, ದಾರ ಜೋಡಿಸುವ ಮೊದಲೇ ನಿರಾಸೆಯ ಮಾಟ, ಕಿರಣಗಳ ಹಿಡಿದು, ಒಂದರೊಳಗೊಂದು ನೇಯ್ದು ಅದ್ಯಾವಾಗ ಆದೀತು ಹೊಳೆವ ಬೆಳಕ ಕಿರೀಟ, ಹೊರಟು ಬಿಡಲೇ ಭೂಮಿಗೆ, ಕನಸ  ಕಂಗಳಲ್ಲಿ ತುಂಬಿ ಜಾರಲು ನಿಂತ ಇಬ್ಬನಿಯ ಬಿಂದು…

ಪುಟಾಣಿ ಮರಿಯ ನೋವ ಕಂಡು ದೂರ ದೂರ ನಕ್ಷತ್ರ ಲೋಕದ ತೀರದಿಂದ ಮುದ್ದು ಮುಖದ ಜೀವಮಾತೆ ತಾರಾ ಕುವರಿ ಬಂದಳು. ಸುಂದರ ಗುಂಗುರು ಕೂದಲ ಮೇಲೊಂದು ನಕ್ಷತ್ರ ಸಿಂಗರಿಸಿದ ಹೊಳೆವ ಕಿರೀಟ, ನೀಲ ಕಣ್ಣ ಹೊಳಪು, ಮಂದಹಾಸದ ಸೊಗಸು… ಪುಟಾಣಿ ಎದುರಲ್ಲಿ ನಿಂತು ತಲೆ ನೇವರಿಸಿ ಮಧುರ ಪಾರಿಜಾತದ ಪರಿಮಳವ ಚೆಲ್ಲಿ, ಏನಾಯ್ತು ಪುಟ್ಟಾ ಎಂದಳು.

ಪುಟ್ಟ ಮರಿಯ ಕಂಗಳಲ್ಲಿ ಅಚ್ಚರಿಗಳ ದೀಪ, ಎದುರು ನಿಂತ ಸೊಗಸು ಕಿನ್ನರಿಯ ರೂಪ, ಯಾರಿರಬಹುದು ತೇಲುತ್ತ ಬಂದ ಗುಲಾಬಿ ಪಾದದ ಬಾಲೆ, ಅಣ್ಣನ ಕಥೆಯ ದೇವತೆನಾ ಅಂತ ಅನುಮಾನ…?

ಯಾರು ನೀನು, ದೇವತೆಯಾ ಕಿನ್ನರಿಯಾ – ಕೆಳಿದ್ದು ಪುಟಾಣಿ ಮರಿ

ನಾನು ನಕ್ಷತ್ರದೊಳಗಿಂದ ಬಂದ ಮಂಜಿನ ಬಾಲೆ, ಕಿರಣದ ಲೀಲೆ, ಅದ್ಸರಿ, ನೀನ್ಯಾರು ಮರಿ, ನಿನ್ನ ಕಂಗಳಲ್ಯಾಕೆ ಮೋಡ ಮುಸುಕಿದೆ, ಇಲ್ಲಿಗ್ಯಾಕೆ ಬಂದೆ? – ಕೇಳಿದ್ದು ಕಿನ್ನರಿ

ಆಗ, ಪುಟಾಣಿ ಮರಿ ಆ ಬಾಲೆಯ ಪುಟ್ಟ ಪುಟ್ಟ ಕೈ ಬೆರಳ ಹಿಡಿಯುತ್ತ ಹೆಳಿದ್ದು – ತಾರೆಗಳ ಲೋಕದಿಂದ ನಿಂಗೆ ತೇರನ್ನೆಳೆದು ತರುವೆ ಎಂದ ಅಣ್ಣ, ತಂದಿದ್ದು ಬೆಳಕ ದಾರದೆಳೆಗಳನ್ನ, ಅಂದಿದ್ದು – ನೀ ಹಿಡಿಯಬೇಕೀಗ ನಾ ತಂದ ಬೆಳಕ ಮಿಂಚ, ಹಿಡಿದು ಕಿರೀಟವಾಗಸ್ತೀಯಾ ಕೊಂಚ..

ಓಹೋ, ನೀ ಬೆಳಕ ಕಿರೀಟ ಮಾಡ ಬಂದ ಪುಟಾಣಿಯಾ, ನಿನ್ನಣ್ಣ ಕಾಮನಬಿಲ್ಲ ತಗೊಂಡು ಹೋದವನಾ, ಸೂರ್ಯನ್ನ ಗೆದ್ದವನಾ ಅಂತು ದೇವತೆ.

ಹ್ಞೂಂ ಹೌದು, ಅದಿರಲಿ ಅತ್ತ, ಇಲ್ಲಿ ನೋಡು, ಬೆಳಕ ರೇಖೆಗಳೆಲ್ಲ ಸಿಕ್ಕು ಸಿಕ್ಕಾಗಿ ಬಿಟ್ಟಿವೆ. ಬಿಡಿಸಲಾಗದು, ನೇಯಲಾಗದು, ಸುತ್ತಿ ಸುತ್ತಿ ನನ್ನ ಮುತ್ತಿದೆ, ನಂಗೆ ಅಳು ಬರ್ತಿದೆ, ಭೂಮಿಗೆ ಹೋಗೋಣಾ ಅನ್ನಿಸ್ತಿದೆ, ಏನ್ಮಾಡ್ಲಿ..??

ಏನ್ಮಾಡೋದು ಅಂತ ಅಣ್ಣ ಹೇಳಿಲ್ವಾ ಪುಟ್ಟಾ ನಿಂಗೆ..?

ಹ್ಞೂಂ ಅಣ್ಣ ಹೇಳಿದ್ದ, ನಿಂಗೆ ಸಾಕಾಗಿ ನೀ ಸೋತು ಕುಳಿತಾಗ ಕಣ್ಣಿಂದ ಜಿಟಿ ಜಿಟಿ ಮಳೆ ಸುರಿವ ವೇಳೆಯಲಿ, ಏಳು ಸಮುದ್ರ ದಾಟಿ ದೇವ ಮಾನವರು ಬರ್ತಾರೆ, ಕೆದರಿದ ನಿನ್ನ ಕೂದಲ ಬಾಚಿ ತಾರೆಗಳ ಮಾಲೆ ಮುಡಿಸ್ತಾರೆ, ಬೆಳಕ ಗೋಳವ ಲಾಲಿಸಿ ಕಿರೀಟ ಮಾಡಿ ತಲೆ ಮೇಲೆ ಇಡ್ತಾರೆ – ಅಂದಿದ್ದ.

ಅಷ್ಟೇನಾ ಹೇಳಿದ್ದು..??

ಉಹ್ಞೂಂ, ಪಾಚು ಮರಿ ನೀನು ಸುಸ್ತಾಗದೆ, ಅವರು ಬರೊದ್ರೊಳ್ಗೆ ಕಿರೀಟ ಮಾಡಿ ತೊಟ್ಟಿರಬೇಕು. ದೇವ ಮಾನವರು ನಿನ್ನ ಗೆಲುವ ನೋಡಬೇಕು, ಗೆದ್ದ ಕಥೆಯ ಹಾಡಬೇಕು, ಮಕ್ಕಳೆಲ್ಲ ಕೇಳಿ ಸ್ಪೂರ್ತಿ ಪಡೆಯಬೇಕು, ನೀ ಗೆಲ್ಲಬೇಕು ಆಟದಲ್ಲಲ್ಲ ಆಟ ಆಡುವ ಮಾಟದಲ್ಲಿ, ಗೆಲುವಿಗಾಗಿ ಕಾಯ್ವ, ಗೆಲ್ಲಿಸುವವರಿಗಾಗಿ ಕಾದು ನಿಲ್ಲುವ ಜೀವವಾಗಬಾರದು ನನ್ನ ತಂಗಿ, ಗೆಲುವಿನಾಚೆಯ ಆಟ ದಕ್ಕಬೇಕು, ದೇವ ಮಾನವರು ಹರಸಬೇಕು ಅಂದಿದ್ದ. ಹೌದು ಅಷ್ಟಕ್ಕೂ ನೀನ್ಯಾರು, ಸಮುದ್ರ ದಾಟಿ ಬಂದ ದೇವ ಕುವರಿಯಾ, ಸಪ್ತ ಸಾಗರವ ದಾಟಿ ಬಂದ್ಯಾ..?

ಹೊಳೆವ ನೀಲ ಕಂಗಳ ಬಾಲೆ ನಗ್ತಾ ನಗ್ತಾ ನುಡಿದಳು - 
ಸಪ್ತ ಸಾಗರವ ದಾಟಿ ನೀನು ಬಂದೆ, ಚುಕ್ಕಿಗಳ ಎಡವುತ್ತ ನಾನು ಬಂದೆ, 
ಕಾಮನ ಬಿಲ್ಲ ಸೂರ್ಯನಿಂದ ನಿನಗೆಂದೇ ಕೊಂಡೊಯ್ದ ಅಣ್ಣ ನಿನ್ನಣ್ಣ ಮತ್ತೇನ್ ಹೇಳಿ ಕೊಟ್ಟ ನಿಂಗೆ..?

ಪುಟಾಣಿ ಹೇಳಿದ್ಲು – ನೀರಿನ ಹನಿಯ ಹೃದಯದಲ್ಲಿ ಏಳು ಬಣ್ಣವಿದೆಯೆಂದು ಸೂರ್ಯ ಕಿರಣ ಸ್ಪರ್ಶಿಸುವವರೆಗೂ ತಿಳೀದು, ನಮ್ಮ ಹೃದಯದ ಶಕ್ತಿ ನಮ್ಮುಸಿರ ಸ್ಪರ್ಶದಲ್ಲರಳಬೇಕು. ಎಲ್ಲರಿಗೂ ಬೆಳ್ಳಿ ಕಿರಣದಲ್ಲಿ ಏಳು ಬಣ್ಣ ಕಂಡ್ರೆ ನನ್ನಣ್ಣ ನಂಗೆ ನೀರ ಹನಿಯ ಹೃದಯದಲ್ಲಿ ಕಾಮನ ಬಿಲ್ಲ ಬಣ್ಣ ಕರಗಿರುವುದ ತೋರಿಸಿದ, ಹಾರುವ ಪಾತರಗಿತ್ತಿಯ ರೆಕ್ಕೆಗಳಲ್ಲಿ, ಅರಳುವ ಹೂವ ಚೆಲುವ ದಳಗಳಲ್ಲಿ ಬಣ್ಣಗಳ ಕಾಣಿಸಿದ.

ಸರಿ ಪುಟ್ಟ, ನಿನ್ನಣ್ಣ ನಿಂಗೆ ಸಾಕಾಗೋಷ್ಟು ಹೇಳೇ ಕಳ್ಸಿದಾನಲ್ಲ, ಮತ್ಯಾಕೆ ಅಳ್ತಾ ಇದ್ದೀಯಾ ನೀನೀಗ ಅಂದಳು ಕಿನ್ನರ ಬಾಲೆ.

ನಂಗೆ ಭೂಮಿದು ಗೊತ್ತು, ಈ ತೆರೆದ ಆಗಸದ ಅಂತರಂಗದಲ್ಲಿ ಹೆಂಗೆ ಆಟಾ ಆಡ್ಲಿ ಅಂದಳು ಪುಟಾಣಿ ಮರಿ.
ಆಗ ಆ ದೇವತೆ ಏನು ಹೇಳಿದ್ದು ಗೊತ್ತಾ..?
ಪುಟಾಣಿ ಮರಿ, ಹುಲ್ಲಿನ ಮೈದಾನವಿರಲಿ, ಮಣ್ಣಿನ ಮೈದಾನವಿರಲಿ, ಬಾನಂಗಳವೇ ಇರಲಿ, ಬದುಕ ಬಯಲೇ ಇರಲಿ, ಆಟ ಆಡುವವರಿಗೆ ಮೈದಾನವಾಗಬಾರದು ಮುಖ್ಯ…

ಮತ್ತೇನ್ ಫಲಿತಾಂಶವಾ..? ಅಂದಳು ಮಧ್ಯೆ ಪುಟಾಣಿ ಮರಿ

ಅಲ್ಲ ಮರಿ, ಆಟ ಆಡೋರಿಗೆ ಆಟ ಮಾತ್ರ ಮುಖ್ಯ, ಆಟವೊಂದೇ ಉಳಿದು ಉಳಿದಿದ್ದೆಲ್ಲ ಕಳೆದು, ಏಕಾಗ್ರವಾಗಿಬಿಡಬೇಕು, ಮೈದಾನವೂ ಮರೆವಂತೆ, ಆಗ ಬಯಸಿದ ಫಲಿತಾಂಶವೂ ಅದಾಗೇ ಬರುತ್ತೆ, ಸೋಲೂ ಗೆಲುವಿನಂತೆ ಆನಂದವಾಗುತ್ತೆ, ಆಟದಾಚೆಯ ಕಾಣ್ಕೆಯದು, ಆಟ ಆಡುವಾಗಲೇ ಆನಂದವರಳಿಸಬೇಕು ಫಲಿತಾಂಶವಾದಾಗ ಅಲ್ಲ ಮರಿ, ಹೀಗೇ ನೋಡು – ಎಷ್ಟೆಲ್ಲ ಬೆಟ್ಟ ಗುಡ್ಡ ಮೋಡ ರಾಶಿಗಳೇ ಬಂದರೂ ಸೂರ್ಯ ನಿಲ್ಲಸ್ತಾನಾ ಸಂಚಾರಾ.. ಇರ್ಲಿ ಬಿಡು ಇದೆಲ್ಲಾ, ನಾ ನಿಂಗೆ ಕಿರಣಗಳ ಹಿಡಿಯೋಕೆ ಸಹಾಯ ಮಾಡ್ಲಾ..?


ಅಣ್ಣನಾಡಿದ ಮಾತುಗಳ ರಿಂಗಣ ಕಿವಿಯಲ್ಲಿ, ದೇವ ಕಿನ್ನರಿ ನುಡಿದ ಪಾಠದ ಸ್ಪಂದನ ಎದೆಯಲ್ಲಿ

ಪುಟಾಣಿ ಮರಿ ಅಂತು – ಬೇಡ ಬೇಡ, ನೀನು ಸಹಾಯ ಮಾಡೋದು ಬೇಡ ಕಣೆ ಬಾಲೆ, ನನ್ನಾಟ ನಂದು, ನನ್ನ ಬದುಕಿನ ಆಟಕ್ಕೆ ಕಥೆಗೆ ನಾನೇ ನಾಯಕಿ, ಆಟಾನೂ ನಂದೆ, ಫಲಿತವೂ ನಂದೆ, ಕಿರೀಟವೂ ನಂದೆ.. ಅಣ್ಣನಂತೆ ಮಾತಾಡ್ತೀಯಾ ನೀನು ಕೂಡ, ನಾನು ಆಗಸದಂಗಳಕ್ಕೆ ಹೊರಟಾಗ ಅಣ್ಣ ಅಂದಿದ್ದ – ನೀನು ಎಲ್ಲಿದ್ದಿ ಅಂತ ಭೂಮಿಗೆ ಗೊತ್ತು, ಆದರೂ ಅದು ನಿನ್ನನ್ನೇ ಹುಡುಕಬೇಕು, ಹುಡುಕುವಂತಾಗಬೇಕು, ಅದಕ್ಕಾಗೇ ನೀನು ಆಟ ಆಡಬೇಕು, ಒಂದೊಂದೇ ಕಿರಣಗಳ ಬಿಡಿಸುತ್ತಾ ಸೇರಿಸುತ್ತಾ ನೀನೇ ಆಟವಾಡಬೇಕು, ಕಿರೀಟದಾಟವನ್ನೂ… ಬದುಕಿನಾಟವನ್ನೂ…
ಸರಿ ಹಾಗಾದ್ರೆ ನಾನು ಹೊರಡ್ಲಾ ಅಂತು ಕಿನ್ನರಿ,
ಎಲ್ಲಿಗೆ ಹೋಗ್ತಿ ನೀನೀಗ ಅಂತು ಪುಟಾಣಿಮರಿ
ಆಗ ಆ ಕಿನ್ನರಿ ನುಡಿದಳು - ಶಶಿ ತೇಲುವ ನೀಲಿಯೊಳಗೆ, ಪ್ರತಿ ಇರುಳ ತಾರೆ ಬಳಿಗೆ, ಉಳಿದ ಬದುಕಿನ ಇಂದುಗಳೊಳಗೆ, ಬರುವ ನಾಳೆಗಳ ಕನಸಿನೊಳಗೆ…
ಎನ್ನುತ್ತಾ ಅಂತರಿಕ್ಷದಂಗಳದಲ್ಲಿ ತೇಲಿ ತೇಲಿ ದೂರವಾದಳು…
ಕಿರಣಗಳ ಮಣಿಸಿ ಕಿರೀಟವಾಗಿಸಲು ತಲೆ ತುಂಬ ಕನಸುಗಳ ಹೊತ್ತು ತಾರೆಗಳ ಸೊಗಸ ಬೆಳಕ ಮಿಂಚ ಹಿಡಿದು ಪುಟಾಣಿ ಮರಿ ಆಟವಾದಳು, ಫಲಿತಗಳ ಹಂಗಿಲ್ಲದ ಪಾತ್ರವಾದಳು…

* * * * * * * * * *
ಮುಂದೇನಾಯ್ತು..?? ಕಥೆ ಕೇಳ್ತಾ ಕೇಳ್ತಾ ಮಲಗುವ ಮಕ್ಕಳ ಕನಸಿನಲ್ಲಿ ಕಥೆ ಮುಂದುವರೆಯಲಿ… ಗೆಲುವ ಸೊಗಸ ಹೊಳೆವ ಕಂಗಳಲ್ಲಿ ತುಂಬಲಿ…
ಈಗ ಮುಂದಿನ ಕಥೆ ನಿಮ್ಮದು, ಹೇಳಿ ಬದುಕಿನಾಟವ ಗೆದ್ದು ಕಿರೀಟ ಮುಡಿದು ಸಿಂಹಾಸನದಲ್ಲಿ ಯಾವಾಗ ಕುಳಿತುಕೊಳ್ತೀರಿ, ನೀರ ಹೃದಯದ ಕಾಮನ ಬಿಲ್ಲಿಗೆ ಯಾವಾಗ ಬಣ್ಣ ತುಂಬ್ತೀರಿ, ತಾರೆಗಳ ತೇರಲ್ಲಿ ಯಾವಾಗ ಮೌನ ಜೋಗುಳವ ಹಾಡ್ತೀರಿ, ಮಕ್ಕಳ ಕನಸಲ್ಲಿ ನಕ್ಷತ್ರಗಳ ಮಿಂಚ ಯಾವಾಗ ಕೊಡ್ತೀರಿ, ಅಪ್ಪ ಅಮ್ಮನ ಪ್ರೀತಿಯಾಗಿ ಬೆಚ್ಚಬೆಯ ಕಥೆಗಳ ಯಾವಾಗ ಮಕ್ಕಳ ಬಾಳಲ್ಲಿ ತುಂಬ್ತೀರಿ..

ಅರ್ಧಕ್ಕೆ ನಿಂತ ಮಾತು, ಮುಗಿಯದ ಕಥೆ ಅರ್ಧಕ್ಕೆ ಮುಗಿದು ಬಿಡುವ ಬದುಕು ಕಾಡುತ್ತದೆ, ಉಳಿದಿದ್ದು ಅಳಿಯದೆ ಮನಸ್ಸುಗಳಲ್ಲಿ ಮುಂದುವರೆಯಲಿ… ಜಾಗತೀಕರಣದ ಕಥೆಗಳಾಚೆ, ಕಾರ್ಟೂನ್ ಲೋಕದಾಚೆ ಮಕ್ಕಳಿಗೂ ಹಿರಿಯರಿಗೂ ರಾತ್ರಿಯ ಆಕಾಶ ಪಾಠಶಾಲೆಯಾಗಲಿ. ಆಕಾಶ, ನಕ್ಷತ್ರ, ಸೂರ್ಯ, ನೀರ ಹನಿಯೊಳಗಿನ ಕಾಮನಬಿಲ್ಲು – ಮಕ್ಕಳ ಆಸಕ್ತಿ, ವಿಜ್ಞಾನದ ಅರಿವೂ ಆಗಲಿ. ಅಣ್ಣ ತಂಗಿಯ ಭಾವ, ರಾತ್ರಿ ಕಥೆ ಕೇಳುತ್ತ ಹ್ಞೂಂ ಗುಡುತ್ತಲೆ ನಿದ್ದೆ ಹೋಗುವ ಮಕ್ಕಳ ಬಿಸುಪು ಅಪ್ಪ ಅಮ್ಮಂದಿರಿಗೆ ಮತ್ತೆ ಸಿಕ್ಕುವ ಕಾಲ ಬರಲಿ, ಬದುಕು ಭಾವ ಬಂಧದ ಸೊಗಸಾಗಿ ಸಂಭ್ರಮಿಸಲಿ…
* * * * * * * * * *
ಮುಗಿಸುವ ಮೊದಲು ಎಂದೋ ಓದಿದ್ದ ನಾಲ್ಕು ಸಾಲುಗಳ ನಿಮ್ಮೆದುರು ಹರವಿ ಮುಗಿಸುವ ಬಯಕೆ… ಈ ಸಾಲುಗಳ ಬರೆದ ಜೀವಕ್ಕೆ ನಾ ಕೃತಜ್ಞ…
“ಗಗನದಲಿ ಗೃಹತಾರೆ ಬುಗುರಿಗಳ 
ನಿಲ್ಲದ ಗಿರಿ ಗಿರಿ ಸದ್ದು… 
ಶೃತಿಗಿದೆ ಕ್ಷೀರಪಥ, 
ಕಪ್ಪೆ ಚಿಪ್ಪಲ್ಲಿ ಮೂಢ ಕನಸುಗಳ 
ಏನೋ ಸ್ಪಂದನ ತಾಳ, 
ಕಡಲಿನಾ ನಾಲಗೆ ಉಲಿವ ಸುಸ್ವರ
ಓಂಕಾರದ ಜೇನ್ನಾದ, 
ಹೊಳೆದದ್ದು ತಾರೆ, ಉಳಿದಿದ್ದು ಆಗಸ..”


ಈ ಕಥೆಯ ತುಂಬ ಇಣುಕಿದ ಪುಟಾಣಿ ಮರಿಯ ಅಣ್ಣನ ಕಥೆಯನ್ನೂ ನಿಮಗೆ ಹೇಳೀಯೇನು ಒಂದಿನ… ಕೇಳ್ತೀರಲ್ವಾ…??

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com  ಗೆ ಭೇಟಿ ನೀಡಿ)


Monday, 5 December 2011

ನಗರದೊಳಗೊಂದು ನಿನಾದ...

ಯಾವಲ್ಲೋಚನ ಗೋಚರಾ//ರಘುನಂದನ ಕೆ.
ಪುಟ್ ಪಾತಿನ ಮೇಲೆ ಯಾರದೋ ಖರೀದಿಗೆ ಕಾದಿರುವ ಪೋಸ್ಟರ್ ಗಳಲ್ಲಿನ ಬಣ್ಣದ ಜೀವಿಗಳಂತೆ ಯಾವುದೋ ಸುಂದರ ಕನಸಿಗೆ ವಿಹ್ವಲರಾಗಿ ಪರಿತಪಿಸುತ್ತಿರುವ, ದಿನದ ಧಾವಂತಗಳಲ್ಲಿ ಬದುಕಿನ ಸಣ್ಣ ಸಣ್ಣ ಖುಷಿಗಳ ಮರೆತು ಪುಟ್ಟ ಮಗುವಿನ ಆಟದ ಪೆಟ್ಟಿಗೆಯೊಳಗೆ ತುಂಬಿಟ್ಟ ಚಕ್ರಗಳಿಲ್ಲದ ಕಾರು, ತಲೆಗಳಿಲ್ಲದ ಗೊಂಬೆ, ಫ್ರಾಕು ಇಲ್ಲದ ರಾಜಕುಮಾರಿ, ಕತ್ತರಿಸಿ ಬಿದ್ದ ಇನ್ನೆಷ್ಟೋ ಚೂರುಗಳಂತಹ ಕನಸುಗಳನ್ನ ವಾರಾಂತ್ಯದಲ್ಲಿ ಹಣದಿಂದಲೇ ಖರೀದಿಸಿ ತಂಗಳ ಪೆಟ್ಟಿಗೆಯೊಳಗಿನ ಕೊತ್ತಂಬರಿ ಸೊಪ್ಪಿನಂತೆ ಜೋಪಾನವಾಗಿಡಬಹುದೆಂಬ ಭ್ರಮೆಗಳಲ್ಲಿ ಬದುಕುತ್ತಿರುವ ನಗರವಾಸಿ ಮಾನವರ ಬೆಳಗು ಸೂರ್ಯನ ಎಳೆಕಿರಣಗಳ ಸ್ಪರ್ಶದಿಂದ ಬೆಚ್ಚಗಾಗಿ ಮುದಗೊಳ್ಳಲಿ. 
ಮನುಷ್ಯ ತನ್ನ ಅನಕೂಲತೆಗಳ ಆಡಂಬರಕ್ಕಾಗಿ ನಿರ್ಮಿಸಿಕೊಂಡ ನಗರಗಳು ಇಂದು ಅವನ ನರಮಂಡಲವನ್ನೇ ವ್ಯಾಪಿಸಿ... ಅಲ್ಲಿ ಇಲ್ಲಿ ಎಲ್ಲೆಲ್ಲೂ ರಸ್ತೆಗಳು, ನಗರವೆಂದರೆ ತರಹೇವಾರಿ ರಸ್ತೆಗಳು.. ಕೆಲವು ಹಿರಿದು ಕೆಲವು ಕಿರಿದು, ಒಂದರೊಳಗೊಂದು ಬೆಸೆದು ಒಂದರಿನ್ನೊಂದರಿಂದ ಕವಲೊಡೆದು ಈ ತುದಿಯಿಂದ ಆ ತುದಿಗೆ ಎಲ್ಲಿಂದೆಲ್ಲಿಗೋ ಸೇರಿಸುವ ಸದಾ ಗಿಜಗುಡುವ ರಸ್ತೆಗಳ ನರಮಂಡಲ, ನಗರದ ಮನುಷ್ಯನ ಮೈ ಸೇರಿ ಮಗುವಿನಾಟದ ಪೆಟ್ಟಿಗೆಗಳಂತಹ ವಾಹನಗಳ ದಟ್ಟಣೆಯಲ್ಲಿ ಕುಂಯ್ಗುಡುವ ಪೋಂ ಗುಡುವ ವಿಚಿತ್ರವಾಗಿ ನರಳುವ ವಿವಿದ ಶಬ್ದಗಳ ಹಾರ್ನ್ ಗಳ ಗದ್ದಲದಲ್ಲಿ ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಚಪ್ಪಟೆ ಜೀವಿಯಂತಾದ ಮನುಷ್ಯನ ಬದುಕ ಕನಸುಗಳಲ್ಲಿ ಪ್ಲಾಸ್ಟಿಕ್ ಹೂವುಗಳು ಅರಳಿ ಪರಿಮಳವ ಚೆಲ್ಲಲಿ...
ಸುಂದರ ಸಂಜೆಗಳಲ್ಲಿ ಪುಟ್ ಪಾತ್ ನಲ್ಲಿ ನಡೆವಾಗ, ನಗರದ ಸಂಜೆಗಳು ಸುಂದರವೆನ್ನುವ ಭ್ರಮೆ ಕವಿದಂತೆನ್ನಿಸಿ ಕಸಿವಿಸಿಗೊಳ್ಳುವ ಗೃಹಸ್ಥನಿಗೆ ದಿಡೀರ್ ಹೆಂಡತಿಯ ನೆನಪಾಗಿ.. ಮಲ್ಲಿಗೆಯ ಮಾಲೆ ಒಯ್ದು ದಿನಗಳೆಷ್ಟಾದವು.. ಎನ್ನಿಸುವ ವಿಚಿತ್ರ ಹೊಗೆ ಮಿಶ್ರಿತ ಧೂಳಿನಂತಹ ಮುಜುಗರ ಮನಸ್ಸನ್ನ ಕಾಡುವಾಗ, ಅಲ್ಲೇ ಮೂಲೆಯಲ್ಲಿ ಸುತ್ತಿಟ್ಟ ಮಲ್ಲಿಗೆಯ ಮಾಲೆ ಎಂದೋ ಕೇಳಿರಬಹುದಾದ ನರಸಿಂಹ ಸ್ವಾಮಿಯವರ ಕವನವಾದಂತೆನಿಸಿ ಎದುರು ಹೋಗಿ ನಿಂತ  ಮಧ್ಯಮ ವರ್ಗದ ಸಂಸಾರಿಗನೆದುರು, ಯಾವ ಕೃತಕತೆಯ ಎಳೆಯಿಲ್ಲದೆ ಬಾಹ್ಯ ಪ್ರಪಂಚದ ಎದುರು ಮುಖವಾಡ ಧರಿಸುವ ಹಂಗಿಲ್ಲದ ಪ್ರೀತಿಯೊಂದು ಅಮ್ಮನಾಗಿ ಪುಟ್ಟ ಮಗಳನ್ನ ಅಪ್ಪಿ ಮುದ್ದಿಸುವಾಗ ಮಗು ನಕ್ಕ ನಗುವಿನ ಪರಿಮಳ ಎದುರಿಗಿದ್ದ ಮಾನವನ ತುಸು ಉಬ್ಬು ಹೊಟ್ಟೆಗೆ ಬಿಗಿದಿಟ್ಟ ಬೆಲ್ಟ್ ನೊಳಗೆ ಬಂಧಿಯಾದ ಅಂಗಿಯ ಒಳಸೇರಿ ಕಚಗುಳಿಯಿಡುತ್ತದೆ. ಹಚ್ಚಿಟ್ಟ ಬೀದಿ ದೀಪಗಳ ಬೆಳಕಿಗೆ ಪುಳಕ.
ಪ್ರೇಮವೆಂದರೆ ದೇವಾನಂದನ ಕಾಲದ ಹಾಡು... ಕಿಶೋರ್ ಕುಮಾರನ ಕಂಠದ ನೋವು... ಈಗಷ್ಟೆ ಅರಳುತ್ತಿರುವ ಮಕ್ಕಳ ಕುತೂಹಲ ಹದಿಹರೆಯದವರ ಸಲ್ಲಾಪ ಮಾತ್ರವೆಂದುಕೊಳ್ಳುತ್ತ, ಸಿನೆಮಾ ಥಿಯೇಟರ್ ಗಳ ಕತ್ತಲ ಸೀಟುಗಳಲ್ಲಿ ಲಾಲ್ ಬಾಗ್ ಕಬ್ಬನ್ ಪಾರ್ಕುಗಳ ಕಲ್ಲ ಬೆಂಚುಗಳ ಮರೆಯಲ್ಲಿ ಮರಗಿಡಗಳ ಸಂದುಗೊಂದುಗಳಲ್ಲಿ ಪ್ರೇಮವನ್ನ ಎಂದೋ ಮರೆತು ಬಿಟ್ಟವರಂತೆ ಬದುಕುತ್ತಿರುವ ಮಧ್ಯ ವಯಸ್ಸಿನ ಮಾನವ ನಿದ್ದೆಯಲ್ಲಿ ಸ್ವಪ್ನಗಳ ಕಂಡು ತುಸು ನಾಚಿಕೆಯಿಂದ ಬೆಚ್ಚಿ ಎದ್ದು ಎಷ್ಟು ದಿನಗಳಾದವು... ಕಾಮನ ಬಿಲ್ಲ ಬಣ್ಣಗಳ ಎಣಿಸಿ ವರ್ಷಗಳೆಷ್ಟಾದವು.. ಅಷ್ಟಕ್ಕೂ ಕಾಮನ ಬಿಲ್ಲು ಅರಳಿ ಕಾಲವೆಷ್ಟಾಯಿತು.. ಎನ್ನುವ ಸಂದೇಹ ಕಾಡದಂತೆ ಓಡಿಸುತ್ತಿದೆ ನಗರ... ಬೆಳ್ಳಂಬೆಳಗ್ಗೆ ಕಛೇರಿಗೆ ತಡವಾಯಿತಲ್ಲ ಎಂದುಕೊಳ್ಳುತ್ತ ತುಂಬಿ ಬಿರಿದು ನಿಂತ ಹಲಸಿನ ಹಣ್ಣಿನಂತ ಬಸ್ಸಲ್ಲಿ ನುಗ್ಗಿ ಚೂರುಪಾರು ಜಾಗದಲ್ಲಿ ಎಲ್ಲೆಲ್ಲೋ ಏನೇನೋ ತಾಗಿದರೂ ಮುಜುಗರಗೊಳ್ಳದೆ ಟಿಕೇಟ್ ಕೇಳುವ ಕಂಡಕ್ಟರ್ ಗೆ ಬೈದುಕೊಳ್ಳುತ್ತ ಕಾಲು ತುಳಿದವನೊಡನೆ ಜಗಳವಾಡಿ ಕಛೇರಿ ಸೇರಿದಾಗ ಮನಸ್ಸು ಕಲ್ಲಚಪ್ಪಡಿಯಡಿಗಿನ ಶವ.. ಸುಂದರ ಮಂದಹಾಸದೊಂದಿಗೆ ಆರಂಭಿಸಬೇಕಿದ್ದ ದಿನಗಳನ್ನ ಮರೆಸಿ ಜಂಜಡಗಳ ಉಳಿಸುವ ಬದುಕಿನ ದುಸ್ತರ ಅಸಹಾಯಕತೆ ನಗರದ್ದಾ.. ನಾಗರಿಕನದ್ದಾ,,??
ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಜೀವಿಗಳಿಗಿರುವ ನಗೆ ಕೃತಕವಾ, ಸಹಜವಾ,,? ಪ್ರೇಮವೆಂದರೆ ಹದಿಹರೆಯದವರಿಗೆ ಮಾತ್ರ ಮೀಸಲಿಟ್ಟ ಭಾವವಾ..? ಕೆಂಪಂಗಿಯ ಯೂನಿಫಾರ್ಮ್ ತೊಟ್ಟು ಮುಂಜಾವಿನಲ್ಲಿ ರಸ್ತೆಗಳ ನರಮಂಡಲಗಳನ್ನ ಸ್ವಚ್ಛವಾಗಿಸುವ ಮಹಿಳೆಯ ಮಗುವಿನ ಕಣ್ಣ ಹೊಳಪು, ದಿನವಿಡಿ ವಿಚಿತ್ರ ಪಾತ್ರಗಳ ಜನರ ನಡುವೆ ನುಗ್ಗುತ್ತಲೆ ಪುಟ್ಟ ಮಾತಿನ ಅಪ್ಯಾಯತೆಗೆ ನಗುವರಳಿಸಿ ಕಥೆ ಹೇಳುವ ಕಂಡಕ್ಟರ್ ನ ಜೀವಂತಿಕೆ, ಬಣ್ಣದ ಬಲೂನುಗಳಲ್ಲಿ ಕನಸುಗಳ ತುಂಬಿ ಮಾರುವ ಹುಡುಗನ ಪೀಪಿಯ ಪೂಂ ಪೂಂ.. ಹಾಡು, ಬೆಳಗಿನ ಮಂಜಿನಲ್ಲಿ ಮಂಗನ ಟೊಪ್ಪಿ ಧರಿಸಿ ವಿಹಾರಕ್ಕೆ ಹೊರಟ ಹಿರಿ ಜೀವದ ಮೃದು ಹೆಜ್ಜೆಯ ಬಿಸುಪು, ರಸ್ತೆ ದಾಟುವಾಗ ಕಣ್ಣರಳಿಸಿ ನೋಡುತ್ತ ಭರ್ರೋ.. ಎಂದು ಬರುವ ವಾಹನಗಳ ತೀವ್ರತೆಗೆ ಬೆಚ್ಚಿ ಗೊತ್ತೇ ಆಗದಂತೆ ಜಗಳವಾಡಿ ಸಿಟ್ಟಾದ ಅಣ್ಣನ ಕೈ ಬೆರಳ ಹಿಡಿದುಬಿಡುವ ತಂಗಿಯ ಅಂಗೈಯಲ್ಲಿನ ಬೆಚ್ಚನೆಯ ಭಾವ, ರಾತ್ರಿ ಪಾಳಿ ಮುಗಿಸಿ ಬಂದು ಉಸ್ಸೆಂದು ಹಾಸಿಗೆ ಸೇರುವಾಗ ಗಂಡ ಮಾಡಿಕೊಟ್ಟ ಕಾಫಿಯಲ್ಲಿನ ಜೀವದ್ರವ್ಯ.... ಪುಟ್ ಪಾತ್ ನಲ್ಲಿ ಹೂ ಮಾರುವವಳು ಮಗಳ ಮುದ್ದಿಸಿದಾಗ ನಕ್ಕ ನಗುವಿನ ಕೆನ್ನೆಯ ಗುಳಿಯ ಒನಪು, ಅರೆತೆರೆದ ಮೈಯ ನಟಿಯ ಮೇಲೆ ಎಲ್ಲೆಲ್ಲೋ ಕೈ ಆಡಿಸುತ್ತ ನಿಧಾನವಾಗಿ ಸಿನೆಮಾ ಪೋಸ್ಟರ್ ಅಂಟಿಸುವ ಹುಡುಗನ ತುಂಟತನ.. ಇವೆಲ್ಲ ಪೇಪರ್ ಹಾಕುವ ಹುಡುಗನ ಸೈಕಲ್ ಏರಿ ಮನೆಮನೆಗೂ ಮನಗಳ ಒಳಗೂ ನುಸುಳಿ ನಗರದ ನಿಸ್ತೇಜಗಳಿಗೆ ಬಣ್ಣ ತುಂಬಲಿ... ಊರ ತೊರೆದು ನಗರ ಸೇರಿದವರ ನೆನಪುಗಳ ಕೆದಕಿ ಪುಳಕಗೊಳಿಸಲಿ..
ಕನಸುಗಳ ಮಾರುತ್ತಿರುವಂತೆ ಭ್ರಮೆ ಹುಟ್ಟಿಸುವ ನಗರವೇ, ನಿಂತಲ್ಲಿ ನಿಲ್ಲಗೊಡದೆ ಓಡಿಸುತ್ತಲೇ ಇರುವ ನಗರವೇ ನೀ ಮಾನವನಾಗಿಬಿಡುವ ಮಾಯೆಗೆ... ನಗರವಾಗಿ ಪರಿವರ್ತಿಸಲ್ಪಟ್ಟ ಮಾನವ ಕಾಯುತ್ತಿದ್ದಾನೆ... ಕಣ್ಣ ಎವೆಯಿಕ್ಕದೆ ಕಾಯುತ್ತಿರುವ ಪುಟಾಣಿಗಳ ಕಣ್ಗಳೆದುರು ನಗರ - ನಾಗರಿಕನಂತಾಗಿಬಿಡುವ ಜಾದೂ ನಡೆಯುವ ಕೌತುಕಕ್ಕಾಗಿ ತನ್ನನ್ನೇ ಮಾರಿಕೊಂಡ ಮನುಷ್ಯ ಕಾತರಿಸುತ್ತಿದ್ದಾನೆ... ಕಾಯುವಿಕೆಯ ಚಿಪ್ಪೊಳಗಿಂದ ಮುತ್ತು ಉದುರುವಂತೆ ಕನಸ ಕಾಣಬೇಕಿದೆ ಈಗ.. ಪುಟ್ಟ ಪುಟ್ಟ ಖುಷಿಗಳ ಜತನದಿಂದ ಆಯ್ದು ಉಸಿರಾಗಿಸಿಕೊಳ್ಳಬೇಕಿದೆ ಈಗ... 

(ಬ್ಲಾಗ್ ಅಂಗಳದ ನನ್ನ ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:11-12-2011ರ ಸಾಪ್ತಾಹಿಕ ಲವಲVK ಯಲ್ಲಿ ಪ್ರಕಟಿಸಲಾಗಿದೆ)