ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday, 25 April 2013

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ


ದೇವಾಮೃತ ಗಂಗೆ//ರಘುನಂದನ ಕೆ.


ಕ್ಲಬ್ಬಿನಲಿ ಕವಿದ
ಮಬ್ಬು ಬೆಳಕಿನ ಮುಸುಕಿನಲ್ಲಿ
ಉನ್ಮಾದದ ಝಲಕು
ಮೂಲೆಯಲಿ ಒತ್ತಿ ನಿಂತವರ
ಸುತ್ತ ಸೆಂಟಿನ ಘಾಟು
ಬಣ್ಣ ಬಣ್ಣದ ಶೀಷೆಗಳಲ್ಲಿ
ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ
ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ
ಬೆಳಕೂ ಕಪ್ಪಿಟ್ಟಿದೆ... 


ರಾತ್ರಿ ಪಾಳಿಯ ಬಡ ದೇಹಕ್ಕೂ
ದುಬಾರಿ ಸಿಗರೇಟೇ ಬೇಕು ಸುಡಲು
ನಗರ ವ್ಯಾಮೋಹದ ಕಿಡಿಯಲ್ಲಿ
ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು
ಇಲ್ಲ ಶಹರದಲಿ ತಾರೆಗಳ ಹೊಳಪು
ಇರುಳೆಲ್ಲ ಕೃತಕ ದೀಪಗಳ ಬಿಳುಪು

ನುಗ್ಗಿ ಬರುವ ಪತಂಗಗಳ
ಜೀವ ಭಾವ - ರೆಕ್ಕೆಗೆ ಬೆಂಕಿ,
ಕೆಂಪು ನೋಟೊಳಗೆ ಗಾಂಧಿಯ ನಗು
ಸುತ್ತಮುತ್ತೆಲ್ಲ ಗಾಂಧಾರಿಯ ಮಕ್ಕಳು

                               
ಅರ್ಥ ಮಾಡಿಸ ಹೊರಟ ಬುದ್ಧಿಜೀವಿಗಳ
ಮಾತಲ್ಲಿ ಅಪಾರ್ಥಗಳ ತಳುಕು
ಧರ್ಮ ಕರ್ಮಗಳ ವಿಪರೀತಾರ್ಥದಲ್ಲಿ
ನಶೆಯೇರಿದ ದಾನವತೆಯ ಕೊಳಕು
ಕಣ್ ಕತ್ತಲಿಟ್ಟಿದೆ ನಗರ-ಬೆಳಕು
ಕೊಳೆತ ಮನಸುಗಳ ಘಾಟು ಕಳೆಯಲು
ಶೀಷೆ ತುಂಬಿದ ದ್ರಾವಕಗಳ ಉನ್ಮಾದ
ಮುಖ ನೋಡಲಾರದ ಕಣ್ಗಳಿಗೆ
ಮುಖವಾಡಗಳ ಬಣ್ಣ ವಿಷಾದ...!!


ಚಿತ್ರಕೃಪೆ : ಅಂತರ್ಜಾಲ

 ಪಂಜು-ಅಂತರ್ಜಾಲ ಸಾಪ್ತಾಹಿಕ ಲ್ಲಿ 11.03.2013ರಂದು ಪ್ರಕಟಿಸಲ್ಪಟ್ಟಿದೆಪಂಜುವಿನ ಪುಟಗಳಲ್ಲಿ ಓದಲು  ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

Wednesday, 20 March 2013

ಶಿಲೆಯಾದಳು ರಾಧೆ...


ದೇವಾಮೃತ ಗಂಗೆ//ರಘುನಂದನ ಕೆ.

ರಾಧೆಯ ಮಡಿಲಲಿ ಮಲಗಿದ ಕೊಳಲು
ಮೌನ ರಾಗವ ಧ್ವನಿಸುತಿದೆ
ಮೋಹನನಿಲ್ಲದೆ ರಾಧೆಯ ಮನವು
ವಿರಹದುರಿಯಲಿ ನೋಯುತಿದೆ




ಅತ್ತಿತ್ತ ಸರಿದಾಡುವ ಕಂಗಳು
ಬಾರದ ಕೃಷ್ಣನ ಹುಡುಕುತಿದೆ
ಕೊಳದಲಿ ಕಂಡಾ ಚಂದಿರ ಬಿಂಬದಿ
ಶ್ಯಾಮನ ಮೊಗವು ಕರಗುತಿದೆ

 

ಮಧುರೆಯ ಸೇರಿದ ಕೃಷ್ಣಗೆ
ರಾಧೆಯ ನೆನಪು ಬಾಡುತಿದೆ
ಪಾಂಚಜನ್ಯದಾ ನಾದದಿ
ಕೊಳಲಾ ಗಾನವು ಮರೆಯುತಿದೆ


ಅಂತಃಪುರದ ಮೋಹದ ತೆರೆಯು 
ಬೃಂದಾವನವ ಮುಸುಕುತಿದೆ
ಮಧುರೆಯ ಮಧುರಸದಾ ಸ್ವಾದವು
ಗಡಿಗೆಯ ಮೊಸರಾ ಮರೆಸುತಿದೆ

ಕೃಷ್ಣನ ಕಾಯುತ ಶಿಲೆಯಾದಳು ರಾಧೆ
ಜಾರಿದ ಕಂಬನಿ ಆರುತಿದೆ
ಬತ್ತಿದ ಕೊಳಕೆ ಜೀವವ ತುಂಬಲು
ನೆನಪಿನ ಚಿಲುಮೆಯು ಸೋಲುತಿದೆ.


* * * * * * * *

ಕಾಲೇಜು ದಿನಗಳಲ್ಲಿ ಕವನವೆಂದರೆ ಪ್ರೇಮ. ಪ್ರೇಮವೆಂದರೆ ರಾಧಾ-ಕೃಷ್ಣ
ಹೆಚ್ ಎಸ್ ವೆಂಕಟೇಶಮೂರ್ತಿಯವರ ಕವನ, ಅನಂತಸ್ವಾಮಿಯವರ ಭಾವಗೀತೆ ಎಲ್ಲಾ ರಾಧಾ-ಕೃಷ್ಣರಾಗಿ, ಪ್ರೇಮವಾಗಿ ಕಾಡುತ್ತಿದ್ದ ಕಾಲ
ಬರಹದ ಮೊದಲ ಸಾಲುಗಳು ಚಿಗುರು ಮೀಸೆಯಂತೆ ಮೂಡುತ್ತಿದ್ದ ದಿನಗಳು
2006 ಸಂಜೆಯೊಂದರಲ್ಲಿ ಬೀಸುವ ಗಾಳಿ ಎದೆಯಲ್ಲಿ ತಂದೆಸೆದ ಭಾವಗಳೇ ಕವನವಾಗಿ ಮೂಡಿ
ಈಗ ಇಲ್ಲಿ ಸಮುದ್ರ ತೀರದ ಅಲೆಯ ಒಲುಮೆಯಾಗಿ ನಿಮ್ಮೆದುರು ರೆಕ್ಕೆ ಬಿಚ್ಚಿದೆ
ಓದುವ ಪ್ರೀತಿಯಿರಲಿ. ಅಕ್ಷರ ನಮ್ಮೆಲ್ಲರ ಬೆಳೆಸಲಿ, ಬೆಳಗಿಸಲಿ.


ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

Wednesday, 27 February 2013

ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ…


ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ.



“A Thing Lost is Valued The Most” ನಿಜ, ಕಳೆದ ವಸ್ತು ಯಾವಾಗಲೂ ಅತ್ಯಂತ ಬೆಲೆಯುಳ್ಳದ್ದು, ಅಥವಾ ಇಲ್ಲವಾದಾಗ ಮಾತ್ರ ಅದರ ಬೆಲೆ ಅರ್ಥವಾಗುತ್ತದೋ ಏನೋ. ಎಷ್ಟೋ ಸಲ ಅದು ನಮ್ಮೊಡನೆ ಇದ್ದುದರ ಅರಿವೂ ಇಲ್ಲದಂತೆ ಇದ್ದುಬಿಟ್ಟಿರುತ್ತೇವೆ ನಾವು.


ಈಗ ಬೆಂಗಳೂರಿನ ಎಷ್ಟೋ ರಸ್ತೆಗಳು ತಮ್ಮೊಡಲ ಮರಗಳನ್ನು ಕಳೆದುಕೊಂಡು ಝಳಪಿಸುತ್ತಿವೆ. ಎಷ್ಟೋ ವರ್ಷಗಳಿಂದ ಇದ್ದೂ ಇಲ್ಲದಂತಿದ್ದುಬಿಟ್ಟಿದ್ದ ಮರಗಳು ಅಭಿವೃದ್ಧಿಯ ಕನಸಿನ ನಾಳೆಗಾಗಿ ನಿಶ್ಯಬ್ದವಾಗಿ ಜಾರಿಹೋಗಿವೆ.

ಬಿದಿರ ಸೀಳಿ ಬುಟ್ಟಿ ನೇಯುವವರ ಆಸರೆಯಾಗಿ,
ಎಲೆಯ ಸಂದಿಯಿಂದ ಜಾರುವ ಬೆಳಕಿನ ಕಿರಣಗಳ ಹುಡುಕುತ್ತಿದ್ದ ಹರಿದ ತಡಿಕೆಯ ಗುಡಿಸಲಿನೊಳಗಿನ ಕಂದಮ್ಮಗಳ ಕಣ್ಣ ಬೆಳಕಾಗಿ,
ಹದಿಹರೆಯದವರ ಸ್ವಪ್ನ ಭೂಮಿಯ ಮಾತುಗಳಿಗೆ ಕಿವಿಯಾಗಿ,
ಹಕ್ಕಿಗಳ ಕಲರವಕ್ಕೆ ಎಲೆಗಳ ಮರ್ಮರವ ಸೇರಿಸುತ್ತ ಜೊತೆಯಾಗಿ ನಿಂತಿದ್ದ ಮರಗಳೆಲ್ಲ ಈಗ ಮುರಿದು ಬಿದ್ದಿವೆ, ಅಲ್ಲ ಕಡಿದು ಕೆಡವಲಾಗಿದೆ.

ಈಗ ಅಲ್ಲುಳಿದಿರುವುದು; ಉರುಳಿದ ಉಸಿರಿನ ಅವಶೇಷಗಳ ಚಡಪಡಿಕೆ ಮಾತ್ರಕಾಲೇಜಿನ ಮಕ್ಕಳೆಸೆದ ಕಸದಂತೆ, ಸೀಳಿಬಿದ್ದ ಬಿದಿರಿನ ಚೂರುಗಳಂತೆ.

* * * * * * * * 

ನಿಜ, ಇದ್ದಾಗ ಬೆಲೆ ಅರ್ಥವಾಗದು. ನಮ್ಮ ಹೆತ್ತವರು ಹೆಮ್ಮರದಂತೆ ನಮ್ಮ ಹಿಂದೆ ನಿಶ್ಶಬ್ದವಾಗಿ ನಿಂತಿರುವುದು ಮರೆತುಹೋಗಿದ್ದೇವೆ ನಾವೀಗ. ಅವರೂ ಮರಗಳಂತೆ ನಿಂತೇ ಇರುತ್ತಾರೆಬೆಳೆಯಬೇಕೆಂಬ ಧಾವಂತದಲ್ಲಿ ಮಗಮಗಳು ನಾಳೆಗಳ ಬೆನ್ನತ್ತಿ ಓಡುತ್ತ ತಮ್ಮನ್ನ ಮರೆತಾಗಲೂ.
ನಮ್ಮ ಭಾವನೆಗಳೇ ಅವರಿಗೆ ಅರ್ಥವಾಗುವುದಿಲ್ಲ, Genaration Gap ಅಂತ ತಿರಸ್ಕರಿಸಿದಾಗಲೂ,
ಸುಮ್ಮನೆ ಬಾಯಿ ಮುಚ್ಚಿಕೊಂಡಿರುತ್ತೀರಾಎನ್ನುತ್ತ ಕೋಪದ ಜ್ವಾಲೆಗಳ ಅಪ್ಪಳಿಸಿದಾಗಲೂ
ನಿಂತೇ ಇರುತ್ತಾರೆ,

ಮಕ್ಕಳು ಸೋತು ಹಿಂತಿರುಗಿದರೆ ಆಸರೆಗೆ, ಧೈರ್ಯಕ್ಕೆ, ಏನೋ ಬೇಕೆಂದು ತುಡಿವ ಮಕ್ಕಳ ಕಂಗಳ ಗೊಂದಲ ಕಳೆಯಲು ತಮ್ಮ ಬದುಕನ್ನೇ ಸವೆಸುತ್ತ, ಎಂದೋ ಒಂದು ದಿನ ನಿಶ್ಶಬ್ಧವಾಗಿ ಧರಶಾಯಿಗಳಾಗುತ್ತಾರೆ ಮರಗಳಂತೆ. ಅವರ ಬೆಲೆ ಈಗಲಾದರೂ ಅರ್ಥವಾದೀತಾ?


ಬಿಸಿಲ ಝಳ ಮೈ ಸುಡುವಾಗ, ಧೂಳು-ಹೊಗೆ ಆವರಿಸಿ ಕಣ್ತುಂಬುವಾಗ, ತಂಪ ನೀಡುತ್ತಿದ್ದ ಮರಗಳು ನೆನಪಾಗುತ್ತವೆ. ಉರುಳಿದ ಮರಗಳ ಕೊನೆಯುಸಿರು ಕಳೆವ ಮೊದಲೇ ನಾವು ಅವುಗಳ ಮರೆತು ಮತ್ತೆ ಜಂಜಾಟಗಳ ಹಿಂದೆ ಹೊರಟಿದ್ದೇವೆ.
  
ನಮ್ಮ ನಾಳೆಯ ಕನಸುಗಳಲ್ಲಿ ನಾವಿದ್ದೇವೆ, ನಮ್ಮ ಸಂಸಾರ, ಮಕ್ಕಳಿದ್ದಾರೆಅದರಲ್ಲಿ ಹಿಂದೆ ನಿಂತು ನಮ್ಮನ್ನೇ ಕನಸಾಗಿಸಿಕೊಂಡವರಿಲ್ಲ.
ಒಂದೊಮ್ಮೆ, ಅವರೂ ನಾಳೆಯ ಕನಸುಗಳಲ್ಲಿ ನಿನ್ನೆಗಳನ್ನ ಮರೆತಿದ್ದಿರಬಹುದೇ… 
ಗೊತ್ತಿಲ್ಲ, ನಾವಂತೂ ಮರೆತಿದ್ದೇವೆ.

ನಮಗೀಗ ಬಿಸಿಲ ಝಳ, ಹೊಗೆ-ಧೂಳುಗಳು ಅಭ್ಯಾಸವಾಗಿ ಬಿಟ್ಟಿವೆ. ತಿಂಗಳು ಕಳೆಯುವುದರೊಳಗೆ ಅಪ್ಪ-ಅಮ್ಮ ಮರೆತೇ ಹೋಗುತ್ತಾರೆ,
ಬದುಕು ಕೈ ಬೀಸಿ ಕರೆಯುತ್ತದೆ, ಕಾಲ ಸರಿಯುತ್ತಲೇ ಇರುತ್ತದೆ, ಮನಸ್ಸು ಹೀಗೆ ಏನೇನೋ ಧ್ಯಾನಿಸುತ್ತಲೇ ಇರುತ್ತದೆ.


* * * * * * * * *
ಚಿತ್ರಕೃಪೆ : ಅಂತರ್ಜಾಲ


 ಬರಹವನ್ನು ವಿಜಯ ಕರ್ನಾಟಕದ ದಿನಾಂಕ:21-12-2008 ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ.

27.02.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು  ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/ )

Thursday, 31 January 2013

ನೆನಪು -ನವಿಲುಗರಿ


ದೇವಾಮೃತ ಗಂಗೆ//ರಘುನಂದನ ಕೆ.

ಅತ್ತಿತ್ತ ಸುತ್ತಮುತ್ತ
ಸುಳಿದಾಡಿ ಮನಸು
ನೆನಪ ಪುಟ ತಿರುವಲು
ಕಂಡದ್ದು
ಬೆಚ್ಚಗೆ ಮಲಗಿದ್ದ
ನಿನ್ನ ನೆನಪ ನವಿಲುಗರಿ


ಕೈಯಲ್ಲಿ ಕೈ ಬೆಸೆದು
ಬೆರಳ ಎಣಿಸುತ್ತ
ಮೌನ ಕೊಲ್ಲುತ್ತ
ಸಾಗರ ತೀರದ ಮರಳಲ್ಲಿ
ಮೂಡಿಸಿದ್ದ
ಜೋಡಿಪಾದಗಳ ಗುರುತ
ನುಂಗಿದ್ದು
ಮರಳೋ, ಅಲೆಯೋ
ಇನ್ನೂ ತಿಳಿಯಲಾಗಿಲ್ಲ...!

ಮುಳುಗುವ ಸೂರ್ಯನ ನೋಡುತ್ತ
ಬದುಕ ಬೆಸೆವ 
ಮಾತಾಡಿದವರಿಗೆ
ಬೆಸೆದ ಕೈ ಬೇರೆಯಾದದ್ದು
ಅರಿವಾಗುವ ಮೊದಲೇ
ಸೂರ್ಯ
ಅಸ್ತಮಿಸಿಬಿಟ್ಟಿದ್ದ...

ಈಗ,
ಮತ್ತದೇ ತೀರದಲ್ಲಿ
ಹೆಜ್ಜೆ ಹುಡುಕಿದರೆ;
ಗೆಜ್ಜೆ ಕಟ್ಟಿದ ಪಾದ
ಎಲ್ಲೋ ಮಾಯ,
ಎಷ್ಟು ಎಣಿಸಿದರೂ
ಲೆಕ್ಕಕ್ಕೆ ಸಿಗುವುದು
ಐದೇ ಬೆರಳು...!!


ನವಿಲು ಮರೆತ ನವಿಲುಗರಿಯ
ನೆನಪ ಹೊತ್ತಿಗೆಯಲ್ಲಿ
ಮುಚ್ಚಿಟ್ಟು
ಮತ್ತದೇ ಸಾಗರ ತೀರಕ್ಕೆ
ಸಾಗುತ್ತೇನೆ ಸದಾ
ಬೆಸೆಯಲಾರದ ಬೆರಳುಗಳ ಹುಡುಕಿ.




ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)

ದಿನಾಂಕ: 31.01.2013ರಂದು ಅವಧಿ ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು 
ಲಿಂಕ್ ಬಳಸಿ – http://avadhimag.com/?p=76173