ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday, 23 August 2013

ಪಥದ ಜಾಡಲ್ಲಿ ಕಾದವರ ಉಸಿರು

ಕಾವ್ಯ ಲಹರಿ//ರಘುನಂದನ ಕೆ.

ಕವನವಾಗಬೇಕೆಂದು ಕನವರಿಸಿ ಕವನವಾಗದೇ ಉಳಿದರೂ
ಕವನದಂತೆ ಕಾಣಿಸಿಕೊಳ್ಳುವ ಸಾಲುಗಳು ಹೀಗೆಲ್ಲಾ ಬರೆಯಲ್ಪಟ್ಟಾಗ…

* * * * * * *
ಭೋರೆಂದು ಸುರಿದರೂ ಮೀರದಾ ಕಡಲು
ಕಲ್ಲಾಗಿ ಕುಳಿತ ಬದುಕಲ್ಲಿ
ಅಹಲ್ಯೆಯ ಕನಸ ಪಳೆಯುಳಿಕೆ
ಇಂದ್ರಛಾಪದ ಕನವರಿಕೆ


ಹುಟ್ಟರಿಯದ ಬದುಕು ಬಯಲು
ತನ್ನದಲ್ಲದ ಶಪಥಗಳಲ್ಲಿ
ಕರಗಿದ ಕರ್ಣ ಕುಂಡಲ ಹೊಳಪು
ಅಳಿದು ಹೋದವರ ನೆನಪು


ಜೊತೆ ನಡೆದಾಗ ಕಿರುಬೆರಳ ಪುಳಕ
ಅರಮನೆಯ ಅಂತರಂಗದಲ್ಲಿ
ಊರ್ಮಿಳೆಯ ನಿಟ್ಟುಸಿರ ಕಾವು
ಕೊನೆಯಿರದ ವನವಾಸದ ನೋವು

ಸುಂದರಿಯರ ಕನಸಲ್ಲಿ ಚಂದಿರ
ಬುದ್ಧ ನಡೆದ ದಾರಿಯಲ್ಲಿ
ಯಶೋಧರೆಯ ಬಿಸಿಯುಸಿರ ತಾಪ
ಮಂಜು ಕವಿದ ಮುಂಜಾವುಗಳ ಶಾಪ


ಶಬರಿಯ ಒಳಗೊಬ್ಬ ರಾಮ
ಪಥದ ಜಾಡಲ್ಲಿ ಶಬರಿಯ ಪ್ರೇಮ
ಕಾಯೋ ಕಾಯಕದಲ್ಲಿ ಕಾಯ ಕರಗಿತು
ಕಾಲದೊಳಗಿಂದ ಕಾದವರ ಹೆಸರುಳಿಯಿತು


* * * * * * *
ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/)


Thursday, 25 July 2013

ಕಾಯ್ವ ಕಾಮನೆಗಳ ಭಾರ

ಕಾವ್ಯ ಲಹರಿ//ರಘುನಂದನ ಕೆ.

ಎದೆಯ ಗಾಜಿನರಮನೆಯಲ್ಲಿ
ಪ್ರತಿಬಿಂಬಗಳ ಸರಿದಾಟ
ಇಲ್ಲದ ಗೆಜ್ಜೆ ಸದ್ದಿನ ಹುಡುಕಾಟ
ರಾಣಿಯಿರದ ಅಂತಃಪುರದಲ್ಲಿ
ವಿರಹದುರಿಯ ಅಂತರಂಗ

ಸ್ವಪ್ನ ಮಹಲಿನ ಬೀದಿಗಳಲ್ಲಿ
ಮೀನ ಹೆಜ್ಜೆಯ ಗುರುತು
ಸರಸರನೆ ಸರಿವ ಚಿತ್ತ ಚಂಚಲ
ಬಿಡದೆ ಕಾಡುವ ಮೇಘ ಮಲ್ಹಾರ
ಕಾಯ್ವ ಕಾಮನೆಗಳ ಭಾರ

ಎಲ್ಲೆಗಳ ಮೀರಿ ನಿಲ್ಲಲು
ಬಿಡದ ಮಲ್ಲೆಗಳ ಕಂಪು
ಕರೆವ ಕೊರಳ ಇಂಪು
ರಾಜ ಬೀದಿಯಲಿ ಸ್ತಬ್ದ ತೇರು
ಹುಚ್ಚು ಸಖಿಯರ ಕಾವಲು

ಕನಸ ಕಿನ್ನರಿಯ ಕಂಗಳ ಕೊಳದಿ
ಮುಳುಗಿ ಸೋಲುವ ಮನಸು
ಕಿರು ನಗೆಯ ತುತ್ತನಿಟ್ಟು
ತುಟಿ ಜಾರೋ ಮುತ್ತ ನುಂಗಲು
ಹಸಿದು ಕಾದಿದೆ ನನಸು

ಎಷ್ಟೊಂದು ಇರುಳು ಎಷ್ಟೆಲ್ಲ ಶಿಶಿರ
ಸುಟ್ಟು ಉರಿದವು ಕಾಲನ ದೀಪದಲ್ಲಿ
ಸ್ವಪ್ನಲೋಕದ ಸುಂದರಿಯರೆಲ್ಲ
ಕನಸಿನರಮನೆಯೊಳಗಿಂದ
ಮನದೊಳಗಣ ಗುಡಿಗೆ ಬಾರದಿರಲು.

 * * * * * * * * * *
 ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/)

Friday, 21 June 2013

ಹೆಸರ ಹಸಿವಿಲ್ಲ ಉಸಿರಿಗೆ..

ದೇವಾಮೃತ ಗಂಗೆ//ರಘುನಂದನ ಕೆ.


ಬೆಳದಿಂಗಳು ಚೆಲ್ಲಿತ್ತು
ಹೂವರಳಿ ನಗುತಿತ್ತು
ಇಬ್ಬನಿಯು ಮುಸುಕಿತ್ತು
ಅಂಗಳದ ತುಂಬ ಸ್ವಪ್ನ ಹಾಸಿತ್ತು
ಬಾಗಿಲಿಲ್ಲದ ಗುಡಿಸಲೆದುರು
ಬಡವನೆಂಬ ಭೇದ ಜಗದೊಳಗೆ
ಯಾವುದೂ ಮಿಗಿಲಲ್ಲ ಆಗಸದ ಕೆಳಗೆ


ಇಲ್ಲೊಂದು ರೂಪ, ಅಲ್ಲೊಂದು ದೀಪ
ಕಣ್ ಕಾಣ್ಕೆ ಚೆಲುವು
ಮನದೊಳಗಿಂದ ಒಲವು
ಶಾಪಗಳ ದಾಟದಿರಲು
ಅನಿಕೇತನದ ಹಸಿವಿಲ್ಲ ಜಗದೆದುರು
ನೋಟಗಳ ಗುಂಗಿಲ್ಲ ರವಿಗೆ
ಗೋಡೆಗಳ ಹಂಗಿಲ್ಲ ಭುವಿಗೆ


ನೀ ಮುಟ್ಟದಿರು, ನೆಲವ ಮೆಟ್ಟದಿರು
ಬಿಟ್ಟೆದ್ದರೂ ಬಿಡದಂತಿರು
ಹೋರಾಡು ಹಾರಾಡು ಹೆಸರಿಗೆ
ಹಣ ಹೊರಳಿ ಹೆಣವುರಳಿ
ಉಸಸಿರಿಲ್ಲ ಕಳೆಬರಗಳ ಸ್ವಪ್ನದಲ್ಲಿ
ಕೆಸರ ಮಸಿಯಿಲ್ಲ ಹಸಿರಿಗೆ
ಹೆಸರ ಹಸಿವಿಲ್ಲ ಉಸಿರಿಗೆ


ಕೈ ಮುಗಿದು ತಲೆಬಾಗಿ
ಶರಣಾಗು ಮರಣವಾಗು
ಒಳಗಿಲ್ಲ ಹೊರಗಿಲ್ಲ 
ಸುತ್ತೆಲ್ಲ ಹುಡುಕಿ ಸತ್ತು ಸಂತನಾಗು
ಊರೊಳಗೊಬ್ಬ ಊರಾಚೆಗೊಬ್ಬ ಜಗದ್ಗುರು
ಧರ್ಮ ಕರ್ಮಗಳ ಬಂಧವಿಲ್ಲ ಭಕ್ತಿಗೆ
ಅಂದ ಚೆಂದಗಳ ಗಂಧವಿಲ್ಲ ಮುಕ್ತಿಗೆ

  * * * * * * * * * *

 ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/)

Friday, 10 May 2013

ಕಪ್ಪು ಚಿತ್ರದೊಳಗೊಂದು ಬೆಳಕು



ದೇವಾಮೃತ ಗಂಗೆ//ರಘುನಂದನ ಕೆ.

1

ಪುಟ್ಟಿಯ ಪುಟಾಣಿ ಕೈಯಲ್ಲಿ
ಜಗವೊಂದು ಸೃಷ್ಠಿಯಾಗುವ ಸೋಜಿಗ
ಖಾಲಿ ಹಾಳೆಯ ಮೇಲೆ
ಎಳೆದ ಗೆರೆಗಳಲ್ಲೀಗ
ಚರಾಚರಗಳ ಸಂಚಾರ



ವಿಶ್ವದ ಬೃಹತ್ ಗೋಳದೊಳಗೆ
ರೇಖೆ ಚುಕ್ಕಿಗಳಾಗಿ ಮನುಷ್ಯರು
ಪುಟ್ಟ ಬೆರಳು ಗೀಚಿದ
ಹಾಳೆ ತುಂಬ ಬ್ರಹ್ಮಾಂಡ ಕನಸು
ನಳನಳಿಸುವ ಪ್ರೇಮ ಸೊಗಸು


ಪೆನ್ಸಿಲ್ ಗೆರೆಯ ಬೂದು ಬಣ್ಣದಲ್ಲಿ
ಪುಟ್ಟಿಯ ರಂಗುರಂಗಿನ ಪ್ರಪಂಚ
ಅಲ್ಲೆಲ್ಲೋ ಅಜ್ಜಿ ಕಥೆಯ ರಾಜಕುಮಾರ
ಕಣ್ರೆಪ್ಪೆಗಳ ಮೇಲೆ ಕನಸ ಚಿತ್ತಾರ
ವಿಶ್ವವೀಗ ಬಣ್ಣಗಳ ರಂಗೀಲಾರೇ...!

2
ಪುಟ್ಟಿ ಬೆಳೆದಂತೆ ವಿಶ್ವ ಚಿಕ್ಕದು
ಕೈಯೊಳಗಿನ ಪೆಪ್ಪರುಮೆಂಟ ಮುತ್ತಿಕ್ಕಲು
ಕಾದು ನಿಂತಿವೆ ಕಣ್ ದಾಹದ 
ಸಾವಿರ ಇರುವೆಗಳ ಸಾಲು;
ಪುಟ್ಟಿಯ ವಿಶ್ವಕ್ಕೀಗ ಬಣ್ಣಗಳಿಲ್ಲ
ಬಿಳಿಯ ಕ್ಯಾನ್ವಾಸ್ ತುಂಬ
ಹರಿದು ತಿನ್ನುವ ಕಪ್ಪು ಮನುಷ್ಯರು


ಪುಟ್ಟಿಯ ಹಸಿ ಮಣ್ಣ ಮನಸೊಳಗೆ
ಪುರುಷ ಲೋಕದ ಕರಾಳ ರೇಖೆ
ಬದುಕ ಚಿತ್ರ ಕಪ್ಪಿಟ್ಟಂತೆ ಕನಸು
ಬೆಚ್ಚಿ ಬೀಳುತ್ತಾಳೆ ಪುಟ್ಟಿ ನನಸಲ್ಲೂ
ಉಸಿರುಗಟ್ಟಿದೆ ನಿಜದ ಭಾರಕ್ಕೆ
ಕಪ್ಪು ಚಿತ್ರದೊಳಗೊಂದು ಬೆಳಕು


ಚಿತ್ರದೊಳಗಾದರೂ ರಚಿಸಬೇಕಿದೆ
ಎದೆಯ ಬೆಳಗೋ ಮಾನವತೆಯ ಗೀತೆಯ
ಮನುಜ ಪ್ರೇಮದ ಮಮತೆಯ
ಶಕ್ತಿ ಬರಲಿ ಪುಟ್ಟಿಯ ಎಳೆಯ ಬೆರಳಲಿ
ಜಗದ ಕೆಸರ ತೊಳೆದು ರಂಗು ತುಂಬಲು
ನವಿರು ಪ್ರೇಮವ ಬೆಳೆಸಲು.

 * * * * * * * * * *

 ಚಿತ್ರಕೃಪೆ : ಅಂತರ್ಜಾಲ/ಅವಧಿ


10.05.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/ )

Thursday, 25 April 2013

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ


ದೇವಾಮೃತ ಗಂಗೆ//ರಘುನಂದನ ಕೆ.


ಕ್ಲಬ್ಬಿನಲಿ ಕವಿದ
ಮಬ್ಬು ಬೆಳಕಿನ ಮುಸುಕಿನಲ್ಲಿ
ಉನ್ಮಾದದ ಝಲಕು
ಮೂಲೆಯಲಿ ಒತ್ತಿ ನಿಂತವರ
ಸುತ್ತ ಸೆಂಟಿನ ಘಾಟು
ಬಣ್ಣ ಬಣ್ಣದ ಶೀಷೆಗಳಲ್ಲಿ
ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ
ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ
ಬೆಳಕೂ ಕಪ್ಪಿಟ್ಟಿದೆ... 


ರಾತ್ರಿ ಪಾಳಿಯ ಬಡ ದೇಹಕ್ಕೂ
ದುಬಾರಿ ಸಿಗರೇಟೇ ಬೇಕು ಸುಡಲು
ನಗರ ವ್ಯಾಮೋಹದ ಕಿಡಿಯಲ್ಲಿ
ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು
ಇಲ್ಲ ಶಹರದಲಿ ತಾರೆಗಳ ಹೊಳಪು
ಇರುಳೆಲ್ಲ ಕೃತಕ ದೀಪಗಳ ಬಿಳುಪು

ನುಗ್ಗಿ ಬರುವ ಪತಂಗಗಳ
ಜೀವ ಭಾವ - ರೆಕ್ಕೆಗೆ ಬೆಂಕಿ,
ಕೆಂಪು ನೋಟೊಳಗೆ ಗಾಂಧಿಯ ನಗು
ಸುತ್ತಮುತ್ತೆಲ್ಲ ಗಾಂಧಾರಿಯ ಮಕ್ಕಳು

                               
ಅರ್ಥ ಮಾಡಿಸ ಹೊರಟ ಬುದ್ಧಿಜೀವಿಗಳ
ಮಾತಲ್ಲಿ ಅಪಾರ್ಥಗಳ ತಳುಕು
ಧರ್ಮ ಕರ್ಮಗಳ ವಿಪರೀತಾರ್ಥದಲ್ಲಿ
ನಶೆಯೇರಿದ ದಾನವತೆಯ ಕೊಳಕು
ಕಣ್ ಕತ್ತಲಿಟ್ಟಿದೆ ನಗರ-ಬೆಳಕು
ಕೊಳೆತ ಮನಸುಗಳ ಘಾಟು ಕಳೆಯಲು
ಶೀಷೆ ತುಂಬಿದ ದ್ರಾವಕಗಳ ಉನ್ಮಾದ
ಮುಖ ನೋಡಲಾರದ ಕಣ್ಗಳಿಗೆ
ಮುಖವಾಡಗಳ ಬಣ್ಣ ವಿಷಾದ...!!


ಚಿತ್ರಕೃಪೆ : ಅಂತರ್ಜಾಲ

 “ಪಂಜು-ಅಂತರ್ಜಾಲ ಸಾಪ್ತಾಹಿಕ” ದಲ್ಲಿ 11.03.2013ರಂದು ಪ್ರಕಟಿಸಲ್ಪಟ್ಟಿದೆ. ಪಂಜುವಿನ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)