ದೇವಾಮೃತ ಗಂಗೆ//ರಘುನಂದನ ಕೆ.

ಬೆಳಕ ಗೋಳದ ಹೊಳಪು
ಅಂಗೈ ತುದಿಯ ಕಿಡಿಯಲ್ಲಿ
ಆಕಾಶ ಬೆಳಗುವ ಥಳುಕು
ಬಡ ಗುಡಿಲಸಲ ಕಂದನಿಗೆ
ಅವಕಾಶವಿಲ್ಲದೆಯೂ ಹಂಬಲ
ಸುಡಲೂ, ಬೆಳಗಲೂ;
ಗುರಿ ತಪ್ಪಿದರೆ ಗುಡಿಸಲೂ
ಬೆಳಕಿನ ಗೋಳ
ಉಳಿವ ಬೂದಿ...!!

ಎಷ್ಟೋ ದಿನಗಳಿಂದ ಕೂಡಿಟ್ಟ
ಕನಸುಗಳ ಲೆಕ್ಕ ಯಾರಿಗಾಗಿ...??
ಒಂದು ದಿನದ ಸಡಗರದಲ್ಲಿ
ಸುಟ್ಟು ಕರಕಲಾಗುವ ದುಡ್ಡು
ಅಜ್ಜ ಹೇಳಿದ್ದ ಮಾತು
ದುಡ್ಡು ಸುಡುವ ಹಬ್ಬವಲ್ಲ ದೀಪಾವಳಿ...!!
ಬದುಕ ಬೆಳಗುವ ಹಬ್ಬ..
ಮಗನ ತಲೆಮಾರಿಗೆ
ಅಜ್ಜನೆಂದರೆ - ಪ್ರಶ್ನಾರ್ಥಕ ಚಿಹ್ನೆ..!
ವೃದ್ಧಾಶ್ರಮದ ಒಣಗಿದ ಎಲೆ...!!

ಕೈ ಚಾಚಿ ಹ್ಮಾಂ ಹಾಗೇ...
ದೂರ ಕೂತು ಹಚ್ಚಿದ್ದು ಪಟಾಕಿ
ದಿಡೀರ್ ಬೆಳಕೇ ಬೇಕು ಎಲ್ಲರಿಗೂ
ಓಡುವ ತಲೆಮಾರು..!!
ಒಂದು ದಿನದ ಬೆಳಕಿಗೆ
ಕಣ್ಣ ದೀಪ ಆರಿ
ಬದುಕೀಗ ಗಾಢಾಂಧಕಾರ..!!
ದೇಹ ದೀಪ ಜ್ವಾಲೆ
ಉರಿವ ಸೂರ್ಯ ಬೆಳಕ ಚೆಲ್ಲುವ
ಸೋಜಿಗದ ಅರಿವು ;
ತಾರಾ ನಿಹಾರಿಕೆಗಳ ಸಿಡಿತ
ಬ್ರಹ್ಮಾಂಡವರಳಿಸಿದ ಬೆಳಕು ;
ಅಂತರಂಗದಲ್ಲಿ ಹಣತೆ ಹಚ್ಚಲು ಮರೆತು
ಕಳೆದಿದ್ದು ಶತಮಾನ... ಸಹಸ್ರಮಾನ...!!
ಸುಟ್ಟ ದೇಹಗಳ ಕರಕಲು ನಾಥ
ಬೀದಿ ತುಂಬ ಹರಡಿಬಿದ್ದ
ದೀಪಾವಳಿಯ ಅವಶೇಷ
ಪೌರ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ
ಮುಗಿದ ದೀಪಾವಳಿ-ದಿವಾಳಿ..!
ಹಚ್ಚಿಟ್ಟ ಹಣತೆ
ಬದುಕಿಗೂ-ಸಾವಿಗೂ ಸೂಚಕ
ಮುಗಿದ ದೀಪಾವಳಿಯ ಸೂತಕ...!!
ದಿನಾಂಕ:06.12.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/?p=70306