ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday 23 August 2012

ಕಾಡುವ ಕಾಡಲ್ಲಿ ಮಳೆಯ ಹಾಡು…


ನಿಜಘನ ಮಕರಂದ//ರಘುನಂದನ ಕೆ.

ಮಳೆ ನಾಡಲ್ಲಿ ಸುರಿದ ಮಳೆಯ ಚಿತ್ರಗಳ ತಂಪು
 ತೊಟ್ಟಿಕ್ಕುತ್ತಿದೆ ನೆನಪುಗಳ ರೂಪ ತಾಳಿ

ಛೆ, ಷಹರದಲ್ಲಿ ಮಳೆಯ ಸುಳಿವೇ ಇಲ್ಲ. ಮಲೆನಾಡ ನನಗೆ ಮಳೆಯಿಲ್ಲದ ಮಳೆಗಾಲವೆಂದರೆ ಬೇಜಾರು. ಒಮ್ಮೆ ನಗರದಲ್ಲಿ ಮಳೆ ಬಂದರೂ ಜರ್ರಂತ ಸುರಿದು ಪುರ್ರಂತ ಹಾರಿ ಹೋಗುತ್ತದೆ. ಇಲ್ಲಿನ ಜನರ ಪ್ರೀತಿಯಂತೆ. ಇಲ್ಲಿ ಮನಸೋ ಇಚ್ಛೆ ಮಳೆ ನೀರ ಪುಳಕವೂ ಇಲ್ಲ, ಕಪ್ಪೆಗಳ ಗುಟುರೂ ಇಲ್ಲಮಳೆಯೊಳಗೆ ಇಳಿದು ನೆನೆಯುವುದಕ್ಕಾಗಿ, ಮನಸೊಳಗೆ ಮಳೆ ಹನಿಗಳ ತುಂಬಿಕೊಳ್ಳುವ ದಾಹಕ್ಕಾಗಿ, ಮಳೆಯ ಪ್ರೇಮಧಾರೆಯಲ್ಲಿ ತೋಯ್ದು ಹರ್ಷದಿಂದ ಕಂಗೊಳಿಸುವ ನಿಸರ್ಗದ ಸೊಬಗ ಸವಿಯುವ ಮೋಹಕ್ಕಾಗಿ, ನೆನೆದ ಮಣ್ಣ ಮೋಹದಲ್ಲಿ ಆಟವಾಡುವ ಸಂಭ್ರಮಕ್ಕಾಗಿ, ಉಂಬಳವೆಂಬ ಜೀವಿಯ ತುಟಿಯ ಪುಳಕಕ್ಕೆ ರಕ್ತ ಸುರಿಸುವ ಸುಖಕ್ಕಾಗಿಪಯಣಿಸುವ ಖುಷಿಯ ಆಯ್ಕೆ ದಾಂಡೇಲಿ ಸಮೀಪದ ಗುಂದಾ. ಇಲ್ಲಿ ಸ್ವಚ್ಛಂದ ಹಸಿರಿನ ನಡುವೆ ಅಷ್ಟೇ ಸ್ವಚ್ಛ ಮನಸ್ಸಿನ ಮೊಗೆ ಮೊಗೆದು ಪ್ರೀತಿ ಕೊಡುವ ಮಾನವ ಜೀವಿಗಳಿದ್ದಾರೆಂದು ಗೊತ್ತೇ ಇರಲಿಲ್ಲ ಇದುವರೆಗೆ. ನನ್ನಂತೆ ಮಳೆಗೆ ದಾಹಗೊಂಡು ಸೆಟೆದು ಕಾಯ್ದು ಬಿದ್ದಿದ್ದ ಉಂಬಳದಂತಹ ಗೆಳೆಯರೊಂದಿಗೆ ನಡೆದದ್ದು ದಾಂಡೇಲಿಯ ಕಾಡಿನೆಡೆಗೆಅಲ್ಲಿ ಸುರಿದ ಮಳೆ ಹನಿಗಳೊಂದಿಗಿನ ಕ್ಷಣಗಳ ಸ್ಮೃತಿ ಚಿತ್ರಗಳ ಅಕ್ಷರದಲ್ಲಿ ಹಿಡಿದಿಡುವ ಬಯಕೆಯೊಂದಿಗೆ ಇಲ್ಲಿ ನಾನು ನಿಮ್ಮೆದುರು

* * * * * * * * *

ಅಂಗಳದಿಂದ ಹತ್ತು ಮೆಟ್ಟಿಲೆತ್ತರದ ಮನೆ,
ಮನೆ ಮಾಡಿಗೆ ಜೋತು ಬಿದ್ದ
ಕರೆಂಟಿಲ್ಲದ ಮಸಿ ಹಿಡಿದ ವಾಯರ್ ಗಳು,
ಅವುಗಳಿಗೆ ಬೆಸೆದ ಜೇಡ ನಿವಾಸ,
ಅದರ ಕೆಳಗೆ ಬದುಕುವ ಪ್ರೀತಿ ತುಂಬಿದ ಮಂದಿ,
ಒಳಗೆ ಮಂತ್ರೋಚ್ಛಾರದ ರಿಂಗಣ,
ಮನಸ್ಸು ಮಳೆ ಸುರಿವ ತೆರೆದ ಪ್ರಾಂಗಣ,
ಹಂಚಿಕೊಂಡ ಕ್ಷಣಗಳಿಗೆ ಮಾತು ನಗುವಿನ ಮದರಂಗಿ,
ಬೀಳ್ಕೊಡುಗೆಗೆ ಕಣ್ಣ ಹನಿಯ ಅಭಿಷೇಕ,
ಮಳೆ ಹನಿಗೆ ಅಪ್ಪುವ ಪುಳಕ,
ದೊಡ್ಡ ಅಂಗಳದಲ್ಲಿ ಹರಡಿಬಿದ್ದ ಹೆಜ್ಜೆ ಗುರುತು,
ಅರಳಿ ನಿಂತ ದಾಸವಾಳದ ಹಾಡು,
ಅಂಗಳದಂಚಿನ ತುಳಸಿಯೆದುರು ಕೆಂಬಣ್ಣದ ನೀರು,
ಹೆಜ್ಜೆ ಇಟ್ಟರೆ ಜಾರುವ ಕಾಲು,
ಬಿದ್ದರೆ ಮೋಡ ನಗುತ್ತದೆ,
ನೀರು ತೂಗುತ್ತದೆ

(ಒಂದರ ಕೆಳಗೊಂದು ಬರೆದರೆ ಕವನ, ಒಂದರ ಪಕ್ಕ ಇನ್ನೊಂದು ಜೋಡಿಸಿದರೆ ಲೇಖನ, ಅರ್ಥವೇ ಆಗದ ಸಾಹಿತ್ಯ ಪ್ರಕಾರ)

 * * * * * * * * *

 ಕಾಡೊಳಗಿನ ಅರಮನೆಯಂತ ಗೂಡಿಂದ ಮತ್ತೆ ಕಾಡೊಳಗೆ ನಡೆಯುವ ಆಟ, ಗದ್ದೆಯಾಚೆಗಿನ ಶಿವ ಮಂದಿರದಲ್ಲಿ ಘಂಟಾ ನಾದ, ನಡೆವ ದಾರಿಯಲಿ ಸಂಕ ದಾಟುವ ಮೋದ, ಮೊಳಕಾಲವರೆಗೆ ಹುಗಿವ ಗದ್ದೆಯ ರಾಡಿಯಲ್ಲಿ ಹೆಜ್ಜೆ ಹುಡುಕಬೇಕು, ಕಾಲೆತ್ತಿ ತಲೆವರೆಗೆ ಮಣ್ಣ ಸಿಡಿಸಿ ಓಡಬೇಕು, ನಾ ಮೊದಲೋ ನೀ ಮೊದಲೋ ಓಡಿ ಕೂಗಬೇಕುದಾರಿಗಡ್ಡ ಬಿದ್ದ ಮರಗಳ ಹಾರುತ್ತ ನಡೆಯಬೇಕು ಕಾಡುವ ಕಾಡ ಕಾಣಲು, ಜಿಟಿ ಜಿಟಿ ಹನಿವ ಮಳೆ, ಪಿಚಿ ಪಿಚಿ ರಾಡಿಯ ದಾರಿ, ಹೆಜ್ಜೆಗೊಂದು ಉಂಬಳ ತಲೆಯೆತ್ತಿ ಸ್ವಾಗತ ಕೋರಿ ಕಾಲೇರುತ್ತದೆ, ಮರೆತರೆ ತಲೆವರೆಗೂ ಸಾಗುತ್ತದೆ ಸರಾಗವಾಗಿ ಸದ್ದಿಲ್ಲದೆ, ಬಿಡದೆ ಸುರಿವ ವರ್ಷಧಾರೆಯಲ್ಲಿ ತೋಯ್ದು ಮೈ ಮನಸೆಲ್ಲ ಕರಗಿ ಹಗುರಾಗಿ ಸ್ವಚ್ಛ ಸ್ವಚ್ಛಮಳೆ ನೀರ ಹಾಡಿಗೆ ಮನಸು ಕುಣಿಯಬೇಕು, ಹೃದಯ ಮೀಯಬೇಕು

ಕಾಡೊಳಗೊಂದು ಸೂರು, ಮೈ ಉರಿಸುವ ನೊರಜುಗಳ ಓಡಿಸಲು ಅಡಿಕೆ ಸಿಪ್ಪೆಯ ಹೊಗೆ ಹಾಕಿ ಕೆಮ್ಮಿದ್ದು ನಾವು, ಒಂದಿಷ್ಟು ಆಟ, ನೆನೆದ ಮನಸುಗಳ ಸೊಗಸುಗಾರಿಕೆಯ ಮಾಟ, ಯಕ್ಷಗಾನದ ಕುಣಿತ, ಗೆಜ್ಜೆ ಕಾಲ್ಗಳ ನೆಗೆತ.. ಬಾಲ್ಯ ಮರುಕಳಿಸಿದಂತೆ, ಕಾಡ ಹಸಿರು ಜೊತೆ ಸೇರಿ ಹಾಡಿದಂತೆ, ಹಸಿದ ಹೊಟ್ಟೆಗೆ ಹೊತ್ತು ನಡೆದಿದ್ದ ಆಹಾರಗಳ ಉಪಚಾರ, ಚಕ್ಕುಲಿಯ ಮುರಿತಕ್ಕೆ ಹಲ್ಲುಗಳ ಕೆನೆತ, ತಿಂದುಂಡು ಕುಣಿದಾಡಿ ತೋಯ್ದು ಮುದ್ದೆಯಾಗಿ ಒದ್ದೆಯಾಗಿ ಮರಳಿ ಗೂಡು ಸೇರಿದಾಗ ಕಾಡು ಕತ್ತಲ ಸೆರಗೊಳಗೆ

ರಾತ್ರಿಯೆಲ್ಲ ಮಳೆಯ ಜೋಗುಳ ಕೇಳಿ ಅದೆಷ್ಟು ಯುಗ ಸಂದಿತ್ತೋಕಪ್ಪೆಗಳ ವಟರ್ ಗುಟರ್ ನಾದ, ಬೀಸುವ ಗಾಳಿಯ ಮೋದ, ಎಲ್ಲೊ ಮುರಿದು ಬಿದ್ದ ಟೊಂಗೆಯ ಸದ್ದು, ತುಂಬಿ ಹರಿವ ನೀರ ಜುಳು ಜುಳು, ಛಳಿಯ ಚಾದರ ಹೊದ್ದು ನಡಗುವ ಮೈಗೆ ಹಂಡೆ ತುಂಬಿದ ಬಿಸಿ ನೀರ ಜಳಕದ ಪುಳಕ, ಬಚ್ಚಲೊಲೆಯ ಬೆಂಕಿಯೆದುರು ಸುಡುವ ಮೊಣಕಾಲ ಮುಚ್ಚಿ ಉರಿಯ ಸುಖಿಸುವ ಬಯಕೆ, ಬಚ್ಚಲೊಳಗೆ ಕಣ್ಣುರಿದಿದ್ದು ಸಾಬೂನು ನೊರೆಯಿಂದಲಾ, ಹೊಗೆಯಿಂದಲಾ…?? ಅಲ್ಲೆಲ್ಲೊ ಮೂಲೆಯಲ್ಲಿ ಬಿದ್ದಿದ್ದ ಗೇರು ಬೀಜಗಳ ಚೀಲ ಹೊರಬಂತು ಈಗ, ಯಾವುದೋ ತಗಡಿನ ಮುಚ್ಚಳಕ್ಕೆ ತೂತು ಹೊಡೆದು ಗೇರು ಬೀಜ ಸುಡಬೇಕು, ಅದರ ಘಮಕ್ಕೆ ಮೂಗರಳಿಸಿ ಸುಖಿಸಬೇಕು, ಸಿಡಿವ ಸದ್ದಿಗೆ ಬೆಚ್ಚಿ ಹಾರಬೇಕು, ಕೈಯೆಲ್ಲ ಮಸಿಯಾಗಿಸಿಕೊಂಡು ಕಲ್ಲುಗುಂಡಿನಲ್ಲಿ ಒಡೆದು ಬೆಚ್ಚಗಿನ ಗೇರುಬೀಜವ ಬಾಯಿಗಿಟ್ಟರೆ ಆಹಾಸೊನೆ ತಾಕಿದ ತುಟಿಗಳಿಗೆ ತಿಂದ ಬೀಜದ ಮಧುರ ವಿರಹ
 
ಕರೆಂಟಿಲ್ಲದ ಮಳೆಗಾಲದ ರಾತ್ರಿಗಳು, ಎಲ್ಲ ಚಿಮಣಿಗಳಿಗೆ ಎಣ್ಣೆ ತುಂಬಾಗಿದೆ, ಚಿಮಣಿಯ ಕೆಂಪು ಬೆಳಕಲ್ಲಿ ಕತ್ತಲು ಕರಗುತ್ತದೆ, ನೆಂಟರು ಬಂದಾಗ ಹಚ್ಚಲೆಂದು ಇಟ್ಟಿದ್ದ ಗ್ಯಾಸ್ ದೀಪದ ಬಲೂನು ಉದುರಿದೆ, ಹೊಸತ ಹುಡುಕಿ ಕಟ್ಟಲಾಗಿದೆ ಈಗ ಹರಸಾಹಸಪಟ್ಟು, ತಂಡಿ ಹಿಡಿದ ಬೆಂಕಿ ಪೆಟ್ಟಿಗೆಯ ಎಲ್ಲ ಕಡ್ಡಿಗಳ ಕಡಿದು ಅಂತೂ ಹಚ್ಚಿದಂತಾಯಿತು ಬೆಳಕ, ಆದರೆ ಪಂಪು ಹೊಡೆದರಷ್ಟೆ ಅದಕ್ಕೆ ಬೆಳಕು, ಬಿಟ್ಟರೆ ಉರಿಯೆನೆನ್ನುವ ಹಠ ಅದಕ್ಕೂ

ಎಷ್ಟಂತ ಬರೆಯಲಿ ಸುಖದ ಕ್ಷಣಗಳ ತುಣುಕುಗಳ, ಕಾಲನ ಕನವರಿಕೆಗಳ ಹಿಡಿಯಲು ಅಕ್ಷರ ಸೋಲುತ್ತದೆಮಲೆನಾಡಿನ ಧೋ ಮಳೆ, ಎಲ್ಲೆಲ್ಲೂ ಹರಿವ ಜೀವ ಜಲ, ರಾಡಿ ಗದ್ದೆಯ ಹೊರಳಾಟ, ಕಂಬಳಿ ಕೊಪ್ಪೆ ತೊಟ್ಟು ನೆಟ್ಟಿ ಹಾಕುವ ಮಂದಿ, ತುಂಬಿ ತುಳಕುವ ಝರಿ ತೊರೆ ಒರತೆಗಳ ಗರ್ಭ, ಕಾಡುವ ಕಾಡು ಹಾಡುವ ಹಕ್ಕಿ, ಹಲಸಿನ ಕಾಯಿಯ ಹುಳಿ, ದಾಸವಾಳದ ಅಂದ ಕಾಡ ಕುಸುಮದ ಗಂಧಊರೊಳಗಿನ ಮನೆ ಮನಗಳಲ್ಲಿ ಕಲರವ ಹರಡಿದ್ದು, ಜೋಕಾಲಿಯಲ್ಲಿ ಕುಳಿತು ನೆನಪುಗಳ ತೂಗಿದ್ದು, ಕತ್ತಲ ಗೂಡುನಲ್ಲಿನ ಡಬ್ಬಿಗಳ ಹುಡುಕಿ ಹಪ್ಪಳ ಸಂಡಿಗೆಗಳ ಕುರುಂ ಕುರುಂ ಸದ್ದು ಮಾಡುತ್ತ ಖಾಲಿ ಮಾಡಿದ್ದು, ಹೊಡತ್ಲು ಒಟ್ಟಿ ಬೆಚ್ಚಗೆ ಕುಳಿತು ಹರಟೆ ಹೊಡೆದಿದ್ದು, ಸಿಕ್ಕಾಪಟ್ಟೆ ಮಳೆಯಲ್ಲಿ ಬೈಕಿನಲ್ಲಿ ಕುಳಿತು ಛಳಿಯಾಗಿ ಕಂಪಿಸಿದ್ದು, ಜೊತೆ ನಿಂತು ಕ್ಯಾಮರಾದೊಳಗೆ ಬಂಧಿಯಾಗಿ ಚಿತ್ರವಾದದ್ದು, ತೋಟ ತಿರುಗಿ ಮನಸ್ಸು ಮೌನವಾಗಿ ಕಾಡಿದ್ದು, ಎರಡು ದಿನಗಳಲ್ಲಿ 25 ಕಿಲೊಮೀಟರ್ ಗೂ ಹೆಚ್ಚು ನಡೆದು ಪದ ಹೇಳುವ ಕಾಲ್ಗಳಿಗೆ ಸಾಂತ್ವನಿಸಿದ್ದು, ಉಂಬಳಗಳ ಕಿತ್ತು ಉಂಡೆ ಕಟ್ಟಿ ಎಸೆದಿದ್ದು, ಕಾಳಿ ನದಿಯ ಅಗಾಧತೆಯೆದುರು ಹಗ್ಗ ಜಗ್ಗಿ ದಡಗಳ ಬೆಸೆವ ತೆಪ್ಪದೊಳಗೆ ಕುಳಿತಿದ್ದು, ಹರಿವ ತೊರೆ ಝರಿಗಳಲ್ಲಿ ಆಟವಾಡಿದ್ದು
 
ಮುಖವಾಡಗಳಿಲ್ಲದ ಮನುಷ್ಯರ ನಿರ್ಮಲ ಪ್ರೀತಿ, ಅಕ್ಕರೆಗಳ, ಬೀಳ್ಕೊಡುಗೆಯ ಕಣ್ಣ ಬಿಂದುಗಳ ಭಾವಗಳಿಗೆ ಅಕ್ಷರಗಳ ಚೌಕಟ್ಟು ಬೇಕೇ..?? ಮಲೆನಾಡ ಮಳೆ ಸದಾ ಸುರಿಯುತ್ತಿರಲಿ ಹೀಗೆ ನಿರಂತರ, ಬತ್ತದಿರಲಿ ಸಹಜ ಪ್ರೇಮದ ಒರತೆ

ಬರೆದು ಮುಗಿಸಲಾಗದು ಅನುಭಾವದ ಸೊಗಸು, ಹಂಚಿಕೊಳ್ಳುವ ಖುಷಿಗೆ ಇಷ್ಟು ಸಾಕು

 * * * * * * * * *

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ   http://samudrateera.wordpress.com/   ಗೆ ಭೇಟಿ ನೀಡಿ)

ಪಯಣಗಳ ಜೊತೆಗಾರ ಮಿತ್ರನ ಬ್ಲಾಗ್  http://bhaavagalagonchalu.blogspot.in/2012/08/blog-post_16.html ನಲ್ಲಿ ದಾಂಡೇಲಿಯ ಸುಖದ ಕ್ಷಣಗಳ ಚಿತ್ರಗಳಿವೆ, ಒಮ್ಮೆ ವಿಹರಿಸಿ




Wednesday 1 August 2012


ಪ್ರೀತಿಯೆಂದರೆ...
ದೇವಾಮೃತ ಗಂಗೆ//ರಘುನಂದನ ಕೆ.

ಪ್ರೀತಿ ಬರಿಯ ಆಕರ್ಷಣೆಯಲ್ಲ
ಅದುವೆ ಮಾತೆಯ ಮಮತೆ
ಪ್ರೀತಿ ಸತಿಯ ಒಲವೊಂದೆ ಅಲ್ಲ
ಇದುವೆ ವ್ಯಥೆಯ ಮರೆಸುವ ಕಥೆ

ಪ್ರೀತಿ ಅಮವಾಸ್ಯೆಯ ಕತ್ತಲಲ್ಲ
ಇದು ಚಂದ್ರಮನ ಬೆಳದಿಂಗಳು
ಪ್ರೀತಿ ಮೊದಲ ಮಳೆಯ ರಾಡಿಯಲ್ಲ
ಇದು ನೆನೆದ ಬುವಿಯ ಮಣ್ಣ ಬಿಸುಪು


ಪ್ರೀತಿ ಮಂತ್ರವೇ ಶಾಂತಿ ಸೂತ್ರ
ಅಧಿಕವು ಸುಖದಲ್ಲಿ ಇದರ ಪಾತ್ರ
ಪ್ರೀತಿಯಿಂದಲೇ ಶಿಲೆಯಾಗುವುದು ಮೂರ್ತಿ
ಅನಂತ ಶಕ್ತಿಗೂ ಪ್ರೀತಿಯೇ ಸ್ಪೂರ್ತಿ

ಪ್ರೀತಿ ವಿಧವೆಯ ನೋವಿನ ಅಲೆ
ಇದು ಎದೆಯೊಳಗಿನ ಕಾವು
ಪ್ರೀತಿ ಗಡಿಯಲ್ಲಿನ ಗುಂಡಿನ ಸದ್ದಲ್ಲ
ಇದುವೆ ಸೈನಿಕನ ಗುಂಡಿಗೆಯ ಸೆಳವು


ಪ್ರೀತಿ - ಮನಸುಗಳ ಸಂಗಮ
ಪ್ರೀತಿ - ಕನಸುಗಳ ಆಲಿಂಗನ
ಪ್ರೀತಿ - ಮಗುವಿನೊಳಗಿನ ಸಂಭ್ರಮ
ಪ್ರೀತಿ - ದುಃಖ ತಣಿಸುವ ಸಾಂತ್ವನ

ಪ್ರೀತಿ ಚರಿತ್ರೆಯ ಕಥೆಯೊಂದೇ ಅಲ್ಲ
ಇದುವೆ ಮನದೊಳಗಿನ ಕವಿತೆ
ಪ್ರೀತಿ ಬರಿಯ ಆಕರ್ಷಣೆಯಲ್ಲ
 ಅದುವೆ ಮಾತೆಯ ಮಮತೆ


* * * * * * * *

2003ರಲ್ಲಿ ಹೀಗೊಂದು ಕವನ ಬರೆವಾಗ ಮನದಲ್ಲಿ ಏನು ನಡೆದಿತ್ತು, ನೆನಪಿನಲ್ಲಿ ಇಲ್ಲ. ಬರೆದಿಟ್ಟ ಕವನಗಳಿಗೆ ಅಭಿವ್ಯಕ್ತಿಯ ಮಾಧ್ಯಮ ಸಿಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಮಳೆ ಕಾಡುಗಳ ಹಳ್ಳಿಯ ಕತ್ತಲೆಯ ಏಕಾಂತದಲ್ಲಿ ಸ್ವಚ್ಛ ಆಕಾಶ ನೋಡುತ್ತ ಕುಳಿತವನಿಗೆ ಅಭಿವ್ಯಕ್ತಿಯ ಬಯಕೆಗಳೂ ಇರಲಿಲ್ಲ. ಈಗ ನನ್ನದೆನ್ನುವ ಖಾಸಗಿ ಡೈರಿ - ಅಂತರ್ಜಾಲದ ಪುಟಗಳೆದುರು ಹಳೆಯ ಕವನಗಳಿಗೂ ರೆಕ್ಕೆ ಬಂದಿವೆ, ಒಂದೊಂದಾಗಿ ತಾ ಮುಂದು ಎನ್ನುತ್ತ ಹಾರುತ್ತಿವೆ. ಆಗಾಗ್ಗ ಒಂದಿಷ್ಟು ನಿಮ್ಮೆದುರು ಹಾರಾಡಿಯಾವು, ಚೆನ್ನವಿದ್ದರೆ ತಿಳಿಸಿ ಖುಷಿಯಾದೇನು, ಚೆನ್ನವಿಲ್ಲವೆಂದೆನಿಸಿದರೆ ಬೆಳೆಸಿ ಗೆಲುವಾದೇನು.

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/   ಗೆ ಭೇಟಿ ನೀಡಿ)