ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday 23 August 2013

ಪಥದ ಜಾಡಲ್ಲಿ ಕಾದವರ ಉಸಿರು

ಕಾವ್ಯ ಲಹರಿ//ರಘುನಂದನ ಕೆ.

ಕವನವಾಗಬೇಕೆಂದು ಕನವರಿಸಿ ಕವನವಾಗದೇ ಉಳಿದರೂ
ಕವನದಂತೆ ಕಾಣಿಸಿಕೊಳ್ಳುವ ಸಾಲುಗಳು ಹೀಗೆಲ್ಲಾ ಬರೆಯಲ್ಪಟ್ಟಾಗ

* * * * * * *
ಭೋರೆಂದು ಸುರಿದರೂ ಮೀರದಾ ಕಡಲು
ಕಲ್ಲಾಗಿ ಕುಳಿತ ಬದುಕಲ್ಲಿ
ಅಹಲ್ಯೆಯ ಕನಸ ಪಳೆಯುಳಿಕೆ
ಇಂದ್ರಛಾಪದ ಕನವರಿಕೆ


ಹುಟ್ಟರಿಯದ ಬದುಕು ಬಯಲು
ತನ್ನದಲ್ಲದ ಶಪಥಗಳಲ್ಲಿ
ಕರಗಿದ ಕರ್ಣ ಕುಂಡಲ ಹೊಳಪು
ಅಳಿದು ಹೋದವರ ನೆನಪು


ಜೊತೆ ನಡೆದಾಗ ಕಿರುಬೆರಳ ಪುಳಕ
ಅರಮನೆಯ ಅಂತರಂಗದಲ್ಲಿ
ಊರ್ಮಿಳೆಯ ನಿಟ್ಟುಸಿರ ಕಾವು
ಕೊನೆಯಿರದ ವನವಾಸದ ನೋವು

ಸುಂದರಿಯರ ಕನಸಲ್ಲಿ ಚಂದಿರ
ಬುದ್ಧ ನಡೆದ ದಾರಿಯಲ್ಲಿ
ಯಶೋಧರೆಯ ಬಿಸಿಯುಸಿರ ತಾಪ
ಮಂಜು ಕವಿದ ಮುಂಜಾವುಗಳ ಶಾಪ


ಶಬರಿಯ ಒಳಗೊಬ್ಬ ರಾಮ
ಪಥದ ಜಾಡಲ್ಲಿ ಶಬರಿಯ ಪ್ರೇಮ
ಕಾಯೋ ಕಾಯಕದಲ್ಲಿ ಕಾಯ ಕರಗಿತು
ಕಾಲದೊಳಗಿಂದ ಕಾದವರ ಹೆಸರುಳಿಯಿತು


* * * * * * *
ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ http://samudrateera.wordpress.com/)