ಮೋಹಮತಿ ಕಥಾಮುಖಿ//ರಘುನಂದನ ಕೆ.

ಅನಂತ ನೀಲ ಅಂತರಿಕ್ಷದ ಸಾಗರ, ತೇಲಿ ಗಿರ ಗಿರ ಸುತ್ತುವ ಭೂಮಿಯ ಲೋಕದಾಚೆ ಹರಡಿಬಿದ್ದ ನಕ್ಷತ್ರಗಳ ಉಂಡೆ, ಚಿಮ್ಮಿ ಒಂದರೊಳಗೊಂದು ಬೆರೆತ ಬೆಳಕ ಕಿರಣ, ದೃಕ್ಪಥದಾಚೆ ಕ್ಷೀರಪಥದ ದಾರಿಯಲಿ - ಬೆಳಕ ಲಂಗ ಧರಿಸಿ ಆಟವಾಡುವ ಕಿನ್ನರಿ…
ಅಂತರಂಗದಾಚೆಯೊಂದು ಅಂತರಿಕ್ಷ. ಅಲ್ಲೊಂದಿಷ್ಟು ನಕ್ಷತ್ರಗಳ ಗುಂಪು. ಅವುಗಳ ಜೊತೆ ಮುದ್ದು ರಾಜಕುಮಾರಿಯಂತ ಪುಟಾಣಿಮರಿಯ ಆಟ. ನಕ್ಷತ್ರ ಚಿಮ್ಮುವ ಕಿರಣಗಳ ಜೋಡಿಸಿ ಕಿರೀಟ ಮಾಡುವ ಆಟ. ಸುತ್ತುಗಟ್ಟಿದ ಕಿರಣಗಳ ಸಾಲು. ಕಣ್ಣಾ ಮುಚ್ಚಾಲೆ ಆಡೋ ತಾರೆಗಳ ಮೋಜು.

ಪುಟಾಣಿ ಮರಿಯ ನೋವ ಕಂಡು ದೂರ ದೂರ ನಕ್ಷತ್ರ ಲೋಕದ ತೀರದಿಂದ ಮುದ್ದು ಮುಖದ ಜೀವಮಾತೆ ತಾರಾ ಕುವರಿ ಬಂದಳು. ಸುಂದರ ಗುಂಗುರು ಕೂದಲ ಮೇಲೊಂದು ನಕ್ಷತ್ರ ಸಿಂಗರಿಸಿದ ಹೊಳೆವ ಕಿರೀಟ, ನೀಲ ಕಣ್ಣ ಹೊಳಪು, ಮಂದಹಾಸದ ಸೊಗಸು… ಪುಟಾಣಿ ಎದುರಲ್ಲಿ ನಿಂತು ತಲೆ ನೇವರಿಸಿ ಮಧುರ ಪಾರಿಜಾತದ ಪರಿಮಳವ ಚೆಲ್ಲಿ, ಏನಾಯ್ತು ಪುಟ್ಟಾ ಎಂದಳು.
ಪುಟ್ಟ ಮರಿಯ ಕಂಗಳಲ್ಲಿ ಅಚ್ಚರಿಗಳ ದೀಪ, ಎದುರು ನಿಂತ ಸೊಗಸು ಕಿನ್ನರಿಯ ರೂಪ, ಯಾರಿರಬಹುದು ತೇಲುತ್ತ ಬಂದ ಗುಲಾಬಿ ಪಾದದ ಬಾಲೆ, ಅಣ್ಣನ ಕಥೆಯ ದೇವತೆನಾ ಅಂತ ಅನುಮಾನ…?
ಯಾರು ನೀನು, ದೇವತೆಯಾ ಕಿನ್ನರಿಯಾ – ಕೆಳಿದ್ದು ಪುಟಾಣಿ ಮರಿ
ನಾನು ನಕ್ಷತ್ರದೊಳಗಿಂದ ಬಂದ ಮಂಜಿನ ಬಾಲೆ, ಕಿರಣದ ಲೀಲೆ, ಅದ್ಸರಿ, ನೀನ್ಯಾರು ಮರಿ, ನಿನ್ನ ಕಂಗಳಲ್ಯಾಕೆ ಮೋಡ ಮುಸುಕಿದೆ, ಇಲ್ಲಿಗ್ಯಾಕೆ ಬಂದೆ? – ಕೇಳಿದ್ದು ಕಿನ್ನರಿ
ಆಗ, ಪುಟಾಣಿ ಮರಿ ಆ ಬಾಲೆಯ ಪುಟ್ಟ ಪುಟ್ಟ ಕೈ ಬೆರಳ ಹಿಡಿಯುತ್ತ ಹೆಳಿದ್ದು – ತಾರೆಗಳ ಲೋಕದಿಂದ ನಿಂಗೆ ತೇರನ್ನೆಳೆದು ತರುವೆ ಎಂದ ಅಣ್ಣ, ತಂದಿದ್ದು ಬೆಳಕ ದಾರದೆಳೆಗಳನ್ನ, ಅಂದಿದ್ದು – ನೀ ಹಿಡಿಯಬೇಕೀಗ ನಾ ತಂದ ಬೆಳಕ ಮಿಂಚ, ಹಿಡಿದು ಕಿರೀಟವಾಗಸ್ತೀಯಾ ಕೊಂಚ..
ಓಹೋ, ನೀ ಬೆಳಕ ಕಿರೀಟ ಮಾಡ ಬಂದ ಪುಟಾಣಿಯಾ, ನಿನ್ನಣ್ಣ ಕಾಮನಬಿಲ್ಲ ತಗೊಂಡು ಹೋದವನಾ, ಸೂರ್ಯನ್ನ ಗೆದ್ದವನಾ ಅಂತು ದೇವತೆ.
ಹ್ಞೂಂ ಹೌದು, ಅದಿರಲಿ ಅತ್ತ, ಇಲ್ಲಿ ನೋಡು, ಬೆಳಕ ರೇಖೆಗಳೆಲ್ಲ ಸಿಕ್ಕು ಸಿಕ್ಕಾಗಿ ಬಿಟ್ಟಿವೆ. ಬಿಡಿಸಲಾಗದು, ನೇಯಲಾಗದು, ಸುತ್ತಿ ಸುತ್ತಿ ನನ್ನ ಮುತ್ತಿದೆ, ನಂಗೆ ಅಳು ಬರ್ತಿದೆ, ಭೂಮಿಗೆ ಹೋಗೋಣಾ ಅನ್ನಿಸ್ತಿದೆ, ಏನ್ಮಾಡ್ಲಿ..??
ಏನ್ಮಾಡೋದು ಅಂತ ಅಣ್ಣ ಹೇಳಿಲ್ವಾ ಪುಟ್ಟಾ ನಿಂಗೆ..?
ಹ್ಞೂಂ ಅಣ್ಣ ಹೇಳಿದ್ದ, ನಿಂಗೆ ಸಾಕಾಗಿ ನೀ ಸೋತು ಕುಳಿತಾಗ ಕಣ್ಣಿಂದ ಜಿಟಿ ಜಿಟಿ ಮಳೆ ಸುರಿವ ವೇಳೆಯಲಿ, ಏಳು ಸಮುದ್ರ ದಾಟಿ ದೇವ ಮಾನವರು ಬರ್ತಾರೆ, ಕೆದರಿದ ನಿನ್ನ ಕೂದಲ ಬಾಚಿ ತಾರೆಗಳ ಮಾಲೆ ಮುಡಿಸ್ತಾರೆ, ಬೆಳಕ ಗೋಳವ ಲಾಲಿಸಿ ಕಿರೀಟ ಮಾಡಿ ತಲೆ ಮೇಲೆ ಇಡ್ತಾರೆ – ಅಂದಿದ್ದ.
ಅಷ್ಟೇನಾ ಹೇಳಿದ್ದು..??
ಉಹ್ಞೂಂ, ಪಾಚು ಮರಿ ನೀನು ಸುಸ್ತಾಗದೆ, ಅವರು ಬರೊದ್ರೊಳ್ಗೆ ಕಿರೀಟ ಮಾಡಿ ತೊಟ್ಟಿರಬೇಕು. ದೇವ ಮಾನವರು ನಿನ್ನ ಗೆಲುವ ನೋಡಬೇಕು, ಗೆದ್ದ ಕಥೆಯ ಹಾಡಬೇಕು, ಮಕ್ಕಳೆಲ್ಲ ಕೇಳಿ ಸ್ಪೂರ್ತಿ ಪಡೆಯಬೇಕು, ನೀ ಗೆಲ್ಲಬೇಕು ಆಟದಲ್ಲಲ್ಲ ಆಟ ಆಡುವ ಮಾಟದಲ್ಲಿ, ಗೆಲುವಿಗಾಗಿ ಕಾಯ್ವ, ಗೆಲ್ಲಿಸುವವರಿಗಾಗಿ ಕಾದು ನಿಲ್ಲುವ ಜೀವವಾಗಬಾರದು ನನ್ನ ತಂಗಿ, ಗೆಲುವಿನಾಚೆಯ ಆಟ ದಕ್ಕಬೇಕು, ದೇವ ಮಾನವರು ಹರಸಬೇಕು ಅಂದಿದ್ದ. ಹೌದು ಅಷ್ಟಕ್ಕೂ ನೀನ್ಯಾರು, ಸಮುದ್ರ ದಾಟಿ ಬಂದ ದೇವ ಕುವರಿಯಾ, ಸಪ್ತ ಸಾಗರವ ದಾಟಿ ಬಂದ್ಯಾ..?
ಹೊಳೆವ ನೀಲ ಕಂಗಳ ಬಾಲೆ ನಗ್ತಾ ನಗ್ತಾ ನುಡಿದಳು -
ಸಪ್ತ ಸಾಗರವ ದಾಟಿ ನೀನು ಬಂದೆ, ಚುಕ್ಕಿಗಳ ಎಡವುತ್ತ ನಾನು ಬಂದೆ,
ಕಾಮನ ಬಿಲ್ಲ ಸೂರ್ಯನಿಂದ ನಿನಗೆಂದೇ ಕೊಂಡೊಯ್ದ ಅಣ್ಣ ನಿನ್ನಣ್ಣ ಮತ್ತೇನ್ ಹೇಳಿ ಕೊಟ್ಟ ನಿಂಗೆ..?

ಸರಿ ಪುಟ್ಟ, ನಿನ್ನಣ್ಣ ನಿಂಗೆ ಸಾಕಾಗೋಷ್ಟು ಹೇಳೇ ಕಳ್ಸಿದಾನಲ್ಲ, ಮತ್ಯಾಕೆ ಅಳ್ತಾ ಇದ್ದೀಯಾ ನೀನೀಗ ಅಂದಳು ಕಿನ್ನರ ಬಾಲೆ.
ಆಗ ಆ ದೇವತೆ ಏನು ಹೇಳಿದ್ದು ಗೊತ್ತಾ..?
ಪುಟಾಣಿ ಮರಿ, ಹುಲ್ಲಿನ ಮೈದಾನವಿರಲಿ, ಮಣ್ಣಿನ ಮೈದಾನವಿರಲಿ, ಬಾನಂಗಳವೇ ಇರಲಿ, ಬದುಕ ಬಯಲೇ ಇರಲಿ, ಆಟ ಆಡುವವರಿಗೆ ಮೈದಾನವಾಗಬಾರದು ಮುಖ್ಯ…
ಮತ್ತೇನ್ ಫಲಿತಾಂಶವಾ..? ಅಂದಳು ಮಧ್ಯೆ ಪುಟಾಣಿ ಮರಿ
ಅಲ್ಲ ಮರಿ, ಆಟ ಆಡೋರಿಗೆ ಆಟ ಮಾತ್ರ ಮುಖ್ಯ, ಆಟವೊಂದೇ ಉಳಿದು ಉಳಿದಿದ್ದೆಲ್ಲ ಕಳೆದು, ಏಕಾಗ್ರವಾಗಿಬಿಡಬೇಕು, ಮೈದಾನವೂ ಮರೆವಂತೆ, ಆಗ ಬಯಸಿದ ಫಲಿತಾಂಶವೂ ಅದಾಗೇ ಬರುತ್ತೆ, ಸೋಲೂ ಗೆಲುವಿನಂತೆ ಆನಂದವಾಗುತ್ತೆ, ಆಟದಾಚೆಯ ಕಾಣ್ಕೆಯದು, ಆಟ ಆಡುವಾಗಲೇ ಆನಂದವರಳಿಸಬೇಕು ಫಲಿತಾಂಶವಾದಾಗ ಅಲ್ಲ ಮರಿ, ಹೀಗೇ ನೋಡು – ಎಷ್ಟೆಲ್ಲ ಬೆಟ್ಟ ಗುಡ್ಡ ಮೋಡ ರಾಶಿಗಳೇ ಬಂದರೂ ಸೂರ್ಯ ನಿಲ್ಲಸ್ತಾನಾ ಸಂಚಾರಾ.. ಇರ್ಲಿ ಬಿಡು ಇದೆಲ್ಲಾ, ನಾ ನಿಂಗೆ ಕಿರಣಗಳ ಹಿಡಿಯೋಕೆ ಸಹಾಯ ಮಾಡ್ಲಾ..?
ಅಣ್ಣನಾಡಿದ ಮಾತುಗಳ ರಿಂಗಣ ಕಿವಿಯಲ್ಲಿ, ದೇವ ಕಿನ್ನರಿ ನುಡಿದ ಪಾಠದ ಸ್ಪಂದನ ಎದೆಯಲ್ಲಿ

ಸರಿ ಹಾಗಾದ್ರೆ ನಾನು ಹೊರಡ್ಲಾ ಅಂತು ಕಿನ್ನರಿ,
ಎಲ್ಲಿಗೆ ಹೋಗ್ತಿ ನೀನೀಗ ಅಂತು ಪುಟಾಣಿಮರಿ
ಆಗ ಆ ಕಿನ್ನರಿ ನುಡಿದಳು - ಶಶಿ ತೇಲುವ ನೀಲಿಯೊಳಗೆ, ಪ್ರತಿ ಇರುಳ ತಾರೆ ಬಳಿಗೆ, ಉಳಿದ ಬದುಕಿನ ಇಂದುಗಳೊಳಗೆ, ಬರುವ ನಾಳೆಗಳ ಕನಸಿನೊಳಗೆ…
ಎನ್ನುತ್ತಾ ಅಂತರಿಕ್ಷದಂಗಳದಲ್ಲಿ ತೇಲಿ ತೇಲಿ ದೂರವಾದಳು…
ಕಿರಣಗಳ ಮಣಿಸಿ ಕಿರೀಟವಾಗಿಸಲು ತಲೆ ತುಂಬ ಕನಸುಗಳ ಹೊತ್ತು ತಾರೆಗಳ ಸೊಗಸ ಬೆಳಕ ಮಿಂಚ ಹಿಡಿದು ಪುಟಾಣಿ ಮರಿ ಆಟವಾದಳು, ಫಲಿತಗಳ ಹಂಗಿಲ್ಲದ ಪಾತ್ರವಾದಳು…
* * * * * * * * * *
ಮುಂದೇನಾಯ್ತು..?? ಕಥೆ ಕೇಳ್ತಾ ಕೇಳ್ತಾ ಮಲಗುವ ಮಕ್ಕಳ ಕನಸಿನಲ್ಲಿ ಕಥೆ ಮುಂದುವರೆಯಲಿ… ಗೆಲುವ ಸೊಗಸ ಹೊಳೆವ ಕಂಗಳಲ್ಲಿ ತುಂಬಲಿ…
ಈಗ ಮುಂದಿನ ಕಥೆ ನಿಮ್ಮದು, ಹೇಳಿ ಬದುಕಿನಾಟವ ಗೆದ್ದು ಕಿರೀಟ ಮುಡಿದು ಸಿಂಹಾಸನದಲ್ಲಿ ಯಾವಾಗ ಕುಳಿತುಕೊಳ್ತೀರಿ, ನೀರ ಹೃದಯದ ಕಾಮನ ಬಿಲ್ಲಿಗೆ ಯಾವಾಗ ಬಣ್ಣ ತುಂಬ್ತೀರಿ, ತಾರೆಗಳ ತೇರಲ್ಲಿ ಯಾವಾಗ ಮೌನ ಜೋಗುಳವ ಹಾಡ್ತೀರಿ, ಮಕ್ಕಳ ಕನಸಲ್ಲಿ ನಕ್ಷತ್ರಗಳ ಮಿಂಚ ಯಾವಾಗ ಕೊಡ್ತೀರಿ, ಅಪ್ಪ ಅಮ್ಮನ ಪ್ರೀತಿಯಾಗಿ ಬೆಚ್ಚಬೆಯ ಕಥೆಗಳ ಯಾವಾಗ ಮಕ್ಕಳ ಬಾಳಲ್ಲಿ ತುಂಬ್ತೀರಿ..
ಅರ್ಧಕ್ಕೆ ನಿಂತ ಮಾತು, ಮುಗಿಯದ ಕಥೆ ಅರ್ಧಕ್ಕೆ ಮುಗಿದು ಬಿಡುವ ಬದುಕು ಕಾಡುತ್ತದೆ, ಉಳಿದಿದ್ದು ಅಳಿಯದೆ ಮನಸ್ಸುಗಳಲ್ಲಿ ಮುಂದುವರೆಯಲಿ… ಜಾಗತೀಕರಣದ ಕಥೆಗಳಾಚೆ, ಕಾರ್ಟೂನ್ ಲೋಕದಾಚೆ ಮಕ್ಕಳಿಗೂ ಹಿರಿಯರಿಗೂ ರಾತ್ರಿಯ ಆಕಾಶ ಪಾಠಶಾಲೆಯಾಗಲಿ. ಆಕಾಶ, ನಕ್ಷತ್ರ, ಸೂರ್ಯ, ನೀರ ಹನಿಯೊಳಗಿನ ಕಾಮನಬಿಲ್ಲು – ಮಕ್ಕಳ ಆಸಕ್ತಿ, ವಿಜ್ಞಾನದ ಅರಿವೂ ಆಗಲಿ. ಅಣ್ಣ ತಂಗಿಯ ಭಾವ, ರಾತ್ರಿ ಕಥೆ ಕೇಳುತ್ತ ಹ್ಞೂಂ ಗುಡುತ್ತಲೆ ನಿದ್ದೆ ಹೋಗುವ ಮಕ್ಕಳ ಬಿಸುಪು ಅಪ್ಪ ಅಮ್ಮಂದಿರಿಗೆ ಮತ್ತೆ ಸಿಕ್ಕುವ ಕಾಲ ಬರಲಿ, ಬದುಕು ಭಾವ ಬಂಧದ ಸೊಗಸಾಗಿ ಸಂಭ್ರಮಿಸಲಿ…
* * * * * * * * * *
ಮುಗಿಸುವ ಮೊದಲು ಎಂದೋ ಓದಿದ್ದ ನಾಲ್ಕು ಸಾಲುಗಳ ನಿಮ್ಮೆದುರು ಹರವಿ ಮುಗಿಸುವ ಬಯಕೆ… ಈ ಸಾಲುಗಳ ಬರೆದ ಜೀವಕ್ಕೆ ನಾ ಕೃತಜ್ಞ…
“ಗಗನದಲಿ ಗೃಹತಾರೆ ಬುಗುರಿಗಳ
ನಿಲ್ಲದ ಗಿರಿ ಗಿರಿ ಸದ್ದು…
ಶೃತಿಗಿದೆ ಕ್ಷೀರಪಥ,
ಕಪ್ಪೆ ಚಿಪ್ಪಲ್ಲಿ ಮೂಢ ಕನಸುಗಳ
ಏನೋ ಸ್ಪಂದನ ತಾಳ,
ಕಡಲಿನಾ ನಾಲಗೆ ಉಲಿವ ಸುಸ್ವರ
ಓಂಕಾರದ ಜೇನ್ನಾದ,
ಹೊಳೆದದ್ದು ತಾರೆ, ಉಳಿದಿದ್ದು ಆಗಸ..”
ಈ ಕಥೆಯ ತುಂಬ ಇಣುಕಿದ ಪುಟಾಣಿ ಮರಿಯ ಅಣ್ಣನ ಕಥೆಯನ್ನೂ ನಿಮಗೆ ಹೇಳೀಯೇನು ಒಂದಿನ… ಕೇಳ್ತೀರಲ್ವಾ…??