ದೇವಾಮೃತ ಗಂಗೆ//ರಘುನಂದನ ಕೆ.
ಉನ್ಮಾದದ ಝಲಕು
ಮೂಲೆಯಲಿ ಒತ್ತಿ ನಿಂತವರ
ಸುತ್ತ ಸೆಂಟಿನ ಘಾಟು
ಬಣ್ಣ ಬಣ್ಣದ ಶೀಷೆಗಳಲ್ಲಿ
ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ
ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ
ಬೆಳಕೂ ಕಪ್ಪಿಟ್ಟಿದೆ...
ದುಬಾರಿ ಸಿಗರೇಟೇ ಬೇಕು ಸುಡಲು
ನಗರ ವ್ಯಾಮೋಹದ ಕಿಡಿಯಲ್ಲಿ
ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು
ಇಲ್ಲ ಶಹರದಲಿ ತಾರೆಗಳ ಹೊಳಪು
ಇರುಳೆಲ್ಲ ಕೃತಕ ದೀಪಗಳ ಬಿಳುಪು
ಜೀವ ಭಾವ - ರೆಕ್ಕೆಗೆ ಬೆಂಕಿ,
ಕೆಂಪು ನೋಟೊಳಗೆ ಗಾಂಧಿಯ ನಗು
ಸುತ್ತಮುತ್ತೆಲ್ಲ ಗಾಂಧಾರಿಯ ಮಕ್ಕಳು

ಮಾತಲ್ಲಿ ಅಪಾರ್ಥಗಳ ತಳುಕು
ಧರ್ಮ ಕರ್ಮಗಳ ವಿಪರೀತಾರ್ಥದಲ್ಲಿ
ನಶೆಯೇರಿದ ದಾನವತೆಯ ಕೊಳಕು
ಕಣ್ ಕತ್ತಲಿಟ್ಟಿದೆ ನಗರ-ಬೆಳಕು
ಕೊಳೆತ ಮನಸುಗಳ ಘಾಟು ಕಳೆಯಲು
ಶೀಷೆ ತುಂಬಿದ ದ್ರಾವಕಗಳ ಉನ್ಮಾದ
ಮುಖ ನೋಡಲಾರದ ಕಣ್ಗಳಿಗೆ
ಮುಖವಾಡಗಳ ಬಣ್ಣ ವಿಷಾದ...!!
ಚಿತ್ರಕೃಪೆ : ಅಂತರ್ಜಾಲ
“ಪಂಜು-ಅಂತರ್ಜಾಲ ಸಾಪ್ತಾಹಿಕ” ದಲ್ಲಿ 11.03.2013ರಂದು ಪ್ರಕಟಿಸಲ್ಪಟ್ಟಿದೆ. ಪಂಜುವಿನ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ