ಕಾವ್ಯ ಲಹರಿ//ರಘುನಂದನ ಕೆ.
ಎದೆಯ ಗಾಜಿನರಮನೆಯಲ್ಲಿ
ಪ್ರತಿಬಿಂಬಗಳ ಸರಿದಾಟ
ಇಲ್ಲದ ಗೆಜ್ಜೆ ಸದ್ದಿನ ಹುಡುಕಾಟ
ರಾಣಿಯಿರದ ಅಂತಃಪುರದಲ್ಲಿ
ವಿರಹದುರಿಯ ಅಂತರಂಗ
ಸ್ವಪ್ನ ಮಹಲಿನ ಬೀದಿಗಳಲ್ಲಿ
ಮೀನ ಹೆಜ್ಜೆಯ ಗುರುತು
ಸರಸರನೆ ಸರಿವ ಚಿತ್ತ ಚಂಚಲ
ಬಿಡದೆ ಕಾಡುವ ಮೇಘ ಮಲ್ಹಾರ
ಎಲ್ಲೆಗಳ ಮೀರಿ ನಿಲ್ಲಲು
ಬಿಡದ ಮಲ್ಲೆಗಳ ಕಂಪು
ಕರೆವ ಕೊರಳ ಇಂಪು
ರಾಜ ಬೀದಿಯಲಿ ಸ್ತಬ್ದ ತೇರು
ಹುಚ್ಚು ಸಖಿಯರ ಕಾವಲು
ಕನಸ ಕಿನ್ನರಿಯ ಕಂಗಳ ಕೊಳದಿ
ಮುಳುಗಿ ಸೋಲುವ ಮನಸು
ಕಿರು ನಗೆಯ ತುತ್ತನಿಟ್ಟು
ತುಟಿ ಜಾರೋ ಮುತ್ತ ನುಂಗಲು
ಹಸಿದು ಕಾದಿದೆ ನನಸು.jpg)
ಸುಟ್ಟು ಉರಿದವು ಕಾಲನ ದೀಪದಲ್ಲಿ
ಸ್ವಪ್ನಲೋಕದ ಸುಂದರಿಯರೆಲ್ಲ
ಕನಸಿನರಮನೆಯೊಳಗಿಂದ
ಮನದೊಳಗಣ ಗುಡಿಗೆ ಬಾರದಿರಲು.
* * * * * * * * * *
ಚಿತ್ರಕೃಪೆ : ಅಂತರ್ಜಾಲ
(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/)