ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday, 17 January 2019

ಮೂಲ ಮರೆತವನ ಹುಡುಕಾಟ...!

ಕಾವ್ಯ ಲಹರಿ//ರಘುನಂದನ ಕೆ.

ಅಂಗಳದಿಂದ ಹತ್ತು ಹೆಜ್ಜೆ ಎತ್ತಿಟ್ಟರೆ
ನೆರಳು ಬಿಸಿಲು ಆಟವಾಡುವ ಮನೆ
ಉಸ್ಸೆಂದು ಹಗುರಾಗಿ ಕತ್ತೆತ್ತಿದರೆ
ತುದಿ ಮಾಡಿಗೆ ಜೋತು ಬಿದ್ದ
ಮಸಿ ಹಿಡಿದ ವಾಯರ್ಗಳು
ಬೆಸೆದ ಜೇಡ ನಿವಾಸ
ಅದರ ಕೆಳಗೆ ಸ್ವಚ್ಛಂದ ಬದುಕುವ 
ಪ್ರೀತಿ ತುಂಬಿದ ಮಂದಿ
ಒಳಗೆ ಮಂತ್ರೋಚ್ಛಾರದ ರಿಂಗಣ
ಮನಸ್ಸು ಮಳೆಗೆ ತೆರೆದ ಪ್ರಾಂಗಣ

                                                ಹಂಚಿಕೊಂಡ ಸಿಹಿ ಕಹಿ ಕ್ಷಣಗಳಿಗೆ 
                                                ಮಾತು ನಗುವಿನ ಮದರಂಗಿ
ಬೀಳ್ಕೊಡುಗೆಗೆ ಕಣ್ಣ ಹನಿಯ ಅಭಿಷೇಕ
ಮಳೆ ಹನಿಗೆ ಅಪ್ಪುವ ಪುಳಕ
ಬಯಲ ಅಂಗಳದಲ್ಲಿ ಪಾರಿಜಾತ
ಅರಳಿ ನಿಂತ ದಾಸವಾಳದ ಹಾಡು
ಅಂಗಳದಂಚಲ್ಲಿ ನಗುವ ತುಳಸಿ
ಬಾನ ಬಯಲಲ್ಲಿ ಚುಕ್ಕಿ ಚಂದ್ರಮ
ಹೆಜ್ಜೆ ಇಡುವ ಮೊದಲೇ ಜಾರೋ ಕಾಲು
                                                ಬಿದ್ದರೆ ಮೋಡ ನಗುತ್ತದೆನೆಲ ತೂಗುತ್ತದೆ?

 ಮನೆಯಂದರೆ ಹೀಗೆ ಮನಸಿನ ಹಾಗೆ
ಮೂಲ ಮರೆತವನ ಹುಡುಕಾಟ
ಎಲ್ಲೆಲ್ಲೊ ಹರಿದಾಡಿ ಸುತ್ತುತ್ತಲಿದ್ದರೂ
ಕೊನೆಗೊಂದು ನೆಮ್ಮದಿಯ ಬಯಕೆ
ಜಗದೆದುರು ಏನೆಲ್ಲ ಹಾರಾಡಿದರೂ
ಕೊನೆಗೊಂದು ಅಂತರಂಗದ ಸಾಂತ್ವನ
ನೆಲ ಮುಗಿಲು ಬುಡ ತುದಿಯ ನಡುವೆ
ಏನೆಲ್ಲ ಕನಸು ಮನಸುಗಳ ವ್ಯವಸಾಯ
ಎಲ್ಲ ಕಾಲಕ್ಕೂ ಒಳಗೊಂದು ಸುರಿವ ಧಾರೆ 
ಉರುಳೋ ಕಾಲ, ಸವೆಯೋ ಜೀವನ
* * * * * * * *
ಚಿತ್ರಕೃಪೆ : ಅಂತರ್ಜಾಲ

ದಿನಾಂಕ: 01.12.2014ರಂದು 'ಪಂಜು' ಅಂತರ್ಜಾಲ ವಾರಪತ್ರಿಕೆಯಲ್ಲಿ  ಪ್ರಕಟಿಸಲ್ಪಟ್ಟಿದೆ.