ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday, 5 December 2011

ನಗರದೊಳಗೊಂದು ನಿನಾದ...

ಯಾವಲ್ಲೋಚನ ಗೋಚರಾ//ರಘುನಂದನ ಕೆ.
ಪುಟ್ ಪಾತಿನ ಮೇಲೆ ಯಾರದೋ ಖರೀದಿಗೆ ಕಾದಿರುವ ಪೋಸ್ಟರ್ ಗಳಲ್ಲಿನ ಬಣ್ಣದ ಜೀವಿಗಳಂತೆ ಯಾವುದೋ ಸುಂದರ ಕನಸಿಗೆ ವಿಹ್ವಲರಾಗಿ ಪರಿತಪಿಸುತ್ತಿರುವದಿನದ ಧಾವಂತಗಳಲ್ಲಿ ಬದುಕಿನ ಸಣ್ಣ ಸಣ್ಣ ಖುಷಿಗಳ ಮರೆತು ಪುಟ್ಟ ಮಗುವಿನ ಆಟದ ಪೆಟ್ಟಿಗೆಯೊಳಗೆ ತುಂಬಿಟ್ಟ ಚಕ್ರಗಳಿಲ್ಲದ ಕಾರುತಲೆಗಳಿಲ್ಲದ ಗೊಂಬೆಫ್ರಾಕು ಇಲ್ಲದ ರಾಜಕುಮಾರಿಕತ್ತರಿಸಿ ಬಿದ್ದ ಇನ್ನೆಷ್ಟೋ ಚೂರುಗಳಂತಹ ಕನಸುಗಳನ್ನ ವಾರಾಂತ್ಯದಲ್ಲಿ ಹಣದಿಂದಲೇ ಖರೀದಿಸಿ ತಂಗಳ ಪೆಟ್ಟಿಗೆಯೊಳಗಿನ ಕೊತ್ತಂಬರಿ ಸೊಪ್ಪಿನಂತೆ ಜೋಪಾನವಾಗಿಡಬಹುದೆಂಬ ಭ್ರಮೆಗಳಲ್ಲಿ ಬದುಕುತ್ತಿರುವ ನಗರವಾಸಿ ಮಾನವರ ಬೆಳಗು ಸೂರ್ಯನ ಎಳೆಕಿರಣಗಳ ಸ್ಪರ್ಶದಿಂದ ಬೆಚ್ಚಗಾಗಿ ಮುದಗೊಳ್ಳಲಿ
ಮನುಷ್ಯ ತನ್ನ ಅನಕೂಲತೆಗಳ ಆಡಂಬರಕ್ಕಾಗಿ ನಿರ್ಮಿಸಿಕೊಂಡ ನಗರಗಳು ಇಂದು ಅವನ ನರಮಂಡಲವನ್ನೇ ವ್ಯಾಪಿಸಿ... ಅಲ್ಲಿ ಇಲ್ಲಿ ಎಲ್ಲೆಲ್ಲೂ ರಸ್ತೆಗಳುನಗರವೆಂದರೆ ತರಹೇವಾರಿ ರಸ್ತೆಗಳು.. ಕೆಲವು ಹಿರಿದು ಕೆಲವು ಕಿರಿದುಒಂದರೊಳಗೊಂದು ಬೆಸೆದು ಒಂದರಿನ್ನೊಂದರಿಂದ ಕವಲೊಡೆದು  ತುದಿಯಿಂದ  ತುದಿಗೆ ಎಲ್ಲಿಂದೆಲ್ಲಿಗೋ ಸೇರಿಸುವ ಸದಾ ಗಿಜಗುಡುವ ರಸ್ತೆಗಳ ನರಮಂಡಲನಗರದ ಮನುಷ್ಯನ ಮೈ ಸೇರಿ ಮಗುವಿನಾಟದ ಪೆಟ್ಟಿಗೆಗಳಂತಹ ವಾಹನಗಳ ದಟ್ಟಣೆಯಲ್ಲಿ ಕುಂಯ್ಗುಡುವ ಪೋಂ ಗುಡುವ ವಿಚಿತ್ರವಾಗಿ ನರಳುವ ವಿವಿದ ಶಬ್ದಗಳ ಹಾರ್ನ್ ಗಳ ಗದ್ದಲದಲ್ಲಿ ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಚಪ್ಪಟೆ ಜೀವಿಯಂತಾದ ಮನುಷ್ಯನ ಬದುಕ ಕನಸುಗಳಲ್ಲಿ ಪ್ಲಾಸ್ಟಿಕ್ ಹೂವುಗಳು ಅರಳಿ ಪರಿಮಳವ ಚೆಲ್ಲಲಿ...
ಸುಂದರ ಸಂಜೆಗಳಲ್ಲಿ ಪುಟ್ ಪಾತ್ ನಲ್ಲಿ ನಡೆವಾಗನಗರದ ಸಂಜೆಗಳು ಸುಂದರವೆನ್ನುವ ಭ್ರಮೆ ಕವಿದಂತೆನ್ನಿಸಿ ಕಸಿವಿಸಿಗೊಳ್ಳುವ ಗೃಹಸ್ಥನಿಗೆ ದಿಡೀರ್ ಹೆಂಡತಿಯ ನೆನಪಾಗಿ.. ಮಲ್ಲಿಗೆಯ ಮಾಲೆ ಒಯ್ದು ದಿನಗಳೆಷ್ಟಾದವು.. ಎನ್ನಿಸುವ ವಿಚಿತ್ರ ಹೊಗೆ ಮಿಶ್ರಿತ ಧೂಳಿನಂತಹ ಮುಜುಗರ ಮನಸ್ಸನ್ನ ಕಾಡುವಾಗಅಲ್ಲೇ ಮೂಲೆಯಲ್ಲಿ ಸುತ್ತಿಟ್ಟ ಮಲ್ಲಿಗೆಯ ಮಾಲೆ ಎಂದೋ ಕೇಳಿರಬಹುದಾದ ನರಸಿಂಹ ಸ್ವಾಮಿಯವರ ಕವನವಾದಂತೆನಿಸಿ ಎದುರು ಹೋಗಿ ನಿಂತ  ಮಧ್ಯಮ ವರ್ಗದ ಸಂಸಾರಿಗನೆದುರುಯಾವ ಕೃತಕತೆಯ ಎಳೆಯಿಲ್ಲದೆ ಬಾಹ್ಯ ಪ್ರಪಂಚದ ಎದುರು ಮುಖವಾಡ ಧರಿಸುವ ಹಂಗಿಲ್ಲದ ಪ್ರೀತಿಯೊಂದು ಅಮ್ಮನಾಗಿ ಪುಟ್ಟ ಮಗಳನ್ನ ಅಪ್ಪಿ ಮುದ್ದಿಸುವಾಗ ಮಗು ನಕ್ಕ ನಗುವಿನ ಪರಿಮಳ ಎದುರಿಗಿದ್ದ ಮಾನವನ ತುಸು ಉಬ್ಬು ಹೊಟ್ಟೆಗೆ ಬಿಗಿದಿಟ್ಟ ಬೆಲ್ಟ್ ನೊಳಗೆ ಬಂಧಿಯಾದ ಅಂಗಿಯ ಒಳಸೇರಿ ಕಚಗುಳಿಯಿಡುತ್ತದೆಹಚ್ಚಿಟ್ಟ ಬೀದಿ ದೀಪಗಳ ಬೆಳಕಿಗೆ ಪುಳಕ.
ಪ್ರೇಮವೆಂದರೆ ದೇವಾನಂದನ ಕಾಲದ ಹಾಡು... ಕಿಶೋರ್ ಕುಮಾರನ ಕಂಠದ ನೋವು... ಈಗಷ್ಟೆ ಅರಳುತ್ತಿರುವ ಮಕ್ಕಳ ಕುತೂಹಲ ಹದಿಹರೆಯದವರ ಸಲ್ಲಾಪ ಮಾತ್ರವೆಂದುಕೊಳ್ಳುತ್ತಸಿನೆಮಾ ಥಿಯೇಟರ್ ಗಳ ಕತ್ತಲ ಸೀಟುಗಳಲ್ಲಿ ಲಾಲ್ ಬಾಗ್ ಕಬ್ಬನ್ ಪಾರ್ಕುಗಳ ಕಲ್ಲ ಬೆಂಚುಗಳ ಮರೆಯಲ್ಲಿ ಮರಗಿಡಗಳ ಸಂದುಗೊಂದುಗಳಲ್ಲಿ ಪ್ರೇಮವನ್ನ ಎಂದೋ ಮರೆತು ಬಿಟ್ಟವರಂತೆ ಬದುಕುತ್ತಿರುವ ಮಧ್ಯ ವಯಸ್ಸಿನ ಮಾನವ ನಿದ್ದೆಯಲ್ಲಿ ಸ್ವಪ್ನಗಳ ಕಂಡು ತುಸು ನಾಚಿಕೆಯಿಂದ ಬೆಚ್ಚಿ ಎದ್ದು ಎಷ್ಟು ದಿನಗಳಾದವು... ಕಾಮನ ಬಿಲ್ಲ ಬಣ್ಣಗಳ ಎಣಿಸಿ ವರ್ಷಗಳೆಷ್ಟಾದವು.. ಅಷ್ಟಕ್ಕೂ ಕಾಮನ ಬಿಲ್ಲು ಅರಳಿ ಕಾಲವೆಷ್ಟಾಯಿತು.. ಎನ್ನುವ ಸಂದೇಹ ಕಾಡದಂತೆ ಓಡಿಸುತ್ತಿದೆ ನಗರ... ಬೆಳ್ಳಂಬೆಳಗ್ಗೆ ಕಛೇರಿಗೆ ತಡವಾಯಿತಲ್ಲ ಎಂದುಕೊಳ್ಳುತ್ತ ತುಂಬಿ ಬಿರಿದು ನಿಂತ ಹಲಸಿನ ಹಣ್ಣಿನಂತ ಬಸ್ಸಲ್ಲಿ ನುಗ್ಗಿ ಚೂರುಪಾರು ಜಾಗದಲ್ಲಿ ಎಲ್ಲೆಲ್ಲೋ ಏನೇನೋ ತಾಗಿದರೂ ಮುಜುಗರಗೊಳ್ಳದೆ ಟಿಕೇಟ್ ಕೇಳುವ ಕಂಡಕ್ಟರ್ ಗೆ ಬೈದುಕೊಳ್ಳುತ್ತ ಕಾಲು ತುಳಿದವನೊಡನೆ ಜಗಳವಾಡಿ ಕಛೇರಿ ಸೇರಿದಾಗ ಮನಸ್ಸು ಕಲ್ಲಚಪ್ಪಡಿಯಡಿಗಿನ ಶವ.. ಸುಂದರ ಮಂದಹಾಸದೊಂದಿಗೆ ಆರಂಭಿಸಬೇಕಿದ್ದ ದಿನಗಳನ್ನ ಮರೆಸಿ ಜಂಜಡಗಳ ಉಳಿಸುವ ಬದುಕಿನ ದುಸ್ತರ ಅಸಹಾಯಕತೆ ನಗರದ್ದಾ.. ನಾಗರಿಕನದ್ದಾ,,??
ಬಿಕರಿಗಿಟ್ಟ ಪೋಸ್ಟರ್ ಗಳಲ್ಲಿನ ಜೀವಿಗಳಿಗಿರುವ ನಗೆ ಕೃತಕವಾಸಹಜವಾ,,? ಪ್ರೇಮವೆಂದರೆ ಹದಿಹರೆಯದವರಿಗೆ ಮಾತ್ರ ಮೀಸಲಿಟ್ಟ ಭಾವವಾ..? ಕೆಂಪಂಗಿಯ ಯೂನಿಫಾರ್ಮ್ ತೊಟ್ಟು ಮುಂಜಾವಿನಲ್ಲಿ ರಸ್ತೆಗಳ ನರಮಂಡಲಗಳನ್ನ ಸ್ವಚ್ಛವಾಗಿಸುವ ಮಹಿಳೆಯ ಮಗುವಿನ ಕಣ್ಣ ಹೊಳಪುದಿನವಿಡಿ ವಿಚಿತ್ರ ಪಾತ್ರಗಳ ಜನರ ನಡುವೆ ನುಗ್ಗುತ್ತಲೆ ಪುಟ್ಟ ಮಾತಿನ ಅಪ್ಯಾಯತೆಗೆ ನಗುವರಳಿಸಿ ಕಥೆ ಹೇಳುವ ಕಂಡಕ್ಟರ್  ಜೀವಂತಿಕೆಬಣ್ಣದ ಬಲೂನುಗಳಲ್ಲಿ ಕನಸುಗಳ ತುಂಬಿ ಮಾರುವ ಹುಡುಗನ ಪೀಪಿಯ ಪೂಂ ಪೂಂ.. ಹಾಡುಬೆಳಗಿನ ಮಂಜಿನಲ್ಲಿ ಮಂಗನ ಟೊಪ್ಪಿ ಧರಿಸಿ ವಿಹಾರಕ್ಕೆ ಹೊರಟ ಹಿರಿ ಜೀವದ ಮೃದು ಹೆಜ್ಜೆಯ ಬಿಸುಪುರಸ್ತೆ ದಾಟುವಾಗ ಕಣ್ಣರಳಿಸಿ ನೋಡುತ್ತ ಭರ್ರೋ.. ಎಂದು ಬರುವ ವಾಹನಗಳ ತೀವ್ರತೆಗೆ ಬೆಚ್ಚಿ ಗೊತ್ತೇ ಆಗದಂತೆ ಜಗಳವಾಡಿ ಸಿಟ್ಟಾದ ಅಣ್ಣನ ಕೈ ಬೆರಳ ಹಿಡಿದುಬಿಡುವ ತಂಗಿಯ ಅಂಗೈಯಲ್ಲಿನ ಬೆಚ್ಚನೆಯ ಭಾವರಾತ್ರಿ ಪಾಳಿ ಮುಗಿಸಿ ಬಂದು ಉಸ್ಸೆಂದು ಹಾಸಿಗೆ ಸೇರುವಾಗ ಗಂಡ ಮಾಡಿಕೊಟ್ಟ ಕಾಫಿಯಲ್ಲಿನ ಜೀವದ್ರವ್ಯ.... ಪುಟ್ ಪಾತ್ ನಲ್ಲಿ ಹೂ ಮಾರುವವಳು ಮಗಳ ಮುದ್ದಿಸಿದಾಗ ನಕ್ಕ ನಗುವಿನ ಕೆನ್ನೆಯ ಗುಳಿಯ ಒನಪುಅರೆತೆರೆದ ಮೈಯ ನಟಿಯ ಮೇಲೆ ಎಲ್ಲೆಲ್ಲೋ ಕೈ ಆಡಿಸುತ್ತ ನಿಧಾನವಾಗಿ ಸಿನೆಮಾ ಪೋಸ್ಟರ್ ಅಂಟಿಸುವ ಹುಡುಗನ ತುಂಟತನ.. ಇವೆಲ್ಲ ಪೇಪರ್ ಹಾಕುವ ಹುಡುಗನ ಸೈಕಲ್ ಏರಿ ಮನೆಮನೆಗೂ ಮನಗಳ ಒಳಗೂ ನುಸುಳಿ ನಗರದ ನಿಸ್ತೇಜಗಳಿಗೆ ಬಣ್ಣ ತುಂಬಲಿ... ಊರ ತೊರೆದು ನಗರ ಸೇರಿದವರ ನೆನಪುಗಳ ಕೆದಕಿ ಪುಳಕಗೊಳಿಸಲಿ..
ಕನಸುಗಳ ಮಾರುತ್ತಿರುವಂತೆ ಭ್ರಮೆ ಹುಟ್ಟಿಸುವ ನಗರವೇನಿಂತಲ್ಲಿ ನಿಲ್ಲಗೊಡದೆ ಓಡಿಸುತ್ತಲೇ ಇರುವ ನಗರವೇ ನೀ ಮಾನವನಾಗಿಬಿಡುವ ಮಾಯೆಗೆ... ನಗರವಾಗಿ ಪರಿವರ್ತಿಸಲ್ಪಟ್ಟ ಮಾನವ ಕಾಯುತ್ತಿದ್ದಾನೆ... ಕಣ್ಣ ಎವೆಯಿಕ್ಕದೆ ಕಾಯುತ್ತಿರುವ ಪುಟಾಣಿಗಳ ಕಣ್ಗಳೆದುರು ನಗರ - ನಾಗರಿಕನಂತಾಗಿಬಿಡುವ ಜಾದೂ ನಡೆಯುವ ಕೌತುಕಕ್ಕಾಗಿ ತನ್ನನ್ನೇ ಮಾರಿಕೊಂಡ ಮನುಷ್ಯ ಕಾತರಿಸುತ್ತಿದ್ದಾನೆ... ಕಾಯುವಿಕೆಯ ಚಿಪ್ಪೊಳಗಿಂದ ಮುತ್ತು ಉದುರುವಂತೆ ಕನಸ ಕಾಣಬೇಕಿದೆ ಈಗ.. ಪುಟ್ಟ ಪುಟ್ಟ ಖುಷಿಗಳ ಜತನದಿಂದ ಆಯ್ದು ಉಸಿರಾಗಿಸಿಕೊಳ್ಳಬೇಕಿದೆ ಈಗ... 

(ಬ್ಲಾಗ್ ಅಂಗಳದ ನನ್ನ ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:11-12-2011ರ ಸಾಪ್ತಾಹಿಕ ಲವಲVK ಯಲ್ಲಿ ಪ್ರಕಟಿಸಲಾಗಿದೆ)

5 comments:

 1. ಆಹಾ ನಗರವೇ........
  ಸುಂದರ ಸಾಲುಗಳು ಮೂಡುವುದು ಹೂವುಗಳ ಕಂಡಾಗ.... ದುಂಬಿಗಳ ಕಂಡಾಗ.... ಹಸಿರು ಕಾನನ ಕಂಡಾಗ..... ಹಾರೋ ಹಕ್ಕಿಗಳ ಕಂಡಾಗ.... ಕಾಮನ ಬಿಲ್ಲು... ಚಂದ್ರನ ತಂಪು.... ಕೇದಗೆಯ ಕಂಪುಗಳಲ್ಲಿ ಅಂದುಕೊಂಡಿದ್ದೆ....

  ನಗರದ ಗಿಜಿಬಿಜಿಯ ದಟ್ಟನೆಯಲ್ಲೂ ಧೂಳು ಹೊಗೆಗಳ ಕಪ್ಪಿನಲ್ಲಿಯೂ ಅದ್ಭುತ ಸಾಲುಗಳಿವೆಯೆಂದಾಯ್ತು.......

  ಮಸ್ತ್ ಮಸ್ತ್ ಬೈಂದೋ......
  ನಗರಗಳ ಗೊಂದಲ ಚಂದವಾಗಿ ಹಿಡೀದ್ಯೋ......

  ಜೈ ಜೈ....
  ಹಿಂಗೇ ಬರ್ಲಿ.....

  ReplyDelete
 2. ಅಬ್ಬಾ !! ಅದೆಷ್ಟು ಉಪಮೆಯೋ !!! :-)
  ಚೆನ್ನಾಗಿದ್ದು ಲೇಖನ, ಬ್ಲಾಗು :-)

  ReplyDelete
 3. ನನ್ನ ಬ್ಲಾಗಿಗೆ ಬಂದು, ಕವನ ಓದಿ ಮತ್ತು ಕಮೆಂಟಿಸಿದ ನಿಮ್ಮ ಸಹೃದಯತೆಗೆ ಶರಣು.

  ಈ ಬರಹ ವಿ.ಕ ದಲ್ಲಿ ಓದಿದ್ದೆ. ಹಲ ಮಗ್ಗಲುಗಳ ನೂರಾರು ಕನ್ನಡಿಗಳಂತಹ ಬರವಣಿಗೆ. ನೀವೇ ಬರೆದಂತೆ:

  "ಬದುಕಿನ ದುಸ್ತರ ಅಸಹಾಯಕತೆ
  ನಗರದ್ದಾ.. ನಾಗರಿಕನದ್ದಾ,,??"

  ReplyDelete

ನಿಮ್ಮ ಅನಿಸಿಕೆ