ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday, 5 September 2012

ಕಳೆದ ಕ್ಷಣಗಳ ರಾಯಭಾರದ ತೇರಲಿ…


ದೇವಾಮೃತ ಗಂಗೆ//ರಘುನಂದನ ಕೆ.

ಪಾಪ ಅವಳಿಗೂ ಹೋಗಲು ಮನಸಿರಲಿಲ್ಲ
ನನ್ನ ಮೇಲಾಕೆಗೆ ಮುನಿಸೂ ಇರಲಿಲ್ಲ
ಆದರೂ ಹೋದಳು ನನ್ನವಳು ನನ್ನ ತೊರೆದು
ನೆನಪುಗಳ ಜಾತ್ರೆಯ ತೇರನೆಳೆದು

ಮನೆಯಂಗಳದ ಮಲ್ಲಿಗೆಯೂ ಬಾಡಿದೆ
ಮನೆಯೊಡತಿಯ ಮುಂಗುರುಳ ಕಾಣದೆ
ಹರಡಿ ಹೋಗಿದೆ ಅಂಗಳದ ರಂಗೋಲಿ
ಅವಳಿಲ್ಲದ ಮನೆ ಮನವೆಲ್ಲ ಖಾಲಿ


ಕೈ ಹಿಡಿದವಳು ಕಷ್ಟದಲೂ ನಕ್ಕವಳು 
ಮಲ್ಲಿಗೆಯ ಕಂಪ ಮನೆಗೆ ತಂದವಳು
ಬಂದೆಲ್ಲ ದುಃಖಗಳ ನುಂಗಿ
ದೀಪ ಹಚ್ಚಿಟ್ಟು ಕದ ತೆರೆದು ಹೋದಾಕೆ


ರೆಕ್ಕೆ ಬಲಿತ ಹಕ್ಕಿಯಂತೆ ಮಕ್ಕಳು 
ಸಾಗರದಾಚೆಯ ನಾಡಿಗೆ ಹಾರಲು
ನಿಟ್ಟುಸಿರಿಟ್ಟು ಯೌವ್ವನವ ನೆನೆದು
ನನ್ನ ಬಾಯಿಗೆ ತಾಂಬೂಲವಿಟ್ಟು ನಕ್ಕಾಕೆ

ಸದ್ದಿಲ್ಲದೆ ನಡೆದು ಹೋದಳು ತೊರೆದು 
ಮತ್ತೆ ಹಿಂದಿರುಗಿ ಬರಲಾರದೂರಿಗೆ
ಅವ ಬಂದು ಕೈ ಬೀಸಿ ಕರೆದಾಗ
ಭವ ತೊರೆದು ಹೋಗದಿರಲು ಸಾಧ್ಯವೇ??


ಕಾಲುಂಗುರ ಕೈ ಬಳೆಹೋದವಳು ಮುತ್ತೈದೆ 
ಒಂಟಿ ಜೀವದ ಕುಸಿದ ಬೆನ್ನ ತಾಪ ನನಗೆ
ಕಳೆದ ಕ್ಷಣಗಳ ರಾಯಭಾರದ ತೇರಲಿ
ಮುಗಿಲ ತಾರೆಯೊಳು ಅವಳ ಕಾಣುವೆ
ಮತ್ತೆ ಸೇರಲು ಕಾಯುವೆ.


* * * * * * * * *
2005 ರಲ್ಲಿ ಬರೆದ ಕವನವಿದುಕೆ ಎಸ್ ನರಸಿಂಹಸ್ವಾಮಿ ಯವರ ಭಾವಗೀತೆಗಳನ್ನ ಅಶ್ವಥ್ ಗೀತ ಸಂಯೋಜನೆಯಲ್ಲಿ ಕೇಳುತ್ತಸಂಜೆಯಾಗಸವ ನೋಡುತ್ತ - ಮನೋಮಂದಿರದಲ್ಲರಳುವ ಅಕ್ಷರಗಳ ಭಾವ ಮಾಲೆಗೆ ಪುಳಕಗೊಳ್ಳುತ್ತಿದ್ದ ಕಾಲಒಂದಷ್ಟು ಭಾವಗಳು ಆಗಾಗ್ಗೆ ಹಾಳೆಗಳ ಮೇಲೆ ಮೂಡಿ ಅವಿತು ಕುಳಿತಿದ್ದವುಈಗ  ಭಾವಗಳ ಪಾತರಗಿತ್ತಿಗೆ ಜೀವ ಬಂದು ರೆಕ್ಕೆ ಬಿಚ್ಚಿ ಹಾರುವ ಪುಳಕ..

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ   http://samudrateera.wordpress.com/ ಗೆ ಭೇಟಿ ನೀಡಿ)

1 comment:

  1. ಚೆನ್ನಾಗಿದೆ....ಸುಂದರ ಕವನ...
    ಗಂಡನ ತಳಮಳ, ಹೆಂಡತಿಯನ್ನು ನೆನೆಯುವ ಪರಿ ಅದ್ಭುತ...

    ReplyDelete

ನಿಮ್ಮ ಅನಿಸಿಕೆ