ನಿಜಘನ ಮಕರಂದ//ರಘುನಂದನ ಕೆ.
ಇರುಳ ನಕ್ಷತ್ರ ಜಾರಿ ಹಿಮಬಿಂದುವಿನ ಹೊಳೆವ ಮುತ್ತಾಗಿ,
ಕಾಡು ಮಲ್ಲಿಗೆಯ ಮೊಗ್ಗಿನ ಮೇಲೆ ಪಲ್ಲವಿಸಿ,
ಅರುಣ ಕಿರಣಗಳ ಪ್ರತಿಫಲಿಸಲು ಕಾದಿರುವಾಗ....
ಮೆಲ್ಲನೆ ಜಾರಿಹೋಗಿದೆ ಮತ್ತೊಂದು ವರ್ಷ, ಸರಿವ ಕಾಲನ ಕಾಯಕ್ಕೆ ನೆರಳಿಲ್ಲ, ಮತ್ತೆ ಮರಳುವ ಹಂಗಿಲ್ಲ, ಮನುಷ್ಯನಿಗೆ ಬೇಕು ಕಾಲನ ಲೆಕ್ಕ, ಒಂದು ಚೌಕಟ್ಟು... ಮುಗಿದ ವರ್ಷಕ್ಕೊಂದು ನೆನಹು, ಬರುವ ವರ್ಷಕ್ಕೊಂದು ಕನಸು... ಒಂದರ ಮುಕ್ತಾಯ ಮತ್ತೊಂದರ ಆರಂಭ ಕೂಡ... ಕಳೆದ ವರ್ಷದ ಮಂಗಳ ಗೀತೆ ಕಾಲನ ನಡಿಗೆಯಲ್ಲಿ ಹೊಸ ವರ್ಷದ ಸ್ವಾಗತ ಗೀತೆ ಕೂಡ...
ಎಂದೋ ಭುವಿಗೆ ಬಂದ ಕುರುಹಿನ ಆಚರಣೆಗೆ ಹಬ್ಬದ ಸಡಗರ, ಜಗವೆಲ್ಲ ಹೊಸ ವರ್ಷವಾಚರಿಸಿ ಎಂಟು ದಿನಗಳ ನಂತರ ನನ್ನ ಹೊಸ ವರ್ಷದ ಗಂಟು ಬಿಚ್ಚುತ್ತದೆ, ಜನ್ಮ ದಿನದ ಹರುಷ ವರುಷಗಳ ಲೆಕ್ಕದಲ್ಲಿ ಜಮೆಯಾಗುತ್ತದೆ. ಒಳಹೊರಗಿನ ಪ್ರಪಂಚಗಳು ಹೊಳೆಹಿಸಿದ ಹೊಸ ಅನುಭವ ವಿಚಾರಗಳ ಕ್ಷಣಗಳಲ್ಲಿ ಬಂಧಿಸಿ, ಭವಿಷ್ಯತ್ತಿನ ದಿನಗಳಿಗೆ ಪಾಠವಾಗಿ, ಭೂತ ಕಲಿಸಿದ ಜ್ಞಾನವಾಗಿ, ವರ್ತಮಾನದ ಅಚ್ಚರಿಯಾಗಿ... ಒಳಸ್ಪಂದನ ತಾಳಗಳ, ಕಪ್ಪೆಚಿಪ್ಪೊಳಗಿನ ಘರ್ಷಣೆ ಸೃಷ್ಠಿಸುವ ಮುತ್ತುಗಳ ಪುಟಗಟ್ಟಿದ ಹೊತ್ತಿಗೆಯಾಗಿ ಜಾರಿದೆ ಬದುಕಿನ ಲೆಕ್ಕದಿಂದ ವರ್ಷ ಮತ್ತೊಂದು...
ಪ್ರತಿ ದಿನ ಉದಯಿಸುವ ಸೂರ್ಯಂಗೆ ಯಾವತ್ತು ಹುಟ್ಟಿದ ಹಬ್ಬ...? ಪ್ರತಿ ಸಂಜೆ ಅಸ್ತಮಿಸುವ ಸೂರ್ಯ ನಾಳೆ ಹೊಸ ಅನುಭವಗಳ ಸಿಹಿ ಕಹಿ ಹೊತ್ತು ಮತ್ತೆ ಬರುತ್ತೇನೆ ಎಂದೇ ಹೋಗುತ್ತಾನೆ. ಹಳೇ ವರ್ಷ ಕೂಡ ಹೊಸ ಕ್ಷಣಗಳ ಭರವಸೆಯಲ್ಲಿ ಕಳೆದಿದೆ...
ಪ್ರತಿ ದಿನ ಉದಯಿಸುವ ಸೂರ್ಯಂಗೆ ಯಾವತ್ತು ಹುಟ್ಟಿದ ಹಬ್ಬ...? ಪ್ರತಿ ಸಂಜೆ ಅಸ್ತಮಿಸುವ ಸೂರ್ಯ ನಾಳೆ ಹೊಸ ಅನುಭವಗಳ ಸಿಹಿ ಕಹಿ ಹೊತ್ತು ಮತ್ತೆ ಬರುತ್ತೇನೆ ಎಂದೇ ಹೋಗುತ್ತಾನೆ. ಹಳೇ ವರ್ಷ ಕೂಡ ಹೊಸ ಕ್ಷಣಗಳ ಭರವಸೆಯಲ್ಲಿ ಕಳೆದಿದೆ...
ದೇವ ಕೊಟ್ಟ ಪುಟ್ಟ ಉಡುಗೊರೆ ಈ ಬದುಕು,
ಪ್ರತಿ ದಿನವೂ ಸೂರ್ಯ ದೇವನಿಂದ ಹೊಸ ಬೆಳಕು,
ಪ್ರತಿ ಕ್ಷಣದ ಪ್ರತಿ ಉಸಿರಲ್ಲೂ ಹೊಸ ಪ್ರಾಣವಾಯುವಿನದೇ ಸಂಚಾರ,
ಕಾಲದ ಕಣ ಕಣದಲ್ಲೂ ಅನುಭವಗಳ ಇಂಚರ...

ಬದುಕೆನ್ನುವುದು ಅರಳುವ ಮೊಗ್ಗಿನೊಳಗೆ ಜಾರುವ ಇಬ್ಬನಿಯ ಹನಿ,
ಪ್ರತಿ ದಿನವೂ ಹೂವಾಗಿ,
ಕಾಲ ಕರಗುವ ಹಿಮಮಣಿಯಾಗಿ ಪಿಸುಗುಡುತ್ತಲೇ ಇರುತ್ತದೆ...
ಹನಿ ಹನಿ ಹಜಾರ್ ಕಹಾನಿ...

ಕ್ಷಣಗಳ ಸುಪ್ತ ಭಾವ ದಿನಚರಿಯಲ್ಲಿ ಜಂಜಾಟಗಳ ಟಿಪ್ಪಣಿಯಿಲ್ಲ, ನೋವು ನಲಿವಿನ ಚಿತ್ರಣದೊಳಗಿಂದ ಉದ್ಭವಿಸಿದ ಚಿಂತನೆಯಿದೆ. ವ್ಯಕ್ತಿ ಭಕ್ತಿಗಳ ವಿಮರ್ಷೆಯಾಚೆ ವ್ಯಕ್ತಿತ್ವ ಅರಳಿಸುವ ಸಂಘರ್ಷವಿದೆ... ಮತ್ತೊಮ್ಮೆ ವಿದಾಯ ಹೇಳಬೇಕಿದೆ ಈಗ, ಕನಸು ಕೊಟ್ಟ ವರ್ಷಕ್ಕೆ ಮನಸುಗಳ ಬೆಸೆದ ವರ್ಷಕ್ಕೆ, ಮನಸ್ಸಿನ ಮೂಲೆಯಲ್ಲೊಂದು ಪೊರೆ ಅಹಂನ ತೆರೆ... ಅಷ್ಟಷ್ಟೆ ಸರಿಸಿ, ಹರಸಿ ಮೌನದಿಂದ ಮಾತಿಗೆ, ಮಾತಿನಿಂದ ಮೌನಕ್ಕೆ, ಮೌನದಾಚೆಯ ಲೋಕಕ್ಕೆ, ಚಿಕ್ಕ ಚಿಕ್ಕ ಕ್ಷಣಗಳ ಜೀವದ ಪಯಣ ಮುಗಿದು, ಮೃದು ಮಧುರ ಜೊನ್ನ ಜೇನ ಬಂಧ ಬೆಸೆದು, ತುಂಬಾ ತುಂಬಾ ಬೆಳೆಸಿದ ಕಳೆಸಿದ ಜೀವ ಭಾವ ಮೇಳೈಸಿದ ಹರುಷ ವರುಷದ ವಿದಾಯದಂಚಲ್ಲಿ... ಚಲಿಸಿದೆ ಅನುರಾಗ ಪವನ ಪರಿಮಳ, ಸರಿದಿದೆ ಕಾಲ ಸರಸರ...
ಹುಣ್ಣಿಮೆಯ ಚಂದ್ರ ಉದಯಿಸಿ ಇಬ್ಬನಿಗೆ ಬೆಳ್ಳಿ ರಂಗ ಲೇಪಿಸುತ್ತಿರುವಾಗ ಜೀವನದ ಸಂಗೀತದಲ್ಲಿ ಪ್ರತಿಯೊಂದು ವರ್ಷವೂ ಒಂದೊಂದು ರಾಗ. ಹಂಸಗಳ ಧ್ವನಿಯಲ್ಲಿ ಅಮೃತ ವರ್ಷಿಸುವಾಗ ಬೃಂದಾವನದಲ್ಲಿ ಸಾರಂಗ ರೆಕ್ಕೆ ಬಿಚ್ಚಿ ನವಿಲಿನೊಡಗೂಡಿ ಕುಣಿಯುತ್ತದೆ. ಕ್ಷಣಗಳ ಅನುಭಾವಗಳ ಸ್ವರಗಳ ನುಡಿಸಿ, ಮೌನ ರಾಗದ ಮನೋ ವಿಲಾಸಗಳ ಉಸಿರಾಗಿಸಿ, ಸಂತಸಕ್ಕೊಂದು ಸಾಂತ್ವನಕ್ಕೊಂದು ಸಂಭ್ರಮ ನೀಡಿ ಮುದಗೊಳಿಸಿ ಕೊನೆಗೂ ಮುಗಿದಿದೆ ವರ್ಷ. ಪ್ರಿಯ ವರ್ಷವೇ, ನಿನ್ನ ನೆನಪು ಮನೋ ವೇದಿಕೆಯಲ್ಲಿ ಸದಾ ನರ್ತಿಸುತ್ತಲೇ ಇರುತ್ತದೆ.
“ಮೇರೆ ಮನ ಮಯೂರ ನಾಚೆ, ತೇರೇ ಯಾದೋಂಕೆ ಆಂಗನ ಮೇ”
.jpg)
* * * * * * * * * *
ರಘೂ -
ReplyDeleteಹೊಸ ವರುಷದ ಹೊಸ ಬೆಳಗು ಹೊಸ ಹೊಸ ಹೊಳಹುಗಳ ಹೊತ್ತು ತಂದು ನಿನ್ನೊಳಗಿನ ಚೈತನ್ಯಕ್ಕೆ ಇನ್ನಷ್ಟು, ಮತ್ತಷ್ಟು, ಮೊಗೆದಷ್ಟೂ ಹೊಳಪ ತರಲಿ...
ಜನ್ಮ ದಿನದ ಹಾರ್ದಿಕ ಶುಭಾಶಯಗಳು...
ಈ ವರ್ಷದಲ್ಲಿ ಬದಲಾವಣೆಗಳು ಸ್ವಲ್ಪ ಹೆಚ್ಚಾಗಿಯೇ ಇರುವ ಅವಕಾಶ....
ReplyDeleteನೀನೂ ಗಮನಿಸಿದ್ದೀಯಾ.... ಆ ಬದಲಾವಣೆಗಳೆಲ್ಲ ಒಳಿತನ್ನೇ ಮಾಡಲಿ...
ಬದುಕಿಗೆ ಒಂದು ಅದ್ಭುತ ತಿರುವನ್ನು... ಕೊನೆಯವರೆಗೂ ಸಿಹಿ ನೆನಪಿನ
ಛಾಯೆಯನ್ನು ಉಳಿಸಿ ಹೋಗಿಬಿಡುವ ವರ್ಷ ಇದೇ ಆದರೂ ಆಗಬಹುದು...
ಉತ್ತಮ ಅವಕಾಶಗಳ ಜೊತೆ ಅನುಭವಗಳೂ ನಿನ್ನದಾಗಲಿ...
ಮಧು ಮಧುರ ಹಾರೈಕೆಗಳೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು....
***************
ನಯವಾದ ಬರಹ...
ಬರಹದಲ್ಲಿನ ಏಕತಾನತೆಯೊಂದಿಗೆ ಪ್ರಭುದ್ಧತೆಯೂ ಸೇರಿಕೊಂಡಿದೆ.