ಕಾವ್ಯ ಲಹರಿ//ರಘುನಂದನ ಕೆ.
ಅರೆ..! ಹಳೇ ಕವನಗಳು ಹೊಸದಾಗಿ
ಕಾಣಬಹುದಾ..?
ಹಿಂದೆ ಬರೆದದ್ದೆಷ್ಟೋ ರೆಕ್ಕೆ ಮಡಚಿ ಕುಳಿತ ಪಾತರಗಿತ್ತಿಯಾಗಿರುವಾಗ, ಇದೆಲ್ಲಿಂದಲೋ ರೆಕ್ಕೆ ಬಿಚ್ಚಿ ದಾರಿ ಹುಡುಕಿ ಹಾರುತ್ತ ಬಂದಿದೆ...
ಇಲ್ಲೀಗ ಒಂದು ಹಳೆಯ ಕನವರಿಕೆ...
* * * * * * * *
ಮಾನಿನಿ-ಮದಿರೆಯರೊಡಗೂಡಿ
ಕಳೆದ ರಾತ್ರಿಗಳ ಲೆಕ್ಕವಿಲ್ಲ.
ಈಗ ಕಾಡುತ್ತಿದೆ ಕತ್ತಲು
ಕೈ ಜಾರಿ ಬಿದ್ದಿದೆ ಕನಸು
ಅರಿವಿರದೆ ಕ್ಷಣಗಳು ಜಾರಿ
ದಿಕ್ಕು ತಪ್ಪಿದೆ ಬದುಕ ದಾರಿ.
ಕ್ಷಮಿಸಿ,
ಬದುಕ ದಾರಿ ತಪ್ಪಿದ್ದು ಈಗಲ್ಲ
ಅಂದೇ, ಇದೇ ದಾರಿ ಎಂದು
ಹೆಜ್ಜೆ ಇಟ್ಟ ಕ್ಷಣವೇ ತಪ್ಪಿರಬಹುದು
ಕಾಂಚಾಣದ ಕನವರಿಕೆಗಳಲ್ಲಿ
ಬದುಕ ಕಟ್ಟುವ ಹುಂಬತನದಲ್ಲಿ
ಆಗಲೇ,
ಸುಖವರಸಿ ನಿಶೆಯಲ್ಲಿ
ನಶೆಯ ತುಂಬಿ ಕುಣಿವಾಗ
ಅಡ್ಡಾ-ದಿಡ್ಡಿ ಬಿದ್ದ ಹೆಜ್ಜೆ
ತಪ್ಪಿಸಿರಲಿಲ್ಲವೇ ದಾರಿಯಾ!?
ಈಗ,
ಬದುಕು ಬಯಲು
ಸುತ್ತಮುತ್ತೆಲ್ಲ ಬರಿಯ ದಾರಿಗಳೇ
ಬದುಕಿನ ಪ್ರಶ್ನಾರ್ಥಕ ಚಿಹ್ನೆಗಳಿಗೆ
ಬದುಕುತ್ತಲೇ ಕಾಣಬೇಕಿದೆ ಉತ್ತರ
ಯಾವುದು ಹೇಗೋ ಎಲ್ಲಿಗೋ...?
ಆದರೂ,
ಮತ್ತೆ ತುಳಿಯಲೇ ಬೇಕಿದೆ ಈಗ
ಹೊಸ ಭರವಸೆಗಳ ತುಂಬಿ
ಹದ ತಪ್ಪದಂತೆ ನಡೆಯಬೇಕಿದೆ
ಬದುಕೆಂದರೆ ಹೀಗೆ
ನಡೆದಷ್ಟೂ ದೂರ ದಾರಿ...!!
* * * * * * * *

.jpg)
.jpg)







