ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday 5 November 2013

ಕತ್ತಲೊಡಲಿನ ಬೆಳಕ ಕಾಣ್ಕೆಗೊಂದು ಹಬ್ಬ

ಸಾಗರ ಸಮ್ಮುಖ//ರಘುನಂದನ ಕೆ.

ಬೆಳಕ ಹಬ್ಬ ಬೆಳಗುವ ಹಬ್ಬ ದೀಪಾವಳಿ. ಬೆಳಕನ್ನೇ ಬೆಳಗಿಸಲು ಬೆಳಕಿನ ಹಬ್ಬ. ಅರೆ, ಬೆಳಕಿರದ ಕತ್ತಲೆಗೂ ಬೇಕಿತ್ತಲ್ಲ ಒಂದು ಹಬ್ಬ. ಇಲ್ಲ, ಕತ್ತಲೆನ್ನುವುದು ಅಜ್ಞಾನ ಬೆಳಕೆನ್ನುವುದು ಜ್ಞಾನ, ಅಜ್ಞಾನಕ್ಕೆ ಹಬ್ಬವಿಲ್ಲ; ಇದು ನಂಬಿಕೆ, ನಾವು ನಂಬಿದ್ದು ನಂಬಿಸಿಕೊಂಡಿದ್ದು ನಂಬಿಕೆಯಾಗುತ್ತದೆ. ಎಲ್ಲ ನಂಬಿಕೆಗಳೂ ಸತ್ಯವಲ್ಲ. ಕತ್ತಲು ಅಜ್ಞಾನವೂ ಅಲ್ಲ. ಬೆಳಕನ್ನ ಬೆಳಗಿಸಿದ್ದೇ ಕತ್ತಲು. ಬೆಳಗಿಸಿದ ಪೂರ್ಣತೆಗೆ ಅಜ್ಞಾನದ ಲೇಪ ನಮ್ಮದು. ಕತ್ತಲಿನ ಬೆಳಕ ಹುಡುಕುವ ಹಬ್ಬವೂ ಆದೀತು ದೀಪಾವಳಿ. ಬರೆದ ಗಾಢ ಸಾಲುಗಳ ಮಾತಿನ ನಡುವೆ ಮೌನವಿರುತ್ತದೆ. ಹಚ್ಚಿದ ಸಾಲು ಹಣತೆಗಳ ಬೆಳಕ ಬುಡದಲ್ಲಿ ಕತ್ತಲೆ ಇಣುಕುತ್ತದೆ. ಬೆಳಕಿನ ಸಾಲಿನ ನಡುವೆ ಕತ್ತಲೆಯ ಕಾಲು. ಎಲ್ಲವನ್ನೂ ಬೆಳಕು ಬೆಳಗಿಸುತ್ತದೆ. ಬೆಳಕನ್ನ ಬೆಳಗಿಸಿದ್ದು ಕತ್ತಲೆಯಾ..?? ದೀಪಗಳ ಸಾಲಿನಲ್ಲಿ, ದೀಪಾವಳಿಯ ಬೆಳಕಿನಲ್ಲಿ ಕತ್ತಲೆಯ ಹೊಳಪನ್ನು ಕಂಡವಗೆ ಬದುಕೂ ಹಬ್ಬವಾದೀತು

* * * * * * * *
ಎಲ್ಲರನ್ನೂ ಬೆಳಕು ಬೆಳೆಸುತ್ತದೆ, ಎಲ್ಲವನ್ನೂ ಬೆಳಕು ಬೆಳಗಿಸುತ್ತದೆ
ಬೆಳಕನ್ನ ಬೆಳೆಸುವಂತದ್ದೂ ಒಂದಿರಬೇಕಲ್ಲ..?”
ಬೆಳಕು ಬೆಳೆಯುವುದೂ ಅಳಿಯುವುದೂ ಕತ್ತಲಲ್ಲಿ
ವಿಚಿತ್ರ, ಕತ್ತಲ ಗರ್ಭದಿಂದಲೇ ಬೆಳಕಿನ ಹುಟ್ಟು, ಆದರೂ ಕತ್ತಲು-ಬೆಳಕು ವಿರುದ್ಧ ಯಾಕೆ ಹೀಗೆ?”
ಹುಟ್ಟು-ಸಾವು ವಿರುದ್ಧವಲ್ಲ, ಎರಡು ಧ್ರುವ, ಎರಡು ತುದಿ. ತನ್ನರಿವಿಗೆ ನಿಲುಕಿದಂತೆ ವ್ಯಾಖ್ಯಾನ ಮನುಷ್ಯ ಗುಣ. ಸಾವೆಂದರೆ ಹುಟ್ಟು, ಕತ್ತಲೆಂದರೆ ಬೆಳಕು. ಅರಿವು ವಿಸ್ತರಿಸಿದಂತೆ ಎರಡೂ ಒಂದೇ ಆದೀತು.”
ಕತ್ತಲು ಬೆಳಗುವ ಜ್ಯೋತಿಯೇ, ಹೇಗೆ ಇದು?”
ಕತ್ತಲಲ್ಲಿ, ಕಣ್ಮುಚ್ಚಿದ ಅಂತರಂಗದ ಗಾಢ ಕಾರ್ಗತ್ತಲಲ್ಲಿ ಬೆಳಕಿನ ಹುಟ್ಟು, ಕತ್ತಲು ಕತ್ತಲಲ್ಲ ಆತ್ಮದ ಬೆಳಕು, ಅಲ್ಲಿ ಜ್ಞಾನ ಅರಳುತ್ತದೆ, ಬೆಳಗುತ್ತದೆ.”
* * * * * * * *

ಇಂದ್ರಿಯಕ್ಕೆ ನಿಲುಕಿದ್ದು ಬೆಳಕು, ಇಂದ್ರಿಯಾತೀತ ಕತ್ತಲು. ಕಾಣದಿರುವುದೆಂದರೆ ಕತ್ತಲಲ್ಲಿರುವುದು. ಕತ್ತಲನ್ನೇ ಕಂಡವಗೆ ಕಾಣುವುದು ಇನ್ನೇನು? ಕಾಣ್ಕೆಗೆ ಬೆಳಕಾದರೂ ಆದೀತು, ಕತ್ತಲಾದರೂ ಸರಿಯೇ. ಶೂನ್ಯದಿಂದ ಏನು ತೆಗೆದರೂ ಶೂನ್ಯವೇ, ಪೂರ್ಣದಿಂದ ಏನು ತೆಗದರೂ ಪೂರ್ಣವೇ. ಕತ್ತಲಿಂದ ಕತ್ತಲನ್ನು ತೆಗೆದರೂ ಕತ್ತಲೆಯೇ ಅಥವಾ ಬೆಳಕೂ ಕತ್ತಲೆಯಲ್ಲಿ ಪೂರ್ಣವಾದೀತು. ಕಾಣುವವರಿಗೆ ಕತ್ತಲು ಕತ್ತಲೂ ಅಲ್ಲ, ಬೆಳಕು ಬೆಳಕೂ ಅಲ್ಲ. ಬೆಳಕಲ್ಲಿ ತೋರುವುದಕ್ಕಿಂತ ಕತ್ತಲಲ್ಲಿ ಅಡಗಿರುವುದೇ ಹೆಚ್ಚು, ಆಂತರ್ಯದಲ್ಲೂ ಬಾಹ್ಯದಲ್ಲೂ. ಎಲ್ಲವೂ ಆರಂಭ ಬೆಳಕಿನಿಂದ ಅಥವಾ ಬೆಳಕಿಗೆ ಬಂದಂದಿನಿಂದ, ಜೀವದಲ್ಲೂ ಜೀವನದಲ್ಲೂ. ಮುಕ್ತಾಯ ಬೆಳಕು ಮುಗಿದಾಗ ಅಥವಾ ನಾವು ಬೆಳಗಿದಾಗ, ಮುಕ್ತಾಯ ಪೂರ್ಣಗೊಂಡಾಗ, ಕತ್ತಲಲ್ಲಿಳಿದಾಗ ಕೂಡ ಆದೀತು.

ಲೋಕದ ಬೆಳಕು ಸೂರ್ಯ, ಬೆಳಕಿನ ಗೋಳ. ಎಲ್ಲ ಬಣ್ಣಗಳ ನುಂಗಿ ಬೆಳ್ಳಗಾದವ. ಶಕ್ತಿ ಮುಗಿದಾಗ ಆತನಿಗೂ ಕತ್ತಲ ಮಡಿಲು ಬೇಕು. ಮಹಾದೈತ್ಯ ಪೂರ್ಣನಾದಾಗ ಕಪ್ಪು ರಂಧ್ರ ಎನ್ನುತ್ತದೆ ವಿಜ್ಞಾನ. ಮುಗಿದ ಸೂರ್ಯ ಬೆಳಕನ್ನೂ ನುಂಗುತ್ತಾನೆ ಕತ್ತಲ ಗರ್ಭದಲ್ಲಿ ಕುಳಿತು. ಪೂರ್ಣತೆಗೆ ಕತ್ತಲೆಯ ಮಡಿಲು. ಸೂರ್ಯನಂತ ಸಹಸ್ರ ನಕ್ಷತ್ರಗಳು ತೇಲಾಡುತ್ತಿರುವುದು ಬ್ರಹ್ಮಾಂಡವೆಂಬ ಕತ್ತಲ ಒಡಲಲ್ಲಿ. ಸಹಸ್ರಬಾಹುಗಳ ಬೆಳಕಿನ ಕಿರಣಗಳಿಗೂ ಕತ್ತಲೆಯ ಅಗಾಧ ಆಕಾಶದ ಅವಕಾಶ ಬೇಕು ಅಸ್ತಿತ್ವಕ್ಕೆ. ಕತ್ತಲೆಯ ಸೆರಗಿಗೆ ನಕ್ಷತ್ರಗಳ ಸಿಂಗಾರದ ಸೊಬಗು. ಆಯಸ್ಸು ತೀರಿದಾಗ ನಿಶ್ಚಲವಾಗುವುದೂ ಕತ್ತಲಲ್ಲೇ ಅದು ನಕ್ಷತ್ರವಾದರೂ, ಹಣತೆಯಾದರೂ..!!

ಬೆಳಕಿರುವಾಗ ಕತ್ತಲೆಯ ಭ್ರಮೆ, ಕತ್ತಲಿರುವಾಗ ಬೆಳಕೇ ಭ್ರಮೆ. ಕಾಣ್ಕೆಗೆ ಬೆಳಕು ಬೇಕೆಂದೇನೂ ಇಲ್ಲ. ಮನಸ್ಸು, ಜ್ಞಾನ, ಅರಿವು ಸಾಕು. ಅರಿವು ಬೆಳಕೊಂದೇ ಅಲ್ಲ, ಕತ್ತಲೂ ಹೌದು. ವಿಶ್ವಕ್ಕೆ ಬ್ರಹ್ಮಾಂಡಕ್ಕೆ ಹಗಲು ಇರುಳುಗಳ, ಬೆಳಕು ಕತ್ತಲುಗಳ ವ್ಯತ್ಯಾಸವೆಲ್ಲಿಯದು. ಕತ್ತಲ ನೋಡಲು ಬೆಳಕು ಬೇಕಾ? ಹುಟ್ಟಿದ ಗರ್ಭ, ಸತ್ತು ಸಮಾಧಿ ಎರಡೂ ಕತ್ತಲೇ. ಕತ್ತಲೆ ಇದ್ದರೆ ಮಾತ್ರ ಬೆಳಕಿಗೂ ಜಾಗ. ಮನ ಬೆಳಗಿಸಿಕೊಂಡವರಿಗೆ ಕತ್ತಲೂ ಬೆಳಕ ರಾಶಿ, ಬೆಳಕ ರಾಶಿಯೂ ತುಂಬಿಕೊಳ್ಳುವಷ್ಟು ಕತ್ತಲೆ. ಬೆಳಕು ಬೆಳೆದಷ್ಟೂ ಮಂದ, ಕತ್ತಲು ಬೆಳೆದಷ್ಟೂ ಗಾಢ. ಕತ್ತಲು ಶಾಂತ, ಬೆಳಕು ಅಶಾಂತ ಅಹಂಕಾರ. ಎಲ್ಲ ಬಣ್ಣಗಳು ಸೇರಿದಾಗ ಬೆಳಕು, ಎಲ್ಲ ಬಣ್ಣಗಳ ನುಂಗುವುದು ಕತ್ತಲು. ಬೆಳಕೆಂದರೆ ಬಿಳಿಯ ಬಣ್ಣ ಅಥವಾ ಬಣ್ಣದಿಂದ ಗುರುತಿಸಲ್ಪಡುವ ಅನುಭವ ಎನ್ನುವುದು ವ್ಯಾಖ್ಯಾನ. ಕತ್ತಲೆಂದರೆ ಕಪ್ಪು ಅಥವಾ ಪ್ರಪಂಚದ ಎಲ್ಲ ಬಣ್ಣಗಳ ನುಂಗಿದ ಕೃಷ್ಣ, ಮತ್ತವನ ವರ್ಣ.
* * * * * * * *
ಹೊರ ಪ್ರಪಂಚದ ದರ್ಶನಕ್ಕೆ ಬೆಳಕು ಬೇಕು. ಸ್ವಯಂ ಅರಿವಿನ ಬೆಳಕು ಅರಳಲು ಕತ್ತಲು ಬೇಕು. ಕಣ್ಣು ಜೀವದ ಬೆಳಕು, ಜೀವನದ ಸೂರ್ಯ. ಕಣ್ಣಿರದವನಿಗೂ ಅವನ ಬೆಳಕು ಇದ್ದೀತು, ದೇಹದ ಕಣ ಕಣದಲ್ಲೂ ಬೆಳಕು ಸ್ಪುರಿಸೀತು. ಕಣ್ಮುಚ್ಚಿದವನಿಗೂ ಅಂತರಂಗದಲ್ಲಿ ಬೆಳಕು ಹೊಳೆದೀತು. ಮೇಲ್ಮುಖ ಜ್ವಾಲೆಯ ಹಣತೆ, ದೀಪ ಅಂತರಾಳದಲ್ಲೂ ಉರಿದರೆ ಬೆಳವಣಿಗೆ. ಎಲ್ಲ ಕಣ್ಣುಗಳ ಮುಚ್ಚಿದಾಗ ಸಿಗುವ ಕತ್ತಲೆಯೇ ಪೂರ್ಣತ್ವ. ಅದೇ ಧ್ಯಾನದ ಬೆಳಕೂ ಕೂಡ. ಅಲ್ಲಿ ಬೆನ್ನ ಹುರಿಯ ಕಣ್ಣು ತೆರದೀತು, ಕುಂಡಲಿನಿಯ ಕತ್ತಲು ಕರಗೀತು. ಕತ್ತಲ ಪರಿಚಯವಾಗಲು ಬೆಳಕ ಪಥ ಅನಿವಾರ್ಯ. ಬೆಳಕು ಹೆಚ್ಚಾದರೆ ಆಗಲೂ ಕತ್ತಲೆಯೇ. ನೋಡುವ ಕಣ್ಣಿನ ಅಳಿವಿಗೆ ತಕ್ಕಷ್ಟು, ಒಳಗಣ್ಣಿಗೆ ಸಿಕ್ಕಷ್ಟು. ಬೆಳಕು ಚೆಲ್ಲುವ ಸುರ್ಯ ಜೀವನಕ್ಕೂ ಸುಡು ಬೆಂಕಿಗೂ ಕಾರಕ. ಬೆಳಕಿನಿಂದ ವಸ್ತುಗಳ ಗುರುತು, ಜ್ವಲಿತ ಬೆಳಕನ್ನು ನೋಡುವುದೂ ಸುಲಭವಲ್ಲ. ಕತ್ತಲೊಳಗಿನ ಬೆಳಕಿನಿಂದಲೇ ದರ್ಶನ, ಅಂತರಂಗಕ್ಕೂ ಬಹಿರಂಗಕ್ಕೂ

ಕತ್ತಲನ್ನ ಜೀರ್ಣಿಸಿಕೊಂಡ ಬದುಕಿಗೆ ಬೆಳಕು ಸರಳ, ಬೆಳಕಿಲ್ಲದಿರುವುದೂ ಸುಲಭ, ಅರಿವು ಮೂಡಬೇಕು ಅಷ್ಟೆ. ಪ್ರಪಂಚದಲ್ಲಿ ಯಾವುದೂ ಮುಗಿಯುವುದಿಲ್ಲ. ಕೆಡುಕನ್ನ ಕತ್ತಲಿಗೆ ಒಳಿತನ್ನ ಬೆಳಕಿಗೆ ಆರೋಪಿಸುವುದು ಮಾನವನ ಬುದ್ಧಿಯ ಮಿತಿ. ಒಳಿತಲ್ಲದ ಕೆಡುಕಲ್ಲದ ಸ್ಥಿತಿಯೂ ಇದ್ದೀತು, ಅದು ಕತ್ತಲು ಬೆಳಕಾಗುವ, ಬೆಳಕು ಕತ್ತಲಾಗುವ ಸ್ಥಿರ ನಿಶ್ಚಲ ನಿರ್ವಾತ. ಬೆಳಕು ಕತ್ತಲು ಒಂದರೊಳಗೊಂದು ಬೆರೆತಿವೆ, ನಮಗೆ ಬೇರೆ ಮಾಡಿ ನೋಡುವ ಆಟ. ಬೆಳಗುವ ಹಬ್ಬ ದೀಪಾವಳಿ ಬೆಳಕ ಮಡಿಲಲ್ಲಿ ಕತ್ತಲನ್ನೂ ಕತ್ತಲೊಡಲಿನ ಬೆಳಕನ್ನೂ ನಮಗೆ ತೋರಿಸಲಿ. ಅಂತರಂಗದ ಕತ್ತಲಲ್ಲಿ ಬಾಹ್ಯದ ಬಣ್ಬಣ್ಣದ ಬೆಳಕು ಕರಗಿ ನಮ್ಮನ್ನ ಹಣತೆಯಾಗಿಸಲಿ. ಬದುಕು ಧನ್ಯವಾಗಲಿ.

* * * * * * * *
 ಚಿತ್ರಕೃಪೆ : ಅಂತರ್ಜಾಲ

ದಿನಾಂಕ: 03.11.2013ರಂದು 'ಅವಧಿ'ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ - http://avadhimag.com/2013/11/03/%E0%B2%95%E0%B2%A4%E0%B3%8D%E0%B2%A4%E0%B2%B2%E0%B3%8A%E0%B2%A1%E0%B2%B2%E0%B2%BF%E0%B2%A8-%E0%B2%AC%E0%B3%86%E0%B2%B3%E0%B2%95-%E0%B2%95%E0%B2%BE%E0%B2%A3%E0%B3%8D%E0%B2%95%E0%B3%86%E0%B2%97%E0%B3%8A/

1 comment:

  1. ಏನೋ ಭಾರೀ ಇದೆ ಇದರಲ್ಲಿ ಅನ್ನುವುದು ಗೊತ್ತಾಯಿತು.... ಏನಂತ ತಿಳಿಯಲಿಲ್ಲ....
    ಒಳ್ಳೆಯ ಬರಹ......
    ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು.....

    ReplyDelete

ನಿಮ್ಮ ಅನಿಸಿಕೆ