ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday, 14 June 2011

ಅಕ್ಷರ - ಅರಿವಿನ ಸಮುದ್ರ

ಜ್ಞಾನಜ್ವಾಲೆಯಶಿಶು//ನಿಮ್ಮೊಂದಿಗೆ


ಅಕ್ಷರ ಪ್ರಪಂಚದ ವಿಸ್ತಾರವನ್ನ ಜ್ಞಾನ-ವಿಜ್ಞಾನವನ್ನ ಬೆರಗುಗಣ್ಣಿಂದ ನೋಡುತ್ತ, ನನ್ನದೆನ್ನುವ ಅಕ್ಷರಗಳ ವಿನ್ಯಾಸ ಮೂಡಿಸುವ ಪ್ರಯತ್ನದಲ್ಲಿ ಈ ಬ್ಲಾಗ್ ಆರಂಭಿಸಿಯಾಗಿದೆ. "ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್" - ಏನು ಬರೆದರೂ ಅದು ವ್ಯಾಸನ ಉಗುಳೇ ಎಂದಿದೆ ಮಹಾಭಾರತ. ಅಲ್ಲಿಗೆ ನಾನು ಬರೆಯುವುದ್ಯಾವುದೂ ಹೊಸತಲ್ಲ, ಹೊಸತನ್ನೇ ಬರೆಯುತ್ತೇನೆ ಎನ್ನುವಷ್ಟು ಪ್ರಬುದ್ಧನೂ ಅಲ್ಲ, ಆ ಅಹಂ ಕೂಡ ನನಗಿಲ್ಲ. ಪ್ರಪಂಚದ ವಿಸ್ತಾರದಲ್ಲಿ ಹರಿದಾಡುತ್ತಿರುವ ಜ್ಞಾನ ತುಣುಕು ತಲೆ ಸೇರಿ ವಿಚಾರದ ಅಲೆಯನ್ನೆಬ್ಬಿಸಿದಾಗ ಅಕ್ಷರದಲ್ಲಿ ಹಿಡಿದಿಡುವ ಪ್ರಯತ್ನ ನನ್ನದು. ಇವೆಲ್ಲ ಹಿಂದಿನವರು ಹೇಳಿದ್ದೇ, ಮುಂದಿನವರು ಹೇಳುವಂತದ್ದೆ. ಅಭಿವ್ಯಕ್ತಿಯ ಮಾಧ್ಯಮ, ಸ್ವರೂಪ ಬೇರೆ ಅಷ್ಟೆ. 

ಸಮುದ್ರ ತೀರದ ಮರಳ ಮೇಲೆ ಎಷ್ಟು ಜನ ತಮ್ಮ ಕನಸುಗಳ ಅರಳಿಸಿಲ್ಲ, ಎಷ್ಟು ಪಾದಗಳ ಹೆಜ್ಜೆ ಗುರುತು ಬಿದ್ದಿಲ್ಲ, ಎಷ್ಟು ತೋರು ಬೆರಳ ತುದಿ ಚಿತ್ತಾರಗಳ ಮೂಡಿಸಿಲ್ಲ, ಎಷ್ಟು ಸೃಜನಶೀಲ ಮನಸ್ಸುಗಳು ಮರಳಲ್ಲಿ ಕಲೆ ಅರಳಿಸಿಲ್ಲ, ಎಷ್ಟು ಮಾನವ ಪ್ರಯತ್ನ ನಗರಗಳನ್ನೇ ಕಟ್ಟಿಲ್ಲ, ಇದೆಲ್ಲ ಸಮುದ್ರ ರಾಜನ ಪ್ರೀತಿಗೆ ಬಲಿಯಾಗಿ ಸಾಗರದಾಳ ಸೇರಿದಂತೆ... ಅಕ್ಷರವೆಂಬ ಅರಿವಿನ ಸಮುದ್ರ ತೀರದಲ್ಲಿ ಹಿಂದೆ ಯಾರೋ ತೋರಬೆರಳ ತುದಿಯಿಂದ ಬಿಡಿಸಿರಬಹುದಾದ ವಿನ್ಯಾಸವನ್ನ ನನ್ನದೇ ರೀತಿಯಲ್ಲಿ ಮೂಡಿಸುವ ಬಯಕೆ, ಕಾಲನ ಅಲೆ ಅಳಿಸಿ ಹಾಕಿದ್ದನ್ನ, ಅಳಿಸಿ ಹಾಕಬಹುದಾದ್ದನ್ನ ಹೀಗೆ ಸುಮ್ಮನೆ ಬರೆಯುವ ಬಯಕೆ. ಅಲೆ ಅಳಿಸುತ್ತದೆ ಎಂದು ಗೊತ್ತಿದ್ದೂ ಮರಳಲ್ಲಿ ಹೆಸರ ಬರೆದು, ಚಿತ್ರ ಬಿಡಿಸಿ, ಗೂಡು ಕಟ್ಟಿ ಕುಣಿದು ಕುಪ್ಪಳಿಸುತ್ತೇವಲ್ಲ ನಾವು ಹಾಗೆ.

ಅಕ್ಷರ - ಅರಿವಿನ ಸಮುದ್ರ.
ಕ್ಷರ ಎಂದರೆ - ಲೀನವಾದದ್ದು, ನಾಶವಾಗುವಂತದ್ದು
ಅಕ್ಷರ - ಉಳಿದಿದ್ದು, ಅವಿನಾಶಿ ಎನ್ನುತ್ತದೆ ಅರ್ಥ ಪ್ರಪಂಚ. 
ವಿಚಾರ, ಚಿಂತನ, ಮಾತುಗಳೆಲ್ಲ ಲಿಪಿಯಾಗುವ ಹಂತ ಅಕ್ಷರ.

 ಅಕ್ಷರದ ಬೆಳಕಲ್ಲಿ ಅರಿವು ಬೆಳೆಸಿಕೊಂಡವರು ಈಗಷ್ಟೆ ಹೆಜ್ಜೆ ಇಡುತ್ತಿರುವ ನನಗೆ ದಾರಿ ತೋರಿಸಿದರೆ ಜ್ಞಾನ ಸಾಗರದ ಅರಿವು ವಿಸ್ತರಿಸೀತು. ಭಾಷಾ ಜ್ಞಾನ, ಲಿಪಿ ಜ್ಞಾನ, ಚಿಹ್ನೆ, ವಿನ್ಯಾಸ, ಅಲಂಕಾರ, ಸಮಾಸ, ಶಬ್ದ, ಸಾಲುಗಳ ಕುರಿತು ನನಗಿರುವುದು ಅಲ್ಪ ತಿಳುವಳಿಕೆ ಮಾತ್ರ. ಕೆಲವೊಮ್ಮೆ ಅಕ್ಷರ ಲಿಪಿಗೆ ಏಕರೂಪತೆ ಇಲ್ಲದಿರುವುದೂ ತಪ್ಪಿಗೆ ಕಾರಣವಾದೀತು. ಗಮನಿಸಿ ತಿಳಿಸಿದರೆ ತಿದ್ದಿಕೊಳ್ಳುವೆ, ಕಲಿಯುವೆ. ಬರಹ ಅಂತರಂಗ ವಿಸ್ತಾರಕ್ಕೂ, ಸೃಜನಶೀಲತೆಯನ್ನ ಉಳಿಸಿಕೊಳ್ಳುವ ಬಯಕೆಯದೇ ಆದರೂ ಕ್ರಮ ತಪ್ಪಬಾರದಲ್ಲ..! ನಿಮ್ಮ ಅಭಿಪ್ರಾಯಗಳಿಗೆ, ಅರಿವು ವಿಸ್ತರಿಸುವ ಚರ್ಚೆಗೆ, ತಪ್ಪನ್ನ ಸರಿಯಾಗಿಸುವ ಸಲಹೆಗೆ ಈ ಜಾಗ ಮೀಸಲಿಟ್ಟು ಕಾದಿರುತ್ತೇನೆ. ಸಹಕರಿಸಿ, ಬೆಳಸಿ. ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಗುರು ಅರಳಲಿ...

ಶ್ರೀ ಗುರುಭ್ಯೋ ನಮಃ

ಸರ್ವಃ ಸರ್ವಂ ನ ಜಾನಾತಿ ಸರ್ವಜ್ಞೋ ನಾಸ್ತಿ ಕಶ್ಚನ !
ನೈಕತ್ರ ಪರಿನಿಷ್ಠಾಸ್ತಿ ಜ್ಞಾನಸ್ಯ ಪುರುಷೇ ಕ್ವಚಿತ್ !!

- ಎಲ್ಲರೂ ಎಲ್ಲ ವಿಚಾರಗಳನ್ನೂ ತಿಳಿದಿರುವುದಿಲ್ಲ. ಪ್ರಪಂಚದಲ್ಲಿ ಯಾರೂ ಸಹ ಸರ್ವಜ್ಞರಲ್ಲ ಹಾಗೂ ಒಬ್ಬ ವ್ಯಕ್ತಿಯಲ್ಲಿ ಸಂಪೂರ್ಣ ಜ್ಞಾನದ ಘನತೆಯಿರುವುದಿಲ್ಲ.


1 comment:

  1. ಅಬ್ಬಾ ರಘು blog create ಮಾಡಿದ್ರೂ ಯಾಕ್ ಬರೀತಾ ಇಲ್ಲೆ ಅಂದ್ಕೋತಿದ್ದಿದ್ದೆ... blog ನೋಡಿದಮೇಲೆ ಗೊತ್ತಾತು.... ಸಂಪೂರ್ಣ ಶಸ್ತ್ರಾಸ್ರ್ತ್ರ ಒಟ್ಟು ಗೂಡಿಸಿಯೇ ಅಕ್ಷರ ಸಂಹಾರಕ್ಕೆ ready ಆಯ್ದಾ ಹೇಳಿ.... ಸಶಸ್ತ್ರ ಹೋರಾಟಕ್ಕೆ ಜಯ ಇದ್ದೆ ಇದ್ದು.... ಬರೆಯೋ ಕಲೆ ಯಾರೂ ಹೇಳಿ ಕೊಡೇ ಹೇಳಿಲ್ಲೆ ನಿಂಗೆ... blog ಓಪನಿಂಗೂ ಭರ್ಝರಿ ಆಯ್ದು...
    ಬರಹ ಒಳ್ಳೆ ಮಾತ್ರ.....
    I Like it man....
    (ನಾನೂ 2 ದಿನ ಕ್ಲಾಸಿಗ್ ಬತ್ನೋ blog ಬಗ್ಗೆ ಕೇಳ್ಕಳ್ಳೂದಿದ್ದು...)

    ReplyDelete

ನಿಮ್ಮ ಅನಿಸಿಕೆ