ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday, 12 July 2011

ಜಲ ಕಲಿಕೆ...ಜಲಾಂತರ್ಗತ ಸಹಚರ//ಹೀಗೆ ಸುಮ್ಮನೆ
             
ಮಲೆನಾಡ ಮಣ್ಣಲ್ಲಿ ಹುಟ್ಟಿ ಬೆಳೆದ ನಮಗೆ ನೀರು ಹೊಸತಲ್ಲ. ನಿರಂತರ ಸುರಿವ ಜಿಟಿ ಜಿಟಿ ಮಳೆ, ಪ್ರವಾಹದ ಅಬ್ಬರ, ಗೆದ್ದೆಯ ಅಂಚಿನಲ್ಲಿ ಹರಿವ ಹಳ್ಳ, ತೋಟದೊಳಗಿನ ಕೆರೆ, ಹೆಜ್ಜೆಗೊಂದು ಜಲಪಾತ - ಇವುಗಳಲ್ಲೆ ಬೆಳೆದವರು ನಾವು. ನೀರಾಟ ಮಲೆನಾಡ ಮಂದಿಗೆ ನಿಸರ್ಗದೊಂದಿಗಿನ ಒಡನಾಟ ಕೂಡ. ಮನುಷ್ಯ ನಾಗರಿಕನಾಗುವ ಹಂತದಲ್ಲಿ ನಿಸರ್ಗ ನೀಡಿದ ಕೌಶಲ್ಯಗಳನ್ನೆಷ್ಟೊ ಕಳೆದುಕೊಳ್ಳುತ್ತ ಹೋದನಂತೆ. ನಾಗರಿಕನಾಗುವ ಹಂತದಲ್ಲಿ ಎನ್ನುವುದಕ್ಕಿಂತ ಆಧುನಿಕನಾಗುವ ಭರದಲ್ಲಿ ಎನ್ನಬಹುದೇನೋ.ಸರಸರನೆ ಮರವೇರುವುದು,ಕಾಡ ಮರಗಿಡಗಳೊಂದಿಗಿನ ಬಾಂಧವ್ಯ, ನೀರಿನಲ್ಲಿ ಮೀನಿನಂತೆ ಈಜುವುದು, ಗುಬ್ಬಚ್ಚಿ ಗೂಡಿಗೆ ಮನೆಯಲ್ಲೊಂದು ಪುಟ್ಟ ಜಾಗ...

ಸಂಸಾರ 'ಸರಸ' ವಾಗಿದ್ದ ಕಾಲದಿಂದ 'ಸಸಾರ' ವಾಗುವ ಹಂತಕ್ಕೆ ತಲುಪುತ್ತಿದ್ದೇವಾ? ಬದುಕೂ ಒಂದು ವ್ಯವಹಾರವಾಗುತ್ತ, ಸಂಬಂಧಗಳ ಬಂಧ ಸಡಿಲವಾಗುತ್ತ, ಹಣ ಬದುಕಿನ ಮಾಪನವಾಗಿ ಆಧುನಿಕರೆನಿಸಿಕೊಳ್ಳಲು ಹೆಣಗುತ್ತಿದ್ದಾನೆ ಮನುಷ್ಯ. ನಗರ ಜೀವನದ ಧಾವಂತದಲ್ಲಿ ನೀರು ನಿತ್ಯಕರ್ಮಗಳ ಅಗತ್ಯ ಮಾತ್ರ ಎನ್ನುವಷ್ಟು ಬದಲಾಗಿದೆ ಕಾಲ.  ಹಳ್ಳಿಗಳಲ್ಲೂ ಹಳ್ಳದ ನೀರಲ್ಲಿ ಈಜು ಕಲಿಸಲು ಯಾರಿಗೂ ಆಸಕ್ತಿಯಿಲ್ಲ. ಒಂದು ಕಾಲವಿತ್ತು, ಬೆಸಗೆಯ ರಜಾ ದಿನಗಳಲ್ಲಿ ಮಲೆನಾಡ ಮಕ್ಕಳೆಲ್ಲ ಜಲಚರ ಜೀವಿಗಳಾಗುತ್ತಿದ್ದ ಕಾಲ, ಎಮ್ಮೆಗುಂಡಿಯಲ್ಲಿ ಕೆಸರು ನೀರಲ್ಲಿ ಬಿರು ಬಿಸಿಲಿನಲ್ಲಿ ಹೊರಳಾಡುತ್ತಿದ್ದ ಸುಖದ ಕಾಲ... ಆ ಕಾಲದಲ್ಲಿ ಈಜುವುದು ಬದುಕಿನ ಅನಿವಾರ್ಯ ಕಲಿಕೆ..

ಯಾಕೋ ಮನಸ್ಸು ಕಾಡುತ್ತಿದೆ. ನಗರ ಜೀವನದ ಅನಿವಾರ್ಯತೆಗಳೆಲ್ಲದರ ನಡುವೆಯೂ, ಮಲೆನಾಡ ಹುಡುಗನಾಗಿ ಕಲಿಯದ ಕೌಶಲ್ಯವನ್ನ ಕಲಿಯಬೇಕೆಂದುಕೊಳ್ಳುತ್ತ ನೀರಿಗಿಳಿದಿದ್ದೇನೆ. ನಿಸರ್ಗ ಸಹಜವಾಗಿ ನೀಡುವ ಜೀವ ರಕ್ಷಣಾ ಕಲೆಯನ್ನ ಅಸಹಜವಾಗಿ ಕಲಿಯುವಾಗಲೂ ಮನಸ್ಸು ಆನಂದ ಸಾಗರವಾಗುತ್ತದಲ್ಲ - ಸಾರ್ಥಕದ ಕ್ಷಣ ಅದು. ಪ್ರಕೃತಿಯೇ ಹಾಗೆ ಅದರೊಂದಿಗಿನ ಎಲ್ಲ ಒಳಗೊಳ್ಳುವಿಕೆಯೂ ಆನಂದವೇ. ಹರಿವ ನೀರು, ಬೀಸುವ ಗಾಳಿ, ಹಸಿರು ಎಲೆ, ಮೊದಲ ಮಳೆಯ ಮಣ್ಣ ಬಿಸಿಯುಸಿರ ಪರಿಮಳ, ಕೆಸರು ಗದ್ದೆ, ಗೋಧೂಳಿಯ ಹೊನ್ನ ಕಿರಣ, ಮುಂಜಾನೆಯ ಮಂಜಿನ ತಂಪು, ಅರಳುವ ಹೂವಿನ ಕಂಪು, ಪಕ್ಷಿ ಲೋಕದ ಇಂಚರ, ಪಾತರಗಿತ್ತಿಯ ರೆಕ್ಕೆಯ ಬಣ್ಣ, ಸೂರ್ಯೋದಯ ಸೂರ್ಯಾಸ್ತಗಳ ಸಂಭ್ರಮ, ಅಸಂಖ್ಯ ನಕ್ಷತ್ರಗಳ ಮಿಣುಕು, ವಿಶಾಲ ಗಗನ, ವಿಸ್ತಾರ ಸಾಗರ ಮತ್ತು ಹರಡಿಬಿದ್ದ ಮರಳ ತೀರ...

ಮನುಷ್ಯ ಆಧುನಿಕನಾದರೂ ಮನಸ್ಸು ಪ್ರಾಚೀನವೆ ಇರಬಹುದಾ? ನಿಸರ್ಗದ ಮಡಿಲಲ್ಲಿ ಕುಳಿತು ಮನಸ್ಸಿಗೆ ಸಮಯ ಕೊಟ್ಟರೆ ಆಧುನಿಕತೆಯ ಮೀರಿದ ಭಾವ.. ಏನೋ ಆಹ್ಲಾದ... ಹಗಲುಗನಸುಗಳ ಮೆರವಣಿಗೆ... ಬಾಲ್ಯ ಜೀವನದ ಕನವರಿಕೆ... ಆದರೆ ನಗರ ಪ್ರಪಂಚ ಕೇಳುವುದು ಮನಸ್ಸಿನ ಭಾವ ತರಂಗಗಳನ್ನಲ್ಲ, ಬುದ್ಧಿವಂತಿಕೆಯ ರಭಸಗಳನ್ನ..!! 

ಹೊಸತನ್ನ ಕಲಿಯುವ ಹಂಬಲದಲ್ಲಿ ಈಜುಕೊಳಕ್ಕೆ ಧುಮುಕಿದ್ದೇನೆ. ಕೈ ಕಾಲು ಬಡಿದು ನೀರೊಳಗೆ ಆಟವಾಡತೊಡಗಿದ್ದೇನೆ. ಹೊಸತನ್ನ ಕಲಿಯುವ ಸಂಭ್ರಮ ನನಗೆ. ಈ ಬ್ಲಾಗ್ ಬರವಣಿಗೆ ಕೂಡ ನನಗೆ ಹೊಸತೇ. ಬದುಕೀಗ ನವನವೀನ. ಪ್ರಕೃತಿ ಗೆಲ್ಲಿಸುತ್ತದೆ, ಮುಳುಗಿಸುವುದಿಲ್ಲವೆಂಬ ನಂಬಿಕೆಯಿಂದ ನೀರ ಮಡಿಲಿಗೆ ಬಿದ್ದಿದ್ದೇನೆ. ಬಾಲ್ಯ ಕಲಿಸದ ಕೌಶಲ್ಯವ ಯೌವನದ ಉತ್ಸಾಹ, ಆಧುನಿಕತೆ, ಹಣ ಕಲಿಸುತ್ತಿದೆ. ಕಲಿಕೆ ಹೇಗೇ ಆದರೂ ಕಲಿಕೆಯೇ ತಾನೆ. 

ಈಜುಕೊಳದಲ್ಲಿ ಮೊದಲ ಹೆಜ್ಜೆ ಇಡುವ ಸಂಭ್ರಮದಲ್ಲಿ ಮೂಡಿದ ವಿಚಾರಗಳ ನಿಮ್ಮೆದುರು ಹರಡಿದ್ದೇನೆ. ಅನುಭವಗಳನ್ನ ಹಂಚಿಕೊಳ್ಳಬೇಕಿದೆ. ಭಾವನೆಗಳನ್ನ ಹರಡಿಕೊಳ್ಳಲು ಡೈರಿಯಿತ್ತು. ನಗರ ಸೇರಿ ಆಧುನಿಕನಾಗುವ ಭರದಲ್ಲಿ ಮರೆತಿದ್ದೆ. ಡೈರಿ ಆತ್ಮ ಸಾಂಗತ್ಯಕ್ಕಿದ್ದರೆ ಈಗ ಬ್ಲಾಗ್ ಇದೆ - ಅಕ್ಷರ ಸಾಂಗತ್ಯಕ್ಕೆ. ಮತ್ತೆ ಬರವಣಿಗೆ ಮೂಡುತ್ತಿದೆ. ಭಾವಗಳೆಲ್ಲ ಏಕಾಂತದ ಪುಟಗಳಿಂದ ಸಾರ್ವತ್ರಿಕವಾಗುವ ತುಡಿತದಲ್ಲಿವೆ. ನಿಮ್ಮೆದುರಿಗೆ ನಾನು ಈಗ ತೆರೆದ ಅಕ್ಷರ ಗುಚ್ಛ... (ಶಿವಾನಂದ ಕಳವೆಯವರ "ಕಂಪ್ಯೂಟರ್ ಊಟ, ಅಡವಿ ಮಾರಾಟ" ಎನ್ನುವ ಪುಸ್ತಕದಲ್ಲಿ ಈಜುವ ವಿಷಯದ ಬಗ್ಗೆ ಬರಹವೊಂದಿದೆ. ಕಣಜ ದಲ್ಲಿ "ಈಜುಬಾರದ ಪಂಡಿತರು" ಶೀರ್ಷಿಕೆಯಲ್ಲಿ ಇದು ಓದಿಗೆ ಲಭ್ಯ - ಓದುವ ಕುತೂಹಲಕ್ಕಾಗಿ ಈ ಲಿಂಕ್ ಬಳಸಿ http://kanaja.in/?p=2166 )

1 comment:

 1. ಏಯ್.... ನಾ ಈಜು ಬಾ ಮಗಾ ಅಂತ ಬೆಕಷ್ಟ್ ಸಲ ಕರೀದ್ನಿಲ್ಯಾ....
  ನಾನು natural swimmmingfool ನಲ್ಲಿ ಕಲ್ಸ್ತಿದ್ನಲೋ.......

  ಮಳೆಗಾಲ ಇದು ಬಾ ಇಲ್ಲಿ....
  ಮತ್ತೆ ಮೊದ್ಲಿನಂಗೇ ಅರ್ಲ್ ಗುಂಡಿ ಕ್ವಾಣಂಗೋ ಅಪ್ಪಾ..... ಬೇಕಷ್ಟ್ ರಾಡಿ ಇದ್ದು.....
  ಚಂದಾ ಬರೀದೆ ಹಾಂ......
  ....................pppppp
  ...................uuuuuuu
  ......................uuuu
  ........................uu
  ................keep it ^

  ReplyDelete

ನಿಮ್ಮ ಅನಿಸಿಕೆ