.jpg)
ಈಗಷ್ಟೆ ಅರಳುತ್ತಿರುವ ಮೊಗ್ಗುಗಳ ಮೃದುವಾಗಿ ನೇವರಿಸಿ ದೇವ ಪೂಜೆಗೆಂದು ಆರಿಸಿ, ತುಸು ಬೆಳಕು
ಮೂಡಿದಾಗ ಮನೆಯಂಚಿನ ಕೊಟ್ಟಿಗೆಯ ಸೇರಿ ಗಂಗೆ ಗೌರಿಯರ
ಬೆನ್ನ ಮೇಲೆ ಕೈಯಾಡಿಸಿ ಒಲವ ಹಂಚಿಕೆಯೊಂದಿಗೆ ದಿನಚರಿಯ ಕೆಲಸಗಳು ಮೊದಲ್ಗೊಳ್ಳುತ್ತವೆ. ಹಂಡೆಯ ತುಂಬ ಹಬೆಯಾಡುವಂತೆ ನೀರು ಬಿಸಿಯಾಗಿಸಿ, ಪುಟ್ಟ ಪುಟ್ಟ ಮಕ್ಕಳ
ಎಬ್ಬಿಸಿ ಅವರ ಸ್ನಾನ
ಪಾನಗಳ ಮುಗಿಸುವಾಗ ಶಾಲೆಗೆ ಕಳಿಸುವ ಗಡಿಬಿಡಿ. ಈ ಮಧ್ಯದಲ್ಲೆ ಮನೆಯವರೆಲ್ಲರೂ ದೋಸೆಯ ಉಪಹಾರ ಮುಗಿಸಿದರೆ ಬೆಳಗಿನ ಕೆಲಸಗಳಿಗೆ ಒಂದು ಆರಾಮ.
ವಿಶಾಲವಾದ ಮನೆಯನ್ನ ಸ್ವಚ್ಛಗೊಳಿಸಿ, ದನಗಳ ಮೇಯಲು ಬಿಟ್ಟು
ತಾನು ದನಗಳ ಮೇವಿಗೆ
ಹುಲ್ಲು ಕೊಯ್ದು ತೋಟ ತಿರುಗಿ, ಅಡಿಕೆ ಆರಿಸಿ
ಮನೆಗೆ ಬಂದರೆ ಒಂದು ಹಂತದ ಕೆಲಸ ಮುಗಿದಂತೆನಿಸಿ ಪುಟ್ಟ ಚಹಾ ವಿರಾಮ.

ಸಂಜೆಯ ನಸುಬೆಳಕು ಆರುವ ಮೊದಲು ತೋಟದಂಚಿನ ಕೆರೆಯ
ಬಳಿ ಹೋಗಿ ಪೂಜೆಗೆಂದು ದುರ್ಬೆ ಕೊಯ್ದು, ದನಗಳಿಗೆ ಬಾಳೆ ದಿಂಡುಗಳ ಆರಿಸಿ
ತಂದು ಕೊಟ್ಟಿಗೆಯ ಕೆಲಸವ ಮುಗಿಸುವ ವೇಳೆಗೆ ಮುಸ್ಸಂಜೆಯ ಹೊಳಪು ಕೊನೆಯ ಚರಣದಲ್ಲಿ ತೆವಳುತ್ತಿರುತ್ತದೆ. ದೇವರೆದುರು ಬಾಗಿಲೆದುರು ದೀಪವ ಹಚ್ಚಿ, ಆಡಿ ಬಂದ ಮಕ್ಕಳ ಕೈ ಕಾಲು ತೊಳೆಸಿ ಒಂದಿಷ್ಟು ಭಜನೆ,
ಮಕ್ಕಳಿಗೆ ಬಾಯಿಪಾಠದ ಕಲಿಕೆ.
ಭಜನೆ ಮುಗಿಯುವ ವೇಳೆಗೆ
ರಾತ್ರಿಯ ಅಡುಗೆಯೂ ಸಿದ್ಧ.
ಆಕಾಶವಾಣಿಯಲ್ಲಿನ ಸಂಜೆಯ ವಾರ್ತೆಗಳು ಮುಗಿಯುವ ವೇಳೆಗೆ ಊಟ ಮುಗಿದಿರುತ್ತದೆ. ಊಟದಾಚೆಯ ಎಲ್ಲ ಕೆಲಸ ಮುಗಿದಾಗ ದೈನಿಕ
ದಾರಾವಾಹಿಯ ಮುಕ್ತಾಯ. ಇಷ್ಟವಾದರೆ, ಬೇಕೆನ್ನಿಸಿದರೆ, ಕರೆಂಟಿದ್ದರೆ ಅರ್ಧ ಘಂಟೆ ಟಿ.ವಿ., ಸ್ವಲ್ಪ ಹೊತ್ತು ವಿವಿಧ
ಭಾರತಿಯ ಹಳೇ ಹಿಂದಿ
ಹಾಡುಗಳು, ಮಕ್ಕಳ ಆಟ ಪಾಠಗಳು, ಒಂದಿಷ್ಟು ಪ್ರೇಮ,
ಇರುಳ ಗಾನದಲ್ಲಿ ಸೊಂಪಾದ
ನಿದ್ದೆ.
ಈಕೆ ದಟ್ಟ ಕಾನನಗಳ
ನಡುವಿನ ಪುಟ್ಟ ಪುಟ್ಟ
ಹಳ್ಳಿಗಳಲ್ಲಿರುವ ಮಲೆನಾಡ ಸೊಬಗಿನ
ನಮ್ಮೆಲ್ಲರ ಆಯಿ. ದೈನಿಕದಾಚೆಗೂ ಒಂದಷ್ಟು ಕೆಲಸಗಳಿಗೆ ಈಕೆಗೆ ಪುರುಸೊತ್ತಿದೆ. ಅಡಿಕೆ ಸೀಜನ್ನಲ್ಲಿ ಅಂಗಳಕ್ಕೆ ಸಗಣಿ ನೀರು ಹಾಕುವುದು, ಅಡಿಕೆ ಸುಲಿಯುವುದು, ಅಡಿಕೆ ಹರಡುವುದು, ಆಳುಗಳಿಗೆ ಆಸರಿ ಕೊಡುವುದು ಸೇರಿದಂತೆ ಅಪ್ಪನಿಗೆ ಹೆಗಲಾಗುತ್ತಾಳೆ. ಹಲಸಿನ ಹಣ್ಣಿನ
ಕಾಲದಲ್ಲಿ ಮಕ್ಕಳಿಗಾಗಿ, ನೆಂಟರಿಗಾಗಿ ಸಂಡಿಗೆ
ಹಪ್ಪಳಗಳ ಮಾಡುತ್ತಾಳೆ. ದಿನನಿತ್ಯ ತನ್ನ ಪುಟ್ಟ ಹಿತ್ತಲಿಗೆ ನೀರೆರೆಯಲು ಮರೆಯುವುದಿಲ್ಲ. ನೆಂಟರ ಮನೆಯಿಂದ ಬರುವಾಗ
ತಂದ ಹೂ ಗಿಡಗಳೊಡನೆ ಪಿಸುಮಾತ ತಪ್ಪಿಸುವುದಿಲ್ಲ. ನೆಂಟರ ಮನೆಗಳಿಗೂ ಹೋಗುತ್ತಾ, ಮದುವೆ ಮುಂಜಿ
ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾ, ಮಕ್ಕಳ ಬೇಕು ಬೇಡಗಳ ಅರಿಯುತ್ತಾ, ಸಂಪ್ರದಾಯ ಸಂಸ್ಕಾರಗಳ ಕಲಿಸುತ್ತಾ, ಹಬ್ಬ ಹರಿದಿನಗಳ ಆಚರಿಸುತ್ತಾ ಕೆಲಸ ಮಾಡುತ್ತಾಳೆ.
ನಮ್ಮ ಅಜ್ಜಿಯರು ನೆಟ್ಟಿ
ಹಾಕುವುದು, ಗದ್ದೆ ಕಂಠ ಮಾಡುವುದು, ಕಳೆ ಕೀಳುವುದು, ಗೊಬ್ಬರದ ಬುಟ್ಟಿ ಹೊತ್ತು
ತೋಟಕ್ಕೆ ಗೊಬ್ಬರ ಹಾಕುವುದೂ ಸೇರಿದಂತೆ ಆಯಿಯ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರಂತೆ. ಜೊತೆಗೆ ಮನೆ ತುಂಬ ಜನವಿದ್ದ ಕಾಲವದು,
ಕೆಲಸಗಳಿಗೇನೂ ಕೊರತೆಯಿರುತ್ತಿರಲಿಲ್ಲ. ಆಯಿಗೆ, ಅಜ್ಜಿಗೆ ಎಷ್ಟೊಂದು ಭಕ್ತಿ ಗೀತೆ,
ಜನಪದ ಗೀತೆ, ಮಕ್ಕಳ
ಗೀತೆಗಳು ಬರುತ್ತವೆ. ಎಷ್ಟೊಂದು ಶ್ಲೋಕಗಳು, ಸಹಸ್ರನಾಮಗಳು, ಪುರಾಣ ಮಹಾಭಾರತದ ಕಥೆಗಳು ನೆನಪಿವೆ.
ಅವರ ಬತ್ತಳಿಕೆಯಲ್ಲಿ ಮರಹತ್ತಿ ನೆಲ್ಲಿಕಾಯಿ ಕೊಯ್ದು ತಿಂದದ್ದು, ಮೈಲುಗಟ್ಟಲೆ ನಡೆದು ಶಾಲೆ ಕಲಿತಿದ್ದು, ಜಾತ್ರೆಗಳಲ್ಲಿ ಸಿನೆಮಾ ನೋಡಿದ್ದು, ಸಂಪಿಗೆ ಹಣ್ಣು
ಕೊಯ್ಯುವಾಗ ಮುಳ್ಳು ಚುಚ್ಚಿ
ಜ್ವರ ಬಂದು ಮಲಗಿದ್ದು, ಬಿಳಿ ಮುಳ್ಳೆಹಣ್ಣ ಹುಡುಕುತ್ತ ಕಾಡೆಲ್ಲ ಅಲೆದದ್ದು, ಅಜ್ಜಿಯ ಮಗ್ಗುಲಲ್ಲಿ ಮಲಗಿ ರಾಜಕುಮಾರನ ಕಥೆ ಕೇಳಿ ಪುಳಕಗೊಂಡಿದ್ದು, ಅಜ್ಜನ ಕೈ ಹಿಡಿದು ಯಕ್ಷಗಾನ ನೋಡಲು ರಾತ್ರಿಗಳಲ್ಲಿ ನಡೆದದ್ದು, ಅಣ್ಣಂದಿರ ಕಾಡಿದ್ದು, ಅಮ್ಮಂದಿರ ಅಳಿಸಿದ್ದು ಎಂದೆಲ್ಲ ಕಿಲಾಡಿ ನೆನಪುಗಳಿವೆ. ಗುರೂಜಿಯ ಬೆತ್ತದ ಏಟು, ಕುಂಟು ಮಾಸ್ತರರ ನಶ್ಯದ
ಘಾಟು, ಅಕ್ಕೋರು ಹೇಳಿಕೊಟ್ಟ ಗೋವಿನ ಪದ್ಯ, ಶಾಲೆಯ
ಸುತ್ತನೆಟ್ಟ ಹೂವಿನ ಗಿಡಗಳ
ಪರಿಮಳ, ಕಂಪಾಸಿನಲ್ಲಿ ಅಡಗಿಸಿಟ್ಟ ಹುಣಸೆಹಣ್ಣಿನ ರುಚಿ ಎನ್ನುವಂತಹ ಸಂಗತಿಗಳಿವೆ. ಹೆಣ್ಣು
ನೋಡ ಬರುವ ತವಕ, ಹೊಸ ಪರಿವಾರ ಸೇರಿದ
ತಲ್ಲಣ, ಗಂಡನೊಂದಿಗೆ ನೋಡಿದ ಮೊದಲ ಸಿನೆಮಾ, ಬಾಲ್ಯ
ಕಳೆದು ಬದುಕು ಶುರುವಾಗಿದ್ದೇ ತಿಳಿಯದ ಅಚ್ಚರಿಯ ವಿಷಯಗಳಿವೆ. ತವರಿನ, ಸೇರಿದ ಮನೆಯ ಸಂಬಂಧಿಕರೆಲ್ಲರ ಹೆಸರು, ತಲೆಮಾರುಗಳು, ಸಂಬಂಧಗಳು, ದೂರದೂರಿನ ನೆಂಟರು,
ವರ್ಷಕ್ಕೊಮ್ಮೆ ಬರುವ ಸಂಭಾವನೆ ಭಟ್ಟರುಗಳ ಜನರ ಜಾತ್ರೆಗಳಿವೆ ತಲೆಯಲ್ಲಿ.
.jpg)
.jpg)
* * * * * * * *
ಚಿತ್ರಕೃಪೆ : ಅಂತರ್ಜಾಲ
ಇದು ‘ಕಹಳೆ’ಯ ನಾಡಹಬ್ಬಕ್ಕಾಗಿ ಬರೆದ ಲೇಖನ. ‘ಕಹಳೆ’ಯಲ್ಲಿ ದಿನಾಂಕ: 06.11.2013ರಂದು ಪ್ರಕಟಿಸಲ್ಪಟ್ಟಿದೆ. ‘ಕಹಳೆ’ಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ - http://www.kahale.gen.in/2013/11/06-Nov.html
No comments:
Post a Comment
ನಿಮ್ಮ ಅನಿಸಿಕೆ