ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday, 27 March 2014

ಶಿಶಿರ ಸಲ್ಲಾಪ - 2

ಕಾವ್ಯ ಲಹರಿ//ರಘುನಂದನ ಕೆ.
1
ಮಾಗಿಯ ಇರುಳ
ಬೆರಳ ಹಿಡಿಯಲ್ಲಿ,
ಚಂದ್ರ ಕರಗಲು
ನಾಡಿ ನಾಡಿಗಳಲ್ಲಿ ಸುಖವರಳಿ
ಉನ್ಮತ್ತ ಪೂರ್ಣ ಕುಂಭರಸಪಾತ್ರೆ

ಎಲ್ಲಿಯೋ ರಸ ಸ್ಪರ್ಶ
ಮತ್ತೆಲ್ಲಿಯೋ ಉದ್ದೀಪನ
ಅಮೃತ ರಸೋನ್ಮತ್ತದಲ್ಲಿ
ಮುದುಡಿ ಮಲಗಿದ್ದ ಸರ್ಪಕ್ಕೀಗ
ಸಹಸ್ರಾರದ ಬಯಕೆ

2
ಶಿಶಿರದ ಕನಸುಗಳಲ್ಲಿ
ಹಿಮಕನ್ಯೆಯ ಬಿಸಿ
ಉಸಿರಿಗೂ ಪುಳಕ..
ಮಂಜು ಮುಸುಕಿದ
ಹರೆಯದ ಮುಂಜಾವಲ್ಲಿ
ನೆನಪುಗಳಿಗೂ ನಡುಕ;

ಎದೆಯಂತಃಪುರದ
ತಲೆಬಾಗಿಲ ಮುಕುಟದಲ್ಲಿ
ಸ್ಪರ್ಶಮಣಿ ಮೀಂಟಲು
ಸಕಲಾಶೆಯ ಸುರತ
ಮಾಗಿಯ ಹೂ ಚುಂಬನ
ಶೃಂಗಾರ ಅಭ್ಯಂಜನ


3
ಆಕಾಶದಂಗಳದ ಕೆಳಗೆ
ಅಂಗಾತ ಮೈ ತೆರೆದು
ಮಲಗಿ ಲೆಕ್ಕ ಹಾಕಿದ್ದು
ತಾರೆಗಳನ್ನಲ್ಲ
ಮೈಯ ಮಚ್ಚೆಗಳನ್ನ
ಚಂದ್ರಕಲಾ ಶೋಭಿತೆ..

ಬಿಸಿಯುಸಿರ ಏರಿಳಿತಕ್ಕೆ
ಲೆಕ್ಕತಪ್ಪಿ ಕಂಗಾಲಾದವಗೆ
ದಾರಿ ತೋರಿಇರುಳ
ಕೆರಳಿಸಿದ ರೀತಿಗೆ
ಸಾಂಖ್ಯಾ ಶಾಸ್ತ್ರ ದಿಕ್ಕುತಪ್ಪಿ
ವಾತ್ಸಾಯನ ಬಾಚಿ ತಬ್ಬಲು

ಇರುಳ ರಂಗಮಂಚದಲ್ಲಿ
ಶೃಂಗಾರ ಶತಕ ಸಂಕೀರ್ತನ!!

ಚಿತ್ರಕೃಪೆ : ಅಂತರ್ಜಾಲ

No comments:

Post a Comment

ನಿಮ್ಮ ಅನಿಸಿಕೆ