ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Friday 30 May 2014

ಶಬ್ದ ಕರಗಿಸು ಮೌನ ಕರುಣಿಸು – ಪ್ರಾರ್ಥನೆ

ಕಾವ್ಯ ಲಹರಿ//ರಘುನಂದನ ಕೆ.

1
ತಿರುಗುವ ಚಕ್ರ
ಓಡುವ ಕಾಲ
ಉರಿಯುತ್ತಿದೆ ದೀಪ
ಜೀವದ ಬತ್ತಿಗೆ
ಜನ್ಮಾಂತರದ ಎಣ್ಣೆ ಪಾಪ;

ಕಾಯುತ್ತಿದ್ದೇನೆ
ಸೂರ್ಯ ಮುಳುಗುತ್ತಾನೆಂದು
ಮಾತು ನಿಲ್ಲುತ್ತದೆಂದು
ಮೌನಕ್ಕೆ ನಾಲಿಗೆ ಬೇಡ
ಕರುಣೆಯಿರಲಿ, ಆಮೆನ್

2
ಪೇರಿಸಿಟ್ಟ ಕಲ್ಲುಗಳ ಗೋಡೆ
ಹಾರಾಡುವ ಶಬ್ದ ಭಂಡಾರ
ಅರೆ ಬರೆ ಎಚ್ಚರ
ಬದುಕಿನ ಪುಸ್ತಕದಲ್ಲಿ
ಬೇಕೇ ಅಷ್ಟೆಲ್ಲ ಅಕ್ಷರ

ಗೊತ್ತಿದೆ, ಸುಲಭವಲ್ಲ
ಶಬ್ದಕೋಶ ಓದುವುದು
ಮುಗಿಯಲಿ ಬೇಗ
ಮೌನಕ್ಕೆ ಗ್ರಂಥಗಳಿಲ್ಲ
ದಯೆಯಿರಲಿ, ಆಮೆನ್

3
ಅರೆರೆ, ಎಷ್ಟೊಂದು ಶಬ್ದಗಳಿವೆ
ಮಾತೇ ಮುಗಿಯುತ್ತಿಲ್ಲ ಇಲ್ಲಿ
ಮನಸ್ಸಿಗೂ ಶಬ್ದಗಳದೇ ಹಂಗು
ಇನ್ನು ಮನುಷ್ಯನ ಮಾತೇಕೆ..??

ಮಾತು ಮಥಿಸಿ
ಅರ್ಥ ಅರಳುವ ವೇಳೆಗೆ
ಸೂರ್ಯನೂ ಕರಗಿ ರೆಪ್ಪೆ ಭಾರ
ಅರ್ಥ ನಿರರ್ಥಕವಾಗಿ
ಕಾಲ ವ್ಯರ್ಥವಾಗದಂತೆ
ಸ್ವಲ್ಪ ಎಚ್ಚರ ಕೊಡು,
ಹಾಗೇ ಮೌನವನ್ನೂ…!!

ಚಿತ್ರಕೃಪೆ : ಅಂತರ್ಜಾಲ

No comments:

Post a Comment

ನಿಮ್ಮ ಅನಿಸಿಕೆ