ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday, 23 July 2014

ಸಂಸ್ಕೃತದ ಸೊಬಗು ಬೆಳಗಲಿ...

ಕಾವ್ಯ ಲಹರಿ//ರಘುನಂದನ ಕೆ.

ಸಂಸ್ಕೃತ ಭಾಷೆಯ ಅಭ್ಯುದಯದ ಪ್ರಯತ್ನಗಳ ಕುರಿತಂತೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆ. ದೇವಭಾಷೆಯ ಮಡಿವಂತಿಕೆಯಿಂದ ಹೊರಬಂದು ಅದು ಬೇಡ ಎನ್ನುವ ಮತ್ತೊಂದು ಮಡಿವಂತಿಕೆ  ಶುರುವಾಗಿದೆಯಾ. ಚರ್ಚೆಯ ಸಾರ ಏನೇ ಇರಲಿ, ಎಲ್ಲ ಭಾಷೆಯಲ್ಲಿ ಅದರದ್ದೇ ಆದ ಜ್ಞಾನ ಸಂಪತ್ತಿದೆ, ಆ ಭಾಷೆ ಏಕಿಲ್ಲ ಎನ್ನುವುದರ ಜೊತೆಯಲ್ಲೆ ಈ ಭಾಷೆಯ ಬೆಳಕಿಗೂ ಅವಕಾಶವಿರಲಿ ಎನ್ನುವ ಆಶಯ.

ಕವನ ಕಟ್ಟುವ ಪ್ರಕ್ರಿಯೆಯಲ್ಲಿ ಹೀಗೊಂದು ವಿಷಯವನ್ನ ಇಟ್ಟು, ನನಗೆ ಹೊಸದೆನಿಸುವ ಶೈಲಿಯ ಪ್ರಯತ್ನ ಮಾಡಿದ್ದಷ್ಟೆ, ಇದು ಕವನವಾಗಿದೆಯಾ ಎನ್ನುವುದು ಗೊತ್ತಿಲ್ಲ. ಬರಹಕ್ಕಾಗಿಯೇ ಬರೆದ ಬರಹವಿದು, ರಸ ಸ್ವಾದ ಕಡಿಮೆಯಾದರೆ ಕ್ಷಮೆಯಿರಲಿ.
* * * * * * * *

ಮಡಿಯ ಮಡಿ ಒಂದೆಡೆಯಾದರೆ
ಮೈಲಿಗೆಯ ಮಡಿಯೊಂದೆಡೆ ಮೂಡುತಿದೆ,
ಹಿರಿಯವ್ವ ತಾಯಿಯ ತೊರೆದು
ಸುಕುಮಾರಿ ಮಗಳೊಂದೆ ಸಾಕೆನುತಲಿ
ಅಬ್ಬರಿಸುತಿಹ ಆಧುನಿಕ ಸಂಜಾತರೆದುರು
ಹಿರಿತನದ ಅರಿವು ಸಾಯುತಿದೆ ಕಾಣಾ;
ಶ್ರದ್ಧೆಯ ಶ್ರಾದ್ಧವ ನೋಡೋ ಯುಗ ಪುರುಷ!!

ಜನಭಾಷೆ ನುಡಿಭಾಷೆಗಳ ಮಿತಿಯೊಳ್
ಮುದಿಭಾಷೆಯ ಜ್ಞಾನಸಾಗರವು ಲವಣವಾಗಿ,
ಯುವಲತೆಯ ಲಾವಣ್ಯದ ಸೊಗಸೊಳ್
ಹಳೆ ಬೇರು ವಿಸ್ಮೃತಿಗೆ ಸರಿಯದಿರಲೆನುತ
ನೀರ ಹಾಯಿಸುವ ಆಸಕ್ತರ ಭಕ್ತಿಯನು
ಧಿಕ್ಕರಿಸುವ ಒಣ ಉನ್ಮಾದವಿರದಿರಲಿ;
ತೆಕ್ಕೆಯೊಳಗೆಳೆದು ಬೆಳೆಯಲಿ ಸಿರಿ ಹರುಷ!!

ಮುಚ್ಚಿದ ಬಿರು ಮೋಡಗಳ ಬೆಟ್ಟ ಸರಿಸಿ
ಅಭ್ಯದಯದೊಳ್ ಕಿರಣ ಚೆಲ್ವ ನೇಸರನ
ತಿಳಿವ ತಂಬೆಲರ ಬೆಳಕ ರಾಶಿಯೊಳ್,
ಚರಿತ್ರೆಯ ಮೇಲ್ಗಣ ಹಿಮ ಕರಗಿ
ಗುಪ್ತಾಕಾಶದ ಮಹಾ ತಾರೆ ಮಿನುಗಲ್
ಮಹಾತಾಯಿಗೀಗ ವಾರ್ಧಕ್ಯ ಕಳೆದು
ಸಂಸ್ಕೃತದ ಸೊಬಗ ದೊರಕಿಸೊ ಅನವರತ!!

* * * * * * * * *
ಚಿತ್ರಕೃಪೆ : ಅಂತರ್ಜಾಲ

2 comments:

  1. arthapoorna kavitegegaagi abhinandanegalu.

    ReplyDelete
  2. ಅಬ್ಬೋ...!
    ಚೆನ್ನಾಗಿದೆ...
    ಹೊಸ ಪ್ರಯತ್ನವೇ ಇದು.., ಇಷ್ಟಯಾಯಿತು..

    ReplyDelete

ನಿಮ್ಮ ಅನಿಸಿಕೆ