ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday 2 December 2014

ಸೂರ್ಯ ಚಂದ್ರರ ಬೆಳಕ ಪಥದಲ್ಲಿ - ಬೆಳವಣಿಗೆಯ ಜಾಡು ಹಿಡಿದು

ಸಾಗರ ಸಮ್ಮುಖ//ರಘುನಂದನ ಕೆ.
  
ಸೂರ್ಯ, ಅವ ಜಗದ ಒಡೆಯ, ಬೃಹ್ಮಾಂಡದಲ್ಲಿ ಅರಿವಿಗೆ ನಿಲುಕಿದ ಜೀವರಾಶಿಯ ಜೀವ ಆತ. ಭೂಮಿಗೆ ಅವನಿಂದಲೇ ಬೆಳಕು, ಬದುಕಿಗೆ ಕಾರಣಕರ್ತ, ಕಾಲದ ಗೆಳೆಯ. ಅವನ ಚಲನೆಯ ಕಾಲು ನಮಗೆ ಕಾಲ. ಅವ ಸ್ವಯಂ ಪೂರ್ಣ, ದೇಹದೊಳಗೆ ಅಗ್ನಿಯಾದವ, ಆತ್ಮದೊಳಗೆ ಜ್ಞಾನವಾಗಬಲ್ಲವ, ಭೂಮಿ, ಆಕಾಶ, ಮತ್ತು ಅಂತರಿಕ್ಷಗಳನ್ನೆಲ್ಲ ಆವರಿಸಿದ ತೇಜೋಮಯನಾದವ, ಬುದ್ಧಿ ವಿವೇಕಗಳನ್ನು ಬೆಳಕಿನೆಡಗೆ ನಡೆಸುವವ ಎನ್ನುತ್ತದೆ ಆಧ್ಯಾತ್ಮ

ಚಂದ್ರ, ರಾತ್ರಿಯ ಆಕಾಶದ ಲಾಂದ್ರ. ವಿಜ್ಞಾನಕ್ಕೆ ಧೂಳ ಕಣದ ರಾಶಿ, ಮಕ್ಕಳಿಗೆ ಚುಕ್ಕಿಗಳ ರಾಜ, ವಿರಹಿಗಳ ಮೋಹ, ಸಮುದ್ರದ ದಾಹ. ಮನಸಃ ಚಂದ್ರಮಾ ಎಂದಿದೆ ಉಪನಿಷತ್ತು. ಮನಸ್ಸಿನ ಅಧಿದೇವತೆ ಚಂದ್ರ, ಸಮುದ್ರಕ್ಕೂ ಚಂದ್ರನಿಗೂ ನೇರ ನಂಟು. ಮನಸ್ಸು ಸಮುದ್ರವಾಗುತ್ತದೆ ಬೆಳದಿಂಗಳಲ್ಲಿ ಎನ್ನುತ್ತದೆ ಕಾವ್ಯ ಪ್ರಪಂಚ. ಚಂದ್ರ ಯಾವತ್ತಿಗೂ ಸ್ವಯಂ ಪೂರ್ಣನಲ್ಲ. ಬೆಳಕಿಗೆ ಸೂರ್ಯನನ್ನ ಬದುಕಿಗೆ ಭೂಮಿಯನ್ನ ನಂಬಿದವ. ಮನಸ್ಸೂ ಅವನಂತೆ, ಆಸೆ, ಬೆಳದಿಂಗಳ ತಾಪ ಆದರೆ ಪೂರ್ಣತೆಯಿಲ್ಲ.

* * * * * * * * * * 

ದೊಡ್ಡದು ಚಿಕ್ಕದನ್ನ ಆಕರ್ಷಿಸುತ್ತದೆ, ನುಂಗುತ್ತದೆ, ಆವರಿಸುತ್ತದೆ. ಭೂಮಿ ಚಂದ್ರನನ್ನ, ಸೂರ್ಯ ಭೂಮಿಯನ್ನ ಆಕರ್ಷಿಸುವಂತೆ. ಶಿಶ್ಯನೂ ಗುರುವಾಗಬಲ್ಲ, ಗುರು ಶಿಶ್ಯನೂ. ಚಿಕ್ಕ ಸಂಗತಿಯಿಂದ ದೊಡ್ಡ ಪಾಠ ಕಲಿತವರ್ಯಾರೂ ಚಿಕ್ಕವರಾಗಿ ಉಳಿಯುವುದಿಲ್ಲ. ಹಗಲಿನ ಬೆಳಕು, ಬದುಕಿಸುತ್ತದೆ ಹಾಗೇ ಸುಡುತ್ತದೆ ಕೂಡ. ಬದುಕಿಸುವುದೆಲ್ಲ ಹಾಗೇ, ಬೇಯಿಸುತ್ತದೆ, ಉರಿಯುತ್ತದೆ. ರಾತ್ರಿಯ ಕತ್ತಲಿನೊಳಗೊಂದು ಬೆಳಕು, ಬೆಳದಿಂಗಳು. ಅದು ಸ್ವಂತ ಬೆಳಕಲ್ಲ, ಪ್ರತಿಫಲನ. ಒಂದು ಹಗಲು ಸುಡುತ್ತದೆ, ಇನ್ನೊಂದು ಇರುಳು ತಂಪೆರೆಯುತ್ತದೆ. ಒಂದು ಇನ್ನೊಂದನ್ನು ಹಾಯ್ದು ಬರುವಾಗ ಬದಲಾವಣೆ, ಜಗದ ಸೊಬಗು. ಬದಲಾಯಿಸುವುದು ಸಾಮಾನ್ಯದ ಕಾರ್ಯವಲ್ಲ. ಚಂದ್ರನಾಗುವುದು ಸುಲಭದ ಮಾತಲ್ಲ

ಬದುಕಿನಲ್ಲೂ ಹೀಗೇಯೇ, ದೊಡ್ಡ ಸಂಗತಿಗಳೆಲ್ಲ ದೊಡ್ಡವರಂತೆ ಪ್ರಖರವಾಗಿಯೇ ಉರಿಯುತ್ತದೆ, ಸೂರ್ಯನಂತೆ. ದೂರದಲ್ಲಿ ಪಡೆದವರಿಗೆ ಬೆಳಕು, ಹಿತವಾದ ಶಾಖ. ಹತ್ತಿರ ಹೋದಂತೆ ಪ್ರಖರತೆಯ ತಾಪ. ಹತ್ತಿರವಿದ್ದೂ ತಡೆದವ ಬೆಳೆದಾನು. ತಡೆಯಬಲ್ಲವ ಮಾತ್ರ ಶಾಖವನ್ನೂ ಕರಗಿಸಿ ತಂಪಾಗಿಸಿಯಾನು. ಚಂದ್ರ ಬೆಳಕಿನ ಪರಿವರ್ತನೆಗೊಂದು ಮಾಧ್ಯಮ. ಸ್ವಂತದ್ದಲ್ಲ ಆದರೂ ಚಂದ್ರಮನ ಬೆಳಕು ಹಿತ. ಭೂಮಿಗಿಂತ ಹತ್ತಿರದಿಂದ ಕಂಡವ ಸೂರ್ಯನ ಆತ. ಅವನೊಡಲಿಗೆ ಬೀಳ್ವ ಬೆಳಕು ಪ್ರಖರವೇ ಇದ್ದೀತು. ಪ್ರಖರತೆ ಅವನ ಹಾಯ್ದು ಬರುವಾಗ ತಂಪು. ಮಾಧ್ಯಮವಾಗುವುದು ಸುಲಭವಲ್ಲ. ತನ್ನದಲ್ಲದ್ದನ್ನ ಹಂಚುವುದೂ ಸಾಧನೆಯಲ್ಲದ್ದಲ್ಲ. ಎಲ್ಲ ಸೂರ್ಯರಾಗದಿರಬಹುದು, ಚಂದ್ರನಾಗುವುದು ಕಡಿಮೆಯದ್ದಲ್ಲ.
* * * * * * * * *

ಚಂದ್ರ ಬುದ್ಧಿಯ ಕೆಣಕುತ್ತಾನೆ, ಸೂರ್ಯ ಹೃದಯವನ್ನ ಬೆಳಗುತ್ತಾನೆ. ಮನಸ್ಸಿನ ದೇವತೆ ಬುದ್ಧಿಯ ಕೆಡಿಸಲೂ ಬಲ್ಲ, ಉಳಿಸಲೂ ಬಲ್ಲ. ಜ್ಞಾನದ ದೇವತೆ ಉರಿಸಲೂ ಬಲ್ಲ, ಬೆಳಗಲೂ. ತಂಪೆರೆಯುವುದೆಲ್ಲ ಬದುಕಿಸುವುದಿಲ್ಲ, ಸುಡುವುದೆಲ್ಲ ಕೊಲ್ಲುವುದೂ ಇಲ್ಲ. ಯಾರಿಗೆ ಯಾರು ಕಡಿಮೆ. ಹೊಳೆವುದು ಬೇರೆ, ತಿಳಿವುದು ಬೇರೆ. ಹೊಳೆಯುವುದು ಹೃದಯದ ಹಸಿವೆ, ತಿಳಿವುದು ಬುದ್ಧಿಯ ಕಸರತ್ತು. ಹೃದಯ ಹಸಿದಾಗ ಹೊಳೆದದ್ದು ಸಿಕ್ಕೀತು. ಹೊಳೆದದ್ದು ಬುದ್ಧಿಗೆ ನಿಲುಕಿದಾಗ ತಿಳಿವು ಧಕ್ಕೀತು. ಒಂದು ಜ್ಞಾನ, ಇನ್ನೊಂದು ವಿಜ್ಞಾನ. ಜ್ಞಾನವಿಲ್ಲದೆ ವಿಜ್ಞಾನವಿಲ್ಲ. ಹೃದಯ ನಿಂತಂದು ಬುದ್ಧಿ ಓಡುವುದಿಲ್ಲ. ಬುದ್ಧಿಗೆ ಶಕ್ತಿ ಹೃದಯ ಬಡಿತದಿಂದ. ಹೃದಯದಲ್ಲಿ ಹಸಿವೆ ಇದ್ದವ ಬೆಳೆದಾನು, ಬುದ್ಧಿ ಹಸಿದವ ಕಳೆದಾನು

ಒಂದು ಹಗಲ ಬೆಳಕು, ಇನ್ನೊಂದು ಇರುಳ ಬೆಳಕು. ಜೀವರಾಶಿಯ ಬದುಕಿಗೆ ದಿನನಿತ್ಯದ ದೀಪಾವಳಿ. ಕಲಿಕೆಗೆ ಹಗಲು ರಾತ್ರಿಗಳ ಪಾಠ. ಕಾಲನ ದಾರಿಯಲ್ಲಿ ಕಲಿಕೆ ನಿರಂತರ. ಒಂದಕ್ಕೊಂದು ಬೆಸೆದು ಒಂದರೊಳಗೊಂದು ಸೇರಿ ವಿಶ್ವ ಚಲನೆಯ ಸೂತ್ರ. ಇಲ್ಲಿ ಅಲ್ಲದ್ದು ಇಲ್ಲ, ಎಲ್ಲವೂ ಸಲ್ಲುವಂತದ್ದೆ. ಒಳಗಿನ ಉರಿ ಜಗವನ್ನೇ ಬೆಳಗೀತು. ಇಲ್ಲವೆ ಮಾಧ್ಯಮವಾಗುವಷ್ಟಾದರೂ ಧಕ್ಕೀತು. ಚಲನೆ, ಬೆಳವಣಿಗೆ ಜೀವಂತಿಕೆಯ ಲಕ್ಷಣ. ಅಂತರಂಗದಲ್ಲೂ ಬಹಿರಂಗದಲ್ಲೂ ಚಲನೆ ನಿಲ್ಲದಿರಲಿ. ನುಡಿವ ಬೆರಗಲ್ಲೂ ನಡೆವ ಪಥ ತೆರೆಯಲಿ. ಬೆಳಕ ಪಥ ಬದುಕನ್ನ ಪ್ರಚೋದಿಸಲಿ

* * * * * * * * * *
ದಿನಾಂಕ: 02.12.2014ರಂದು 'ಅವಧಿ'ಯಲ್ಲಿ ಪ್ರಕಟಿಸಲ್ಪಟ್ಟಿದೆ.  
 ಚಿತ್ರಕೃಪೆ : ಅಂತರ್ಜಾಲ

No comments:

Post a Comment

ನಿಮ್ಮ ಅನಿಸಿಕೆ