ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday, 29 December 2014

ನೀನಿಲ್ಲದ ಗೋಕುಲದ ಬೇಸರ

ಕಾವ್ಯ ಲಹರಿ//ರಘುನಂದನ ಕೆ.

ನಿನ್ನ ತುಟಿಯಂಚಿನ ಕೊಳಲಾಗುವೆ
ಬಿಸಿಯುಸಿರ ಪುಳಕದಿ ರಾಗವಾಗುವೆ
ಅನುರಾಗದ ರವಳಿಯ
ತೇಲಿ ಬಿಡು ಶ್ಯಾಮ
ಯಮುನಾ ತೀರದಿ
ಹಾಡಾಗಿ ಹರಿಯಲಿ ಪ್ರೇಮ



ನನ್ನೆದೆಯ ರಾಗ ಕೇಳು
ಸಾಕು ಮಾಡೊ ವಿರಹಿ ಬಾಳು
ನಿಂತೆ ಇದೆ ಜೀವ ಗೋಕುಲದಲ್ಲಿ
ಜೀವಾಮೃತವಿದೆ ಎದೆಯಲ್ಲಿ
ದ್ವಾರಕೆ, ಮಧುರೆಗಳು ಸಾಕು
ಬಾ ನನ್ನೊಲವ ಬೃಂದಾವನಕೆ


ಗೋಧೂಳಿ ದೀಪ ಮನದಲ್ಲಿ
ಒಮ್ಮೆ ಹರಿವ ಯಮುನೆ ಕಣ್ಣಲ್ಲಿ
ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ 
ಕಾಯುತ್ತ ನಿಂತೆ ಇದೆ ಜೋಕಾಲಿ
ಯಾರಿಗೆ ಹೇಳಲೋ ಗಿರಿಧರ
ನೀನಿಲ್ಲದ ಗೋಕುಲದ ಬೇಸರ




ಜೀವನವೇ ನದಿಯೋ
ನೀನಿರದೆ ಎಲ್ಲಿಯ ದಡವೋ
ನಾ ನಿನ್ನವನೆ
ನೀ ನನ್ನೊಳಗಾದವನೆ
ಶರಣಾರ್ಥಿಯು ನಾ ನಿನಗೆ
ಕರುಣಾಮೂರ್ತಿ ಜೊತೆಯಾಗೊ.


 * * * * * * * * *
ಚಿತ್ರಕೃಪೆ : ಅಂತರ್ಜಾಲ

ದಿನಾಂಕ: 29.12.2014ರಂದು 'ಪಂಜು' ಅಂತರ್ಜಾಲ ವಾರಪತ್ರಿಕೆಯಲ್ಲಿ  ಪ್ರಕಟಿಸಲ್ಪಟ್ಟಿದೆ.
http://www.panjumagazine.com/?p=9736

No comments:

Post a Comment

ನಿಮ್ಮ ಅನಿಸಿಕೆ