ಕಾವ್ಯ ಲಹರಿ//ರಘುನಂದನ ಕೆ.
ಹೆಜ್ಜೆಗೊಂದು ಮುಖವಾಡ ಸಿಕ್ಕು
ನಂಬಿಸುತ್ತದೆ, ಕಥೆ ಹೇಳುತ್ತದೆ
ತಾನಿಲ್ಲದ ಬದುಕು ಬಯಲಾಟ
ಮುಚ್ಚಿಟ್ಟರಷ್ಟೆ ಚೆಲುವು ನೋಟ
ಎಂದೆಲ್ಲ ಪಿಸುನುಡಿದು ಗಹಗಹಿಸುತ್ತದೆ
ಹಿಂದೆ ಅಡಗಿದ ಮುಖಕ್ಕೆ ನೆಲೆಯಿಲ್ಲ
ಕಣ್ಣ ಓದಲು ಮರೆತವರ ಸಾಲಲ್ಲಿ
ತೋರಿಕೆಯ ಪ್ರೀತಿ ಗೀತಿ ಇತ್ಯಾದಿ
ಮುಖದೊಂದಿಗೆ ಮನಸಿಗೂ ಮುಚ್ಚಳ
ಸುತ್ತಮುತ್ತೆಲ್ಲ ಕೃತಕತೆಯ ಸಪ್ಪಳ
ಇರಬಹುದಲ್ಲ ಚೆಂದ ಮುಖವಾಡ
ನನ್ನದೆನ್ನುವುದೆಲ್ಲ ಚಂದವೇ ಆಗಬೇಕಿಲ್ಲ
ಕನ್ನಡಿ ನೋಡುವಾಗೆಲ್ಲ ಗೊಂದಲ
ಪ್ರತಿಬಿಂಬ ನನ್ನದಾ, ಅದರದಾ
ಕನಸಲ್ಲೂ ವಿವಿಧ ರೂಪ - ಸ್ವರೂಪ
ಬಣ್ಣದ ಮುಖವಾಡಗಳ ಸಂತೆ
ಒಂದಕ್ಕಿಂತ ಇನ್ನೊಂದು ಚೆಂದ
ನೋಟವ ನಂಬಿಸುವ ಮಾಟಕ್ಕೆ
ಬದಲಾಗೋ ಬಣ್ಣಗಳ ಪವಾಡ
ಕಣ್ಣಿಲ್ಲದ ತೂತು ಮುಖವಾಡ
* * * * * * * * *
ಚಿತ್ರಕೃಪೆ : ಅಂತರ್ಜಾಲ
ದಿನಾಂಕ: 10.11.2014ರಂದು 'ಕಹಳೆ' ಯಲ್ಲಿ ಪ್ರಕಟಿಸಲ್ಪಟ್ಟಿದೆ
- http://www.kahale.gen.in/2014/11/10-Nov.html

.jpg)


ನಗುವ ಮುಖವಾಡಗಳ ಹಿಂದಿನ ಕ್ರೌರ್ಯವೆಷ್ಟೋ, ಅಳುವೆಷ್ಟೋ.. ಮಾನವೀಯತೆ, ಸಹೃದಯತೆಗಳಿಗೆ ಕುರುಡಾಗೋ ಕಣ್ಣಿಲ್ಲದ ಮುಖವಾಡ !.. ಚೆಂದದ ಕವನ
ReplyDelete