ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday 17 June 2019

ಕೌಶಲ್ಯದೊಂದಿಗೆ ವೇಗ ಸೇರಿದರೆ ಗೆಲುವು..!!

ರಘುನಂದನ ಕೆಹೆಗಡೆ

SKILL, SPEED, SCORE – 03 - ಅಂತಿಮ ಭಾಗ
ಯಾರಿಗೂ ಬೇಸಿಕ್ ಸ್ಕಿಲ್ಸ್ ಹೊರತುಪಡಿಸಿ ಮತ್ಯಾವ ಕೌಶಲ್ಯವೂ ಹುಟ್ಟುತ್ತಲೇ ಬಂದಿರೋದಿಲ್ಲ. ಬೆಳವಣಿಗೆಯ ವಿವಿಧ ಹಂತದಲ್ಲಿ ಜ್ಞಾನ ಸಂಪಾದನೆಯಾಗುತ್ತದೆ ಆದರೆ ಕೌಶಲ್ಯವಲ್ಲ. ಕೌಶಲ್ಯವನ್ನ ರೂಢಿಸಿಕೊಳ್ಳಬೇಕಾಗುತ್ತದೆ. ನಮ್ಮ ಅನುಭವ, ಸೋಲು, ಪ್ರಯತ್ನಗಳು, ತರಬೇತಿ, ಅಧ್ಯಯನ ಕೌಶಲ್ಯವನ್ನ ಬೆಳೆಸುತ್ತೆ. ಕೌಶಲ್ಯವೊಂದಿದ್ದರೆ ಸಾಕು ಗೆಲ್ಲಬಹುದು, ಎನ್ನುವ ಕಾಲದಿಂದ ನಾವು ಬಹುದೂರ ಸಾಗಿ ಬಂದಿದ್ದೇವೆ. ಈಗ ಕೌಶಲ್ಯಗಳಿಂದ ಆಕರ್ಷಿಸಬಹುದು ಆದರೆ ಗೆಲ್ಲಲಾಗುವುದಿಲ್ಲ. ನಂ.1 ಆಗಲು ಕೌಶಲ್ಯ ಮಾತ್ರ ಸಾಲುವುದಿಲ್ಲ. ಹಾಗಾದರೆ ಕೌಶಲ್ಯದೊಂದಿಗೆ ಮತ್ತೇನು ಬೇಕು. ಉತ್ತರ ಸುತ್ತಲಿನ ಪ್ರಪಂಚದಲ್ಲೆ ಇದೆ.
ಪ್ರಪಂಚದಲ್ಲಿ ಆದ ಎಲ್ಲ ಸಂಶೋಧನೆಗಳಲ್ಲಿ ಅತಿ ಹೆಚ್ಚು ಸಂಶೋಧನೆಗಳು ಕಳೆದ ಒಂದು ಶತಮಾನದಲ್ಲಿ ಆಗಿವೆ ಎನ್ನುತ್ತದೆ ವಿಜ್ಞಾನ. ಮಾನವ ಚರಿತ್ರೆಯ ಇತಿಹಾಸವನ್ನೇ ಗಮನಿಸಿ, ತಲೆಮಾರಿನಿಂದ ತಲೆಮಾರಿಗೆ ಬದುಕು ವೇಗವನ್ನು ಪಡೆಯುತ್ತಿದೆಯಲ್ಲವೆ. ಇಂದಿನ ತಲೆಮಾರು ವೇಗದ ಪ್ರಪಂಚದಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ ಎನಿಸುವುದಿಲ್ಲವೆ. ಒಂದು ಕಾಲದಲ್ಲಿ ರೈಲಿನ ವೇಗವೇ ಅಚ್ಚರಿಯಾಗಿತ್ತು, ಇವತ್ತಿಗೆ ಮೆಟ್ರೋ, ನ್ಯಾನೋ ರೈಲುಗಳ ವೇಗಗಳು ಸಾಲುತ್ತಿಲ್ಲ, ಬುಲೆಟ್ ರೈಲುಗಳು ಬರುತ್ತಿವೆ. ಮೇಲ್ಗೆ ಮಾತ್ರ ಬಳಕೆಯಾಗುತ್ತಿದ್ದ ಅಂತರ್ಜಾಲದಲ್ಲಿ ಸಾಮಾಜಿಕ ಜಾಲತಾಣಗಳು, ಹೊಸ ಅಪ್ಲಿಕೇಷನ್ಗಳು ಮಾಹಿತಿ ಹಂಚಿಕೆಯ, ಸಂವಹನದ ವೇಗವನ್ನ ಹೆಚ್ಚಿಸಿವೆ. ಇಂದಿನ ತಲೆಮಾರಿನ ಜ್ಞಾನ ಸಂಗ್ರಹ ಹಾಗೂ ಬುದ್ಧಿವಂತಿಕೆಯ ವೇಗ ಅಚ್ಚರಿಗೊಳಿಸುತ್ತದೆಯಲ್ಲವೆ.
ಇಂದಿನ ಗೆಲುವಿನ ದಾರಿಯಲ್ಲಿ ಸ್ಪರ್ಧೆ ಇರುವುದು ಕೌಶಲ್ಯದ್ದಲ್ಲ, ವೇಗದ್ದೂ ಅಲ್ಲ. ಕೌಶಲ್ಯದಿಂದ ಕೂಡಿದ ವೇಗದ್ದು. ಕೌಶಲ್ಯವಿಲ್ಲದೆ ಓಡುವವ ಮುಗ್ಗರಿಸುತ್ತಾನೆ, ಕೌಶಲ್ಯವೊಂದೆ ಇರುವವ ಹಿಂದೆಯೇ ಉಳಿಯುತ್ತಾನೆ. ಎರಡರಲ್ಲೂ ಸಮನ್ವಯ ಸಾಧಿಸಿ ಓಡುವವ ಗೆಲ್ಲುತ್ತಾನೆ. ಕೌಶಲ್ಯದ ಕ್ಲಾಸಿಕ್ ಆಟವಾಗಿದ್ದ ಕ್ರಿಕೇಟ್ನಲ್ಲಿ ಕೌಶಲ್ಯದೊಂದಿಗೆ ವೇಗವನ್ನು ಸೇರಿಸಿದ್ದಕ್ಕೆ ಇವತ್ತು ಸಚಿನ್ ತೆಂಡುಲ್ಕರ್ ಏನಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕೌಶಲ್ಯಕ್ಕಿಂತ ವೇಗವೊಂದನ್ನೆ ಆಯ್ಕೆ ಮಾಡಿಕೊಂಡು ಬಂದ ಎಷ್ಟೋ ಆಟಗಾರರು ಎಷ್ಟು ದಿನ ಆಡಿದ್ದಾರೆ ಎನ್ನುವುದು ನಮ್ಮ ಕಣ್ಮುಂದೆಯೇ ಇದೆ. ಜಾಣ್ಮೆಯಿಂದ ಗಾಡಿಯನ್ನು ಓಡಿಸಿದರೆ ಸಾಲುವುದಿಲ್ಲ, ಜಾಣ್ಮೆಯ ಜೊತೆಗೆ ವೇಗವಾಗಿ ಓಡಿಸಿದರೆ ಮಾತ್ರ ನಿಗದಿತ ಸಮಯದಲ್ಲಿ ಗುರಿ ತಲುಪಲು ಸಾಧ್ಯ. ಕೌಶಲ್ಯವೊಂದಿದ್ದರೆ ಸಾಕು ಎನ್ನುವ ಕಾಲ ಇದಲ್ಲ, ಈಗ ಎಲ್ಲರಿಗೂ ಕನಿಷ್ಠ ಕೌಶಲ್ಯವಿದ್ದೇ ಇರುತ್ತದೆ. ಜೊತೆಗೆ ವೇಗವೂ ಬೇಕು. ಕಾಲ ಬದಲಾಗಿದೆ, ನಾವು ಒಪ್ಪಿಕೊಳ್ಳಬೇಕಿದೆ.
ಗೆಲುವೆಂದರೆ ಗುರಿಯನ್ನು ತಲುಪುವುದು, ಅಂದುಕೊಂಡಿದ್ದನ್ನ ಸಾಧಿಸುವುದು, ಕನಸನ್ನು ನನಸಾಗಿಸಿಕೊಳ್ಳುವುದು. ಗೆಲುವೆಂದರೆ ಶ್ರೀಮಂತಿಕೆಯೆಂದೂ, ಅಧಿಕಾರವೆಂದು, ಜನಪ್ರಿಯತೆಯೆಂದೂ ಅಂದುಕೊಳ್ಳುವವರೇ ಹೆಚ್ಚು. ಗೆಲುವಿನಿಂದ ಇದೆಲ್ಲವೂ ಸಿಗುತ್ತದೆ. ಆದರೆ ಗೆಲುವೆಂದರೆ ಇವಷ್ಟೆ ಅಲ್ಲ ಎನ್ನುವ ಅರಿವು ಬೇಕು. ಗೆಲುವಿನ ದಾರಿಗೆ ಮೊದಲು ಗುರಿ ಬೇಕು, ನಂತರ ತಲಪುವ ಕನಸು ಮೂಡಬೇಕು. ಹೆಂಗೆಂಗೋ ನಡೆದರೆ ಗೆಲುವು ಸಿಕ್ಕುವುದಿಲ್ಲ, ದಾರಿ ಮತ್ತು ಬದುಕು ಸವೆಯುತ್ತದೆ ಅಷ್ಟೆ. ಒಂದಷ್ಟು ಕೌಶಲ್ಯವನ್ನ ರೂಢಿಸಿಕೊಂಡು, ಸಮಯದ ಮಿತಿಯೊಳಗೆ ವೇಗ ರೂಢಿಸಿಕೊಂಡು ನಡೆಯಬೇಕು. ಗುರಿ ನಮ್ಮದಾದಾಗ ಸ್ಪರ್ಧೆಯು ನಮ್ಮೊಂದಿಗೆ, ನಮ್ಮ ಸಮಯದೊಂದಿಗೆ ಆಗಬೇಕು. ಮತ್ಯಾರದೋ ಬೆನ್ನ ಹಿಡಿದು ಹೊರಟರೆ ನಮ್ಮ ಗುರಿ ನಮ್ಮ ಗೆಲುವು ಸಿಕ್ಕುವುದಿಲ್ಲ. ಕೌಶಲ್ಯ ಸೇರಿಸಿಕೊಂಡು ಹಾಗೂ ಗುರಿಯೆಡೆಗಿನ ತುಡಿತ ಅಂತರಂಗದಲ್ಲಿ ಮೂಡಿದರೆ ಗೆಲುವು ಸಾಧ್ಯ.
ವೇಗ ಬೇಕಿರುವುದು ಗೆಲುವಿನ ಸ್ಪರ್ಧೆಗೊಂದೇ ಅಲ್ಲ, ಬದುಕಿನ ಸ್ಪರ್ಧೆಗೂ, ಕನಸಿನ ಹೋರಾಟಕ್ಕೂ. ಸಂಶೋಧನೆಗಳ ವೇಗ, ತಂತ್ರಜ್ಞಾನದ ವೇಗ, ಅವಶ್ಯಕತೆಗಳ ವೇಗ ಹೆಚ್ಚುತ್ತಲೇ ಇದೆ. ಬದುಕಿನೆದುರು ಅಪಾರ ಅವಕಾಶಗಳಿವೆ. ಕಾಲನ ವೇಗದೆದುರು ನಿಲ್ಲಲಾಗದು, ಕನಸಿನ ವೇಗಕ್ಕಾದರೂ ತಲುಪಬಹುದೇ ಎನ್ನುವುದರ ಮೇಲೆ ಬದುಕಿನ ಗೆಲುವು ನಿಂತಿದೆ. ನಾವು ಒಂದಿಷ್ಟು ಕೌಶಲ್ಯಗಳಿಗೆ ತೃಪ್ತರಾಗಿ ಇದ್ದಲ್ಲೆ ಇದ್ದರೆ ಗೆಲುವು ಧಕ್ಕದು. ಕನಸುಗಳ ಬೆನ್ನಟ್ಟುವ ಧೈರ್ಯವನ್ನು ವೇಗವನ್ನು ರೂಢಿಸಿಕೊಳ್ಳಬೇಕಿದೆ. ಗೆಲುವಿನ ದಾರಿಯಲ್ಲಿ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದೇವೆ. ಕೌಶಲ್ಯಗಳ ಬಗ್ಗೆ ವೇಗದ ಬಗ್ಗೆ ಮಾತಾಡಿದ್ದೇವೆ, ಫಲಿತಾಂಶದಲ್ಲಿ ಗೆಲುವು ಮೂಡುತ್ತದಾ ನೋಡಬೇಕಿದೆ. ಕೌಶಲ್ಯಗಳ ರೂಢಿಸಿಕೊಳ್ಳುವ ಕನಸುಗಳ ಬೆನ್ನಟ್ಟುವ ಪ್ರಯತ್ನ ಶುರುವಾಗಲಿ.  

No comments:

Post a Comment

ನಿಮ್ಮ ಅನಿಸಿಕೆ