ಕಡಲಕಿನಾರೆಯ ಕಿನ್ನರ//ರಘುನಂದನ ಕೆ.
.jpg)
ದಿನದ ಕೆಲಸ ಕಾರ್ಯಗಳ ಮುಗಿಸಿ ಮನೆಗೆ ಹಿಂತಿರುಗುವ ದಾವಂತದಲ್ಲಿರುವಾಗ ತುಂಬಿದ ಬಸ್ಸೊಳಗಿನ ಗಜಿಬಿಜಿಗೆ ಮನಸ್ಸು ಸಿಡಿಮಿಡಿ ಎನ್ನುತ್ತಿರುವ ಕ್ಷಣದಲ್ಲಿ ಪುಟ್ಟ ಪಾಪು ತನ್ನ ಚಿಗುರು ಬೆರಳುಗಳಿಂದ ಸ್ಪರ್ಶಿಸಿ ನಗುತ್ತದೆ. ಮನದಲ್ಲಿ ಮಂದಾರ ಅರಳಿ ಮನಸ್ಸೀಗ ನಿರಾಳ. ಅಪರೂಪಕ್ಕೆಂಬಂತೆ ಬಿಚ್ಚಿಕೊಳ್ಳುವ ಮಗುವಿನ ಅಂಗೈಯೊಳಗೆ ಕಿರು ಬೆರಳಿಟ್ಟು, ತಟ್ಟನೆ ಮುಚ್ಚಿಕೊಂಡ ಮೃದು ಬಿಸುಪಿನ ಲೋಕದೊಳಗೆ ಸೇರಿದ ಕಿರುಬೆರಳ ಆನಂದ ಮನದ ಮೂಲೆಗೂ ಸಂಚರಿಸಿ ನಾವೂ ಮಗುವಾದಂತೆ. ಕಣ್ಣೋಟದಿಂದ ಹರಿದ ಮಿಂಚು ಅಂತರಂಗದೊಳಗೆ ಸೇರಿ ತರಂಗವೆಬ್ಬಿಸಿದಂತೆ.
ಮಗುವೆಂದರೆ ಮಮತೆ, ಪ್ರೀತಿಯ ಒರತೆ. ಗುಲಾಬಿ ಪಾದಗಳ ಗೆಜ್ಜೆ ಸದ್ದು, ಹಾಲ್ಗೆನ್ನೆಯ ಮೃದು ಸ್ಪರ್ಶ, ಚಿಗುರು ಬೆರಳಿನಾಟ - ನೋಡುತ್ತ ನಿಲ್ಲುವ ನಮ್ಮೊಳಗೊಂದು ಹೊಸ ಪುಳಕ. ಪ್ರಪಂಚದ ಯಾವ ಮೂಲೆಗೆ ಹೋದರೂ ಮಗುವೆಂದರೆ ಹೀಗೆ, ಗಂಡು-ಹೆಣ್ಣು, ಶ್ರೀಮಂತ-ಬಡವ, ಪೂರ್ವ-ಪಶ್ಚಿಮ, ಭಾರತ, ಅಮೇರಿಕ, ಆಫ್ರಿಕಾ ಎಲ್ಲಿಯ ಮಗುವೇ ಆಗಲಿ, ಮಗುವೆಂದರೆ ಸಂಭ್ರಮ. ಎಲ್ಲ ಪಾಪುಗಳ ಭಾಷೆಯೆಂದರೆ ಸ್ವಚ್ಛ ನಿರ್ಮಲ ನಗು ಇಲ್ಲವೆ ಕಣ್ತುಂಬಿ ಸುರಿವ ಅಳು, ಎಲ್ಲ ಪಾಪುಗಳ ಭಾಷೆ, ಬಿಸುಪು, ಪ್ರೀತಿ, ಮೌನ, ನಿದ್ರೆ, ಗಂಧ ಸೀಮಿತ ಅವಧಿಯವರೆಗೆ ಒಂದೇ ಎನಿಸುವ ಸೋಜಿಗ.

ದೊಡ್ಡವರೆನಿಸಿಕೊಂಡವರ ವಿಚಿತ್ರ ಗಡಿಬಿಡಿ, ಪದೇ ಪದೇ ಮುಖ ಗಂಟಿಕ್ಕುವ ಸಿಡಿಮಿಡಿ, ಅರ್ಥವಾಗದ ಅಸಹಾಯಕ ನೋವು ದುಮ್ಮಾನಗಳ ದಗ್ಧ ಪ್ರಪಂಚ, ಕೆಲವೊಮ್ಮೆ ಯಾವ ಭರವಸೆಗಳೂ ಇಲ್ಲದ ತೀರಕ್ಕೆ ಬಂದು ನಿಲ್ಲುವ ಬದುಕು, ಬಿಡಲಾಗದ ಅಹಂಕಾರ, ಎಲ್ಲ ತಿಳಿದವರಂತೆ ಬದುಕುವ ಹಮ್ಮು, ಮರಳ ತೀರದಂತÀ ಮುಗಿಯದ ಆಸೆಗಳ ಮುಷ್ಟಿಯಲ್ಲಿ ಹಿಡಿದಿಡುವ ಬಯಕೆ, ನಿನ್ನೆಗಳ ಬಗ್ಗೆ ಕನವರಿಕೆ, ನಾಳೆಗಳ ಬಗೆಗಿನ ಅಸಹಜ ನಿರೀಕ್ಷೆ, ಬಂದಂತೆ ಒಪ್ಪಿಕೊಳ್ಳಲಾಗದ ಬದುಕು, ಕಂಡ ಕನಸುಗಳ ನನಸಾಗಿಸಲಾಗದ ಅಸಹಾಯಕತೆ - ಇವೆಲ್ಲವುಗಳ ನಡುವೆ ಮಗುವಿನೆದುರು ನಿಂತಾಗ ಎಲ್ಲ ಕರಗಿ ಶಾಂತ ಪ್ರಪಂಚವೊಂದು ತರೆದುಕೊಳ್ಳುವ ರೀತಿಗೆ, ಹೊಸತೊಂದು ಭರವಸೆಯ ಬೆಳಕು ಗೋಚರಿಸುವ ಸೊಗಸಿಗೆ ಬದುಕು ಮತ್ತೆ ಮಗುವಾಗಿ ಅರಳುತ್ತದೆ. ಆ ಕ್ಷಣಕ್ಕಾದರೂ ಮನುಷ್ಯ ಮಗುವಾಗುತ್ತಾನೆ. ಮಗು ಗುರುವಾಗುತ್ತದೆ. ಅರಿವಿನ ಕಣ್ಣು ತೆರೆದಿರಬೇಕಷ್ಟೆ.
ಯಾವುದನ್ನೂ ಯಾರನ್ನೂ ಲೆಕ್ಕಿಸದೆ ತನ್ನ ಕ್ಷಣಮಾತ್ರದ ನಿರ್ಮಲ ನಗೆಯಿಂದ ಎಲ್ಲವನ್ನೂ ಕರಗಿಸಿ ತನ್ನ ಆಹ್ಲಾದಕರ ಪ್ರಪಂಚದೊಳಗೆ ನಮ್ಮನ್ನು ಸೆಳೆದುಬಿಡುವ ಮಗುವಿನೆದುರು ಮನುಷ್ಯ ದೊಡ್ಡವನಾ, ಚಿಕ್ಕವನಾ...?? ಸಹಜ ದಿನಗಳಲ್ಲಿ ನಮಗೇ ಅಪರಿಚಿತವೆನಿಸುವ, ಬಯಸಿದರೂ ಆಡಲಾಗದ ಮುದ್ದು ಮುದ್ದು ಲಲ್ಲೆ ಮಾತುಗಳ ಭಾಷೆ ನಮಗರಿವಿಲ್ಲದೆಯೇ ಮಗುವಿನೆದುರು ಸರಳವಾಗಿ ಅನಾವರಣಗೊಳ್ಳುವ ಜಾದೂವಿನೆದುರು ಮನಸ್ಸು ಹೋತೋಟದೊಳಗಿನ ಪಾತರಗಿತ್ತಿ. ಇಲ್ಲಿ ನಾಯಿ - ಬೌಬೌ ಆಗುತ್ತದೆ, ನಿದ್ದೆ - ಕೋಕೋ ತಾಚಿಯೆನಿಸುತ್ತದೆ. ಶಬ್ದ, ವಾಕ್ಯಗಳೆಲ್ಲ ಕರಗಿ ಒಂದೇ ಅಕ್ಷರದೊಳಗಿನ ಭಾವಾನಂದವಾಗಿ ಅಲೆಲೆ...ಲೆ...ಲೆ.....ಲೆ.....ಲಾ...ಲಾ... ಎನ್ನುತ್ತ ಸುಲಲಿತ ಸರಾಗ ರಾಗವಾಗಿ, ಪಕ್ಕನೆ ಮುದ್ದು ಮದ್ದಾದ ಬೊಚ್ಚು ಬಾಯಲ್ಲಿ ಹಾಲ್ಗೆನ್ನೆಯರಳಿಸಿ ನಗುವ ಮಗುವಿನೆದುರು ಮಾಮೂಲಿ ಪದಗಳೆಲ್ಲ ಬದಲಾಗಿ ವಿಶೇಷ ರೂಪ ತಾಳಿ ಪರಿಮಳವಾಗಿ ಸುತ್ತೆಲ್ಲ ಪಸರಿಸಿ, ಎಲ್ಲರ ಮನದಲ್ಲೂ ಆ ಕ್ಷಣ ಸಂತೃಪ್ತಿಯ ಚಿಗುರು.

ಮನುಷ್ಯ ಮತ್ತೆ ಮಗುವಾಗಲಾರನಾ...??
ಈ ಕ್ಷಣ ಮಾತ್ರ ಸತ್ಯವೆನ್ನುವ ತೀವ್ರತೆಯೊಂದಿಗೆ, ಹೊಸ ಶಬ್ದ-ಭಾಷೆಗಳ ಆಲಿಸುವಿಕೆಯ ಖುಷಿಯೊಂದಿಗೆ, ಹೊಸತನಗಳ ಕಲಿಯುವ ಕುತೂಹಲ, ಸೋತಷ್ಟೂ ಬಿದ್ದಷ್ಟೂ ನಿಲ್ಲುವ ನಡೆಯುವ ಹಠ, ಅಧಮ್ಯ ಉತ್ಸಾಹದ ಚಿಲುಮೆ, ಪುಟ್ಟ ಪುಟ್ಟ ಪಾದಗಳಿಂದ ಜಗವ ಅಳೆವ ಹೆಜ್ಜೆ, ಅಹಂಕಾರವಿಲ್ಲದ ಸಂತೃಪ್ತಿ, ಕೆಲಸವಿಲ್ಲವೆನಿಸಿದರೂ
ಎನಾದರೊಂದರೆಡೆಗೆ ಸದಾ ತುಡಿಯುತ್ತಲೇ ಇರುವ ಪುರುಸೊತ್ತಿರದ ಕಾಯಕ, ಬದುಕಲ್ಲಿ ಅಸಾಧ್ಯವೆನಿಸುವಷ್ಟು ಮಗ್ನತೆಯೊಂದಿಗೆ ನಿರ್ಮಲವಾಗಿ ಶಾಂತತೆಯೊಂದಿಗೆ ಬದುಕಬೇಕಿದೆ ಮನುಷ್ಯ, ಮತ್ತೆ ಮಗುವಾಗಬೇಕಿದೆ.
ಎಲ್ಲ ಗದ್ದಲ ಧಾವಂತಗಳಾಚೆ ಎಲ್ಲರ ಮನಸ್ಸಲ್ಲೂ ಮಗುವೊಂದು ಜನ್ಮ ತಾಳಲಿ, ಧ್ಯಾನ ಅಂತರಂಗದ ಮಗುವಿನೊಂದಿಗಿನ ಲಲ್ಲೆಯಾಗಲಿ. ಮುಗ್ಧ ಮಂದಹಾಸದ ಬೆಳಕು ಬಂಧಗಳ ಬೆಸೆಯಲಿ. ದ್ವೀಪವಾಗುತ್ತಿರುವ
ಮನುಷ್ಯನ ಒತ್ತಡಗಳ ತೊಳೆದು ಎಲ್ಲ ದ್ವೀಪಗಳ ಬೆಸೆಯುವ ಸಮುದ್ರದಂತ ಮಗು ಮನಸ್ಸು ಜನಿಸಲಿ. ಮಾನವ ನಿರ್ಮಿತ ಕಾಲಮಾಪನದ ಕೆಲವು ಹೆಜ್ಜೆಗಳಲ್ಲಾದರೂ ಮಗುವಾಗಿ ಆನಂದಿಸುವ ಬಿಡುವು ಎಲ್ಲ ಜೀವಗಳಿಗೆ ದೊರೆಯಲಿ. ಬಾಲ್ಯ ತನ್ನ ಆಯಸ್ಸಿನ ಕ್ಷಣಗಳ ವೃದ್ದಾಪ್ಯದವರೆಗೂ ವಿಸ್ತರಿಸಲಿ. ತಿಳಿದವನೆಂಬ ಹಮ್ಮು ಕರಗಿ ತಿಳಿವ ಬೆಳೆವ ಆಸೆಯ ಮಗುವಿನ ಅಂತರಂಗದ ಚೆಲುವು ಬದುಕಿನ ನಂದನವಾಗಲಿ.
.jpg)
* * * * * *
* *
ಚಿತ್ರಕೃಪೆ : ಅಂತರ್ಜಾಲ
ಈ ಬರಹವನ್ನು ವಿಜಯ ಕರ್ನಾಟಕದ ದಿನಾಂಕ:06-05-2012ರ ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ.
ದಿನಾಂಕ: 11.10.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.com/?p=66124
ಇಷ್ಟವಾಯ್ತು.ಇದನ್ನೂ ಸೇರಿಸಿ ಬಹಳಷ್ಟು ಬರಹಗಳು ಚನ್ನಾಗಿವೆ,ಬರೆಯುತ್ತಿರು.
ReplyDelete-ವೆಂಕಟ್ರಮಣ
ಮಗುವಾಗುವ ಮನಸ್ಸುಳ್ಳವರು ಮಾತ್ರ ಮಗುವಿನ ಅಂತರಂಗದ ಮಾತುಗಳಿಗೆ ಹೀಗೆ ದನಿಯಾಗಬಲ್ಲರು!ನಿಜ ಮತ್ತೆ ನಾವು ಮಗುವಾಗಲಾರೆವಾ? ಎಂಬುದು ನಮ್ಮೊಳಗೆ ನಾವು ಸದಾ ಕೇಳಿಕೊಳ್ಳುವ ತುಡಿತ. ಖಂಡಿತ ಆಗಬಲ್ಲೆವು. ಮಗುವಾಗದಿದ್ದರೂ ಮಗುವಿನಂತ ಮನಸು ಉಳಿಸಿಕೊಳ್ಳೋಣ. ಮಗುವಿನಿಂದಲೇ ಕಲಿಯೋಣ.. ತುಂಬ ಚಂದದ ಲೇಖನ. ನಿನ್ನ ಶೈಲಿ ಭಾಷೆ, ಭಾವ ಎಲ್ಲವೂ ಚೆನ್ನಾಗಿದೆ. ಬರೆಯುತ್ತಿರಿ ಹೀಗೆ...
ReplyDelete